ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆರೋಪಿಯ ವಿರುದ್ಧ ‘ಕಠಿಣ ಸೆಕ್ಷನ್’ ಅನ್ನು ರದ್ದುಗೊಳಿಸುವ ಕುರಿತ ತನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ಗೌರಿ ಲಂಕೇಶ್ ಅವರ ಹತ್ಯೆ ಆರೋಪಿ ಮೋಹನ್ ನಾಯಕ್ ವಿರುದ್ದ ದಾಖಲಾಗಿದ್ದ ‘ಕರ್ನಾಟಕ ಸಂಘಟಿತ ಅಪರಾಧಗಳ ಕಾಯ್ದೆ’ (KCOCA) ಪ್ರಕರಣವನ್ನು ಕರ್ನಾಟಕ ಹೈಕೊರ್ಟ್ ಈ ಹಿಂದೆ ರದ್ದು ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಪ್ರಶ್ನಿಸಿದ್ದರು.
ಕವಿತಾ ಲಂಕೇಶ್ ಪರವಾಗಿ ಹಿರಿಯ ವಕೀಲ ಹುಜೀಫಾ ಅಹ್ಮದಿ ಅವರು ವಾದಿಸಿದ್ದರು. ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿದ್ದ ನ್ಯಾಯಪೀಠವು ಉಭಯ ಕಕ್ಷಿದಾರರ ಪರ ವಾದವನ್ನು ಆಲಿಸಿದ ನಂತರ ಆದೇಶವನ್ನು ಕಾಯ್ದಿರಿಸಿದೆ.
ಇದನ್ನೂ ಓದಿ: ಸೆಪ್ಟೆಂಬರ್ 5 ‘ಗೌರಿ ಲಂಕೇಶ್ ದಿನ’ ಎಂದು ಘೋಷಿಸಿದ ಕೆನಡಾದ ಬರ್ನಾಬಿ ನಗರ!
ಗೌರಿ ಲಂಕೇಶ್ ಅವರ ಹತ್ಯೆಯ ಆರೋಪಿ ಮೋಹನ್ ನಾಯಕ್ ವಿರುದ್ಧದ KCOCA ಅಡಿಯಲ್ಲಿನ ಆರೋಪವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿತ್ತು.
ಮಂಗಳವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು, ಪ್ರಕರಣದ ಚಾರ್ಜ್‌ಶೀಟ್ ಅನ್ನು ಹೈಕೋರ್ಟ್ ವಿಶ್ಲೇಷಿಸದೆ, ಪ್ರಕರಣವನ್ನು ರದ್ದುಗೊಳಿಸಿದೆ. ಹೈಕೋರ್ಟ್ ಈ ವಿಷಯವನ್ನು ಲಘುವಾಗಿ ಪರಿಗಣಿಸಿದೆ ಎಂದು ಹೇಳಿದೆ.
ಸುಪ್ರೀಂಕೋರ್ಟ್ ಜೂನ್‌ನಲ್ಲಿ, ಕವಿತಾ ಅವರ ಮನವಿಯನ್ನು ತೀರ್ಮಾನಿಸುವವರೆಗೂ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಹೇಳಿ, ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.
ಏಪ್ರಿಲ್ 2021 ರಲ್ಲಿ, ಹೈಕೋರ್ಟ್ ಬೆಂಗಳೂರು ಪೊಲೀಸ್ ಆಯುಕ್ತರ ವರದಿಯನ್ನು ಮತ್ತು ಪ್ರಕರಣದ ಪೂರಕ ಚಾರ್ಜ್ ಶೀಟ್ ಅನ್ನು ರದ್ದುಗೊಳಿಸಿತ್ತು. ಜೊತೆಗೆ ಮೋಹನ್ ನಾಯಕ್ ವಿರುದ್ಧದ KCOCA ಆರೋಪಗಳನ್ನು ಕೈಬಿಟ್ಟಿತ್ತು.
2017 ರ ಸೆಪ್ಟೆಂಬರ್ 05 ರಂದು ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂದೆ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆಯನ್ನು ವಿರೋಧಿಸಿ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿರುದ್ಧ KOCCA ಕಾಯ್ದೆ ಕೈಬಿಡದಂತೆ ಸುಪ್ರೀಂ ತಡೆಯಾಜ್ಞೆ


