ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಇದೆ ಎಂಬ ಕಾರಣಕ್ಕೆ ಅವರ ನಾಮಪತ್ರ ತಿರಸ್ಕರಿಸುವಂತಿಲ್ಲ ಎಂದು ಸಮಜಾಯಿಷಿ ನೀಡಿದ್ದ ಉತ್ತರಾಖಂಡ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ (ಸೆ.26) 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಲ್ಲದೆ, ಕಳೆದ ಜುಲೈನಲ್ಲಿ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಸ್ಪಷ್ಟೀಕರಣದ ವಿರುದ್ಧ ಚುನಾವಣಾ ಆಯೋಗ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಚುನಾವಣಾ ಆಯೋಗ ಶಾಸನಬದ್ಧ ನಿಬಂಧನೆಗಳಿಗೆ ವಿರುದ್ಧವಾಗಿ ಕ್ರಮ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.
ರಾಜ್ಯ ಚುನಾವಣಾ ಆಯೋಗ ನೀಡಿದ್ದ ಸ್ಪಷ್ಟೀಕರಣ ಉತ್ತರಾಖಂಡ ಪಂಚಾಯತ್ ರಾಜ್ ಕಾಯ್ದೆ- 2016ರ ಸೆಕ್ಷನ್ 9(6) ಮತ್ತು 9(7)ಕ್ಕೆ ವಿರುದ್ಧವಾಗಿದೆ ಎಂದು ಕಳೆದ ಜುಲೈನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಅಲೋಕ್ ಮೆಹ್ರಾ ಅವರಿದ್ದ ವಿಭಾಗೀಯ ಪೀಠ ಹೇಳಿತ್ತು.
ಈ ಸೆಕ್ಷನ್‌ಗಳು ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಕ್ಷೇತ್ರಗಳಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯು ಹೆಸರನ್ನು ನೋಂದಾಯಿಸುವುದನ್ನು ನಿಷೇಧಿಸುತ್ತದೆ.
ವ್ಯಕ್ತಿಗಳ ಹೆಸರು ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ನಾಮಪತ್ರಗಳನ್ನು ಚುನಾವಣಾ ಆಯೋಗ ಸರಿಯಾಗಿ ಪರಿಶೀಲಿಸುತ್ತಿಲ್ಲ ಎಂದು ಶಕ್ತಿ ಸಿಂಗ್ ಎಂಬುವವರು ಆರೋಪಿಸಿದ್ದರು.
ಈ ರೀತಿಯ ಅಕ್ರಮ ನಡೆದಿದ್ದರೂ, ಹಲವಾರು ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ಅವರು ವಾದಿಸಿದ್ದರು. ಈ ಸಂಬಂಧ ಹಲವಾರು ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿತ್ತು.
ಚುನಾವಣಾ ಆಯೋಗದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದ ನಂತರ, ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಲಾಗಿದೆ.
ಆದಿವಾಸಿ ವ್ಯಕ್ತಿಯ ಕಸ್ಟಡಿ ಸಾವು: ಪೊಲೀಸ್ ಅಧಿಕಾರಿಗಳ ಬಂಧನಕ್ಕೆ ಗಡುವು ವಿಧಿಸಿದ ಸುಪ್ರೀಂ ಕೋರ್ಟ್


