ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 21) ವಜಾಗೊಳಿಸಿದೆ.
ಹಾವೇರಿ ಜಿಲ್ಲೆಯ ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ‘ಸುಳ್ಳು ಸುದ್ದಿ’ ಹರಡಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ಚಂದ್ರನ್ ಅವರ ಪೀಠ ಸೋಮವಾರ ಕೈಗೆತ್ತಿಕೊಂಡಿತು.
ನಂತರ ಪೀಠವು ಅರ್ಜಿಯ ವಿಚಾರಣೆಗೆ ನಿರಾಕರಿಸಿ, ವಜಾಗೊಳಿಸಿತು. ಈ ವೇಳೆ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿಜೆಐ, “ಏನಿದು? ಇಂತಹ ವಿಷಯವನ್ನು ರಾಜಕೀಯಗೊಳಿಸಬೇಡಿ. ನಿಮ್ಮ ಹೋರಾಟವನ್ನು ಮತದಾರರ ಮುಂದೆ ಮಾಡಿ” ಎಂದರು.
ನವೆಂಬರ್ 7,2024 ರಂದು ತೇಜಸ್ವಿ ಸೂರ್ಯ ಅವರು ಕನ್ನಡ ಸುದ್ದಿ ಪೋರ್ಟಲ್ ಒಂದರ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಹಾವೇರಿ ಜಿಲ್ಲೆಯ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಎಂಬ ರೈತ ತನ್ನ ಭೂಮಿಯನ್ನು ವಕ್ಫ್ ಮಂಡಳಿ ವಶಪಡಿಸಿಕೊಂಡಿದೆ ಎಂಬುವುದನ್ನು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಆದರೆ, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಅವರು ಜನವರಿ 6, 2022ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೂ ವಕ್ಫ್ ಮಂಡಳಿ ಭೂ ವಿವಾದಕ್ಕೂ ಸಂಬಂಧವಿಲ್ಲ. ಬೆಳೆ ನಷ್ಟ ಮತ್ತು ಬಾಕಿ ಸಾಲಗಳ ಆರ್ಥಿಕ ಒತ್ತಡದಿಂದಾಗಿ ರೈತ ಸಾವಿಗೆ ಶರಣಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
ಮಾಧ್ಯಮ ವರದಿ ಆಧಾರಹಿತ ಎಂದು ಗೊತ್ತಾದ ನಂತರ ತೇಜಸ್ವಿ ಸೂರ್ಯ ತನ್ನ ಪೋಸ್ಟ್ ಡಿಲಿಟ್ ಮಾಡಿದ್ದರು.
ಆದರೆ ಪೊಲೀಸರು, ವಿವಿಧ ಗುಂಪುಗಳ ನಡುವೆ ದ್ವೇಷ, ಹರಡುವ ಉದ್ದೇಶದ ಆರೋಪ ಹೊರಿಸಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(2) ರ ಅಡಿಯಲ್ಲಿ ನವೆಂಬರ್ 7 ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ತೇಜಸ್ವಿ ಸೂರ್ಯ ಹಂಚಿಕೊಂಡಿದ್ದ ಸುದ್ದಿಯ ಕುರಿತು ನಾವು ಮಾಡಿದ್ದ ಫ್ಯಾಕ್ಟ್‌ಚೆಕ್ ವರದಿ ಕೆಳಗೆ ನೋಡಬಹುದು
ರೈತನ ಆತ್ಮಹತ್ಯೆಗೆ ವಕ್ಫ್ ಕಥೆ ಕಟ್ಟಿದ ಮಾಧ್ಯಮಗಳು : ಸುಳ್ಳು ಸುದ್ದಿ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ


