‘ಹದಿಹರೆಯದ ಹೆಣ್ಣು ಮಕ್ಳಳು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು’ ಎಂಬ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಆ.20) ರದ್ದುಗೊಳಿಸಿದೆ.
‘ಹದಿಹರೆಯದವರ ಖಾಸಗಿತನದ ಹಕ್ಕು’ ಎಂಬ ಶೀರ್ಷಿಕೆಯ ಸ್ವಯಂ ಪ್ರೇರಿತ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿದೆ. ಈ ಪ್ರಕರಣ ಅಕ್ಟೋಬರ್ 18, 2023ರಂದು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ಆದೇಶಕ್ಕೆ ಸಂಬಂಧಿಸಿದೆ.
ಪ್ರೇಮ ಸಂಬಂಧ ಹೊಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷದ ಯುವಕನನ್ನು ಖುಲಾಸೆಗೊಳಿಸಿ ಅಕ್ಟೋಬರ್ 18, 2023ರಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿತ್ತು. ಈ ವೇಳೆ ‘ಹದಿಹರೆಯದ ಹೆಣ್ಣು ಮಕ್ಳಳು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು’ ಎಂದು ಹೇಳಿತ್ತು.
ಹದಿಹರೆಯದವರಲ್ಲಿ ಲೈಂಗಿಕತೆ ಸಾಮಾನ್ಯ. ಆದರೆ, ಅಂತಹ ಪ್ರಚೋದನೆ ವ್ಯಕ್ತಿಯ ಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಇದಕ್ಕೆ ಪುರುಷ ಮತ್ತು ಮಹಿಳೆ ಹೊರತಾಗಿಲ್ಲ. ಹದಿಹರೆಯದ ಹೆಣ್ಣು ಮಕ್ಕಳು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ತಮ್ಮ ದೇಹದ ಸಮಗ್ರತೆ, ಘನತೆ ಮತ್ತು ಸ್ವಾಭಿಮಾನದ ಹಕ್ಕನ್ನು ಕಾಪಾಡುವುದು ಹೆಣ್ಣುಮಕ್ಕಳ ಕರ್ತವ್ಯ ಎಂದು ನ್ಯಾಯಮೂರ್ತಿ ಚಿತ್ತ ರಂಜನ್ ದಾಸ್ ಮತ್ತು ಪಾರ್ಥಾ ಸಾರಥಿ ಅವರನ್ನೊಳಗೊಂಡ ಪೀಠ ಸೂಚಿಸಿತ್ತು.
ಈ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಅತ್ಯಾಚಾರ ಆರೋಪಿಗೆ ಶಿಕ್ಷೆಯನ್ನು ಎತ್ತಿ ಹಿಡಿದಿದೆ ಎಂದು ತಿಳಿದು ಬಂದಿದೆ.
ಇಂದು ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಓಕಾ, ತೀರ್ಪುಗಳನ್ನು ಹೇಗೆ ಬರೆಯಬೇಕು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆಗಳಿಗೆ ಸಂಬಂಧಿಸಿದಂತೆ, ಪೋಕ್ಸೊ ಕಾಯ್ದೆಯ ಸೆಕ್ಷನ್ 6, ಸೆಕ್ಷನ್ 376(3) ಮತ್ತು 376(2)(ಎನ್) ಐಪಿಸಿ ಅಡಿಯಲ್ಲಿ ಆರೋಪಿಯ ಶಿಕ್ಷೆಯನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 30 ರಿಂದ 43 ರ ಜೊತೆಗೆ ಪೋಕ್ಸೋ ಕಾಯ್ದೆಯ ಸೆಕ್ಷನ್ 19 (6) ರ ನಿಬಂಧನೆಗಳನ್ನು ಜಾರಿಗೊಳಿಸಲು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಓಕಾ ಹೇಳಿದ್ದಾರೆ.
ಪ್ರಕರಣದಲ್ಲಿ ಸಂತ್ರಸ್ತರಿಗೆ ತಿಳುವಳಿಕೆಯುಳ್ಳ ಆಯ್ಕೆಯನ್ನು ತೆಗೆದುಕೊಳ್ಳಲು ಸಹಾಯ ಮಾಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ನ್ಯಾಯಮೂರ್ತಿ ಓಕಾ ತಿಳಿಸಿದ್ದಾರೆ.
ಇದನ್ನೂ ಓದಿ : ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ : ‘ರಾಷ್ಟ್ರೀಯ ಕಾರ್ಯಪಡೆ’ ರಚಿಸಿದ ಸುಪ್ರೀಂ ಕೋರ್ಟ್


