ಆರಾಧನಾ ಸ್ಥಳಗಳ ಕಾಯ್ದೆ-1991ರ ಸಿಂಧುತ್ವ ಪ್ರಶ್ನಿಸಿ ಹೊಸದಾಗಿ ಸಲ್ಲಿಸಿದ್ದ ರಿಟ್ ಅರ್ಜಿಯೊಂದನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಅರ್ಜಿದಾರನಿಗೆ ಅನುಮತಿ ನೀಡಿದೆ.
ಆರಾಧನಾ ಸ್ಥಳಗಳ ಕಾಯ್ದೆ-1991ರ ಸಿಂಧುತ್ವ ಪ್ರಶ್ನಿಸಿ ಈಗಾಗಲೇ ಸಲ್ಲಿಕೆಯಾಗಿರುವ ಹಲವು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೆ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ.ವಿ ಸಂಜಯ್ ಕುಮಾರ್ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, “ಆರಾಧನಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಹೊಸ ಅರ್ಜಿಗಳನ್ನು ಸ್ವೀಕರಿಸದಂತೆ ಮತ್ತು ಯಾವುದೇ ಸಮೀಕ್ಷೆಗೆ ಆದೇಶಿಸದಂತೆ ದೇಶದ ಎಲ್ಲಾ ನ್ಯಾಯಾಲಯಗಳಿಗೆ 2024ರ ಡಿಸೆಂಬರ್ 12 ರಂದು ಸೂಚಿಸಿದೆ.
ಹೊಸದಾಗಿ ಸಲ್ಲಿಸಿರುವ ಅರ್ಜಿಯು ಈಗಾಗಲೇ ವಿಚಾರಣೆಯಲ್ಲಿರುವ ಅರ್ಜಿಗಿಂತ ಭಿನ್ನವಾಗಿಲ್ಲ ಎಂದು
ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠ ಹೇಳಿದೆ.
ಈ ವೇಳೆ ಅರ್ಜಿದಾರನ ಪರ ಹಾಜರಿದ್ದ ವಕೀಲರು “ಈಗಾಗಲೇ ವಿಚಾರಣೆಯಲ್ಲಿರುವ ಅರ್ಜಿಗಳಲ್ಲಿ ಇದನ್ನೂ ಸೇರಿಸುವಂತೆ ಮನವಿ ಮಾಡಿದ್ದಾರೆ. ಈ ಅರ್ಜಿಯಲ್ಲಿ ಕೆಲವು ಸೂಕ್ಷ್ಮ ವಿಚಾರಗಳಿವೆ. ಅದನ್ನು ನಾನು ನ್ಯಾಯಾಲಯಕ್ಕೆ ತಿಳಿಸುತ್ತೇನೆ” ಎಂದಿದ್ದಾರೆ.
ನ್ಯಾಯಾಲಯ ಹೊಸದಾಗಿ ಅರ್ಜಿ ಪರಿಗಣಿಸಲು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ನಿರಾಕರಿಸಿದೆ. ಆದರೆ, ಈಗಾಗಲೇ ವಿಚಾರಣೆಯಲ್ಲಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಅನುಮತಿ ನೀಡಿದೆ.
ಆರಾಧನಾ ಸ್ಥಳಗಳ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಕೃಷ್ಣ ಕುಮಾರ್ ಉಪಾಧ್ಯಾಯ ಮೂಲ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಪರ-ವಿರೋಧವಾಗಿ ಅನೇಕ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲವನ್ನೂ ಸುಪ್ರೀಂ ಕೋರ್ಟ್ ಒಟ್ಟಿಗೆ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಂತಿಮ ಆದೇಶ ನೀಡುವವರೆಗೆ ಜ್ಞಾನವ್ಯಾಪಿ, ಶಾಹಿ ಈದ್ಗಾ, ಸಂಭಾಲ್ ಜಾಮಾ ಮಸ್ಜಿದ್, ಅಜ್ಮೀರ್ ದರ್ಗಾ ಸೇರಿದಂತೆ ಮಸೀದಿ-ಮಂದಿರಕ್ಕೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಸ್ವೀಕರಿಸಬಾರದು ಮತ್ತು ಈ ಸಂಬಂಧ ಯಾವುದೇ ಆದೇಶಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕುನಾಲ್ ಕಾರ್ಯಕ್ರಮಕ್ಕೆ ಹಾಜರಾದ ಪ್ರೇಕ್ಷಕರಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು!


