ಇಡುಕ್ಕಿ ಜಿಲ್ಲೆಯ ದೇವಿಕುಲಂ ವಿಧಾನಸಭಾ ಕ್ಷೇತ್ರದ ಸಿಪಿಐ(ಎಂ) ಶಾಸಕ ಎ. ರಾಜಾ ಅವರ ಆಯ್ಕೆಯನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಬದಿಗೆ ಸರಿಸಿದೆ.
ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಮಾರ್ಚ್ 23, 2023ರ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ರಾಜಾ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.
ಹೈಕೋರ್ಟ್ ತೀರ್ಪು ಮಾತ್ರವಲ್ಲದೆ ಚುನಾವಣಾ ತಕರಾರು ಅರ್ಜಿಯನ್ನೂ ರದ್ದುಗೊಳಿಸಲಾಗಿದೆ. ಮೇಲ್ಮನವಿದಾರ (ಎ.ರಾಜಾ) ಪೂರ್ಣ ಅವಧಿಗೆ ಶಾಸನ ಸಭೆಯ ಸದಸ್ಯರಾಗಿ ಇರಲಿದ್ದು, ಅರ್ಹ ಸೌಲಭ್ಯಗಳನ್ನೆಲ್ಲ ಪಡೆಯಲಿದ್ದಾರೆ” ಎಂಬುವುದಾಗಿ ಸುಪ್ರೀಂ ಕೋರ್ಟ್ ಪೀಠ ಹೇಳಿದೆ ಎಂದು ವರದಿಯಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ 26 ರಂದು ಸುಪ್ರೀಂ ಕೋರ್ಟ್ ರಾಜಾ ಅವರ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.
2021ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ರಾಜಾ ವಿರುದ್ದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ಡಿ.ಕುಮಾರ್ ಅವರು ಚುನಾವಣಾ ತಕರಾರರು ಅರ್ಜಿ ಸಲ್ಲಿಸಿದ್ದರು. ರಾಜಾ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಮೀಸಲಾಗಿರುವ ದೇವಿಕುಲಂ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಹರಲ್ಲ ಎಂದು ವಾದಿಸಿದ್ದರು.
ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ರಾಜಾ ಮತ್ತು ಡಿ. ಕುಮಾರ್ ಪರ ಕ್ರಮವಾಗಿ ಹಿರಿಯ ವಕೀಲರಾದ ವಿ ಗಿರಿ ಮತ್ತು ನರೇಂದರ್ ಹೂಡಾ ಅವರ ವಾದಗಳನ್ನು ಆಲಿಸಿದೆ.
ಕೇರಳ ಹೈಕೋರ್ಟ್‌ನ ಮಾರ್ಚ್ 20,2023ರ ಆದೇಶದ ವಿರುದ್ಧ ರಾಜಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
ಡಿ.ಕುಮಾರ್ ಅವರ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದ ರಾಜಾ ಅವರು, ತಾನು ಹಿಂದೂ ಧರ್ಮದ ಪಾರಾಯಣ ಸಮುದಾಯಕ್ಕೆ ಸೇರಿದವನು ಎಂದು ವಾದಿಸಿದ್ದರು. ಅದಕ್ಕೆ ದಾಖಲೆಯಾಗಿ ದೇವಿಕುಲಂ ತಹಶೀಲ್ದಾರ್ ನೀಡಿದ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದರು.
ತಾನು ಸಲ್ಲಿಸಿದ್ದ ನಾಮಪತ್ರಕ್ಕೆ ಕುಮಾರ್ ಸಲ್ಲಿಸಿದ ಆಕ್ಷೇಪಣೆಯನ್ನು ಚುನಾವಣಾಧಿಕಾರಿ ಕ್ರಮ ಬದ್ದವಾಗಿಯೇ ತಿರಸ್ಕರಿಸಿದ್ದಾರೆ ಎಂದಿದ್ದರು.
ತಾನು, ತನ್ನ ಹೆತ್ತವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿಲ್ಲ. ತಾನು ದೀಕ್ಷಾ ಸ್ನಾನವನ್ನೂ ಪಡೆದಿಲ್ಲ. ತನ್ನ ಪತ್ನಿಯೂ ಹಿಂದೂವಾಗಿದ್ದು, ನಮ್ಮ ವಿವಾಹವು ಸಾಂಪ್ರದಾಯಿಕ ದೀಪ ಬೆಳಗುವುದು ಮತ್ತು ಪತ್ನಿಯ ಕತ್ತಿಗೆ ತಾಳಿ ಕಟ್ಟುವುದು ಸೇರಿದಂತೆ ಹಿಂದೂ ವಿಧಿವಿಧಾನಗಳ ಪ್ರಕಾರ ನಡೆದಿದೆ ಎಂದು ರಾಜಾ ಹೇಳಿದ್ದರು.
ರಾಜಾ ಒಬ್ಬ ಕ್ರಿಶ್ಚಿಯನ್. ಇಡುಕ್ಕಿ ಜಿಲ್ಲೆಯ ಸಿಎಸ್ಐ ಚರ್ಚ್‌ನಲ್ಲಿ ಅವರು ದೀಕ್ಷಾಸ್ನಾನ ಪಡೆದಿದ್ದಾರೆ. ಅವರು ಎಸ್‌ಸಿ ಸಮುದಾಯಕ್ಕೆ ಸೇರಿದವರು ಎಂದು ಸಾಬೀತುಪಡಿಸಲು ನಕಲಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ ಎಂದು ಕುಮಾರ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.ಪಿ
2021ರ ಚುನಾವಣೆಯಲ್ಲಿ 7,848 ಮತಗಳ ಅಂತರದಿಂದ ರಾಜಾ ವಿರುದ್ದ ಸೋತಿದ್ದ ಕುಮಾರ್, ರಾಜಾ ಅವರ ಪತ್ನಿ ಕೂಡ ಕ್ರಿಶ್ಚಿಯನ್. ಅವರು ಕ್ರಿಶ್ಚಿಯನ್ ಧಾರ್ಮಿಕ ವಿಧಿಗಳಿಗೆ ಅನುಗುಣವಾಗಿ ಮದುವೆಯಾಗಿದ್ದಾರೆ ಎಂದು ಹೇಳಿಕೊಂಡಿದ್ದರು.
ಕುಮಾರ್ ಅವರ ಆರೋಪವನ್ನು ಪುರಸ್ಕರಿಸಿದ್ದ ಕೇರಳ ಹೈಕೋರ್ಟ್, ರಾಜಾ ಅವರು ತನ್ನ ಮದುವೆಯ ಕುರಿತ ಮಾಹಿತಿಯನ್ನು ಮುಚ್ಚಿಡಲು ಉದ್ದೇಶಪೂರ್ವಕ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿತ್ತು.
ರಾಜಾ ಮತ್ತು ಅವರ ಪತ್ನಿ ಮದುವೆಯ ವೇಳೆ ಧರಿಸಿದ್ದ ವಸ್ತ್ರ ಕ್ರಿಶ್ಚಿಯನ್ ವಿವಾಹದ ಸಂಕೇತವಾಗಿದೆ ಎಂದಿತ್ತು.
ರಾಜಾ ಅವರು ನಾಮಪತ್ರ ಸಲ್ಲಿಸುವ ಮೊದಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ನಾಮಪತ್ರ ಸಲ್ಲಿಕೆಗೆ ಬಹಳ ಹಿಂದೆಯೇ ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರು ಎಂಬುದು ಅವರು ಸಲ್ಲಿಸಿರುವ ಕೆಲವು ದಾಖಲೆಗಳು ತೋರಿಸುತ್ತವೆ ಎಂದು ಹೈಕೋರ್ಟ್ ಹೇಳಿತ್ತು.
ಮತಾಂತರದ ನಂತರ, ಅವರು ಹಿಂದೂ ಧರ್ಮೀಯ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಆ ದೃಷ್ಟಿಯಿಂದಲೂ, ಚುನಾವಣಾಧಿಕಾರಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕಿತ್ತು ಎಂದಿತ್ತು.
ಕೇರಳದಲ್ಲಿ ಹಿಂದೂ ಪಾರಾಯಣರನ್ನು ಎಸ್‌ಸಿ ಸಮುದಾಯ ಎಂದು ಘೋಷಿಸಿ 1950 ರಲ್ಲಿ ರಾಷ್ಟ್ರಪತಿಗಳು ಆದೇಶ ಹೊರಡಿಸುವ ಮೊದಲು, ತನ್ನ ಪೂರ್ವಜರು (ಅಜ್ಜ-ಅಜ್ಜಿ) ಕೇರಳಕ್ಕೆ ವಲಸೆ ಹೋಗಿದ್ದರು ಎಂಬುವುದನ್ನು ಸಾಭೀತುಪಡಿಸುವಲ್ಲಿ ರಾಜಾ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ತಿಳಿಸಿತ್ತು.
“ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡೂ ಆಧಾರದ ಮೇಲೆ, ರಾಜಾ ಅವರು ಕೇರಳ ರಾಜ್ಯದೊಳಗಿನ ‘ಹಿಂದೂ ಪಾರಾಯಣ’ದ ಸಮುದಾಯದ ಸದಸ್ಯರಲ್ಲ ಮತ್ತು ಪರಿಶಿಷ್ಟ ಜಾತಿಗೆ ಮೀಸಲಾಗಿರುವ ದೇವಿಕುಲಂ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಅರ್ಹತೆ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಹೈಕೋರ್ಟ್ ಹೇಳಿತ್ತು.
ಆದ್ದರಿಂದ, 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಾ ಅವರ ಆಯ್ಕೆಯು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 98 ರ ಅಡಿಯಲ್ಲಿ ಅನೂರ್ಜಿತವಾಗಿದೆ ಎಂದು ಹೈಕೋರ್ಟ್ ಘೋಷಿಸಿತ್ತು. ಅಲ್ಲದೆ, ಕುಮಾರ್ ಅವರನ್ನು ಶಾಸಕ ಎಂದು ಘೋಷಿಸಲು ಸಾಧ್ಯವಿಲ್ಲ ಎಂದಿತ್ತು.
ನ್ಯಾಯಾಧೀಶರ ಆಸ್ತಿ ವಿವರ ಬಹಿರಂಗಪಡಿಸಿದ ಸುಪ್ರೀಂ ಕೋರ್ಟ್; ಇಲ್ಲಿದೆ ಸಂಪೂರ್ಣ ಮಾಹಿತಿ