ದೆಹಲಿ-ಎನ್‌ಸಿಆರ್‌ನಲ್ಲಿರುವ ಶೆಲ್ಟರ್‌ಗಳಿಂದ ಬೀದಿ ನಾಯಿಗಳನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸುವ ಆಗಸ್ಟ್ 11 ರ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮಾರ್ಪಡಿಸಿದೆ. ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ, ಸೂಕ್ತ ಲಸಿಕೆ ನೀಡಿ ಅದೇ ಪ್ರದೇಶದಲ್ಲಿ ಮತ್ತೆ ಬಿಡಬೇಕು ಎಂದು ಹೇಳಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಮೂವರು ನ್ಯಾಯಾಧೀಶರ ವಿಶೇಷ ಪೀಠವು, ಈ ಆದೇಶವು ರೇಬೀಸ್ ಸೋಂಕಿತ ಅಥವಾ ರೇಬೀಸ್ ಸೋಂಕಿಗೆ ಒಳಗಾದ; ಶಂಕಿತ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ನಾಯಿಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಂತಾನಹರಣ ಶಸ್ತ್ರ ಚಿಕಿತ್ಸೆ ಜೊತೆಗೆ ಲಸಿಕೆ ನೀಡಿ ಅದೇ ಪ್ರದೇಶದಲ್ಲಿ ಮತ್ತೆ ಬಿಡಲು ಸೂಚಿಸಲಾಗಿದೆ. ಆದರೆ, ರೇಬೀಸ್ ಸೋಂಕಿತ ಅಥವಾ ರೇಬೀಸ್ ಸೋಂಕಿಗೆ ಒಳಗಾದ ಶಂಕಿತ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ನಾಯಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.
ಶೇಲ್ಟರ್‌ಗಳಿಂದ ಬೀದಿ ನಾಯಿಗಳನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸುವ ಆಗಸ್ಟ್ 11 ರ ನಿರ್ದೇಶನವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು. ಜನರು ಬೀದಿ ನಾಯಿಗಳಿಗೆ ಆಹಾರ ನೀಡಬಹುದಾದ ಮೀಸಲಾದ ಆಹಾರ ಸ್ಥಳವನ್ನು ರಚಿಸಲು ಪುರಸಭೆ ಅಧಿಕಾರಿಗಳು ನಿರ್ಧರಿಸುತ್ತಾರೆ. ನಗರಪಾಲಿಕೆ ವಾರ್ಡ್‌ನಲ್ಲಿ ಜನಸಂಖ್ಯೆ, ಬೀದಿ ನಾಯಿಗಳ ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ನೀಡುವ ಪ್ರದೇಶಗಳನ್ನು ನಾಗರಿಕ ಸಂಸ್ಥೆಗಳು ರಚಿಸಬೇಕು. ನಾಯಿಗಳಿಗೆ ಬೀದಿಗಳಲ್ಲಿ ಆಹಾರ ನೀಡುವುದನ್ನು ಅನುಮತಿಸಲಾಗುವುದಿಲ್ಲ.
ನಿಗದಿಪಿಸಿದ ಆಹಾರ ನೀಡುವ ಪ್ರದೇಶಗಳ ಬಳಿ ಸೂಚನಾ ಫಲಕಗಳನ್ನು ಇರಿಸಬೇಕು, ಅಲ್ಲಿ ಬೀದಿ ನಾಯಿಗಳಿಗೆ ಮಾತ್ರ ಆಹಾರ ನೀಡಬೇಕು ಎಂದು ನಮೂದಿಸಬೇಕು. ಗೊತ್ತುಪಡಿಸದ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವುದು ಕಂಡುಬಂದರೆ, ಸಂಬಂಧಿತ ಕಾನೂನು ಚೌಕಟ್ಟಿನ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಭಾರತಾದ್ಯಂತ ಈ ವಿಷಯದ ವ್ಯಾಪ್ತಿಯನ್ನು ವಿಸ್ತರಿಸಿದ ಪೀಠವು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಈ ವಿಷಯದಲ್ಲಿ ಪಕ್ಷಗಳಾಗಿ ಸೇರಿಸಿಕೊಂಡಿತು. ಬೀದಿ ನಾಯಿಗಳ ವಿಷಯದ ಕುರಿತು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ತನ್ನ ವಶಕ್ಕೆ ವರ್ಗಾಯಿಸಿತು. ಎಂಟು ವಾರಗಳ ನಂತರ ವಿಚಾರಣೆಗೆ ಅರ್ಜಿ ಸಲ್ಲಿಸಲಾಗಿದೆ.
ತೀರ್ಪು ಶ್ಲಾಘಿಸಿದ ಶ್ವಾನಪ್ರಿಯರು
ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳ ಸ್ಥಳಾಂತರದ ಕುರಿತು ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿದ ನಂತರ ಶುಕ್ರವಾರ ಜಂತರ್ ಮಂತರ್‌ನಲ್ಲಿ ಪ್ರಾಣಿ ಪ್ರಿಯರು ಸಂಭ್ರಮಾಚರಣೆ ನಡೆಸಿದರು.
ಕ್ರೋಧೋನ್ಮತ್ತ ಅಥವಾ ಆಕ್ರಮಣಕಾರಿಯಲ್ಲದ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುವುದಿಲ್ಲ, ಬದಲಿಗೆ ಸಂತಾನಹರಣ, ಲಸಿಕೆ ಮತ್ತು ಅವುಗಳ ಮೂಲ ಸ್ಥಳಗಳಿಗೆ ಹಿಂತಿರುಗಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಘೋಷಣೆಯ ನಂತರ, ತೀರ್ಪಿನ ನಿರೀಕ್ಷೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಮತ್ತು ಆರೈಕೆದಾರರು ಪರಸ್ಪರ ಅಪ್ಪಿಕೊಂಡು ಸಂಭ್ರಮಾಚರಣೆಯ ಘೋಷಣೆಗಳನ್ನು ಕೂಗಿದರು. ಕೆಲವರು ‘ಹರ ಹರ ಮಹಾದೇವ್’ ಎಂದು ದೇವರಿಗೆ ಧನ್ಯವಾದ ಅರ್ಪಿಸಿದರು. ಅನೇಕರು ಈ ತೀರ್ಪನ್ನು ಕರುಣೆಯ ವಿಜಯ ಎಂದು ಬಣ್ಣಿಸಿದರು.
“ಈಗ ನಾವು ನಮ್ಮ ಮಕ್ಕಳನ್ನು ಎಲ್ಲಿಗೂ ಕಳುಹಿಸಬೇಕಾಗಿಲ್ಲ” ಎಂದು ಆಚರಿಸುವವರಲ್ಲಿ ಒಬ್ಬರು ಹೇಳಿದರು.
“ಇದು ಐತಿಹಾಸಿಕ ದಿನ. ಸಮುದಾಯ ಪ್ರಾಣಿಗಳನ್ನು ನೋಡಿಕೊಳ್ಳುವ ಸರಿಯಾದ ಮಾರ್ಗವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ನಮ್ಮ ‘ಬೀದಿ ಮಕ್ಕಳು’ ನಮ್ಮೊಂದಿಗೆ ಇರುತ್ತಾರೆ. ನಾವು ಅವುಗಳನ್ನು ನೋಡಿಕೊಳ್ಳುವುದನ್ನು ಮುಂದುವರಿಸುತ್ತೇವೆ” ಎಂದು ವ್ಯಕ್ತಿಯೋರ್ವ ಹೇಳಿದರು.
ಬೀದಿ ನಾಯಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವವರಿಗೆ ಈ ತೀರ್ಪು ಸಾಕಷ್ಟು ಪರಿಹಾರ ನೀಡಿದೆ ಎಂದು ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಹೇಳಿದರು.
“ನಾವು ತುಂಬಾ ಆತಂಕಕ್ಕೊಳಗಾಗಿದ್ದೆವು, ಆದರೆ ಇಂದಿನ ನಿರ್ಧಾರವು ದಯೆ ಮತ್ತು ವಿಜ್ಞಾನವು ಜೊತೆಜೊತೆಯಲ್ಲಿ ಸಾಗುತ್ತವೆ ಎಂಬ ಭರವಸೆಯನ್ನು ನೀಡುತ್ತದೆ” ಎಂದು ಅವರು ಹೇಳಿದರು.
ಮಧ್ಯಪ್ರದೇಶ| ಕೇಂದ್ರ ಸಚಿವರ ಮನೆ ಮುಂದೆ ಬೆಂಕಿಯಲ್ಲಿ ಸುಟ್ಟ ಮತದಾರರ ಚೀಟಿಗಳು ಪತ್ತೆ


