ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪವರ್ಗೀಕರಣಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಇಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಒಳ ಪಂಗಡಗಳ ಉಪವರ್ಗೀಕರಣವನ್ನು ಅನುಮತಿಸಲಾಗಿದೆ, ನಮ್ಮ ಪಕ್ಷವು ಅದನ್ನು ಒಪ್ಪುವುದಿಲ್ಲ ಎಂದು ಮಾಯಾವತಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹೆಚ್ಚು ಹಿಂದುಳಿದಿರುವ ಜಾತಿಗಳ ಉನ್ನತಿಗಾಗಿ ಮೀಸಲಾತಿ ನೀಡಲು, ಸಾಮಾಜಿಕವಾಗಿ ಭಿನ್ನಜಾತಿಯ ವರ್ಗವನ್ನು ರೂಪಿಸುವ ಪರಿಶಿಷ್ಟ ಜಾತಿಗಳಲ್ಲಿ ಉಪವರ್ಗಗಳನ್ನು ಮಾಡಲು ರಾಜ್ಯಗಳಿಗೆ ಸಂವಿಧಾನಾತ್ಮಕವಾಗಿ ಅಧಿಕಾರವಿದೆ ಎಂದು ಗುರುವಾರ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
“ಎಸ್‌ಸಿ ಮತ್ತು ಎಸ್‌ಟಿಗಳ ಜನರು ಎದುರಿಸುತ್ತಿರುವ ದೌರ್ಜನ್ಯಗಳನ್ನು ಗುಂಪಾಗಿ ಎದುರಿಸಲಾಗಿದೆ. ಈ ಗುಂಪು ಸಮಾನವಾಗಿದೆ ಇದರಲ್ಲಿ ಯಾವುದೇ ರೀತಿಯ ಉಪವರ್ಗೀಕರಣ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದರು.
ತೀರ್ಪಿನ ಹಿನ್ನೆಲೆ
ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದೆ.
ಒಳ ಮೀಸಲಾತಿ ಅನುಮತಿಸುವಾಗ, ರಾಜ್ಯವು ಉಪ-ವರ್ಗಕ್ಕೆ ಶೇ. 100 ಮೀಸಲಾತಿಯನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಉಪ-ವರ್ಗದ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಸಮರ್ಥಿಸಬೇಕಾಗಿದೆ ಎಂದಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು 6-1 ಅಂತರದ ಬಹುಮತದ ತೀರ್ಪಿನ ಮೂಲಕ ಒಳ ಮೀಸಲಾತಿ ಪ್ರಸ್ತಾವವನ್ನು ಎತ್ತಿ ಹಿಡಿದಿದೆ. ನ್ಯಾ. ಬೇಲಾ ಮಾತ್ರ ಈ ಪ್ರಸ್ತಾವಕ್ಕೆ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆರು ಪ್ರತ್ಯೇಕ ತೀರ್ಪುಗಳನ್ನು ಬರೆಯಲಾಗಿದೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ರಾಜ್ಯ ಪ್ರಕರಣದ ಸಂಬಂಧ 2004ರಲ್ಲಿ ಐದು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನೀಡಿದ್ದ ತೀರ್ಪನ್ನು ಈ ತೀರ್ಪು ಅನೂರ್ಜಿತಗೊಳಿಸಿದೆ.
ಇದನ್ನೂ ಓದಿ; ಪರಿಶಿಷ್ಟ ಜಾತಿ, ಪಂಗಡಗಳಲ್ಲೇ ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ: ಸುಪ್ರೀಂ ಕೋರ್ಟ್ ಸಮ್ಮತಿ


