ವಿಶೇಷ ತೀವ್ರ ಪರಿಷ್ಕರಣೆಯ ವೇಳಾಪಟ್ಟಿಯಂತೆ ಆಗಸ್ಟ್ 1ರಂದು ಬಿಹಾರದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡುವುದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 28) ನಿರಾಕರಿಸಿತು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಇಂದು ವಿವರವಾದ ವಿಚಾರಣೆ ನಡೆಸಿಲ್ಲ. ಏಕೆಂದರೆ, ಪೀಠದ ಭಾಗವಾದ ನ್ಯಾಯಮೂರ್ತಿ ಕಾಂತ್ ಅವರು ಮಧ್ಯಾಹ್ನ ಸಿಜೆಐ ಅವರೊಂದಿಗಿನ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಹಾಗಾಗಿ, ಅರ್ಜಿದಾರರಿಗೆ ಈ ಪ್ರಕರಣಗಳನ್ನು ಆದಷ್ಟು ಬೇಗ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದ ನ್ಯಾಯಮೂರ್ತಿ ಕಾಂತ್, ನಾಳೆ ವಾದಕ್ಕೆ ಅಗತ್ಯವಿರುವ ತಾತ್ಕಾಲಿಕ ಸಮಯವನ್ನು ತಿಳಿಸುವಂತೆ ವಕೀಲರಿಗೆ ಹೇಳಿದರು.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಕರಡು ಪಟ್ಟಿಯ ಅಧಿಸೂಚನೆಯನ್ನು ತಡೆಯುವಂತೆ ಪೀಠವನ್ನು ಕೋರಿದರು. ಇದು ಸುಮಾರು 4.5 ಕೋಟಿ ಮತದಾರರಿಗೆ ಅನಾನುಕೂಲವನ್ನುಂಟು ಮಾಡುತ್ತದೆ ಎಂದು ಹೇಳಿದರು. ಕರಡು ಪಟ್ಟಿ ಪ್ರಕಟವಾದ ನಂತರ, ಹೊರಗಿಡಲಾದ ವ್ಯಕ್ತಿಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ಸೇರ್ಪಡೆಗೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಕರಡು ಪಟ್ಟಿ ಪ್ರಕಟಿಸುವ ಮೊದಲು ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಕೊಂಡ ಕಾರಣ ಜೂನ್ 10ರಂದು ತಡೆ ಕೋರಿರಲಿಲ್ಲ ಎಂದು ನೆನಪಿಸಿದರು.
ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಇದು ಕೇವಲ ಕರಡು ಪಟ್ಟಿ ಎಂದು ವಾದಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕಾಂತ್, “ಇದು ಕರಡು ಪಟ್ಟಿ, ಯಾವುದೇ ಅಕ್ರಮ ಕಂಡುಬಂದರೆ ನ್ಯಾಯಾಲಯವು ಅಂತಿಮವಾಗಿ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಬಹುದು ಎಂದು ಹೇಳಿದರು.
ಈ ವೇಳೆ ಎಡಿಆರ್ ಪರ ವಕೀಲ ಶಂಕರನಾರಾಯಣನ್ ಅವರು, ಈ ಪ್ರಕ್ರಿಯೆಯು ‘ಅರ್ಜಿಗಳ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುವಂತೆ ನ್ಯಾಯಮೂರ್ತಿ ಕಾಂತ್ ಅವರನ್ನು ಕೇಳಿಕೊಂಡರು. ನಾವು ಅರ್ಥಮಾಡಿಕೊಂಡಂತೆ ಅಂತಹ ಅಭಿಪ್ರಾಯ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.
ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ಎಡಿಆರ್ ಪರ ವಕೀಲರು, ಸುಪ್ರೀಂ ಕೋರ್ಟ್ ಜುಲೈ 10ರಂದು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಪರಿಗಣಿಸುವಂತೆ ನೀಡಿದ ಸಲಹೆಯನ್ನು ಚುನಾವಣಾ ಆಯೋಗ ಉಲ್ಲಂಘಿಸುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಆಗ, ಚುನಾವಣಾ ಆಯೋಗ ತನ್ನ ಪ್ರತಿ ಅಫಿಡವಿಟ್‌ನಲ್ಲಿ ಈ ದಾಖಲೆಗಳ ಬಗ್ಗೆ ತನ್ನ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ ಎಂದು ದ್ವಿವೇದಿ ಹೇಳಿದರು. ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ, ಹಲವಾರು ನಕಲಿ ಕಾರ್ಡ್‌ಗಳನ್ನು ನೀಡಲಾಗಿದೆ ಎಂದರು.
ಈ ವೇಳೆ, ಆಧಾರ್ ಕಾರ್ಡ್ ಮತ್ತು ಮತದಾರರ ಚುನಾವಣಾ ಗುರುತಿನ ಚೀಟಿಯನ್ನು ಕನಿಷ್ಠ ಶಾಸನಬದ್ಧ ದಾಖಲೆಗಳನ್ನಾಗಿ ಪರಿಗಣಿಸುವಂತೆ ಪೀಠವು ಮೌಖಿಕವಾಗಿ ಚುನಾವಣಾ ಆಯೋಗಕ್ಕೆ ಹೇಳಿತು.
ಈ ದಾಖಲೆಗಳು (ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ) ಸರಿಯಾಗಿವೆ ಎಂಬ ಊಹೆ ಇದೆ. ನೀವು ಅವುಗಳನ್ನು ಪರಿಗಣಿಸಿ. ಒಂದು ವೇಳೆ ನಕಲಿ ಎಂದು ಕಂಡು ಬಂದರೆ, ಅದೇ ಪ್ರಕರಣಕ್ಕೆ ಆಧಾರವಾಗಿರುತ್ತದೆ. ಭೂಮಿಯ ಮೇಲಿನ ಯಾವುದೇ ದಾಖಲೆಯನ್ನು ನಕಲಿ ಮಾಡಬಹುದು” ಎಂದು ನ್ಯಾಯಮೂರ್ತಿ ಕಾಂತ್ ಚುನಾವಣಾ ಆಯೋಗದ ಪರ ವಕೀಲರಿಗೆ ಮೌಖಿಕವಾಗಿ ಹೇಳಿದರು.
“ಸಾಮೂಹಿಕ ಹೊರಗಿಡುವಿಕೆ” ಬದಲಿಗೆ, “ಸಾಮೂಹಿಕ ಸೇರ್ಪಡೆ” ಇರಬೇಕು ಎಂದು ನ್ಯಾಯಮೂರ್ತಿ ಕಾಂತ್ ಚುನಾವಣಾ ಆಯೋಗಕ್ಕೆ ತಿಳಿಸಿದರು.
ಈ ಹಿಂದಿನ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಬಾಗ್ಚಿ ಅವರ ರಜಾ ಅವಧಿಯ ಪೀಠವು, ಪೌರತ್ವವನ್ನು ನಿರ್ಧರಿಸುವುದು ಚುನಾವಣಾ ಆಯೋಗದ ಕೆಲಸವಲ್ಲ. ಅದು ಕೇಂದ್ರ ಸರ್ಕಾರದ ವಿಶೇಷ ಹಕ್ಕು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತ್ತು. ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಪರಿಗಣಿಸುವಂತೆಯೂ ಚುನಾವಣಾ ಆಯೋಗಕ್ಕೆ ಸಲಹೆ ನೀಡಿತ್ತು.
Courtesy : livelaw.in
ಪಶ್ಚಿಮ ಬಂಗಾಳದ ಹೊಸ ಒಬಿಸಿ ಪಟ್ಟಿ ಕುರಿತ ಕಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ


