ಸುಪ್ರೀಂಕೋರ್ಟ್ ತೀರ್ಪಿನ ನಂತರ ಡಿಸೆಂಬರ್ 6 ರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭಿಸುತ್ತೇವೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿಕೆ ನೀಡಿದ್ದಾರೆ.
“ರಾಮ್ ದೇವಾಲಯದ ನಿರ್ಮಾಣವು ಡಿಸೆಂಬರ್ 6 ರಿಂದ ಮೊದಲು ಪ್ರಾರಂಭವಾಗಲಿದೆ. 150 ವರ್ಷಗಳಿಂದ ಬಾಕಿ ಉಳಿದಿರುವ ವಿಷಯವನ್ನು 40 ದಿನಗಳ ಕಾಲ ತಡೆರಹಿತವಾಗಿ ವಿಚಾರಣೆ ನಡೆಸಿರುವ ಕಾರಣ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಎರಡೂ ಕಡೆಯ ವಾದವಿವಾದಗಳನ್ನು ಗಂಭೀರವಾಗಿ ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದ್ದಾರೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

“ಪುರಾತತ್ತ್ವ ಶಾಸ್ತ್ರ ಇಲಾಖೆಯು ತನ್ನ ಸತ್ಯ ಸಂಗತಿಗಳನ್ನು ಮಂಡಿಸಿದೆ. ಅಲ್ಲಿ ದೇವಾಲಯವನ್ನು ನಿರ್ಮಿಸಬೇಕು ಎಂದು ಶಿಯಾ ಮಂಡಳಿ ಲಿಖಿತವಾಗಿ ನೀಡಿದೆ. ಅದೇ ರೀತಿ, ವಿಚಾರಣೆ ಮುಗಿಯುವ ಹೊತ್ತಿಗೆ ಸುನ್ನಿ ಮಂಡಳಿಯು ದೇವಾಲಯದ ಪರವಾಗಿ ಮಾತನಾಡಲಿದೆ” ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.
ಇನ್ನು ತೀರ್ಪು ಬಂದಿಲ್ಲವಲ್ಲ ಎಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು “ಶೀಘ್ರದಲ್ಲೇ ನಾವು ಸುಪ್ರೀಂ ಕೋರ್ಟ್‌ನಿಂದ ತೀರ್ಪು ಪಡೆಯುತ್ತೇವೆ ಮತ್ತು ಅದು ರಾಮಮಂದಿರದ ಪರವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನಾವು ಡಿಸೆಂಬರ್ 6 ರಿಂದ ಇದರ ನಿರ್ಮಾಣ ಪ್ರಾರಂಭ ಮಾಡುತ್ತೇವೆ” ಎಂದು ಹೇಳಿದರು. 1992 ರ ಡಿಸೆಂಬರ್ 6 ರಂದು ಅಲ್ಲಿದ್ದ ಬಾಬರಿ ಮಸೀದಿ ರಚನೆಯನ್ನು ಕರಸೇವಕರು ಕೆಡವಿದ್ದರು.
ಪ್ರಕರಣದ ವಿಚಾರಣೆಯ ಅಂತಿಮ ದಿನದಂದು ಮುಸ್ಲಿಂ ಪಕ್ಷಗಳು ತಮ್ಮ ಮನವಿಯನ್ನು ಹಿಂತೆಗೆದುಕೊಂಡಿವೆ ಎಂಬ ವರದಿಗಳು ಬಂದವು. ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸುವುದರೊಂದಿಗೆ ಉನ್ನತ ಮಟ್ಟದ ಪ್ರಕರಣದ ವಾದಗಳು ಬುಧವಾರ ಮುಕ್ತಾಯಗೊಂಡಿವೆ.


