2002ರ ಗುಜರಾತ್ ಹತ್ಯಾಕಾಂಡದ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, ಇದು “ಸುಪ್ರೀಂ ಕೋರ್ಟ್‌ನ ಅಮೂಲ್ಯ ಸಮಯ ವ್ಯರ್ಥ” ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಒಕ್ಕೂಟ ಸರ್ಕಾರವು ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತುರ್ತು ಅಧಿಕಾರವನ್ನು ಬಳಸಿ ತಡೆಹಿಡಿದಿತ್ತು. ಒಕ್ಕೂಟ ಸರ್ಕಾರ ಬಳಸಿದ ಈ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ಸೋಮವಾರ ನಡೆಸಲಿದೆ.
ಪ್ರಕರಣವನ್ನು ತುರ್ತು ಪಟ್ಟಿ ಮಾಡಬೇಕು ಎಂದು ಕೋರಿ ವಕೀಲ ಎಂ.ಎಲ್. ಶರ್ಮಾ ಮತ್ತು ಹಿರಿಯ ವಕೀಲ ಸಿ.ಯು. ಸಿಂಗ್ ಸಲ್ಲಿಸಿದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಗಮನಿಸಿದೆ.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ಬ್ಯಾನ್ ವಿರುದ್ಧದ ವಿಚಾರಣೆಗೆ ಒಪ್ಪಿಕೊಂಡ ಸುಪ್ರೀಂಕೋರ್ಟ್
ಎಂಎಲ್ ಶರ್ಮಾ ಅವರ ಜೊತೆಗೆ, ಹಿರಿಯ ಪತ್ರಕರ್ತ ಎನ್.ರಾಮ್, ಹೋರಾಟಗರ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮದಿಂದ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕಲು ಒಕ್ಕೂಟ ಸರ್ಕಾರವು ಐಟಿ ನಿಯಮಗಳ ಅಡಿಯ ತುರ್ತು ಅಧಿಕಾರವನ್ನು ಬಳಸಿಕೊಂಡಿದೆ ಎಂದು ವಕೀಲ ಸಿ.ಯು. ಸಿಂಗ್ ಹೇಳಿದ್ದಾರೆ. “ಎನ್. ರಾಮ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳನ್ನು ತೆಗೆದುಹಾಕಲಾಗಿದೆ. ಅಲ್ಲದೆ ಒಕ್ಕೂಟ ಸರ್ಕಾರವು ನಿರ್ಬಂಧದ ಆದೇಶವನ್ನು ಇನ್ನೂ ಔಪಚಾರಿಕವಾಗಿ ಪ್ರಕಟಿಸಿಲ್ಲ. ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಅಜ್ಮೀರ್‌ನ ಕಾಲೇಜು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.
“ಎರಡು ಭಾಗಗಳಾಗಿ ಬಿಡುಗಡೆಗೊಂಡ ಬಿಬಿಸಿ ಸಾಕ್ಷ್ಯಚಿತ್ರದ ಮೇಲಿನ ಒಕ್ಕೂಟ ಸರ್ಕಾರದ ನಿಷೇಧವು, ‘ದುಷ್ಕೃತ್ಯ, ಅನಿಯಂತ್ರಿತ ಮತ್ತು ಅಸಂವಿಧಾನಿಕ’ವಾಗಿದೆ” ಎಂದು ಎಮ್.ಎಲ್. ಶರ್ಮಾ ಅವರ ಅರ್ಜಿಯು ಉಲ್ಲೇಖಿಸಿದೆ.
ಸಾಕ್ಷ್ಯಚಿತ್ರವನ್ನು ಸಂಶೋಧನೆ ಮಾಡಿಯೇ ಸಿದ್ಧಗೊಳಿಸಲಾಗಿದೆ ಎಂದು ಬಿಬಿಸಿ ಹೇಳುತ್ತದೆ. ಸರ್ಕಾರ ಬ್ಯಾನ್ ಮಾಡಿರುವುದನ್ನು ವಿರೋಧಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ತಿಳಿಸಿದ್ದಾರೆ.
ಎಂಎಲ್ ಶರ್ಮಾ ಎಂಬ ವಕೀಲರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯೊಂದರಲ್ಲಿ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ. ಸಾಕ್ಷ್ಯಚಿತ್ರಕ್ಕೆ ಸಾಮಾಜಿಕ ಮಾಧ್ಯಮ ಲಿಂಕ್‌ಗಳನ್ನು ತೆಗೆದುಹಾಕುವ ಆದೇಶದ ಕುರಿತು ವಕೀಲ ಪ್ರಶಾಂತ್ ಭೂಷಣ್, ಪತ್ರಕರ್ತ ಎನ್ ರಾಮ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಸಲ್ಲಿಸಿದ ಪ್ರತ್ಯೇಕ ಅರ್ಜಿಯನ್ನು ಈ ವಾರದ ಕೊನೆಯಲ್ಲಿ ತೆಗೆದುಕೊಳ್ಳಲಾಗುತ್ತದೆ.
ಭಾರತದಾದ್ಯಂತ ವಿದ್ಯಾರ್ಥಿಗಳ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಸಾಕ್ಷ್ಯಚಿತ್ರ ನಿಷೇಧವನ್ನು ಪ್ರತಿಭಟಿಸಿ, ಸಾರ್ವಜನಿಕ ಪ್ರದರ್ಶನಗಳನ್ನು ಆಯೋಜಿಸಿವೆ. ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಇನ್ನೂ ಕೆಲವೆಡೆ ಕೆಲವರ ಬಂಧನ ಕೂಡ ಆಗಿದೆ.


