Homeಮುಖಪುಟಚಿತ್ರರಂಗದ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳುವ ಕೇಂದ್ರದ ಹೊಸ ಕಾನೂನು: ಕಮಲ್ ಹಾಸನ್ ಸೇರಿ ಚಿತ್ರತಾರೆಯರ ವಿರೋಧ

ಚಿತ್ರರಂಗದ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳುವ ಕೇಂದ್ರದ ಹೊಸ ಕಾನೂನು: ಕಮಲ್ ಹಾಸನ್ ಸೇರಿ ಚಿತ್ರತಾರೆಯರ ವಿರೋಧ

- Advertisement -
- Advertisement -

ಅಧಿಕಾರಕ್ಕೆ ಬಂದ ದಿನದಿಂದಲೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವಿರುದ್ಧ ಮಾತನಾಡುವ ಎಲ್ಲರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂಬ ಆರೋಪವಿದೆ. ಸರ್ಕಾರದ ಹಲವಾರು ನೀತಿಗಳಿಗೆ ಅಷ್ಟೇ ಪ್ರಮಾಣದಲ್ಲಿ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಇವೆ. ಹೋರಾಟಗಾರರು, ವಿಜ್ಞಾನಿಗಳು, ವಿಧ್ವಾಂಸರು, ಸಾಹಿತಿಗಳು, ಕಲಾವಿದರು, ನ್ಯಾಯವಾದಿಗಳು ಹೀಗೆ ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ UAPA, NSA ಮುಂತಾದ ಕಾನೂನುಗಳನ್ನು ಪ್ರಯೋಗಿಸುತ್ತಿದೆ. ಕೇಂದ್ರ ಸರ್ಕಾರದ ಕೆಂಗಣ್ಣು ಈಗ ಚಿತ್ರರಂಗದ ಮೇಲೆ ಬಿದ್ದಿದೆ. ಸರ್ಕಾರದ ನೀತಿ ನಿಯಮಗಳನ್ನು ಟೀಕಿಸುವ ಚಿತ್ರಗಳು ಹೆಚ್ಚುತ್ತಿರುವುದರಿಂದ ಹೆದರಿರುವ ಸರ್ಕಾರ, ಚಿತ್ರ ಬಿಡುಗಡೆಯ ಮೇಲೆಯೇ ತನ್ನ ನಿಯಂತ್ರಣ ಸಾಧಿಸಲು ಮುಂದಾಗಿದೆ. ಈ ಪ್ರಯತ್ನದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಡೆಗಣಿಸಿ ಹೊಸ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಿನೆಮಾಟೊಗ್ರಾಫರ್ಸ್‌ ಅಮೆಂಡ್‌ಮೆಂಟ್ ಬಿಲ್ 2021ಕ್ಕೆ ದೇಶಾದ್ಯಂತ ಚಿತ್ರತಾರೆಯರಿಂದ ವಿರೋಧ ವ್ಯಕ್ತವಾಗಿದೆ. ಭಾರತ ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಎರಡು ತಿಂಗಳ ಹಿಂದೆ ಕೇಂದ್ರ ಸರ್ಕಾರ ಫಿಲ್ಮ್‌ ಸರ್ಟಿಫಿಕೇಟ್ ಅಪಿಲೇಟ್ ಟ್ರಿಬುನಲ್ ಅನ್ನು ವಜಾಗೊಳಿಸಿ ಆದೇಶ ನೀಡಿತ್ತು. ಸೆನ್ಸಾರ್ ಬೋರ್ಡ್‌ ತೀರ್ಮಾನಗಳು ಮತ್ತು ದೃಶ್ಯಗಳನ್ನು ಸಿನೆಮಾದಿಂದ ಕತ್ತರಿಸಿದ ಸಂದರ್ಭದಲ್ಲಿ ಚಿತ್ರ ನಿರ್ಮಾಪಕರಿಗೆ ಮೇಲ್ಮನವಿಯನ್ನು ಸಲ್ಲಿಸಲು ಇದ್ದ ನ್ಯಾಯಮಂಡಳಿ ಇದಾಗಿತ್ತು. ಕೇಂದ್ರ ಸರ್ಕಾರ ನ್ಯಾಯಮಂಡಳಿಯನ್ನೇ ವಜಾ ಮಾಡಿ ಸೆನ್ಸಾರ್ ಬೋರ್ಡ್‌ ತೀರ್ಮಾನಗಳ ವಿರುದ್ಧ ಪ್ರಶ್ನಿಸಲು ಅವಕಾಶಗಳೇ ಇಲ್ಲದಂತೆ ಮಾಡಿತ್ತು. ಆ ಮೂಲಕ ಚಿತ್ರ ನಿರ್ಮಾಪಕರು ಪದೇ ಪದೇ ಹೈ ಕೋರ್ಟ್ ಮೆಟ್ಟಿಲೇರುವ ಸಂದರ್ಭವನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ.

“ಕೇಂದ್ರ ಸರ್ಕಾರ ಸಿನೆಮಾ, ಮಾಧ್ಯಮ, ಮತ್ತು ಸಾಹಿತ್ಯ ವಲಯದಿಂದ ಪ್ರತಿರೋಧವನ್ನು ಎದುರಿಸುತ್ತಿದೆ. ಸರ್ಕಾರಕ್ಕೆ ಪ್ರತಿರೋಧವನ್ನು ಎದುರಿಸಲು ಸಾಧ್ಯವಾಗದೇ ಇಂತಹ ಕ್ರಮ ಕೈಗೊಂಡಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯತ್ನ ಇದಾಗಿದ್ದು, ಇದನ್ನು ಗಮನಿಸುವ, ಕೇಳಿಸಿಕೊಳ್ಳುವ ಮತ್ತು ಧ್ವನಿ ಎತ್ತುವ ಮೂಲಕ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯ” ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಚಲನಚಿತ್ರಗಳು ಮತ್ತು ಸೆನ್ಸಾರ್ ಬೋರ್ಡ್‌ನಿಂದ ಪ್ರಮಾಣಪತ್ರವನ್ನು ಪಡೆದಿರುವ ಚಿತ್ರಗಳನ್ನು ಮತ್ತೆ ಸೆನ್ಸಾರ್‌ಗೆ ಒಳಪಡಿಸುವ ಅವಕಾಶವನ್ನು ಹೊಸ ಕಾನೂನಿನಲ್ಲಿ ನೀಡಿರುವುದು ಚಿತ್ರರಂಗದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ  ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚಿತ್ರರಂಗದ ಎಲ್ಲರೂ ಕೇಂದ್ರ ಸರ್ಕಾರದ ಉದ್ಧೇಶಿತ ಪ್ರಯತ್ನದ ವಿರುದ್ಧ ಧ್ವನಿ ಎತ್ತಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಕೇಂದ್ರದ ಕೈಗೆ ಚಿತ್ರರಂಗದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಅಂಕುಶ ನೀಡುವ ತಿದ್ದುಪಡಿ ಮಸೂದೆ 

ಹೊಸ ತಿದ್ದುಪಡಿ ಮಸೂದೆಯು ಸೆನ್ಸಾರ್ ಬೋರ್ಡ್‌ ಪ್ರಮಾಣಪತ್ರದ ನಂತರವೂ ಚಿತ್ರ ಬಿಡುಗಡೆಯನ್ನು ತಡೆಯುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಸಿನೆಮಾಟೊಗ್ರಾಫ್ ತಿದ್ದುಪಡಿ ಮಸೂದೆ  2021 ರ ಸೆಕ್ಷನ್ 5B(1)  ಪ್ರಖಾರ ರಾಷ್ಟ್ರೀಯ ಭದ್ರತೆ, ಸಮಾಜದ ಶಾಂತಿ, ಮತ್ತು ಮಿತ್ರ ದೇಶಗಳ ನಡುವಿನ ಸಂಬಂಧಗಳ ಕಾರಣಕ್ಕಾಗಿ ಚಿತ್ರ ಬಿಡುಗಡೆಯನ್ನು ತಡೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

ಈಗಾಗಲೇ ಸೆನ್ಸಾರ್ ಬೋರ್ಡ್‌ನಿಂದ ಪ್ರಮಾಣಪತ್ರವನ್ನು ಪಡೆದಿರುವ ಚಲನಚಿತ್ರಗಳನ್ನು ಮತ್ತೊಮ್ಮೆ ಸೆನ್ಸಾರ್ ಮಾಡುವ ಅವಕಾಶ ಕೇಂದ್ರ ಸಾರ್ಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ 2000 ದಲ್ಲಿ ಆದೇಶಿಸಿತ್ತು. ಅದರಲ್ಲಿ ಸುಪ್ರೀಂ ಕೋರ್ಟ್ CBFC ತೀರ್ಮಾನವೇ ಅಂತಿಮ. ಸೆನ್ಸಾರ್ ಬೋರ್ಡ್‌ ತೀರ್ಮಾನವನ್ನು ನಿರಾಕರಿಸುವ ಅಥವಾ ಪುನರ್ ವಿಮರ್ಶಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವೆಂದು ಆದೇಶ ನೀಡಿತ್ತು. ಆದರೆ ಹೊಸ ತಿದ್ದುಪಡಿ ಮಸೂದೆಯು ಸೆನ್ಸಾರ್ ಬೋರ್ಡ್ ತೀರ್ಮಾನವನ್ನು ಅಸಿಂಧುಗೊಳಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಒಂದು ವೇಳೆ ಹೊಸ ಮಸೂದೆ ಜಾರಿಗೆ ಬಂದರೆ ಕೇಂದ್ರ ಯಾವುದೇ ಕಾರಣವನ್ನೂ ನೀಡದೆ ಚಿತ್ರ ಬಿಡುಗಡೆಯನ್ನು ತಡೆಯಬಹುದಾಗಿದೆ.

ಪ್ರಸ್ತಾವಿತ ಸಿನೆಮಾಟೋಗ್ರಾಫರ್ಸ್‌ ಅಮೆಂಡ್‌ಮೆಂಟ್‌ ಬಿಲ್‌ 2021 ತಿದ್ದುಪಡಿ ಕಾನೂನಿಗೆ ದೇಶದ ಅನೇಕ ಹಿರಿಯ ಚಿತ್ರ ನಿರ್ದೇಶಕರು ಮತ್ತು ಸಿನೆಮಾ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ. ಫರ್ಹಾನ್‌ ಅಖ್ತರ್, ಶಬಾನಾ ಆಜ್ಮಿ, ಹಂಸಲ್ ಮೆಹ್ತಾ, ಅನುರಾಗ್ ಕಶ್ಯಪ್, ಜೋಯಾ ಅಖ್ತರ್ ಸೇರಿದಂತೆ ಚಿತ್ರ ಕಲಾವಿದರು, ಬಹರಗಾರರು ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಹೊಸ ಕಾನೂನು ತಿದ್ದುಪಡಿ ಕೇಂದ್ರ ಸರ್ಕಾರಕ್ಕೆ ಚಿತ್ರರಂಗದ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಚಿತ್ರರಂಗಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ ಎಂದು ಕೆಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್‌, ಫೇಸ್‌ಬುಕ್‌ನಲ್ಲಿ ದೊಡ್ಡ ಅಭಿಯಾನ ಆರಂಭವಾಗಿದ್ದು ಸಾವಿರಾರು ಜನರು ಸರ್ಕಾರದ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಜೂನ್ 18 ರಂದು ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಇಲಾಖೆಯ ವೆಬಸೈಟ್‌ಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರ ಆಕ್ಷೇಪ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಆಕ್ಷೇಪಗಳನ್ನು ವ್ಯಕ್ತಪಡಿಸಲು ಜುಲೈ 2 ಅಂತಿಮ ದಿನವಾಗಿದ್ದು ಸರ್ಕಾರದ ಉದ್ಧೇಶಿತ ಕಾನೂನಿಗೆ ಸಿನಿಮಾ ಸಮುದಾಯ ಭಾರೀ ವಿರೋಧ ವ್ಯಕ್ತಪಡಿಸಿದೆ.

ಸರ್ಕಾರದ ವಿರುದ್ಧದ ಅಭಿಪ್ರಾಯಗಳನ್ನು ಹತ್ತಿಕ್ಕುವ ಬಿಜೆಪಿಯ ಅಜೆಂಡಾದ ಭಾಗವಾಗಿ ಈ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಚಿತ್ರ ನಿರ್ದೇಶಕ ವೆಟ್ರಿಮಾರನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಚಿತ್ರರಂಗಕ್ಕೆ ಯಾಕೆ ಹೆದರುತ್ತಿದೆ? ದೇಶದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವ ಹಕ್ಕು ಇದೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕಾನೂನನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ನಮ್ಮ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯಲ್ಲ. ಪ್ರಜಾಪ್ರಭುತ್ವ ಎಂದು ತಮಿಳಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಅಡುರ್ ಗೋಪಾಲಕೃಷ್ಣ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ, ಚಲನಚಿತ್ರ ಕಲೆಗೂ ಮಾರಕವಾದ ಕ್ರಮ ಇದು. ದೇಶದ ಸಂವಿಧಾನವು ನಮಗೆ ಕೊಟ್ಟಿರುವ ಸ್ವಾತಂತ್ರ್ಯದ ಹರಣ. ಸರಕಾರದ ಈ ಪ್ರಯತ್ನವನ್ನು ನಾವೆಲ್ಲರೂ ವಿರೋಧಿಸಬೇಕಿದೆ ಎಂದು ಕನ್ನಡದ ಹಿರಿಯ ರಂಗಭೂಮಿ ನಿರ್ದೇಶಕರಾದ ರಘುನಂದನರವರು ಕರೆ ನೀಡಿದ್ದಾರೆ.

  • ರಾಜೇಶ್ ಹೆಬ್ಬಾರ್

ಇದನ್ನೂ ಓದಿ : ಕೋವಿಶೀಲ್ಡ್‌ಗೆ ಯುರೋಪ್‍ ದೇಶಗಳಲ್ಲಿ ಮಾನ್ಯತೆ ಕೊಡಿಸಲು ಭಾರತ ಸರ್ಕಾರಕ್ಕೆ ಪೂನಾವಾಲಾ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...