ಗುಜರಾತ್‌ನ ಸೂರತ್ ನಗರದ ಪಾಲ್ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತದ ಅವಶೇಷಗಳಿಂದ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಅವಶೇಷಗಳಡಿ ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 2016-17ರಲ್ಲಿ ನಿರ್ಮಿಸಲಾಗಿದ್ದ ಕಟ್ಟಡ ಶನಿವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದಾರೆ.
ಸೂರತ್ ಡಿಸಿಪಿ ರಾಜೇಶ್ ಪರ್ಮಾರ್ ಮಾತನಾಡಿ, “12 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ; ಒರ್ವ ಮಹಿಳೆಯನ್ನು ರಕ್ಷಿಸಲಾಗಿದೆ ಮತ್ತು ಏಳು ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ನಾವು ಅವಶೇಷಗಳನ್ನು ತೆರವುಗೊಳಿಸುತ್ತಿದ್ದೇವೆ” ಎಂದು ಹೇಳಿದರು.
ಈ ನಡುವೆ, ಎನ್‌ಡಿಆರ್‌ಎಫ್ ಇನ್ಸ್‌ಪೆಕ್ಟರ್ ಬಾಬುಲಾಲ್ ಯಾದವ್ ಅವರು ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಇನ್ನೂ ಎಷ್ಟು ಜನ ಸಿಕ್ಕಿಬಿದ್ದಿರಬಹುದು ಎಂಬುದನ್ನು ನಿರ್ದಿಷ್ಟಪಡಿಸಲು ಸಾಧ್ಯವಾಗುತ್ತಿಲ್ಲ, ಆದರೆ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು.
ಘಟನೆಯ ನಂತರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಅಗ್ನಿಶಾಮಕ ದಳದ ತಂಡಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಸೂರತ್‌ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್, “ಶನಿವಾರ ಮಧ್ಯಾಹ್ನ 3:55 ರ ಸುಮಾರಿಗೆ ಐದು ಅಂತಸ್ತಿನ ಕಟ್ಟಡ ಕುಸಿದಿರುವ ಬಗ್ಗೆ ಸೂರತ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಮಾಹಿತಿ ಬಂದಿತು. ಸುಮಾರು 20 ಅಗ್ನಿಶಾಮಕ ಅಧಿಕಾರಿಗಳು ಆಡಳಿತದೊಂದಿಗೆ ಧಾವಿಸಿದರು. ನಾವು ರಾತ್ರಿಯಿಡೀ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದೇವೆ” ಎಂದರು.
ಇನ್ನು ಯಾವುದೇ ವ್ಯಕ್ತಿಗಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪರೀಕ್ ತಿಳಿಸಿದ್ದಾರೆ. ಆದರೆ, ಅವಶೇಷಗಳನ್ನು ತೆಗೆಯುವ ಕಾರ್ಯಾಚರಣೆ ಮುಂದುವರಿಯಲಿದೆ.
ಅವಶೇಷಗಳನ್ನು ತೆಗೆಯುವ ಕಾರ್ಯಾಚರಣೆ ಮುಂದುವರಿದಿದ್ದು, ಒಳಗೆ ಬೇರೆಯವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನಾವು ಭಾವಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಐದು ಫ್ಲಾಟ್‌ಗಳಲ್ಲಿ, ಮುಖ್ಯವಾಗಿ ಆ ಪ್ರದೇಶದಲ್ಲಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ವಾಸಿಸುತ್ತಿದ್ದರು.
ಇದನ್ನೂ ಓದಿ; ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಪಡೆದ ಹಣ ಮುಟ್ಟುಗೋಲು ಹಾಕಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ


