ಶಿಕ್ಷಕಿಯ ಆಜ್ಞೆಯ ಮೇರೆಗೆ 2023ರಲ್ಲಿ ಸಹಪಾಠಿಗಳಿಂದ ಕಪಾಳಮೋಕ್ಷಕ್ಕೊಳಗಾದ ಮುಝಫ್ಫರ್‌ನಗರದ ಮುಸ್ಲಿಂ ಬಾಲಕನ ಶಾಲಾ ಶಿಕ್ಷಣದ ವೆಚ್ಚವನ್ನು ಭರಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಉತ್ತರ ಪ್ರದೇಶ (ಯುಪಿ) ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು, “ಸರ್ಕಾರ ಬಾಲಕನ ಶಾಲಾ ವೆಚ್ಚಗಳನ್ನು ಭರಿಸುವಂತೆ ಶಾಲೆಯ ಆಡಳಿತ ಮಂಡಳಿಯ ಮನವೊಲಿಸಬಹುದು. ಆದರೆ, ವೆಚ್ಚ ಭರಿಸುವ ಪ್ರಾಥಮಿಕ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ ಎಂಬುವುದಾಗಿ ಹೇಳಿದೆ ಎಂದು barandbench.com ವರದಿ ಮಾಡಿದೆ.
“ಬಾಲಕನ ಶಾಲಾ ಶಿಕ್ಷಣ ಮುಗಿಯುವವರೆಗೆ ಆತನ ಬೋಧನಾ ಶುಲ್ಕ, ಸಮವಸ್ತ್ರ, ಪುಸ್ತಕ ಮತ್ತು ಸಾರಿಗೆ ವೆಚ್ಚವನ್ನು ಭರಿಸುವುದು ರಾಜ್ಯ ಸರ್ಕಾರದ ಬಾಧ್ಯತೆಯಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.
ಆಗಸ್ಟ್ 2023ರಲ್ಲಿ, ಶಾಲಾ ಶಿಕ್ಷಕಿ ತ್ರಿಪ್ತಾ ತ್ಯಾಗಿ ಅವರು ಏಳು ವರ್ಷದ ಮುಸ್ಲಿಂ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ಇತರ ವಿದ್ಯಾರ್ಥಿಗಳಿಗೆ ಸೂಚಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕೋರಿ ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
ಶಿಕ್ಷಕಿ ತ್ರಿಪ್ತಾ ತ್ಯಾಗಿ ಮುಸ್ಲಿಂ ವಿದ್ಯಾರ್ಥಿಯ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಲ್ಲದೆ, ಆತನಿಗೆ ಹೊಡೆಯುವಂತೆ ಸಹಪಾಠಿಗಳನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕನಿಗೆ ಕಪಾಳಮೋಕ್ಷದ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ವ್ಯಕ್ತವಾಗಿತ್ತು. ನಂತರ ವಿದ್ಯಾರ್ಥಿಯನ್ನು ಬೇರೆ ಶಾಲೆಗೆ ವರ್ಗಾಯಿಸಲಾಯಿತು.
ಈ ವಿಷಯದ ಬಗ್ಗೆ ಕಾಲಮಿತಿಯ ಮತ್ತು ಸ್ವತಂತ್ರ ತನಿಖೆ ಮಾಡಬೇಕು. ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರವನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ತುಷಾರ್ ಗಾಂಧಿಯವರು ತನ್ನ ಅರ್ಜಿಯಲ್ಲಿ ಕೋರಿದ್ದರು.
ಶಾಲಾ ಶಿಕ್ಷಕಿಯ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅಕ್ಟೋಬರ್ 2023ರಲ್ಲಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ನಂತರ ಆರೋಪಿ ಶಿಕ್ಷಕಿ ನ್ಯಾಯಾಲಯದ ಮುಂದೆ ಶರಣಾಗಿದ್ದರು, ಮತ್ತು ಜಾಮೀನು ಪಡೆದರು.
ಪ್ರಕರಣದ ಸಂಬಂಧ ಕಳೆದ ವರ್ಷ ಸುಪ್ರೀಂ ಕೋರ್ಟ್, ವಿದ್ಯಾರ್ಥಿಯ ಶಾಲಾ ವೆಚ್ಚವನ್ನು ಭರಿಸಲು ರಾಜ್ಯವು ಪ್ರಾಯೋಜಕರನ್ನು ಹುಡುಕಬೇಕೆಂದು ಸೂಚಿಸಿತ್ತು.
ಬುಧವಾರ ತುಷಾರ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಶದನ್ ಫರಾಸತ್, “ರಾಜ್ಯ ಸರ್ಕಾರ ಮಗುವಿನ ಶಾಲಾ ಸಮವಸ್ತ್ರದ ಶುಲ್ಕ ಮತ್ತು ಬೋಧನಾ ಶುಲ್ಕವನ್ನು ಭರಿಸುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಸೈಯದ್ ಮುರ್ತಾಜಾ ಸ್ಮಾರಕ ಟ್ರಸ್ಟ್ ವಿದ್ಯಾರ್ಥಿಯ ವೆಚ್ಚ ಭರಿಸಲು ಮುಂದಾಗಿದೆ ಎಂದು ಹೇಳಿದೆ.
“ನಾವು ದಾಖಲೆಗಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಬಹುದು. ಆದರೆ, ಬಾಲಕನ ವೆಚ್ಚವನ್ನು ಟ್ರಸ್ಟ್ ನೇರವಾಗಿ ಶಾಲೆಗೆ ಪಾವತಿಸುತ್ತದೆ” ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಆದಾಗ್ಯೂ, ಬಾಲಕನ ಶಾಲಾ ಶಿಕ್ಷಣ ಮುಗಿಯುವವರೆಗೆ ಆತನ ಶೈಕ್ಷಣಿಕ ವೆಚ್ಚ ಭರಿಸುವುದು ಪ್ರಾಥಮಿಕವಾಗಿ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಟ್ರಸ್ಟ್ ಒಂದು ವರ್ಷವರೆಗೆ ಬಾಲಕನ ವೆಚ್ಚ ಭರಿಸುವುದಾಗಿ ತಿಳಿಸಲಾಗಿದೆ. ಇನ್ನು ಹೆಚ್ಚಿನ ಅವಧಿಗೆ ವೆಚ್ಚ ಭರಿಸಲು ಟ್ರಸ್ಟ್‌ನ ಮನವೊಲಿಸಲು ಸರ್ಕಾಕ್ಕೆ ಅವಕಾವಶವಿದೆ. ಆದರೆ, ಪ್ರಾಥಮಿಕವಾಗಿ ವೆಚ್ಚ ಭರಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.
ಅಕ್ಟೋಬರ್ 17 ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಿದೆ.
ಸಾರ್ವತ್ರಿಕ ಸಬಲೀಕರಣಕ್ಕೆ ಜಾತಿ ಜನಗಣತಿ ನನ್ನ ಬಹುಕಾಲದ ಬೇಡಿಕೆಯಾಗಿದೆ: ರಾಮದಾಸ್ ಅಠಾವಳೆ


