ಹಿಮಾಚಲ ಪ್ರದೇಶ ರಾಜ್ಯ ವಿಧಾನಸಭೆಯಿಂದ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಆರು ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಮಂಗಳವಾರ (ಮಾರ್ಚ್ 12) ನೋಟಿಸ್ ಜಾರಿ ಮಾಡಿದೆ. ಆದರೆ, ಅವರ ಅನರ್ಹತೆಗೆ ತಡೆ ನೀಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದೇ ವೇಳೆ, ಇತ್ತೀಚೆಗೆ ಘೋಷಿಸಲಾದ ಉಪಚುನಾವಣೆಗಳನ್ನು ರದ್ದುಗೊಳಿಸಬೇಕೆ? ಎಂಬ ಬಗ್ಗೆ ಪರಿಶೀಲಿಸಲು ನ್ಯಾಯಾಲಯ ಒಪ್ಪಿಕೊಂಡಿದೆ.
The Supreme Court on Tuesday (March 12) issued notice on a plea by six rebel MLAs of the Congress party challenging their disqualification from the Himachal Pradesh state assembly.
Read more: https://t.co/AytEh93zxp#SupremeCourtofIndia #himachalpradesh pic.twitter.com/7bbYDTyYCy— Live Law (@LiveLawIndia) March 18, 2024
ಆರು ಮಂದಿ ಕಾಂಗ್ರೆಸ್ ಶಾಸಕರು ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ತಮ್ಮದೇ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದರು. ಬಳಿಕ ಫೆಬ್ರವರಿಯಲ್ಲಿ ನಡೆದ ಬಜೆಟ್ ಮತದಾನದಿಂದಲೂ ಅವರು ದೂರವಿದ್ದರು. ಈ ಮೂಲಕ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟನ್ನು ಉಂಟುಮಾಡಿದ್ದರು. ಕಾಂಗ್ರೆಸ್ ಶಾಸಕರ ಅಡ್ಡ ಮತದಾನದ ಪರಿಣಾಮ ಕಾಂಗ್ರೆಸ್ ಸರ್ಕಾರವಿದ್ದರೂ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸೋಲು ಅನುಭವಿಸಿದ್ದರು.
ತಮ್ಮ ಅನಹರ್ತೆಯನ್ನು ಪ್ರಶ್ನಿಸಿ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಬಂಡಾಯ ಶಾಸಕರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿದೆ.
ಇಂದು ವಿಚಾರಣೆಯ ಕೊನೆಯಲ್ಲಿ ಅರ್ಜಿದಾರರ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಮುಂದೂಡಲು ನ್ಯಾಯಪೀಠ ಒಪ್ಪಿಕೊಂಡಿತು. ಈ ವೇಳೆ ಹೈಕೋರ್ಟ್‌ಗೆ ಹೋಗದೆ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಂಡಾಯ ಶಾಸಕರನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ತರಾಟೆಗೆ ತೆಗೆದುಕೊಂಡರು. ಗಮನಾರ್ಹವಾಗಿ, ಸಂವಿಧಾನದ 32 ನೇ ವಿಧಿಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿತು. ಅರ್ಜಿದಾರರ ಯಾವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಕೇಳಿತು. ಸಂವಿಧಾನದ 32ನೇ ವಿಧಿ ಮೂಲಭೂತ ಹಕ್ಕುಗಳ ಉಲ್ಲಂಘಣೆಗೆ ಸಂಬಂಧಿಸಿದ್ದಾಗಿದೆ.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಬಂಡಾಯ ಶಾಸಕರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ಶಾಸಕರ ಅನರ್ಹತೆಗೆ ನೀಡಿರುವ ಕಾರಣಗಳನ್ನು ಎತ್ತಿ ತೋರಿಸಿದರು. ರಾಜ್ಯಸಭಾ ಚುನಾವಣೆಗೆ ಮುನ್ನ ಫೆಬ್ರವರಿ 15 ರಂದು ಕಾಂಗ್ರೆಸ್ ಪಕ್ಷ ಹೊರಡಿಸಿದ ವಿಪ್ ಅನ್ನು ಅರ್ಜಿದಾರರು ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು.
ಕಳೆದ ಶನಿವಾರ ಚುನಾವಣಾ ಆಯೋಗವು ಆರು ಶಾಸಕರ ಅನರ್ಹತೆಯಿಂದ ತೆರವಾದ ಸ್ಥಾನಗಳಿಗೆ ಜೂನ್ 1 ರಂದು ಉಪಚುನಾವಣೆ ನಡೆಸಲು ದಿನಾಂಕ ಘೋಷಿಸಿದೆ. ಈ ವಿಷಯವನ್ನು ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಉಲ್ಲೇಖಿಸಿದರು. ಈ ವೇಳೆ ಪ್ರತಿವಾದ ಮಂಡಿಸಿದ ವಕೀಲ ಹರೀಶ್ ಸಾಳ್ವೆ, ನಾವು ಅದರ ವಿರುದ್ದವೂ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸುತ್ತೇವೆ. ಚುನಾವಣಾ ಆಯೋಗ ಕೇವಲ ದಿನಾಂಕ ಘೋಷಿಸಿದೆ. ಅಧಿಸೂಚನೆ ಪ್ರಕಟಿಸಿಲ್ಲ ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದೆ. ಶಾಸಕರ ಅನರ್ಹತೆ ಕುರಿತಂತೆ 4 ವಾರಗಳಲ್ಲಿ ಪ್ರತಿಕ್ರಿಯೆ ಕೇಳಿ ಹಿಮಾಚಲ ಪ್ರದೇಶ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇನ್ನು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಶಾಸಕರು ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಇದನ್ನೂ ಓದಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಪ್ರಧಾನಿ ಮೋದಿ ವಿರುದ್ಧ ದೂರು


