ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿರುದ್ಧ ಹಾಕಲಾಗಿದ್ದ KOCCA ಕಾಯ್ದೆಯನ್ನು ಕಳೆದ ಏಪ್ರಿಲ್ 23 ರಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್‌ನ ಏಪ್ರಿಲ್ 23 ರ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಗೌರಿ ಲಂಕೇಶ್ ಹಂತಕರ ವಿರುದ್ಧ ಸಲ್ಲಿಸಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 (KOCCA Act, 2000) ಅಡಿಯಲ್ಲಿನ ಆರೋಪಗಳನ್ನು ವಜಾಗೊಳಿಸಿದ್ದ ಹೈಕೋರ್ಟ್ ಹತ್ಯೆಯನ್ನು ಸಾಮಾನ್ಯ ಕೊಲೆಯಂತೆ ವಿಚಾರಣೆ ನಡೆಸಲು ಮುಂದಾಗಿತ್ತು. ಗೌರಿ ಲಂಕೇಶ್ ಕೊಲೆ ಆರೋಪಿಯಾಗಿರುವ ಮೋಹನ್ ನಾಯಕ್ ಮೇಲೆ ಹಾಕಲಾಗಿದ್ದ KOCCA ಕಾಯಿದೆಯನ್ನು ಕಳೆದ ಏಪ್ರಿಲ್ 23 ರಂದು ರದ್ದು ಮಾಡಿತ್ತು. ಇದರಿಂದಾಗಿ ಆತನಿಗೂ ಹಾಗೂ ಸಹ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ಸಂಭವ ಉಂಟಾಗಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೆಲ್ಮನವಿ ಸಲ್ಲಿಸಬೇಕೆಂದು ಗೌರಿ ಲಂಕೆಶ್ ಅವರ ಸಹೋದರಿ, ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅವರು ಕರ್ನಾಟಕ ಗೃಹ ಸಚಿವ ಎಸ್.ಆರ್.ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದರು. ಸಚಿವರು ಕವಿತಾ ಲಂಕೆಶ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಕಾನೂನು ಪ್ರಕ್ರಿಯೆ ವಿಳಂಬವಾಗುತ್ತಲೇ ಸಾಗಿತ್ತು.
ಗೌರಿ ಲಂಕೇಶ್ ಅವರ ಹತ್ಯೆ ಸಾಮಾನ್ಯ ಕೊಲೆ ಅಲ್ಲ. ಒಂದು ಸಂಘಟಿತ ಮತ್ತು ಸೈದ್ಧಾಂತಿಕ ದ್ವೇಷದ ಕಾರಣಕ್ಕೆ ನಡೆಸಲಾದ ಹತ್ಯೆ. ಕೋಕಾ ಕಾಯ್ದೆಯನ್ನು ಕೈಬಿಡುವುದರಿಂದ ಹತ್ಯೆಯ ಹಿಂದಿರುವ ಕಾಣದ ಕೈಗಳಿಗೆ ಶಿಕ್ಷೆಯಾಗುವುದಿಲ್ಲ ಎಂದು ಕವಿತಾ ಲಂಕೇಶ್ ಅವರ ಪರವಾಗಿ ನ್ಯಾಯವಾದಿ ತೀಸ್ತಾ ಸೆತಲ್ವಾದ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.
ಇದನ್ನೂ ಓದಿ : ಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ