ಕರ್ನಾಟಕದಾದ್ಯಂತ ಜಿಲ್ಲಾ ವಕೀಲರ ಸಂಘಗಳ ಕಾರ್ಯಕಾರಿ ಸಮಿತಿ/ಆಡಳಿತ ಮಂಡಳಿಗಳಲ್ಲಿ ಖಜಾಂಜಿ ಹುದ್ದೆ ಮತ್ತು ಒಟ್ಟು ಹುದ್ದೆಗಳಲ್ಲಿ ಶೇ.30ರಷ್ಟು ಮಹಿಳಾ ನ್ಯಾಯವಾದಿಗಳಿಗೆ ಮೀಸಲಿಡಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ (ಮಾ.24) ಆದೇಶಿಸಿದೆ.
ಬೆಂಗಳೂರಿನ ವಕೀಲರ ಸಂಘದ (ಎಎಬಿ) ಪ್ರಕರಣದಲ್ಲಿ ನೀಡಲಾದ ನಿರ್ದೇಶನವು ಕರ್ನಾಟಕದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರ ಪೀಠ ಹೇಳಿದೆ.
ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಇಂತಹ ನಿರ್ದೇಶನ ನೀಡಿತ್ತು. ಅಲ್ಲದೆ, ಈ ವರ್ಷದ ಜನವರಿ 24 ರಂದು ಹೊರಡಿಸಿದ ಆದೇಶದಲ್ಲಿ, ಖಜಾಂಚಿ (ಕೋಶಾಧಿಕಾರಿ) ಹುದ್ದೆಯನ್ನು ಮಹಿಳಾ ಅಭ್ಯರ್ಥಿಗಳಿಗೆಂದೇ ಮೀಸಲಿಡಬೇಕೆಂದು ಸೂಚಿಸಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಎಬಿ ಚುನಾವಣೆ ನಡೆದಿರುವ ಬಗ್ಗೆ ಎರಡು ದಿನಗಳ ಹಿಂದೆ ಪೀಠದ ಗಮನಕ್ಕೆ ತರಲಾಗಿತ್ತು. ಜನವರಿ 28ರಂದು ಎಎಬಿ ಆಡಳಿತ ಮಂಡಳಿಯಲ್ಲಿ ಮಹಿಳಾ ವಕೀಲರಿಗೆ ಶೇಕಡಾ 30ರಷ್ಟು ಮೀಸಲಾತಿ ಜಾರಿಗೆ ತಂದಿರುವುದಾಗಿ ತಿಳಿಸಲಾಗಿತ್ತು.
ರಾಜ್ಯದ ಎಲ್ಲಾ ವಕೀಲರ ಸಂಘಗಳ ಚುನಾವಣೆಗಳಲ್ಲಿ ಮಹಿಳಾ ವಕೀಲರಿಗೆ ಶೇಖಡ 30ರಷ್ಟು ಮೀಸಲಾತಿ ನಿಗದಿಪಡಿಸಿ ನಿರ್ದೇಶನ ನೀಡುವಂತೆ ಬೆಂಗಳೂರಿನ ಮಹಿಳಾ ವಕೀಲರು ಸುಪ್ರೀಂ ಕೋರ್ಟ್‌ಗೆ ಕೋರಿದ್ದರು.
ವಿವಿಧ ಜಿಲ್ಲಾ ವಕೀಲರ ಸಂಘಗಳಿಗೆ ಚುನಾವಣೆಗಳು ಬಾಕಿ ಉಳಿದಿರುವುದನ್ನು ಗಮನಿಸಿದ ನ್ಯಾಯಾಲಯ, ಎಎಬಿಗೆ ನೀಡಿದ್ದ ಮಹಿಳಾ ಮೀಸಲಾತಿಯ ನಿರ್ದೇಶನಗಳನ್ನು ಕರ್ನಾಟಕದ ಎಲ್ಲಾ ವಕೀಲರ ಸಂಘದ ಚುನಾವಣೆಗಳಿಗೂ ಅನ್ವಯಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕದ ಎಲ್ಲಾ ಜಿಲ್ಲಾ ವಕೀಲರ ಸಂಘಗಳಲ್ಲಿ ಮಹಿಳಾ ವಕೀಲರಿಗೆ ಖಜಾಂಚಿ ಹುದ್ದೆ ಮತ್ತು ಕಾರ್ಯಕಾರಿ ಸಮಿತಿ/ಆಡಳಿತ ಮಂಡಳಿ ಹುದ್ದೆಗಳ ಶೇಖಡ 30ರಷ್ಟು ಹುದ್ದೆಗಳನ್ನು ಮೀಸಲಿಡುವಂತೆ ನಿರ್ದೇಶಿಸಿದೆ.
ಎಎಬಿಯಂತೆ ರಾಜ್ಯದ ಎಲ್ಲಾ ವಕೀಲರ ಸಂಘಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರುವಂತೆ ಕರ್ನಾಟಕ ಹೈಕೋರ್ಟ್ ಕೂಡ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು.
ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ (ಟಿಬಿಎ) ಮಹಿಳಾ ವಕೀಲರಿಗೆ ಶೇ. 33ರಷ್ಟು ಮೀಸಲಾತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಏಪ್ರಿಲ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಿಳೆಯರಿಗೆ ಜಂಟಿ ಕಾರ್ಯದರ್ಶಿ ಹುದ್ದೆ ಮತ್ತು ಎರಡು ಕಾರ್ಯಕಾರಿ ಮಂಡಳಿ ಹುದ್ದೆಗಳನ್ನು ಕಾಯ್ದಿರಿಸುವುದಾಗಿ ಸಂಘ ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನಂತರ ಆದೇಶ ಹೊರಡಿಸಿದೆ.
ಮುಂಬರುವ ಚುನಾವಣೆಗಳು ಪೂರ್ಣಗೊಂಡ ನಂತರ ಈ ಬದಲಾವಣೆಗಳನ್ನು ಅಳವಡಿಸಲು ಸಂಘದ ಬೈಲಾಗಳನ್ನು ಸಹ ತಿದ್ದುಪಡಿ ಮಾಡಲಾಗುವುದು ಎಂದು ಟಿಬಿಎ ಪರ ವಕೀಲರು ಹೈಕೋರ್ಟ್‌ಗೆ ಹೇಳಿದ್ದಾರೆ.
ಆದೇಶ ನೀಡುವ ವೇಳೆ, ಈಗ ಮೀಸಲಾತಿ ಜಾರಿ ಮಾಡಲಿಲ್ಲ ಎಂದರೆ ಯಾವಾಗ ಮಾಡುವಿರಿ? ಎಂದು ಪ್ರಶ್ನಿಸಿದ್ದ ನ್ಯಾ. ನಾಗಪ್ರಸನ್ನ ಅವರು “ವಕೀಲರ ಸಂಘಗಳನ್ನು ಬಾಯ್ಸ್ ಕ್ಲಬ್ ಆಗಿರಲು ಬಿಡಲಾಗದು” ಎಂದಿದ್ದರು.
ದೆಹಲಿ ವಕೀಲರ ಸಂಘದಲ್ಲಿ ಮಹಿಳೆಯರಿಗೆ ಖಜಾಂಜಿ ಹುದ್ದೆ ಮತ್ತು ಶೇಖಡ 33ರಷ್ಟು ಮೀಸಲಾತಿ ನೀಡುವಂತೆ ಕಳೆದ ವರ್ಷ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ನಿರ್ದೇಶನಗಳನ್ನು ಕರ್ನಾಟಕದ ಎಲ್ಲಾ ವಕೀಲರ ಸಂಘಗಳಿಗೆ ನೀಡುವಂತೆ ಬೆಂಗಳೂರಿನ ಮಹಿಳಾ ವಕೀಲರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೂಲ ಅರ್ಜಿಯಲ್ಲಿ ಕೋರಲಾಗಿತ್ತು. ಮಹಿಳಾ ವಕೀಲರಿಗೆ ಮೀಸಲಾತಿ ನೀಡುವಲ್ಲಿ ಯಾವುದೇ ಕಾನೂನು ಅಡಚಣೆ ಇಲ್ಲ ಎಂದು ಹೇಳಲಾಗತ್ತು.
ದೆಹಲಿ ಮಾರಾಟ ತೆರಿಗೆ ವಕೀಲರ ಸಂಘ ಮತ್ತು ದೆಹಲಿ ತೆರಿಗೆ ವಕೀಲರ ಸಂಘಗಳ ಕಾರ್ಯಕಾರಿ ಸಮಿತಿಯಲ್ಲಿ ಖಜಾಂಚಿ ಹುದ್ದೆ ಮತ್ತು ಮಹಿಳಾ ವಕೀಲರಿಗೆ ಶೇಕಡಾ 30ರಷ್ಟು ಸ್ಥಾನಗಳನ್ನು ಕಾಯ್ದಿರಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಕೀಲರ ಸಂಘದ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇಕಡಾ 33ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎಂದು ಈ ವರ್ಷದ ಜನವರಿ 20ರಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ದೆಹಲಿ ಹೈಕೋರ್ಟ್ ವಕೀಲರ ಸಂಘದ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಮೂರು ಹುದ್ದೆಗಳನ್ನು ಕಾಯ್ದಿರಿಸುವಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಜಿಲ್ಲಾ ವಕೀಲರ ಸಂಘಗಳ ಚುನಾವಣೆಯಲ್ಲಿ, ಖಜಾಂಚಿ ಹುದ್ದೆ ಮತ್ತು ಇತರ ಕಾರ್ಯಕಾರಿ ಸಮಿತಿ ಹುದ್ದೆಗಳಲ್ಲಿ ಶೇ. 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ (ಈಗಾಗಲೇ ಮಹಿಳೆಯರಿಗೆ ಮೀಸಲಿಟ್ಟ ಹುದ್ದೆಗಳನ್ನು ಒಳಗೊಂಡಂತೆ) ಮೀಸಲಿಡಬೇಕು ಎಂದು ಹೇಳಿತ್ತು.
ಕಳೆದ ವರ್ಷ ಸೆಪ್ಟೆಂಬರ್ 26 ರಂದು, ಸುಪ್ರೀಂ ಕೋರ್ಟ್ DHCBA ಗೆ ಐದು ಸದಸ್ಯರ ಸಂಘದ ಪದಾಧಿಕಾರಿಗಳ ಮಂಡಳಿಯಲ್ಲಿ ಮತ್ತೊಂದು ಹುದ್ದೆಯ ಜೊತೆಗೆ ಖಜಾಂಚಿ ಹುದ್ದೆಯನ್ನು ಮಹಿಳೆಯರಿಗೆ ಮೀಸಲಿಡುವಂತೆ ನಿರ್ದೇಶನ ನೀಡಿತು.
ಐವರು ಸದಸ್ಯರ ಸಂಘದ ಪದಾಧಿಕಾರಿಗಳ ಮಂಡಳಿಯಲ್ಲಿ ಒಂದು ಹುದ್ದೆಯ ಜೊತೆಗೆ ಖಜಾಂಚಿ ಹುದ್ದೆಯನ್ನು ಮಹಿಳೆಯರಿಗೆ ಮೀಸಲಿಡುವಂತೆ ಕಳೆದ ವರ್ಷದ ಸೆಪ್ಟೆಂಬರ್ 26 ರಂದು ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ವಕೀಲರ ಸಂಘಕ್ಕೆ ನಿರ್ದೇಶನ ನೀಡಿತ್ತು.
ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ಬಸವರಾಜ ಹೊರಟ್ಟಿ ಸ್ಪಷ್ಟನೆ


