ತನ್ನ ವಿರುದ್ಧ ವಾಗ್ದಂಡನೆ (ಮಹಾಭಿಯೋಗ) ವಿಧಿಸುವುದಕ್ಕಾಗಿ ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯಡಿ ತ್ರಿಸದಸ್ಯ ಸಮಿತಿ ರಚಿಸಿರುವ ಲೋಕಸಭಾ ಸ್ಪೀಕರ್ ನಿರ್ಧಾರ ರದ್ದುಗೊಳಿಸುವಂತೆ ಕೋರಿ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ಸ್ಪೀಕರ್ ಹಾಗೂ ಸಂಸತ್ತಿನ ಮೇಲ್ಮನೆ (ರಾಜ್ಯಸಭೆ) ಮತ್ತು ಕೆಳಮನೆ (ಲೋಕಸಭೆ) ಕಾರ್ಯಾಲಯಗಳಿಗೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ ಮಸೀಹ್ ಅವರಿದ್ದ ಪೀಠ ಮಂಗಳವಾರ (ಡಿಸೆಂಬರ್ 16) ನೋಟಿಸ್ ಜಾರಿ ಮಾಡಿದೆ.
ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ತಮ್ಮ ವಾಗ್ದಂಡನೆಗೆ ನೋಟಿಸ್‌ಗಳನ್ನು ನೀಡಲಾಗಿದ್ದರೂ, ರಾಜ್ಯಸಭೆಯ ಸಭಾಪತಿ ಆ ನಿರ್ಣಯ ಅಂಗೀಕರಿಸುವುದನ್ನು ಕಾಯದೆ ಮತ್ತು ಕಾನೂನಿನಲ್ಲಿ ತಿಳಿಸಿರುವಂತೆ ಅವರೊಂದಿಗೆ ಜಂಟಿ ಸಮಾಲೋಚನೆ ನಡೆಸದೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಏಕಪಕ್ಷೀಯವಾಗಿ ಸಮಿತಿ ರಚಿಸಿರುವುದನ್ನು ನ್ಯಾಯಮೂರ್ತಿ ವರ್ಮಾ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಜುಲೈ 21ರಂದು ಲೋಕಸಭೆಯಲ್ಲಿ ವಾಗ್ದಂಡನೆ ನೋಟಿಸ್ ನೀಡಲಾಗಿತ್ತು. ಅದನ್ನು ಅಂಗೀಕರಿಸಿದ ಸ್ಪೀಕರ್ ಆಗಸ್ಟ್ 12 ರಂದು ಏಕಪಕ್ಷೀಯವಾಗಿ ಸಮಿತಿಯನ್ನು ರಚಿಸುವ ಮೂಲಕ 1968ರ ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯ ಸೆಕ್ಷನ್ 3(2) ರ ನಿಬಂಧನೆಯನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ವರ್ಮಾ ವಾದಿಸಿದ್ದಾರೆ. ಅದೇ ದಿನ ರಾಜ್ಯಸಭೆಯಲ್ಲಿ ಪ್ರತ್ಯೇಕ ನೋಟಿಸ್ ನೀಡಲಾಗಿತ್ತು, ಅದನ್ನು ಲೋಕಸಭೆ ಸ್ಪೀಕರ್ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಇಂದು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವರ್ಮಾ ಪರ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಒಂದೇ ದಿನ ಎರಡೂ ಸದನಗಳಲ್ಲಿ ನೋಟಿಸ್ ನೀಡಿದರೆ, ಎರಡೂ ಸದನಗಳಲ್ಲಿ ಅದನ್ನು ಅಂಗೀಕರಿಸದ ಹೊರತು ಯಾವುದೇ ಸಮಿತಿಯನ್ನು ರಚಿಸುವಂತಿಲ್ಲ. ಎರಡೂ ಸದನಗಳಲ್ಲಿ ನೋಟಿಸ್ ಅಂಗೀಕರಿಸಿದರೆ, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರು ಜಂಟಿಯಾಗಿ ಸಮಿತಿಯನ್ನು ರಚಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಎರಡೂ ಸದನಗಳಲ್ಲಿ ಒಂದೇ ದಿನ ನೋಟಿಸ್ ನೀಡಿ, ಅದನ್ನು ಔಪಚಾರಿಕವಾಗಿ ಅಂಗೀಕರಿಸದಿದ್ದಲ್ಲಿ ಸದನದ ನಿಯಮಗಳಿಗೆ ಅನುಗುಣವಾಗಿ, ಸ್ಪೀಕರ್ ಮತ್ತು ಅಧ್ಯಕ್ಷರು ಪರಸ್ಪರ ಸಮಾಲೋಚನೆ ನಡೆಸಿದ ನಂತರ ಸಮಿತಿಯನ್ನು ಜಂಟಿಯಾಗಿ ರಚಿಸಲಾಗುತ್ತದೆ. ಆ ಸಮಿತಿಯನ್ನು ಉಭಯ ಸದನಗಳ ಜಂಟಿ ಸಮಿತಿ ಎಂಬುವುದಾಗಿ ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ.
ಈ ವೇಳೆ ನ್ಯಾಯಮೂರ್ತಿ ದತ್ತಾ ಅವರು, “ಒಂದೇ ದಿನ ಎರಡೂ ಸದನಗಳಲ್ಲಿ ನೋಟಿಸ್ ಸಲ್ಲಿಸಿದರೆ, ಅದನ್ನು ಅದೇ ದಿನ ಅಂಗೀಕರಿಸಬೇಕು ಎಂದು ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿ ರೋಹಟಗಿ, “ನ್ಯಾಯಮೂರ್ತಿಯನ್ನು ಪದಚ್ಯುತಗೊಳಿಸುವ ನೋಟಿಸ್ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ನೀಡಬಹುದು. ಆದರೆ, ನೋಟಿಸ್ ಸಲ್ಲಿಸುವುದು ಮತ್ತು ಅಂಗೀಕರಿಸುವುದು ಒಂದೇ ಅಲ್ಲ, ಎರಡೂ ವಿಭಿನ್ನ ವಿಷಯಗಳು. ಕಾನೂನಿನಲ್ಲಿ ಬರೆದಿರುವ ಪದ ನೀಡುವುದು (given) ಎಂಬುವುದಾಗಿದೆ ಎಂದು ಹೇಳಿದ್ದಾರೆ.
ಮುಂದುವರಿದು, “ಈ ಪ್ರಕರಣದಲ್ಲಿ ಎರಡೂ ಸದನಗಳಲ್ಲಿ ಒಂದೇ ದಿನ ನೋಟಿಸ್ ನೀಡಲಾಗಿದೆ. ಎರಡೂ ಸದನಗಳು ಸಂಪೂರ್ಣ ಸಮಾನ ಸ್ಥಾನಮಾನ ಹೊಂದಿವೆ. ಒಂದು ಸದನದಲ್ಲಿ ನೋಟಿಸ್ ಸಲ್ಲಿಸಲು 100 ಸಹಿಗಳು ಬೇಕು, ಮತ್ತೊಂದರಲ್ಲಿ 50 ಸಹಿಗಳು ಸಾಕು. ಆದರೂ, ಎರಡೂ ಸದನಗಳು ಪ್ರಜಾಪ್ರಭುತ್ವದಲ್ಲಿ ಸಮಾನ ಸ್ಥಾನಮಾನ ಹೊಂದಿವೆ. ಹೀಗಿರುವಾಗ ಲೋಕಸಭೆಯ ಸ್ಪೀಕರ್ ಒಬ್ಬರೇ ತೀರ್ಮಾನ ಮಾಡಿ ತನಿಖಾ ಸಮಿತಿ ರಚಿಸುವುದು ತಪ್ಪು. ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಸಮಾಲೋಚಿಸಿ ಜಂಟಿ ಸಮಿತಿ ರಚಿಸಬೇಕು. ಇದು ಎರಡೂ ಸದನಗಳ ಸಮಾನತೆಯನ್ನು ಕಾಪಾಡುತ್ತದೆ ಮತ್ತು ಇದುವೇ ಪ್ರಜಾಪ್ರಭುತ್ವದ ಸರಿಯಾದ ವಿಧಾನ” ಎಂದು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ನ್ಯಾ.ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರು ಉಳಿದುಕೊಂಡಿದ್ದ ದೆಹಲಿಯ ಮನೆಯಲ್ಲಿ 2025ರ ಮಾರ್ಚ್ 14ರ ಸಂಜೆ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಾಗ ಮನೆಯಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿತ್ತು ಎನ್ನಲಾಗಿದೆ. ಈ ವಿಚಾರ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ, ಮನೆಯಲ್ಲಿ ಹಣ ಪತ್ತೆಯಾಗಿರುವ ಆರೋಪವನ್ನು ನಿರಾಕರಿಸಿದ್ದ ನ್ಯಾ. ವರ್ಮಾ, “ಇದು ನನ್ನನ್ನು ಸಿಲುಕಿಸಲು ನಡೆದಿರುವ ಪಿತೂರಿ” ಎಂದಿದ್ದರು.
ಘಟನೆಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ವರ್ಮಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಯಾದರೂ ಅವರಿಗೆ ಯಾವುದೇ ಕೆಲಸ ವಹಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿತ್ತು. ಮತ್ತೊಂದೆಡೆ ತನಿಖೆಗೆ ಸಿಜೆಐ ಆಂತರಿಕ ಸಮಿತಿ ರಚಿಸಿದ್ದರು.
ನ್ಯಾ. ವರ್ಮಾ ಮನೆಯಲ್ಲಿ ಹಣ ಪತ್ತೆಯಾದ ಬಳಿಕ ನ್ಯಾಯಾಂಗದ ಪಾರದರ್ಶಕತೆಯ ಬಗ್ಗೆ ದೇಶದಲ್ಲಿ ಚರ್ಚೆಯಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಏಪ್ರಿಲ್ 1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ, ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಮುಖ್ಯ ನ್ಯಾಯಮೂರ್ತಿ ಮುಂದೆ ಬಹಿರಂಗಪಡಿಸಲು ನಿರ್ಧರಿಸಿದ್ದರು. ಅದರಂತೆ, ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್‌ನ 21 ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದರು.
ಸುಪ್ರೀಂ ಕೋರ್ಟ್ ನಿಯೋಜಿಸಿದ್ದ ಆಂತರಿಕ ಸಮಿತಿಯು ಮಾರ್ಚ್ 25ರಂದು ತನಿಖೆ ಆರಂಭಿಸಿ, ಮೇ 3ರಂದು ತನ್ನ ವರದಿಯನ್ನು ಅಂತಿಮಗೊಳಿಸಿತ್ತು. ಅದನ್ನು ಮೇ4ರಂದು ಸಿಜೆಐಗೆ ಸಲ್ಲಿಸಿತ್ತು. ವರದಿಯಲ್ಲಿ ನ್ಯಾ. ವರ್ಮಾ ಮನೆಯಲ್ಲಿ ಹಣ ಪತ್ತೆಯಾಗಿರುವ ಆರೋಪ ನಿಜ ಎಂದು ಸಮಿತಿ ದೃಢಪಡಿಸಿತ್ತು.
ಆಂತರಿಕ ಸಮಿತಿಯ ವರದಿಯನ್ನು ಪ್ರಶ್ನಿಸಿ ನ್ಯಾ. ವರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 7ರಂದು ವಜಾಗೊಳಿಸಿತ್ತು.
ಆ ಬಳಿಕ ಆಗಸ್ಟ್ 12ರಂದು ಯಶವಂತ್ ವರ್ಮಾ ಅವರ ವಿರುದ್ದ ಕೇಳಿ ಬಂದಿರುವ ಆರೋಪಗಳ ತನಿಖೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮೂವರು ಸದಸ್ಯರ ಸಮಿತಿ ರಚಿಸಿದ್ದರು.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಬಿ.ವಿ. ಆಚಾರ್ಯ ತ್ರಿಸದಸ್ಯ ಸಮಿತಿಯಲ್ಲಿ ಇದ್ದಾರೆ.
ಸಮಿತಿ ರಚನೆಗೂ ಮುನ್ನ, ಬಿಜೆಪಿಯ ರವಿಶಂಕರ್ ಪ್ರಸಾದ್, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಎನ್‌ಸಿಪಿ-ಎಸ್‌ಪಿಯ ಸುಪ್ರಿಯಾ ಸುಳೆ ಸೇರಿದಂತೆ ಹಲವು ಪಕ್ಷಗಳ ಸಂಸದರ ನಿಯೋಗ ವರ್ಮಾ ಅವರ ವಾಗ್ದಂಡನೆಗೆ ನೋಟಿಸ್ ಸಲ್ಲಿಸಿರುವುದಾಗಿ ಸ್ಪೀಕರ್ ಲೋಕಸಭೆಗೆ ತಿಳಿಸಿದ್ದರು. ಆಡಳಿತ ಮತ್ತು ವಿರೋಧ ಪಕ್ಷಗಳ 146 ಸಂಸದರು ಈ ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ಹೇಳಿದ್ದರು.
ನ್ಯಾಯಾಧೀಶರ ವಾಗ್ದಂಡನೆಗೆ ಲೋಕಸಭೆಯ ಕನಿಷ್ಠ 100 ಸದಸ್ಯರು ಮತ್ತು ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಸಹಿ ಹಾಕಬೇಕು. ಈ ನಿರ್ಣಯವನ್ನು ಸ್ಪೀಕರ್ ಅಥವಾ ಅಧ್ಯಕ್ಷರು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು.


