ನ್ಯಾಯಾಂಗ ಸೇವೆಗೆ ಸೇರಲು ಅಭ್ಯರ್ಥಿಯು ಕನಿಷ್ಠ ಮೂರು ವರ್ಷಗಳ ವಕೀಲಿಕೆ ಅನುಭವ ಹೊಂದಿರಬೇಕು ಎಂದು ಮಂಗಳವಾರ (ಮೇ.20) ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಎ.ಜಿ ಮಸಿಹ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ತೀರ್ಪು ಪ್ರಕಟಿಸಿದೆ.
“ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗುವ ಯಾವುದೇ ಅಭ್ಯರ್ಥಿಯು ಕನಿಷ್ಠ ಮೂರು ವರ್ಷಗಳ ವಕೀಲಿಕೆ ಅನುಭವ ಹೊಂದಿರಬೇಕು ಎಂಬುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳು ನಿಯಮಗಳನ್ನು ತಿದ್ದುಪಡಿ ಮಾಡಬೇಕು. ಇದನ್ನು ಬಾರ್ ಕೌನ್ಸಿಲ್‌ನಲ್ಲಿ 10 ವರ್ಷಗಳ ಅನುಭವ ಹೊಂದಿರುವ ವಕೀಲರು ಪ್ರಮಾಣೀಕರಿಸಬೇಕು ಮತ್ತು ಅನುಮೋದಿಸಬೇಕು. ನ್ಯಾಯಾಧೀಶರಿಗೆ ಕಾನೂನು ಗುಮಾಸ್ತರಾಗಿ ಅನುಭವ ಹೊಂದಿರುವುದನ್ನೂ ಪರಿಗಣಿಸಲಾಗುತ್ತದೆ. ನ್ಯಾಯಾಧೀಶರಾಗಿ ಕೆಲಸ ಆರಂಭಿಸುವ ಮುನ್ನ ಒಂದು ವರ್ಷದ ತರಬೇತಿಯನ್ನೂ ಪಡೆಯಬೇಕು” ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮೂರು ವರ್ಷಗಳ ಅನುಭವ ಹೊಂದಿರಬೇಕು ಎಂಬ ಆದೇಶವು ಪ್ರಸ್ತುತ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ. ಭವಿಷ್ಯದ ನೇಮಕಾತಿಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಹೈಕೋರ್ಟ್‌ಗಳು ಈಗಾಗಲೇ ಸಿವಿಲ್ ನ್ಯಾಯಾಧೀಶರ (ಕಿರಿಯ ವಿಭಾಗ) ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರೆ, ಅದಕ್ಕೆ ಕನಿಷ್ಠ ಅಭ್ಯಾಸದ ಅವಶ್ಯಕತೆ ಅನ್ವಯಿಸುವುದಿಲ್ಲ. ಮುಂದಿನ ನೇಮಕಾತಿ ಪ್ರಕ್ರಿಯೆ ವೇಳೆ ಇದು ಅನ್ವಯಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಹೊಸ ಕಾನೂನು ಪದವೀಧರರನ್ನು ನ್ಯಾಯಾಧೀಶರನ್ನಾಗಿ ನೇಮಿಸುವುದರಿಂದ ಬಹಳಷ್ಟು ಸಮಸ್ಯೆಗಳಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗುವ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಅನನುಭವಿ ಕಾನೂನು ಪದವೀಧರರು ಸಮರ್ಪಕವಾಗಿ ಸಜ್ಜಾಗಿಲ್ಲದಿರಬಹುದು ಎಂದಿದೆ.
ಮೂರು ವರ್ಷಗಳ ವಕೀಲಿಕೆಯನ್ನು ಕಾನೂನು ಪದವೀಧರರು ತಾತ್ಕಾಲಿಕ ದಾಖಲಾತಿಯ ಆಧಾರದ ಮೇಲೆ ಅಭ್ಯಾಸವನ್ನು ಪ್ರಾರಂಭಿಸಿದ ದಿನಾಂಕದಿಂದ ಲೆಕ್ಕ ಹಾಕಬುದು. ಅಲ್ಲದೆ, ಅಖಿಲ ಭಾರತ ಬಾರ್ ಪರೀಕ್ಷೆಯಲ್ಲಿ (AIBE) ಉತ್ತೀರ್ಣರಾದ ದಿನಾಂಕದಿಂದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾ. ವರ್ಮಾ ಪ್ರಕರಣದ ತನಿಖೆ ನಡೆಸಿದ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ: ಉಪರಾಷ್ಟ್ರಪತಿ ಧನ್ಕರ್