HomeಚಳವಳಿCAA ಮತ್ತು NRC ವಿರುದ್ಧದ ಹೋರಾಟದಲ್ಲಿ ’ಅಲ್ಲಾ ಹು ಅಕ್ಬರ್’, “ಇನ್ಶಾ ಅಲ್ಲಾಹ್” ಎಂಬ ಘೋಷಣೆಗಳನ್ನು...

CAA ಮತ್ತು NRC ವಿರುದ್ಧದ ಹೋರಾಟದಲ್ಲಿ ’ಅಲ್ಲಾ ಹು ಅಕ್ಬರ್’, “ಇನ್ಶಾ ಅಲ್ಲಾಹ್” ಎಂಬ ಘೋಷಣೆಗಳನ್ನು ಕೂಗುವುದು ಸರಿಯೇ? ತಪ್ಪೆ?

ಈ ಹೋರಾಟ ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುವ ಮೂಲಕ ಅಹಿಂಸಾತ್ಮಕವಾಗಿಯೇ ತೀವ್ರಗೊಳ್ಳಬೇಕೇ ವಿನಃ ಸಣ್ಣ ಹಿಂಸಾತ್ಮಕ ಘಟನೆಗಳಿಗೂ ಅವಕಾಶವಾಗದ ರೀತಿಯಲ್ಲಿ ಎಚ್ಚರ ವಹಿಸುವುದು ಸಹ ಮುಖ್ಯವಾಗಿದೆ

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು NRC ವಿರುದ್ಧ ದೇಶದೆಲ್ಲೆಡೆ ವಿದ್ಯಾರ್ಥಿಗಳು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆಗೆ ಇಳಿದ ಮುಸ್ಲಿಮರು ಸಾಮಾನ್ಯವಾಗಿ ಭಾರತದ ತ್ರಿವರ್ಣ ಬಾವುಟಗಳನ್ನು ಮತ್ತು ಪ್ರತಿಭಟನೆಯ ಮುಂದಾಳತ್ವ ವಹಿಸುವ ಸಂಘಟನೆಗಳ ಬಾವುಟಗಳನ್ನು ಹಿಡಿದು ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಮುಸ್ಲಿಂ ಯುವಕರು ಈ ಪ್ರತಿಭಟನೆಗಳಲ್ಲಿ NRC, CAA ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಹುತಾತ್ಮ ಭಗತ್ ಸಿಂಗ್‍ ಪ್ರಚುರ ಪಡಿಸಿದ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯಿಂದ ಹಿಡಿದು ಕನ್ಹಯ್ಯ ಕುಮಾರನ ಲೇಕೆ ರಹೇಂಗೇ ಆಜಾದೀ” ವರೆಗೆ ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ನೀತಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವುಗಳ ನಡುವೆಯೇ ಆಗಾಗ “ಅಲ್ಲಾ ಹು ಅಕ್ಬರ್” “ಇನ್ಶಾ ಅಲ್ಲಾಹ್” ಎಂಬ ಘೋಷಣೆಗಳನ್ನು ಸಹ ಮುಸ್ಲಿಂ ಯುವಕರು ಹಾಕುತ್ತಿದ್ದಾರೆ.

ಇಲ್ಲಿಯೇ ಸ್ಪಷ್ಟಪಡಿಸಿಕೊಂಡುಬಿಡಬೇಕು. ಮುಸ್ಲಿಂ ಹುಡುಗರು ಈ ಪ್ರತಿಭಟನೆಯ ನಡುವೆ ಧರ್ಮದ ಘೋಷಣೆ ಕೂಗಿದರೆ ಅದು ತಪ್ಪಲ್ಲ. ಆದರೆ ಇಷ್ಟಕ್ಕೆ ಕೆಲವರು ಕ್ಯಾತೆ ತೆಗೆಯುವುದು, ಟ್ವಿಟರಿನಲ್ಲಿ ಬಂದ ಕಮೆಂಟುಗಳಲ್ಲಿ ಕಂಡಂತಾಯಿತು. ‘ಈ ಪ್ರತಿಭಟನೆಗಳನ್ನು ಮುಸ್ಲಿಮರು ಇತರರೊಂದಿಗೆ ಸೇರಿ ನಡೆಸಬೇಕು, ಯಾವುದೇ ಧರ್ಮದ ಗುರುತುಗಳನ್ನು ತೋರಿಸಬಾರದು’ ಎಂದು ಇವರ ಅಭಿಪ್ರಾಯ. ಹೀಗೆ ಯೋಚಿಸುವವರ ಉದ್ದೇಶ ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ ಆದರೆ ಇದೊಂದು ಅಸಂಬದ್ಧ ಆಲೋಚನೆ. ನಾನೇನೂ ಮುಸ್ಲಿಮನಲ್ಲ, ಕುರಾನ್, ಬೈಬಲ್, ಭಗವದ್ಗೀತೆ ಸೇರಿದಂತೆ ಯಾವುದೇ ಧರ್ಮಗ್ರಂಥಗಳ ಪಾಲಕನೂ ಅಲ್ಲ ಆರಾಧಕನೂ ಅಲ್ಲ. ಈ ದೇಶದ ಸಂವಿಧಾನವೊಂದೇ ನಾನು ನಂಬಿರುವ, ನಡೆದುಕೊಳ್ಳುವ ಗ್ರಂಥ.

ಆದರೆ ನಾನು ನಂಬುವ ಪಾಲಿಸುವ ನನ್ನ ದೇಶದ ಸಂವಿಧಾನ ವೈದಿಕ ಧರ್ಮ ಪಾಲಿಸುವ ವ್ಯಕ್ತಿಯೊಬ್ಬನಿಗೆ “ಜೈ ಶ್ರೀ ರಾಮ” ಎಂದು ಹೇಳುವ ಅವಕಾಶವನ್ನು ಹೇಗೆ ನೀಡಿದೆಯೋ ಹಾಗೆಯೇ “ಅಲ್ಲಾ ಹು ಅಕ್ಬರ್” ಎಂದು ಹೇಳುವ ಅವಕಾಶ ಮತ್ತು ಹಕ್ಕನ್ನು ನೀಡಿದೆ. ಆಯಾ ಧರ್ಮೀಯರು ತಮ್ಮ ತಮ್ಮ ಧರ್ಮದ ಅಥವಾ ನಂಬಿಕೆಗಳ ಗುರುತುಗಳನ್ನು ಅನುಸರಿಸುವ ಅವಕಾಶವನ್ನೂ ಅದು ನೀಡಿದೆ. ಆದರೆ ಇಂದು ಚರ್ಚೆಯಲ್ಲಿರುವ NRC ಮತ್ತು CAAಗಳು ನೇರವಾಗಿ ದಾಳಿ ಮಾಡುತ್ತಿರುವುದು ಮುಸ್ಲಿಮರಾದವರ ಈ ಧಾರ್ಮಿಕ ಗುರುತುಗಳ ಮೇಲೆಯೇ ಅಲ್ಲವೇ? ಒಬ್ಬ ವ್ಯಕ್ತಿ “ಅಲ್ಲಾ ಹು ಅಕ್ಬರ್” ಎಂದು ಪ್ರಾರ್ಥಿಸುತ್ತಾ ಇಸ್ಲಾಂ ಧರ್ಮ ಪಾಲಿಸುತ್ತಿರುವ ಒಂದೇ ಕಾರಣದಿಂದ ಅವನ ಪೌರತ್ವವನ್ನೇ ನಾಶ ಮಾಡುವ ಮತ್ತು ಈ ದೇಶದಲ್ಲಿ ಅವನ ಸಕಲ ಪೌರ ಹಕ್ಕುಗಳನ್ನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ್ನ ಈ ಕಾನೂನುಗಳ ಮೂಲಕ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯ ಸಹಜ ಪ್ರತಿಕ್ರಿಯೆ “ಮುಸ್ಲಿಂ” ಆಗಿಯೇ ಪ್ರತಿಕ್ರಿಯಿಸುವುದೇ ಆಗಿರುತ್ತದೆ. ಇದರಲ್ಲಿ ದೋಷವೆನೂ ಇಲ್ಲ. ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿ, ಸಿಖ್ಖರಿಗೆಲ್ಲರಿಗೂ ಭಾರತ ಹೇಗೆ ಅವರ ದೇಶವೋ ಒಬ್ಬ ಮುಸ್ಲಿಮನಿಗೂ ಭಾರತ ಅವನ ದೇಶವೇ. ಹೀಗಿರುವಾಗ ಕಾನೂನೊಂದನ್ನು ತಂದು ಇದು ನಿನ್ನ ದೇಶವೇ ಅಲ್ಲ ಎನ್ನುವ ಹಕ್ಕು ಯಾರಿಗೂ ಇಲ್ಲ.

ಬಾಂಗ್ಲಾದಿಂದಲೋ, ಪಾಕಿಸ್ತಾನದೊಂದಲೋ ಯಾರೋ ಅಕ್ರಮ ವಲಸೆ ಬಂದಿದ್ದರೆ ಅವರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಕೆಲಸ. ಸರ್ಕಾರದ ಅಸಮರ್ಥತೆಗೆ ತಲೆತಲಾಂತರಿಂದ ಈ ಭಾರತ ನೆಲದಲ್ಲೇ ಹುಟ್ಟಿ ಬೆಳೆದ ಮುಸ್ಲಿಮರಾಗಲೀ, ಯಾರೇ ಆಗಲೀ ಯಾಕೆ ಬೆಲೆ ತೆರಬೇಕು? ಅವರು ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಅಗತ್ಯವಾದರೂ ಏನು? ಒಂದು ಮರ್ಯಾದೆಯಿಲ್ಲದ, ಹೀನಾತಿಹೀನ ಮನಸ್ಸುಗಳೇ ತುಂಬಿರುವ ನೀಚ ಸರ್ಕಾರವೊಂದು ಮಾತ್ರ ಇಂತಹ ಸ್ಥಿತಿಯನ್ನು ದೇಶದ ಪ್ರಜೆಗಳಿಗೆ ತಂದೊಡ್ಡಬಲ್ಲದು.

ಈ ನಡುವೆ CAA ಜಾರಿಗೆ ಬಂದರೆ ಭಾರತದ ಮುಸ್ಲಿಮರಿಗೆ ತೊಂದರೆಯೇನಿಲ್ಲ, ಬೇರೆ ದೇಶದ ಮುಸ್ಲಿಮರಿಗೆ ಮಾತ್ರ ತೊಂದರೆ ಎಂದು ಕೆಲವು ಮುಸ್ಲಿಮರೂ ನಂಬಿಕೊಂಡಿದ್ದರೆ, ಇದು ಮುಸ್ಲಿಮರ ಸಮಸ್ಯೆಯೇ ವಿನಃ ಹಿಂದೂಗಳಿಗೇನೂ ತೊಂದರೆಯಿಲ್ಲ ಎಂದು ಅನೇಕ ಮುಸ್ಲಿಮೇತರರು ನಂಬಿಕೊಂಡಿದ್ದಾರೆ. ಈ ಎರಡು ನಂಬಿಕೆಗಳೂ ತಪ್ಪು ಎಂಬುದನ್ನು ಅಸ್ಸಾಮಿನ ಮೂರು ಕೋಟಿ ಜನರ ಅನುಭವವೇ ಹೇಳುತ್ತಿದೆ. ಇಂದು ಅಸ್ಸಾಮಿನಲ್ಲಿ ತಾವು ಭಾರತದ ನಾಗರಿಕರೇ ಅಲ್ಲ ಎಂದು ಘೋಷಿಸಲ್ಪಟ್ಟವರಲ್ಲಿ 12 ಲಕ್ಷ ಮುಸ್ಲಿಮರಿದ್ದರೆ 6 ಲಕ್ಷ ಜನರು ಹಿಂದೂಗಳೇ! ಹಾಗೆಂದ ಮಾತ್ರಕ್ಕೆ ಇವರೆಲ್ಲರೂ ಬಾಂಗ್ಲಾದಿಂದ ವಲಸೆ ಬಂದವರೂ ಅಲ್ಲ. 1971ಕ್ಕೂ ಮುಂಚೆ ಭಾರತದಲ್ಲಿ ವಾಸವಾಗಿದ್ದಕ್ಕೆ, ಇಲ್ಲಿ ಹುಟ್ಟಿದ್ದಕ್ಕೆ ದಾಖಲೆ ಪತ್ರಗಳು ಇಲ್ಲದ ಏಕೈಕ ಕಾರಣದಿಂದ ಈ ಲಕ್ಷಾಂತರ ನಾಗರಿಕರನ್ನು ರಾತ್ರೋ ರಾತ್ರಿ ಈ ದೇಶದವರೇ ಅಲ್ಲ ಎಂದು ಘೋಷಿಸಲಾಗಿದೆ. ಇಂದು CAA ಜಾರಿಯಾದ ದಿನದಿಂದ ಇಡೀ ಅಸ್ಸಾಂ ಹೊತ್ತಿ ಉರಿಯುತ್ತಿರುವುದು ಇದೇ ಕಾರಣಕ್ಕೆ.

ದೇಶದ ಗೃಹಮಂತ್ರಿ ಅಮಿತ್ ಶಾ ಅವರು NRCಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿರುವ ಹಿನ್ನೆಲೆಯಲ್ಲಿ ನೋಡುವುದಾದರೆ ದೇಶದ 130 ಕೋಟಿ ಜನರಲ್ಲಿ ಕನಿಷ್ಠ 60 ಕೋಟಿ ಜನರು ರಾತ್ರೋ ರಾತ್ರಿ ದೇಶದ ‘ಅಕ್ರಮ ವಲಸಿಗ’ರಾಗಲಿದ್ದಾರೆ. (Illegal Immigrants). ಯಾಕೆಂದರೆ ಅಧಿಕೃತ ಅಂಕಿ ಅಂಶಗಳ ಮೂಲದ ದೇಶದ ಶೇಕಡಾ 40 ಜನರ (ಎಲ್ಲಾ ಧರ್ಮದವರು) ಬಳಿ 50 ವರ್ಷಗಳ ಹಿಂದೆ ತಾವು ಈ ದೇಶದಲ್ಲಿ ಹುಟ್ಟಿದ್ದಕ್ಕೆ, ಜೀವಿಸಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ಇವರಲ್ಲಿ ಮುಸ್ಲಿಮರಲ್ಲದವರಿಗೆ ಪೌರತ್ವವನ್ನು ಉಳಿಸಿಕೊಳ್ಳಲು ಸರ್ಕಾರವು CAA ಕಾಯ್ದೆ ಮೂಲಕ ನೀಡುವ ಅವಕಾಶವೇನೆಂದರೆ ಅವರು ತಾವು ಪಾಕಿಸ್ತಾನ, ಬಾಂಗ್ಲಾದೇಶ ಇಲ್ಲವೇ ಅಫಘಾನಿಸ್ತಾನದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತ ಮುಸ್ಲಿಮೇತರರು ಎಂದು ದಾಖಲೆ ನೀಡಿ ಸಾಬೀತುಪಡಿಸಬೇಕು! ಇನ್ನು ಮುಸ್ಲಿಮರಿಗಂತೂ ಆ ಅವಕಾಶವೂ ಇಲ್ಲದೇ ಅವರು ತಮ್ಮ ಪೌರತ್ವವನ್ನು ಸಂಪೂರ್ಣ ಕಳೆದುಕೊಂಡು ಸರ್ಕಾರಗಳು ನಿರ್ಮಿಸುವ ಜೈಲುಗಳಲ್ಲಿ/detention ಶಿಬಿರಗಳಲ್ಲಿ ಜೀವನ ಕಳೆಯಬೇಕಾಗುತ್ತದೆ. ಯಾವುದೋ ಒಂದೂರಿನ ‘ಕಮಲಮ್ಮ’ ಎಂಬ 60 ವರ್ಷದ ಅನಕ್ಷರಸ್ತ ಮಹಿಳೆ ತಾನು 1987ಕ್ಕೆ ಮೊದಲು ಹುಟ್ಟಿದ್ದಕ್ಕೆ ದಾಖಲೆಗಳನ್ನು ಇಟ್ಟುಕೊಂಡಿರದಿದ್ದರೆ, ಅಥವಾ ನೀಡುವ ಎರಡು ದಾಖಲೆಗಳಲ್ಲಿ ಹೆಸರುಗಳು ತಪ್ಪಾಗಿ ನಮೂದಾಗಿದ್ದರೆ ಅಥವಾ ಆಕೆ ತನ್ನನ್ನು ತಾನು ಬಾಂಗ್ಲಾ, ಪಾಕಿಸ್ತಾನ ಅಥವಾ ಅಫಘಾನಿಸ್ತಾನದಿಂದ ವಲಸೆ ಬಂದಿರುವ ಮುಸ್ಲಿಮೇತರಳು ಎಂದೂ ಸಾಬೀತು ಪಡಿಸಲು ದಾಖಲೆ ನೀಡದಿದ್ದರೆ ಆಕೆಯ ಪೌರತ್ವವೂ ಇಲ್ಲದಂತಾಗಿ ಅವಳೂ ಜೈಲು ಸೇರಬೇಕಾಗುತ್ತದೆ. ಇಂದು ಅಸ್ಸಾಮಿನಲ್ಲಿ ಇಂತಹ ಸಾವಿರಾರು ಕಮಲಮ್ಮ, ರೇಣುಕಮ್ಮಗಳು, ದ್ಯಾವಪ್ಪ, ಚೋಮಪ್ಪಗಳು ಜೈಲು ಸೇರುವಂತಾಗಿದೆ.

ಅಂದರೆ ಈಗ ಸಂಸತ್ತಿನಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೊಂಡು, ಅದರ ಬೆನ್ನಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯೂ ಆರಂಭಗೊಂಡರೆ ಈ ದೇಶದ 130 ಕೋಟಿ ಜನರೂ ಮುಂದಿನ ಹಲವಾರು ವರ್ಷಗಳ ವರೆಗೆ ತಮ್ಮ ಕುಟುಂಬಗಳ ಪ್ರತಿಯೊಬ್ಬರ ದಾಖಲೆಗಳನ್ನು ಹಾಜರುಪಡಿಸಿ, ತಮ್ಮ ಪೌರತ್ವ ಉಳಿಸಿಕೊಳ್ಳುವ ತಲೆಬಿಸಿಯಲ್ಲಿ ಇಲ್ಲವೇ ಪೌರತ್ವ ಕಳೆದುಕೊಳ್ಳುವ ಆತಂಕದಲ್ಲೇ ಬದುಕುವ ದುಸ್ಥಿತಿ ಸೃಷ್ಟಿಯಾಗಲಿದೆ. ಈ ಸಂದರ್ಭದಲ್ಲಿ ಈರುಳ್ಳಿ 500 ರೂಪಾಯಿ ಆಗಲಿ, ದೇಶದ ಜಿಡಿಪಿ 1%ಗೆ ಕುಸಿದು ಬೀಳಲಿ, ನಿರುದ್ಯೋಗ 200% ಹೆಚ್ಚಲಿ, ಏನೇ ಆಗಲಿ ಯಾವುದೂ ಮುಖ್ಯವಾಗುವುದಿಲ್ಲ.

ಬಿಜೆಪಿ ಹೇಳುವ ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿಸಿ ಬಹುಸಂಖ್ಯಾತ ಹಿಂದೂಗಳನ್ನು, ಮತ್ತು ಇತರರನ್ನು ಶಾಶ್ವತವಾಗಿ ಆತಂಕದಲ್ಲಿ ಬದುಕುವಂತೆ ಮಾಡಿ ಒಂದು ವರ್ಗ ಥೈ ಥೈ ಎಂದು ಕುಣಿಯುವುದೇ ಆಗಿದೆ. ಇವರ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳೂ ಸುಖವಾಗಿರುವುದಿಲ್ಲ, ಮುಸ್ಲಿಮರು ಪ್ರಜೆಗಳಾಗಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಮೊದಲಿನ ಪ್ರಶ್ನೆಗೆ ಮತ್ತೆ ಬರುವುದಾದರೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು NRC ವಿರುದ್ಧದ ಪ್ರತಿಭಟನೆಗಳಲ್ಲಿ “ಅಲ್ಲಾ ಹು ಅಕ್ಬರ್” ಎಂದು ಮುಸ್ಲಿಂ ಯುವಕರು ಹೇಳುವುದು ಒಂದು ಸಮಸ್ಯೆಯಲ್ಲ. ಅವರೊಂದಿಗೆ “ಜೈ ಹನುಮಾನ್” “ಜೈ ಭೀಮ್” ಜೈ ಗಣೇಶ” “ಜೈ ಉಚ್ಚಂಗಮ್ಮ” “ಉಘೇ ಉಘೇ ಮಾದೆಶ್ವರ” ಎಂದು ಹೇಳುವ ಜನರೂ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೇರಿಕೊಳ್ಳದಿರುವುದೇ ಸಮಸ್ಯೆ. ಈಗ ಆಗಬೇಕಿರುವುದು ಅದೇ.

CAA ಮತ್ತು NRCಗಳನ್ನು ದಾಖಲೆಗಳಿಲ್ಲದ ಕಾರಣಕ್ಕೆ ಪೌರತ್ವ ಕಳೆದುಕೊಳ್ಳಲಿರುವ ಮುಸ್ಲಿಮರೂ, ಅಕ್ರಮ ವಲಸಿಗರಾಗಲಿರುವ ಕೋಟ್ಯಾನುಕೋಟಿ ಮುಸ್ಲಿಮೇತರರೂ ಸೇರಿಯೇ ಹಿಮ್ಮೆಟ್ಟಿಸಬೇಕಾಗಿದೆ. ಅಮಿತ್ ಶಾ ಬರಲಿ, ಅವನ ಅಪ್ಪನೇ ಬರಲಿ ಜಾಮಿಯಾ ಮಿಲಿಯಾ ಯೂನಿವರ್ಸಿಟಿಯ ವಿದ್ಯಾರ್ಥಿನಿಯರಾರ ಲಿದಾಯ ಮತ್ತು ಆಯೆಶಾ ಹೇಗೆ ಪೊಲೀಸರಿಗೆ ಮಾತಿನಿಂದಲೇ ಬೆದರಿಸಿ ಹಿಮ್ಮೆಟ್ಟಿಸಿದರೋ ಹಾಗೆಯೇ ಧೈರ್ಯದಿಂದ “Get lost” ಎಂದು ಹಿಮ್ಮೆಟ್ಟಿಸಬೇಕಾಗಿದೆ. ಈ ಹೋರಾಟ ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುವ ಮೂಲಕ ಅಹಿಂಸಾತ್ಮಕವಾಗಿಯೇ ತೀವ್ರಗೊಳ್ಳಬೇಕೇ ವಿನಃ ಸಣ್ಣ ಹಿಂಸಾತ್ಮಕ ಘಟನೆಗಳಿಗೂ ಅವಕಾಶವಾಗದ ರೀತಿಯಲ್ಲಿ ಎಚ್ಚರ ವಹಿಸುವುದು ಸಹ ಮುಖ್ಯವಾಗಿದೆ. ಇದೇ ಹೊತ್ತಿಗೆ ದುಷ್ಕರ್ಮಿಗಳೇ ಹಿಂಸೆಯನ್ನು ಆರಂಭಿಸಿ, ಬೆಂಕಿ ಹಚ್ಚಿ, ವಾಹನಗಳನ್ನು ಒಡೆದು ಹಾಕಿ ಹೋರಾಟಗಾರರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ಸಹ ನಡೆಯಲಿವೆ. ಅವುಗಳ ಕುರಿತು ಸಹ ಎಚ್ಚರವಾಗಿದ್ದುಕೊಂಡೇ ದೇಶವನ್ನು ವಿನಾಶಕ್ಕೆ ಕೊಂಡೊಯ್ಯುತ್ತಿರುವ ದುಷ್ಟ ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಬೇಕಾಗಿದೆ.

(ಲೇಖಕರು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು.‌ ಲೇಖನದಲ್ಲಿರುವ ಅಭಿಪ್ರಾಯಗಳು ವ್ಯಕ್ತಿಗತವಾದವು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...