ಆನೇಕಲ್: ತಾಲೂಕಿನ ಸರ್ಜಾಪುರದಲ್ಲಿ ಸರಕಾರದ ಆದೇಶದ ಮೇರೆಗೆ ಖಾಸಗಿ ಸರ್ವೇಯರ್ ಗಳು ಸರ್ವೆಗೆ ಬಂದ ಸಂದರ್ಭದಲ್ಲಿ ರೈತರು ಅವರ ಡ್ರೋನ್ ಕ್ಯಾಮೆರಾ, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳಿಗೆ ಬೆಂಕಿಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿರ್ಮಿಸಲು ಉದ್ದೇಶಿಸಿರುವ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಾದ ಭೂಮಿಯನ್ನು ಸರ್ವೆ ಮಾಡಲು ಸೋಮವಾರ ತಾಲ್ಲೂಕಿನ ಹಂದೇನಹಳ್ಳಿ ಗ್ರಾಮಕ್ಕೆ ಬಂದಿದ್ದ ಖಾಸಗಿ ಸಂಸ್ಥೆಯ ಪ್ರತಿನಿಧಿಗಳ ಡ್ರೋನ್ ಮತ್ತು ಲ್ಯಾಪ್‌ಟಾಪ್‌ಗೆ ರೈತರು ಬೆಂಕಿ ಹಚ್ಚಿದ್ದಾರೆ. ಹಂದೇನಹಳ್ಳಿ ಮತ್ತು ಮೇಡಹಳ್ಳಿ ಗ್ರಾಮಗಳ 700 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೈಗಾರಿಕ ಪ್ರದೇಶ ಸ್ಥಾಪನೆಗೆ ಕೆಐಎಡಿಬಿ ಈಚೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.
ಕೃಷಿ ಜಮೀನುಗಳ ಸರ್ವೇಗೆ ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಡ್ರೋನ್ ಮತ್ತು ಲ್ಯಾಪ್‌ಟಾಪ್ ಜೊತೆ ಬಂದಿದ್ದರು. ಗ್ರಾಮ ಪ್ರವೇಶಿಸದಂತೆ ತಡೆಯೊಡ್ಡಿದ ರೈತರು, ಅವರಿಂದ ಡ್ರೋನ್ ಮತ್ತು ಲ್ಯಾಪ್‌ಟ್ಯಾಪ್ ಕಿತ್ತುಕೊಂಡು ಬೆಂಕಿ ಹಚ್ಚಿದರು. ನಂತರ ಬಡಿಗೆ ಮತ್ತು ದೊಣ್ಣೆಗಳೊಂದಿಗೆ ಅಡ್ಡಲಾಗಿ ನಿಂತು ಸರ್ವೆ ಕಾರ್ಯ ಮಾಡದಂತೆ ತಡೆದು ವಾಪಸ್ ಕಳಿಸಿದರು.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆಸೂರ್ಯ ಸಿಟಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂಜಯ್ ಮಹಾಜನ್ ಆಗಮಿಸಿ ರೈತರ ಮನವೊಲಿಸಲು ಮುಂದಾದರೂ ವಿಫಲರಾದರು. ಬಳಿಕ ಡಿವೈಎಸ್ಪಿ ಮೋಹನ್ ಆಗಮಿಸಿ, ಪ್ರತಿಭಟನೆ ಕೈಬಿಡಲು ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ರೈತರು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಸಮಸ್ಯೆಯನ್ನು ಆಲಿಸಬೇಕು ಎಂದು ಪಟ್ಟು ಹಿಡಿದರು. ನಂತರ ಡಿವೈಎಸ್ಪಿ ಮೋಹನ್ ಅವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದದು, ಜ.10ರಂದು ಅನೇಕಲ್ ತಾಲೂಕಿಗೆ ಬರುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ರೈತ ಮುಖಂಡರಾದ ಕೇಶವರೆಡ್ಡಿ, ನಾಗೇಶ್, ಅಂಬರೀಷ್, ಮುನಿಯಲ್ಲಪ್ಪ, ಶ್ರೀನಿವಾಸರೆಡ್ಡಿ, ವೇಣು ಮೊದಲಾದವರು ಭಾಗವಹಿಸಿದ್ದರು.


