ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) 2016 ರಲ್ಲಿ ನೇಮಕ ಮಾಡಿದ್ದ ಸುಮಾರು 25,000 ( 25,753) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ಅಮಾನ್ಯಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು (ಏಪ್ರಿಲ್ 3) ಎತ್ತಿಹಿಡಿದಿದೆ.
“ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ವಂಚನೆಯಿಂದ ಕೂಡಿದ್ದು, ಸರಿಪಡಿಸಲಾಗದಷ್ಟು ಕಲುಷಿತಗೊಂಡಿದೆ” ಎಂಬ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
ಶಾಲೆಗಳಲ್ಲಿನ ನೇಮಕಾತಿಗಳನ್ನು ರದ್ದುಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠ ತೀರ್ಪು ಪ್ರಕಟಿಸಿದೆ.
“ಇಡೀ ನೇಮಕಾತಿ ಪ್ರಕ್ರಿಯೆ ಸರಿಪಡಿಸಲಾಗದಷ್ಟು ಕಲುಷಿತಗೊಂಡಿದೆ. ನೇಮಕಾತಿಯಲ್ಲಿ ದೊಡ್ಡ ಮಟ್ಟದ ವಂಚನೆ ನಡೆದಿದೆ. ಅದನ್ನು ಮುಚ್ಚಿ ಹಾಕಲು ಇಡೀ ಆಯ್ಕೆ ಪ್ರಕ್ರಿಯೆಯನ್ನು ಹಾಳುಗೆಡವಲಾಗಿದೆ. ಆಯ್ಕೆ ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ನಗ್ನಗೊಳಿಸಿದೆ” ಎಂದು ತೀರ್ಪು ಪ್ರಕಟಿಸುತ್ತಾ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದ್ದಾರೆ.
“ತಪ್ಪಿತಸ್ಥ ಅಭ್ಯರ್ಥಿಗಳ ನೇಮಕಾತಿ ರದ್ದುಮಾಡಿ, ಅವರನ್ನು ಪಡೆದಿರುವ ಸಂಬಳವನ್ನು ವಾಪಸ್ ಪಡೆದುಕೊಳ್ಳಬೇಕು ಎಂಬ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಸೂಕ್ತ ಕಾರಣ ಕಾಣುತ್ತಿಲ್ಲ. ನೇಮಕಾತಿ ವಂಚನೆಯಿಂದ ಕೂಡಿರುವುದರಿಂದ ಅದನ್ನು ಸಮರ್ಥಿಸುವ ಅಗತ್ಯತೆ ಇಲ್ಲ” ಎಂದಿದ್ದಾರೆ.
“ಸಂವಿಧಾನದ 14 ಮತ್ತು 16 ನೇ ವಿಧಿಯನ್ನು ಉಲ್ಲಂಘಿಸಿದ ಮತ್ತು ಅಕ್ರಮಗಳ ಕಾರಣ ನಿರ್ದಿಷ್ಟವಾಗಿ ಕಳಂಕಿತ ಅಭ್ಯರ್ಥಿಗಳ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ಅನೂರ್ಜಿತವೆಂದು ಘೋಷಿಸಲಾಗಿದೆ. ಹೀಗಾಗಿ, ಈ ಅಭ್ಯರ್ಥಿಗಳ ನೇಮಕಾತಿಗಳನ್ನು ರದ್ದುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ಅದಾಗ್ಯೂ, ಈಗಾಗಲೇ ನೇಮಕಗೊಂಡ ಅಭ್ಯರ್ಥಿಗಳಿಗೆ ಇದುವರೆಗೆ ಪಾವತಿಸಿದ ಸಂಬಳವನ್ನು ವಾಪಸ್ ಪಡೆಯುವ ಅಗತ್ಯವಿಲ್ಲ. ಆದರೆ, ಅಭ್ಯರ್ಥಿಗಳ ವಜಾ ಬಳಿಕ, ಆ ಹುದ್ದೆಯನ್ನು ಖಾಲಿ ಹುದ್ದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದ್ದಾರೆ.
ಹೊಸ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಮತ್ತು ಹೊಸ ಪ್ರಕ್ರಿಯೆಯಲ್ಲಿ ಕಳಂಕರಹಿತ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ನಿರ್ದೇಶಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ವಿಶೇಷ ರಜಾ ಅವಧಿಯ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 4 ರಂದು ನಡೆಸಲು ನ್ಯಾಯಪೀಠ ನಿರ್ಧರಿಸಿದೆ.
ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬ ಷರತ್ತಿನೊಂದಿಗೆ ಹೈಕೋರ್ಟ್ ಆದೇಶಿಸಿದ ಸಿಬಿಐ ತನಿಖೆಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು.
ಏಪ್ರಿಲ್ 22, 2024ರಂದು, ಕಲ್ಕತ್ತಾ ಹೈಕೋರ್ಟ್ ಎಸ್‌ಎಸ್‌ಸಿಯಿಂದ 25,753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯನ್ನು ರದ್ದುಗೊಳಿಸಿ, ಅವರು ಪಡೆದಿರುವ ಸಂಬಳವನ್ನು ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಆದೇಶಿಸಿತ್ತು. 15 ದಿನಗಳಲ್ಲಿ ಹುದ್ದೆಗಳಿಗೆ ಹೊಸ ನೇಮಕಾತಿಗೆ ಆದೇಶಿಸಿತ್ತು.
ನ್ಯಾಯಮೂರ್ತಿ ದೇಬಾಂಗ್ಸು ಬಸಕ್ ನೇತೃತ್ವದ ಪೀಠವು, 2016 ರಲ್ಲಿ ಗ್ರೂಪ್ ಸಿ, ಗ್ರೂಪ್ ಡಿ, 9 ಮತ್ತು 10 ನೇ ತರಗತಿಗಳ ಒಎಂಆರ್ ಶೀಟ್‌ಗಳಲ್ಲಿ ವಂಚನೆ ಮಾಡಲಾಗಿದೆ ಎಂದು ಹೇಳಿತ್ತು. ಎಲ್ಲಾ ನೇಮಕಾತಿಗಳು ಕಾನೂನುಬಾಹಿರ ಎಂದು ಎಂದಿತ್ತು. ನೇಮಕಾತಿ ಮಾಡಿಕೊಂಡವರ ಹೆಸರುಗಳನ್ನೂ ಕಾನೂನುಬಾಹಿರವಾಗಿ ಬೋರ್ಡ್‌ನಲ್ಲಿ ಸೇರಿಸಲಾಗಿದೆ ಎಂದು ಹೇಳಿತ್ತು.


