ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಭಯೋತ್ಪಾದಕರ ಸಹೋದರಿ’ ಎಂದು ಹೇಳಿದ್ದ ಮಧ್ಯ ಪ್ರದೇಶದ ಬಿಜೆಪಿ ನಾಯಕ ಕುನ್ವರ್ ವಿಜಯ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಕೋರಿ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಆದರೆ, ನ್ಯಾಯಾಲಯವು ತನ್ನ ಆದೇಶದ ಮೇರೆಗೆ ರಚಿಸಲಾದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಜಯಾ ಠಾಕೂರ್ ಅವರು ತನ್ನ ಅರ್ಜಿಯಲ್ಲಿ ಎತ್ತಿ ತೋರಿಸಿರುವ ಅಂಶಗಳನ್ನು ಪರಿಶೀಲಿಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಜಯಾ ಠಾಕೂರ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು “ನಮ್ಮ ಮುಂದೆ ಈ ರೀತಿಯ ಅರ್ಜಿಯನ್ನು ಸಲ್ಲಿಸಬೇಡಿ” ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರಿಗೆ ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ, ಸಂಬಂಧಿತ ವಿಷಯಗಳು ಈಗಾಗಲೇ ನ್ಯಾಯಾಲಯದ ಮುಂದೆ ಬಾಕಿ ಇರುವುದರಿಂದ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ವಿವರಿಸಿದರು. ಅಲ್ಲದೆ, ಅವರು ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿ, ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಅವಕಾಶ ಕೋರಿದರು.
ಅದರಂತೆ, ಪೀಠವು ಪ್ರಕರಣವನ್ನು ಇತ್ಯರ್ಥಪಡಿಸಿತು. “ಪರಿಹಾರ ಏನು ಮತ್ತು ನೀವು ಎಲ್ಲಿಗೆ ಹೋಗಬೇಕು ಎಂಬುವುದು ನಿಮಗೆ ಚೆನ್ನಾಗಿ ತಿಳಿದಿದೆ” ಎಂದು ನ್ಯಾಯಮೂರ್ತಿ ಕಾಂತ್ ಹಿರಿಯ ವಕೀಲರಿಗೆ ಹೇಳಿದರು.
ಮುಂದುವರಿದು, ಅರ್ಜಿಯಲ್ಲಿ ಉಲ್ಲೇಖಿಸಲಾದ ಶಾ ಒಳಗೊಂಡ ಕೆಲವು ಹಿಂದಿನ ಪ್ರಕರಣಗಳನ್ನು ಪರಿಶೀಲಿಸುವಂತೆ ಪೀಠವು ಎಸ್‌ಐಟಿಗೆ ಸೂಚಿಸಿತು. “ಈ ಅರ್ಜಿಯನ್ನು ನಾವು ಪರಿಗಣಿಸುತ್ತಿಲ್ಲ, ಆದರೆ ಅರ್ಜಿಯಲ್ಲಿ ಬಹಿರಂಗಪಡಿಸಿರುವ ಈ ಸಂಭಾವಿತ ವ್ಯಕ್ತಿಯ ಕೆಲವು ಹಿಂದಿನ ಪ್ರಕರಣಗಳ ಬಗ್ಗೆ ಕೂಡ ಎಸ್‌ಐಟಿ ಪರಿಶೀಲಿಸಬೇಕು. ಎಸ್‌ಐಟಿ ವರದಿಯು ಸಮಗ್ರವಾಗಿರಬೇಕು. ಇಲ್ಲದಿದ್ದರೆ ನಾವು ವಿಲೇವಾರಿ ಮಾಡುತ್ತೇವೆ” ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.
ಮಧ್ಯಪ್ರದೇಶ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದದನ್ನು ಪ್ರಶ್ನಿಸಿ ಸಚಿವ ಶಾ ಸಲ್ಲಿಸಿರುವ ಎರಡು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ ಸಂವಿಧಾನದ 164(3) ನೇ ವಿಧಿಯ ಅಡಿಯಲ್ಲಿ ಸ್ವೀಕರಿಸಿದ ಪ್ರಮಾಣವಚನವನ್ನು ಉಲ್ಲಂಘಿಸಿದ ಕಾರಣ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವಂತೆ ಕೋರಿ ಜಯಾ ಠಾಕೂರ್ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಪ್ರಸ್ತುತ ಅರ್ಜಿಯನ್ನು ಸಲ್ಲಿಸಿದ್ದಾರೆ.
ಶಾ ಅವರ ಹೇಳಿಕೆಯು ಮುಸ್ಲಿಂ ಸಮುದಾಯದವರಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಹುಟ್ಟು ಹಾಕುತ್ತದೆ ಮತ್ತು ಭಾರತದ ಏಕತೆಗೆ ಧಕ್ಕೆ ತರುತ್ತದೆ ಎಂದು ಜಯಾ ಠಾಕೂರ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
Courtesy : livelaw.in
ಬಿಹಾರ ಕರಡು ಮತದಾರರ ಪಟ್ಟಿ ಪ್ರಕಟಣೆ ತಡೆಯಲು ಸುಪ್ರೀಂ ನಕಾರ: ಆಧಾರ್, ವೋಟರ್ ಐಡಿ ಪರಿಗಣಿಸುವಂತೆ ಒತ್ತಾಯ


