ಉತ್ತರಕನ್ನಡದ ಕಡಲಂಚಿನ ಪಟ್ಟಣ ಹೊನ್ನಾವರಕ್ಕೆ ಹೊಂದಿಕೊಂಡೇ ಇರುವ ಕಾಸರಕೋಡು ಟೊಂಕದ ಬಡ ಬೆಸ್ತರನ್ನು ಕಳೆದೊಂದು ವರ್ಷದಿಂದ ಕಾಡುತ್ತಿರುವ ಬೃಹತ್ ಖಾಸಗಿ ಬಂದರು ಯೋಜನೆಯ ಹಿಂಸೆ ಈಗ ಪರಾಕಷ್ಠೆ ತಲುಪಿಬಿಟ್ಟಿದೆ! ಕಳೆದ ವಾರದ ಕರೊನಾ ವೀಕ್ಎಂಡ್ ಕರ್ಫ್ಯೂನಲ್ಲಿಯೇ 500ಕ್ಕೂ ಹೆಚ್ಚು ಪೊಲೀಸ್ ಬಲದಲ್ಲಿ ಅಸಾಯಕ ಮೀನುಗಾರರ ಒಕ್ಕಲೆಬ್ಬಸುವ ಬಲಾತ್ಕಾರವೂ ನಡೆದು ಹೋಗಿದೆ. ಪ್ರಭುತ್ವ ಮತ್ತು ಬಂಡವಾಳಶಾಹಿ ಜಂಟೀ ಕಾರ್ಯಾಚರಣೆಗೆ ತತ್ತರಿಸಿ ಹೋದ ಮೀನುಗಾರರ ತರುಣರು ಮಹಿಳೆಯರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.

ತಮ್ಮ ತುತ್ತಿಗಾಧಾರವಾದ ಮೀನುಗಾರಿಕೆಗೆ ಸಂಚುಕಾರ ತರುವ ಈ ಖಾಸಗೀಕರಣ ಯೋಜನೆ ಬೇಡವೇ ಬೇಡವೆಂದು ಬಡ ಬೆಸ್ತರು ತಿಂಗಳಾನುಗಟ್ಟಲೆ ಉಪವಾಸ ಸತ್ಯಾಗ್ರಹ, ರ್ಯಾಲಿ, ಪ್ರತಿಭಟನೆ ನಡೆಸಿದ್ದರು. ಮೀನುಗಾರರ ಮನೆ, ಮೀನುಗಾರಿಕಾ ನೆಲೆ, ಬಲೆ-ಒಣ ಮೀನು ಇಡುವ ಶೆಡ್ ತೆರೆವಿಗೆ ಖಾಸಗಿ ಬಂದರು ಕಂಪನಿಯವರು ಜೆಸಿಬಿ, ಬುಲ್ಡೊಜರ್ ತಂದಾಗ ಅಡ್ಡ ಮಲಗಿ ಪ್ರತಿರೋಧಿಸಿದ್ದರು. ಆಳುವ ವರ್ಗದ ಬೆಂಬಲ ಪಡೆದಿದ್ದ ಈ ಕಂಪನಿ ಸಾಹುಕಾರರು ಬಲಾತ್ಕಾರ ನಡೆಸಿದಾಗ ಉಚ್ಛನ್ಯಾಯಲಯಕ್ಕೆ ತಕರಾರು ಸಲ್ಲಿಸಲಾಗಿತ್ತು. ಹೊನ್ನಾವರ ಪೋರ್ಟ್ ಪ್ರೈವೆಟ್ ಕಂಪನಿ ನಿರ್ಮಿಸುತ್ತಿರುವ ಖಾಸಗಿ ವಾಣಿಜ್ಯ ಬಂದರು ಯೋಜನೆ ಅನುಷ್ಠಾನ ವಿರುದ್ದದ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆಯಲ್ಲಿ ಹೈಕೋರ್ಟ್ ಅರಣ್ಯ ಸರ್ವೆ ನಂಬರ್ 233 ಮತ್ತು 237ರಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಎಚ್‌ಪಿಪಿಲಿಗೆ ಸೂಚನೆ ನೀಡಿತ್ತು.

ಆದರೆ ಎಚ್‌ಪಿಪಿಲಿ ಕಂಪನಿ ಹೈಕೋರ್ಟ್ ತಡೆಯಾಜ್ಞೆಗೂ ಕೇರ್ ಮಾಡದೆ ಕಳದೆ ಶನಿವಾರ ಜಿಲ್ಲಾಡಳಿತ, ತಾಲ್ಲೂಕಾಡಳಿತ ಸಹಕಾರದಿಂದ ಮೀನುಗಾರರ ಶೆಡ್, ಮನೆ, ಮರ ನೆಲಕ್ಕುರುಳಿಸಲು ಹವಣಿಸಿದೆ. ಮೀನುಗಾರ ಮಹಿಳೆಯರು ಪ್ರತಿಭಟಿಸುವ ಅಂದಾಜಿದ್ದ ಪ್ರಭುತ್ವ ಮತ್ತು ಕಂಪನಿ ಬೆಳಗಾವಿಯಿಂದ 500ರಷ್ಟು ಪೊಲೀಸ್‌ ಪಡೆಯನ್ನು ತರಿಸಿತ್ತು. ಒಂದೆರಡು ಮನೆ, ಶೆಡ್‌, ಮರ ಉರುಳಿಸುತ್ತಿದ್ದಂತೆ ಒಂದೇ ಸಮನೆ ಜಮೆಯಾದ ಮೀನುಗಾರರು ತೆರವಿಗೆ ಅವಕಾಶ ಕೊಡದೆ ಪ್ರತಿಭಟಿಸಿದರು. ತಮ್ಮ ತಲತಲಾಂತರದ ಕಸುಬಿಗೆ ಆಧಾರವಾದ ನೆಲೆ ಧ್ವಂಸ ಮಾಡದಂತೆ ಮಹಿಳೆಯರು ಕಣ್ಣೀರು ಸುರಿಸಿದರು. ಬೆಸ್ತರ ಯುವಕರು ಸಮುದ್ರಕ್ಕೆ ಹಾರಲು ಓಡಿದರು. ಅಧಿಕಾರಿಗಳು ದಾರಿ ಕಾಣದೆ ತೆರವಿನ ಕಾರ್ಯ ಸ್ಥಗಿತಗೊಳಿಸಬೇಕಾಗಿ ಬಂತು.

ಸದ್ಯಕ್ಕೆ ಒಕ್ಕಲೆಬ್ಬಿಸುವ ಕಾರ್ಯಚರಣೆ ನಿಂತಿದೆಯಾದರೂ ಬೆಸ್ತರ ತಲೆ ಮೇಲೆ ಕತ್ತಿ ತೂಗುತ್ತಲೇ ಇದೆ. ಮೀನುಗಾರರ ಮನೆ ಶೆಡ್ ತೆಗೆಯುವುದಿಲ್ಲ, ಅವರ ಮೀನುಗಾರಿಕಾ ಬಂದರಿಗೆ ತೊಂದರೆ ಕೊಡುವುದಿಲ್ಲ ಎಂದು ಆಡಳಿತಗಾರರು ಹೇಳುತ್ತಾರೆ. ಆದರೆ ಖಾಸಗಿ ಬಂದರು ನೀಲಿ ನಕ್ಷೆ ನೋಡಿದರೆ ಬಂದರು ಕಂಪನಿಯವರ ಧಾವಂತ ಗಮನಿಸಿದರೆ ಬಂದರು ಮತ್ತು ಅದಕ್ಕೆ ಬೇಕಾದ ಚತುಷ್ಪಥ ರಸ್ತೆಗೆ ಸಾವಿರಾರು ಎಕರೆ ಭೂಮಿ ಬೇಕೆಂಬುದು ಖಾತ್ರಿಯಾಗುತ್ತದೆ. ಆಗ ಈ ಭಾಗದಲ್ಲಿರುವ 600 ಮೀನುಗಾರ ಕುಟುಂಬದ ಕೇರಿಗೆ ಕೇರಿಯೇ ಆಹುತಿಯಾಗಲಿದೆ.

ಒಂದೇ ಸಾಲಿಸಲ್ಲಿರುವ ಬೆಸ್ತರ ಮನೆ ತೆರವು ಮಾಡದೇ ಚತುಷ್ಪಥ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ನಿಧಾನಕ್ಕೆ ಕಾಸರಕೋಡು ಟೊಂಕದ ಮೀನುಗಾರರ ಬದುಕಿಗಾಧಾರವಾದ ನೆಲೆಯೇ ಬಂದರು ಸ್ವಾಹ ಮಾಡುತ್ತದೆ ಎಂಬ ಆತಂಕ ಸಹಜವಾಗೇ ಮೂಡಿದೆ. ಆಗ ಪಾವಿನಕುರ್ವ, ಕರ್ಕಿಕೋಡಿ, ರಮಟೆಹಿತ್ತಲು, ಮುಲ್ಲಕುರ್ವಾ… ಮುಂತಾದ ಪ್ರದೇಶವೂ ಬೃಹತ್ ಬಂದರು ವ್ಯಾಪ್ತಿಗೆ ಸೇರುತ್ತದೆ. ಶರಾವತಿ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮ ಕಾಸರಕೋಡು ಟೊಂಕದಲ್ಲಿ 600 ಕೋಟಿ ರೂಪಾಯಿ ಬಜೆಟ್‌ನ ಬಂದರು ಕಟ್ಟಲು ಹೊನ್ನಾವರ ಪೋರ್ಟ್ ಪ್ರೈವೆಟ್ ಕಂಪನಿ ಲಿಮಿಟೆಡ್(ಎಚ್‌ಪಿಪಿಲಿ)ಗೆ 2010ರಲ್ಲಿ ಗುತ್ತಿಗೆ ನೀಡಲಾಗಿದೆ. ಆದರೆ ಸರ್ಕಾರ 93 ಎಕರೆ ಜಾಗ ಮಂಜೂರು ಮಾಡಿರುವುದು ನಾರ್ತ್ ಕೆನಾರಾ ಸೀ ಪೋರ್ಟ್ ಪ್ರವೈಟ್ ಲಿಮಿಟೆಡ್ ಹೆಸರಿನ ಕಂಪನಿಗೆ.

ಇಲ್ಲೊಂದು ತಮಾಷೆಯಿದೆ ಈ ಎರಡೂ ಕಂಪನಿ ಹೆಸರಷ್ಟೇ ಬೇರೆ. ಶೇರುದಾರರು, ಒಡೆಯರು, ನಿರ್ದೇಶಕರು ಮಾತ್ರ ಅವರೇ. ಜಾಗ ಮಂಜೂರು ಮಾಡಿಸಿಕೊಂಡ ಎಸಿಸಿಪಿಪಿಲಿ ಕಂಪನಿ ಕಾಸರಕೋಡು ಟೊಂಕ ಮಲ್ಲುಕುರ್ವಾಕ್ಕೆ ಬಂದು ನೋಡಿದಾಗ ಈ ಜಾಗ ಸುಮಾರು 300 ಮೀನುಗಾರರಿಗೆ ಮನೆ ನಿರ್ಮಾಣಕ್ಕೆಂದು ಕೊಟ್ಟಿರುವುದು ತಿಳಿಯುತ್ತದೆ. ಜಾಗದ ಸರ್ವೆ ನಂಬರ್ ಕೂಡ ಬೋಗಸ್ ಆಗಿತ್ತು (ಸರ್ವೆ ನಂಬರ್ 9999) ಆ ಜಾಗದ ಸರ್ವೆ ಹೆಸರನ್ನೇ ಬದಲಿಸಿ ಎಚ್‌ಪಿಪಿಲಿ ಎಂದು ಬದಲಾಯಿಸಲಾಯಿತು. ಈ ಎಸಿಸಿಪಿಪಿಲಿ ಮತ್ತು ಎಚ್‌ಪಿಪಿಲಿ ಕಂಪನಿಗಳು ಆಂಧ್ರ ಮೂಲದ್ದು; ಸಿಕಂದರಾಬಾದ್, ಹೈದರಾಬಾದ್ ವಿಳಾಸದ ಕಂಪನಿಗಳ ಹಿಂದೆ ಆಂಧ್ರ ಅಧಿಕಾರಿಗಳ ಪ್ರಬಲ ಲಾಬಿಯಿದೆ ಎನ್ನಲಾಗಿದೆ. ಕರ್ನಾಟಕ ಆಯಕಟ್ಟಿನ ಇಲಾಖೆಗಳ ಮುಖ್ಯಸ್ಥರು ಆಂಧ್ರದವರಾಗಿರುವುದರಿಂದ ಈ ಬಂದರು ಕಂಪನಿ ತಮಗೆ ಬೇಕಾದಂತೆ ಕಾನೂನನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪವಿದೆ.

ಎಚ್‌ಪಿಪಿಗೆ ಅನುಕೂಲವಾಗುವಂತೆ ಹೊನ್ನಾವರ ತಾಲ್ಲೂಕಿನ ಕರಾವಳಿ ಗಡಿಯನ್ನೆ ಬದಲಿಸಲಾಗಿದೆ! ಪಾವಿನಕುರ್ವಾ, ಮಲ್ಲುಕುರ್ವಾ, ಕರ್ಕಿ ಮತ್ತು ಕಾಸರಕೋಟು ಗ್ರಾಮದ ಗಡಿಯನ್ನು ಜಿಲ್ಲಾಡಳಿತ ಮತ್ತು ಸರ್ವೆ ಇಲಾಖೆ (ಎಡಿಎಲ್‌ಆರ್—ಕಚೇರಿ) ಬದಲಿಸಿದೆ. ಕಡಲಂಚಿನ ವಿಜ್ಞಾನಿಯೊಬ್ಬರು ಮತ್ತು ಮೀನುಗಾರರು ಈ ಅಕ್ರಮದ ಬಗ್ಗೆ ಸರ್ವೆ ಆಫ್ ಇಂಡಿಯಾಕ್ಕೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಸಂಬಂಧಿಸಿದ ಪ್ರದೇಶದ ಅಷ್ಟೂ ದಾಖಲೆ ಕಳಿಸುವಂತೆ ಸೂಚಿಸಿದ್ದರು. ಅಲ್ಲಿಗೆ ಆಂಧ್ರ ಮೂಲದ ಬಂಡವಾಳಶಾಹಿ ಮತ್ತು ಅಧಿಕಾರಿಗಳ ಲಾಬಿ ಗೋಲ್‌ಮಾಲ್ ಮಾಡುತ್ತಿದೆ ಎಂಬುದು ಜಗಜ್ಜಾಹೀರಾಗಿ ಹೋಗಿದೆ!!

ಎಚ್ಪಿಪಿಲಿಗೆ ಯಾವುದೇ ಬಂದರು ಕಟ್ಟಿದ ಅಥವಾ ಬಂದರು ನಿರ್ವಹಿಸಿದ ದಾಖಲೆ ಇಲ್ಲ. ಈಗ ಕಾಸರಕೋಡದಲ್ಲಿ ಕಂಪನಿ ತನಗೆ ಬೇಕಾದಲ್ಲಿ ಭೂಕಬಳಿಕೆ ಮಾಡಿ ಬಂದರು ನಿರ್ಮಾಣ ಮಾಡುತ್ತಿದೆ. ಬಂದರು ಕಟ್ಟಲು ಸರ್ಕಾರ ಮಂಜೂರು ಮಾಡಿದ ಸ್ಥಳವೇ ಬೇರೆ, ಸದರಿ ನಿರ್ಮಿಸುತ್ತಿರುವ ಜಾಗವೇ ಬೇರೆಯಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.

ಕರಾವಳಿ ಗಡಿ ಬದಲಾಯಿಸಿವುದು ತುಂಬ ಅಪಾಯಕಾರಿ. ವಿದೇಶಿಯರಿಗೆ ಆಕ್ರಮಣಕ್ಕೆ ಇದು ಅವಕಾಶ ಮಾಡಿಕೊಡುತ್ತದೆನ್ನುತ್ತಾರೆ ಕಡಲ ಶಾಸ್ತ್ರಜ್ಞರು. ಕರಾವಳಿ ಪ್ರದೇಶದ ಗಡಿಯನ್ನು ಬದಲಾಯಿಸುವುದು ಕೋಸ್ಟಲ್ ಝೋನ್ ಮ್ಯಾನೇಜ್‌ಮೆಂಟ್ ಪ್ಲಾನ್‌ಗೆ ವಿರುದ್ಧವಾದದು. ಕರಾವಳಿ ಗಡಿಯನ್ನು ನೆವೆಲ್ ಹೈಡ್ರಾಲಜಿ ಆಫೀಸರ್ ಮತ್ತು ಸರ್ವೆ ಆಫ್ ಇಂಡಿಯಾ ನಿರ್ಧರಿಸುತ್ತದೆ. ಸ್ಥಳೀಯ ಕಂದಾಯ ಇಲಾಖೆ ನಕ್ಷೆ ಬಳಸಿ ಗಡಿ ಗುರುತಿಸಬೇಕು. ಜಲಗಡಿ ಬದಲಿಸುವ ಅಧಿಕಾರವಿರುವುದು ಭಾರತ ಸರ್ಕಾರಕ್ಕೆ ಮಾತ್ರ ಆದರೂ ಕಾಸರಕೋಡು, ಕರ್ಕಿ, ಪಾವಿನಕುರ್ವಾದ ಗಡಿ ರಾಜ್ಯ ಸರ್ಕಾರ ಬದಲಾಯಿಸಿರುವುದು ಇದು ಅನೇಕ ಅನುಮಾನಕ್ಕೆ ಮತ್ತು ಅನಾಹುತಕ್ಕೂ ಕಾರಣವಾಗಲಿದೆ.

ಕಾಸರಕೋಡು ಪ್ರದೇಶದ ಮೀನುಗಾರರಲ್ಲಿ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯದವರಿದ್ದಾರೆ. ಖಾಸಗಿ ಬಂದರು ಯೋಜನೆಯಿಂದ ತಮ್ಮ ಬದುಕು ಮೂರಾಬಟ್ಟೆಯಾಗುತ್ತದೆಂಬ ಆತಂಕದಿಂದ ಸಾಮೂಹಿಕವಾಗಿ ಸಮುದ್ರಕ್ಕೆ ಹಾರಲು ಮುಂದಾಗಿದ್ದೂ ನಡೆದುಹೋಗಿದೆ. ಆದರೆ ಸ್ಥಳಿಯ ಶಾಸಕ ಸುನಿಲ್‌ ನಾಯ್ಕ್ ಅತ್ತ ಸುಳಿದಿಲ್ಲ. ಕಳೆದ ಚುನಾವಣೆಯಲ್ಲಿ ಮೀನುಗಾರರ ಹುಡುಗ ಪರೇಶ್ ಮೇಸ್ತನ ಸಂಶಯಾಸ್ಪದ ಸಾವಿನ ವಿಚಾರದಲ್ಲಿ ಬಹಳ ಹೋರಾಟ ನಡೆಸಿದ್ದ ಈ ಬಿಜೆಪಿ ಶಾಸಕರ ಬಗ್ಗೆ ಸಹಜವಾಗೇ ಮೀನುಗಾರರೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕ ಸುನಿಲ್‌ನಾಯ್ಕ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೊಳಾಗಗುತ್ತಿದ್ದಾರೆ.

ಕೃಷಿಕಾಯ್ದೆಗಳು ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವಂತೆಯೇ ಕಡಲು ಮತ್ತು ಬಂದರು ಖಾಸಗೀಕರಣ ಮೀನುಗಾರರ ಉದ್ಯೋಗ ಕಸಿದುಕೊಂಡು ನಿರ್ಗತಿಕರನ್ನಾಗಿಸುತ್ತದೆ. ಮೊದಲೇ ಸಣ್ಣ ಹಾಗೂ ನಾಡದೋಣಿ ಮೀನುಗಾರಿಕೆಯವರು ಬದುಕು ಸಾಗಿಸುವುದೇ ಕಷ್ಟವಾಗಿದೆ. ಮೀನಿನ ಇಳುವರಿ ಕಮ್ಮಿಯಾಗಿ ಆದಾಯವೇ ಇಲ್ಲದಾಗಿದೆ. ಇಂಥ ಸಂದರ್ಭದಲ್ಲಿ ಬೆನ್ನಿಗೆ ಬಿದ್ದು ಕಾಡುತ್ತಿರುವ ಖಾಸಗಿ ಬಂದರು ಯೋಜನೆ ಮೀನುಗಾರರಿಗೆ ದೊಡ್ಡ ಚಿಂತೆಯಾಗಿದೆ. ಕಡಲಂಚಿನ ಪಟ್ಟಣಗಳಲ್ಲಿ ಜಾರಿಗೊಳಿಸಿರುವ ತರತರದ ಯೋಜನೆಗಳು ಮೀನುಗಾರರನ್ನು ಸಂಕಷ್ಟಕ್ಕೆ ನೂಕಿದೆ; ಕಡಲು ಮಾಲಿನ್ಯದಿಂದ ಮೀನಿನ ಸಂತತಿ ನಶಿಸಿದೆ. ಆಳ ಸಮುದ್ರ ಮೀನುಗಾರಿಕೆಯಿಂದ ಪಾರಂಪರಿಕ ಮೀನುಗಾರರು ಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಹತ್ತು ಹಲವು ಸಮಸ್ಯೆಗಳು ಮೀನುಗಾರರನ್ನು ಬಾಧಿಸುತ್ತಿವೆ.

ಆಳುವವರು ಬಂದರು ಖಾಸಗೀಕರಣ ಯೋಜನೆ ನಿಲ್ಲಿಸಿ, ಸ್ಥಳಿಯರ ಜೀವನಕ್ಕೆ ಅನುಕೂಲವಾದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಬೇಕು, ಮೀನುಗಾರರ ಒಳತಿಗೆ ತಕ್ಕಂತ ಯೋಜನೆಗಳು ಬೇಕು ಎಂಬ ಕೂಗು ದಿನೇ ದಿನೇ ಜೋರಾಗುತ್ತಿದೆ.


ಇದನ್ನೂ ಓದಿ: ಉತ್ತರ ಕನ್ನಡ: ವಿಭಿನ್ನ ಜನ – ಜಾತಿ: ವೈವಿದ್ಯ ಭಾಷೆ

LEAVE A REPLY

Please enter your comment!
Please enter your name here