2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ ಬೇರೆ ವಿಧಾನಗಳ ಮೂಲಕ ತರಂಗಾಂತರ ಹಂಚಿಕೆ ಮಾಡುವುದನ್ನು ತೀರ್ಪು ತಡೆಯುತ್ತದೆಯೇ? ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೋರಿತ್ತು.
ಸ್ಪಷ್ಟೀಕರಣ ಪಡೆಯುವ ನೆಪದಲ್ಲಿ 2012ರ ತೀರ್ಪಿನ ‘ಮರುಪರಿಶೀಲನೆಗೆ’ ಕೋರಲಾಗಿದೆ ಎಂದು ತಿಳಿಸಿದ ರಿಜಿಸ್ಟ್ರಾರ್, ಅರ್ಜಿ ‘ತಪ್ಪು ಕಲ್ಪನೆ’ಯಿಂದ ಕೂಡಿದೆ ಎಂದು ಹೇಳುವ ಮೂಲಕ ತಿರಸ್ಕರಿಸಿದ್ದಾರೆ. “ಅರ್ಜಿ ಸಲ್ಲಿಸಿದ್ದಕ್ಕೆ ಯಾವುದೇ ಸಮಂಜಸವಾದ ಕಾರಣಗಳಿಲ್ಲ. ಮನರಂಜನೆಗಾಗಿ ಸಲ್ಲಿಸಿದಂತಿದೆ” ಎಂದು ರಿಜಿಸ್ಟ್ರಾರ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿಯಮಗಳು, 2013 ರ ಆದೇಶ XVನಿಯಮ 5ರ ನಿಬಂಧನೆಗಳ ಪ್ರಕಾರ ಅರ್ಜಿ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಈ ನಿಬಂಧನೆಯ ಪ್ರಕಾರ, ರಿಜಿಸ್ಟ್ರಾರ್ ಯಾವುದೇ ಸಮಂಜಸವಾದ ಕಾರಣ ಬಹಿರಂಗಪಡಿಸದ ಅಥವಾ ಕ್ಷುಲ್ಲಕ ವಿಷಯವನ್ನು ಒಳಗೊಂಡಿರುವ ಆಧಾರದ ಮೇಲೆ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಬಹುದು. ಆದರೆ, ಅರ್ಜಿದಾರರು ರಿಜಿಸ್ಟ್ರಾರ್ ಅರ್ಜಿ ತಿರಸ್ಕರಿಸಿದ ಹದಿನೈದು ದಿನಗಳೊಳಗೆ ಮೇಲ್ಮನವಿ ಸಲ್ಲಿಸಬಹುದು. ಆದ್ದರಿಂದ, ರಿಜಿಸ್ಟ್ರಾರ್ ಅರ್ಜಿ ತಿರಸ್ಕಸಿರುವುದರ ವಿರುದ್ಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಕೇಂದ್ರಕ್ಕೆ ಅವಕಾಶವಿದೆ.
ಅರ್ಜಿ ಸಲ್ಲಿಸುವಲ್ಲಿ ಸುಮಾರು 12 ವರ್ಷಗಳ ಸಮಯದ ಅಂತರವನ್ನು ಕೂಡ ರಿಜಿಸ್ಟ್ರಾರ್ ಉಲ್ಲೇಖಿಸಿದ್ದಾರೆ. ಮೇ 10, 2012 ರಂದು ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಸ್ವತಃ ಕೇಂದ್ರ ಸರ್ಕಾರ ಹಿಂಪಡೆದಿರುವುದನ್ನು ಗಮನಕ್ಕೆ ತಂದಿದ್ದಾರೆ.
ಈ ಹಿಂದೆ ಸಲ್ಲಿಸಿದಂತೆಯೇ, ಸುದೀರ್ಘ ಸಮಯದ ಬಳಿಕ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ ಮುಕ್ತ ನ್ಯಾಯಾಲಯದಲ್ಲಿ ಪ್ರಕರಣದ ಮರು ವಿಚಾರಣೆಗೆ ಅರ್ಜಿದಾರರು ಪ್ರಯತ್ನಿಸಿದ್ದಾರೆ ಎಂದು ರಿಜಿಸ್ಟ್ರಾರ್ ಹೇಳಿದ್ದಾರೆ.
ಫೆಬ್ರವರಿ 2012ರಲ್ಲಿ ನೀಡಿದ 2ಜಿ ತರಂಗಾತರ ಹಂಚಿಕೆ ಪ್ರಕರಣದ ತೀರ್ಪಿನಲ್ಲಿ (ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ) ಸುಪ್ರೀಂ ಕೋರ್ಟ್ 2ಜಿ ತರಂಗಾಂತರ ಹಂಚಿಕೆ ವೇಳೆ ಮೊದಲು ಬಂದವರಿಗೆ ಮೊದಲ ಆದ್ಯತೆ (ಎಫ್‌ಸಿಎಫ್‌ಎಸ್) ಎಂಬ ನಿಯಮವನ್ನು ಬದಿಗಿರಿಸಿತ್ತು. ತರಂಗಾಂತರದಂತಹ ಸಾರ್ವಜನಿಕ ಸಂಪನ್ಮೂಲಗಳ ಹಂಚಿಕೆಗೆ ಸಾರ್ವಜನಿಕ ಹರಾಜು ಆದ್ಯತೆಯ ವಿಧಾನವಾಗಿರಬೇಕು ಎಂದು ಹೇಳಿತ್ತು.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯಲ್ಲಿ, ಭದ್ರತೆ, ಸುರಕ್ಷತೆ, ವಿಪತ್ತು ಸೇರಿದಂತೆ ಸಾರ್ವಭೌಮ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ವಾಣಿಜ್ಯೇತರ ಉದ್ದೇಶಗಳಿಗಾಗಿ ಹರಾಜಿನಿಂದ ವಿನಾಯಿತಿ ಕೋರಿತ್ತು.
ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ


