‘ಆಪರೇಷನ್ ಸಿಂಧೂರ್’ ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮೂದಾಬಾದ್ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿಯನ್ನು ಪರಿಗಣಿಸದಂತೆ ಸುಪ್ರೀಂ ಕೋರ್ಟ್ ಸೋಮವಾರ (ಆ.25) ವಿಚಾರಣಾ ನ್ಯಾಯಾಲಯಕ್ಕೆ ನಿರ್ಬಂಧ ಹೇರಿದೆ. ಪ್ರಕರಣದಲ್ಲಿ ಆರೋಪಗಳನ್ನು ರೂಪಿಸುವುದನ್ನೂ ಸರ್ವೋಚ್ಚ ನ್ಯಾಯಾಲಯ ಸದ್ಯಕ್ಕೆ ತಡೆಹಿಡಿದಿದೆ.
ಸುಪ್ರೀಂ ಕೋರ್ಟ್ ರಚಿಸಿದ್ದ ಹರಿಯಾಣ ಎಸ್‌ಐಟಿ, ಅಲಿ ಖಾನ್ ವಿರುದ್ಧದ ಎರಡು ಎಫ್‌ಐಆರ್‌ಗಳ ಪೈಕಿ ಒಂದರಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸಿದೆ ಮತ್ತು ಇನ್ನೊಂದರಲ್ಲಿ ಆಗಸ್ಟ್ 22ರಂದು ಆರೋಪಪಟ್ಟಿ ಸಲ್ಲಿಸಿಲಿದೆ ಎಂದು ತಿಳಿಸಿದ ನಂತರ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಮೇಲಿನ ನಿರ್ದೇಶನ ನೀಡಿದೆ.
ಅಲಿ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಆರೋಪಪಟ್ಟಿಯನ್ನು ‘ಅತ್ಯಂತ ದುರದೃಷ್ಟಕರ’ ಎಂದು ಟೀಕಿಸಿದ್ದು, ಇದು ಪ್ರಸ್ತುತ ಕಾನೂನು ಪರಿಶೀಲನೆಯಲ್ಲಿರುವ ದೇಶದ್ರೋಹಕ್ಕೆ ಸಂಬಂಧಿಸಿದ ನಿಬಂಧನೆಯಾದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ಅನ್ನು ಅನ್ವಯಿಸುತ್ತದೆ ಎಂದು ಎತ್ತಿ ತೋರಿಸಿದ್ದಾರೆ.
ಮುಂದಿನ ವಿಚಾರಣೆಗೂ ಮುನ್ನ ಆರೋಪಪಟ್ಟಿಯನ್ನು ಪರಿಶೀಲಿಸಿ, ಆಪಾದಿತ ಅಪರಾಧಗಳ ಸಾರಾಂಶವನ್ನು ಸಿದ್ಧಪಡಿಸುವಂತೆ ನ್ಯಾಯಾಲಯವು ಸಿಬಲ್ ಅವರಿಗೆ ಹೇಳಿದೆ. ಅಲ್ಲದೆ, ಮುಕ್ತಾಯ ವರದಿ ಸಲ್ಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆಯೂ ಪೀಠ ಆದೇಶಿಸಿದೆ.
ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವ ಪೋಸ್ಟ್‌ಗಳ ಆರೋಪಗಳ ಹಿನ್ನೆಲೆ, ಹರಿಯಾಣ ಪೊಲೀಸರು ಮೇ 18ರಂದು ಅಲಿ ಖಾನ್ ಅವರನ್ನು ಬಂಧಿಸಿದ್ದರು. ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಸ್ಥಳೀಯ ಸರಪಂಚ್‌ಗಳ ದೂರುಗಳನ್ನು ಆಧರಿಸಿ ಅಲಿ ಖಾನ್ ವಿರುದ್ದ ಸೋನಿಪತ್‌ನ ರಾಯ್ ಪ್ರದೇಶದಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಅಲಿ ಖಾನ್ ಮೇಲೆ ಬಿಎನ್‌ಎಸ್ ಸೆಕ್ಷನ್ 152, 353 (ಸಾರ್ವಜನಿಕ ಕಿರುಕುಳ), 79 (ಮಹಿಳೆಯ ಗೌರವಕ್ಕೆ ಅವಮಾನ), ಮತ್ತು 196(1) (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಸ್‌ಐಟಿಯ ತನಿಖೆ ವೇಳೆ ತನ್ನನ್ನು ತಾನೇ ದಾರಿ ತಪ್ಪಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಟೀಕಿಸಿತ್ತು ಮತ್ತು ಮೇ 21ರಂದು ಅಲಿ ಖಾನ್ ಅವರಿಗೆ ಮಧ್ಯಂತರ ಜಾಮೀನು ನೀಡಿತು. ಆದರೂ, ತನಿಖೆ ಮುಂದುವರಿಯಲು ಅದು ಅವಕಾಶ ಮಾಡಿಕೊಟ್ಟಿತ್ತು.
ಅಲಿ ಖಾನ್ ಅವರ ಬಂಧನಕ್ಕೆ ರಾಜಕೀಯ ಮತ್ತು ಶೈಕ್ಷಣಿಕ ವಲಯಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
‘ಇಂಡಿಯಾ’ ಅಭ್ಯರ್ಥಿ ಸುದರ್ಶನ್ ರೆಡ್ಡಿ ವಿರುದ್ಧ ಅಮಿತ್ ಶಾ ಹೇಳಿಕೆ: ನಿವೃತ್ತ ನ್ಯಾಯಾಧೀಶರಿಂದ ಖಂಡನೆ


