Homeಕರ್ನಾಟಕಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಹಳಿಯಾಳ-ಜೋಯಿಡಾ: ತಡವಾದ ಅಭಿವೃದ್ಧಿ; ಸಾಮ್ರಾಜ್ಯ ಉಳಿಸಿಕೊಳ್ಳುವರಾ ದೇಶಪಾಂಡೆ?

ಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಹಳಿಯಾಳ-ಜೋಯಿಡಾ: ತಡವಾದ ಅಭಿವೃದ್ಧಿ; ಸಾಮ್ರಾಜ್ಯ ಉಳಿಸಿಕೊಳ್ಳುವರಾ ದೇಶಪಾಂಡೆ?

- Advertisement -
- Advertisement -

ಅಪ್ಪಟ ಮಲೆನಾಡು ಮತ್ತು ಅರೆ ಬಯಲು ಸೀಮೆ ಪರಿಸರದ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರ ಕೃಷಿಕರ-ಕಾಡು ಅವಲಂಬಿತ ವಿವಿಧ ಬುಡಕಟ್ಟು ಜನಾಂಗಗಳ ಪ್ರದೇಶ. ಒಂದು ಕಾಲದಲ್ಲಿ ಕೈಗಾರಿಕಾ ನಗರವೆನಿಸಿದ್ದ ದಾಂಡೇಲಿ ಈ ಕ್ಷೇತ್ರದಲ್ಲಿದೆ. ಕ್ಷೇತ್ರದ ಶಾಸಕ ಆರ್.ವಿ ದೇಶಪಾಂಡೆ ಕೈಗಾರಿಕಾ ಮಂತ್ರಿಯಾಗಿದ್ದ ಸಮಯದಲ್ಲಿಯೇ ಕಾಸ್ಮೊಪಾಲಿಟನ್ ನಗರ ದಾಂಡೇಲಿಯ ಕೈಗಾರಿಕೆಗಳು ಒಂದೊಂದಾಗಿ ನಶಿಸಿದ್ದು ವಿಪರ್ಯಾಸ. ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಎರಡು ತಾಲೂಕುಗಳ ಯುವಕ-ಯುವತಿಯರು ಉದ್ಯೋಗಕ್ಕಾಗಿ ಪಕ್ಕದ ಧಾರವಾಡ, ಹುಬ್ಬಳ್ಳಿ, ಗೋವಾ, ಬೆಳಗಾವಿಗೆ ವಲಸೆ ಹೋಗುತ್ತಿದ್ದಾರೆ.

ಸಾಮಾಜಿಕ ಸಂಕಷ್ಟ!

ಈ ಕನ್ನಡದ ನೆಲದಲ್ಲಿ ಮರಾಠಿ ಮತ್ತು ಕೊಂಕಣಿ ಪ್ರಭಾವ ಜಾಸ್ತಿ! ಹಳಿಯಾಳದಲ್ಲಿ ಮರಾಠಿ ವ್ಯಾವಹಾರಿಕ ಭಾಷೆಯಾದರೆ, ಜೋಯಿಡಾದಲ್ಲಿ ಬಹುತೇಕ ಸಂವಹನ ನಡೆಯುವುದೆ ಕೊಂಕಣಿಯಲ್ಲಿ. ಗೋವಾ ಗಡಿಯಲ್ಲಿರುವ ಜೋಯಿಡಾದಲ್ಲಿ ಗಡಿನಾಡು ಅಭಿವೃದ್ಧಿ ಮಂಡಳಿಯ ಹಣ ಪೋಲಾಗುತ್ತಿದೆಯೆ ವಿನಃ ಕನ್ನಡ ಬೆಳೆಯುತ್ತಿಲ್ಲ ಎಂಬ ಆರೋಪ ಜೋರಾಗಿ ಕೇಳಿಬರುತ್ತಿದೆ. ಹಳಿಯಾಳದ ಹಳ್ಳಿಗಳಲ್ಲಿ ಮುಕ್ಕಾಲು ಪಾಲಿಗಿಂತ ಹೆಚ್ಚು ಮರಾಠರಿದ್ದಾರೆ. ಕಾಡಿನಲ್ಲಿ ಬುಡಕಟ್ಟು ಗೌಳಿ, ಸಿದ್ದಿ ಸಮುದಾಯದವರಿದ್ದಾರೆ. ದಾಂಡೇಲಿ ಕಡೆಯಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರಿದ್ದಾರೆ. ಜೋಯಿಡಾ ಭಾಗದಲ್ಲಿ ಗುಡ್ಡಗಾಡು ಕುಣಬಿ ಹಾಗು ಕ್ರಿಶ್ಚಿಯನ್ ಜನರಿದ್ದಾರೆ. ಪಕ್ಕದ ಗೋವಾ ರಾಜ್ಯದಲ್ಲಿ ಕುಣಬಿಗಳಿಗೆ ಪರಿಶಿಷ್ಟ ಮೀಸಲಾತಿ ಕೊಡಲಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಉತ್ತರ ಕನ್ನಡದ ಕುಣಬಿಗಳು ಮೀಸಲಾತಿಗಾಗಿ ಹೋರಾಡುತ್ತಿದ್ದರೂ ಆಳುವವರು ಇನ್ನೂ ಕಣ್ಣು ತೆರೆದಿಲ್ಲ!

ಮಾರ್ಗರೆಟ್ ಆಳ್ವ

ಶೋಷಣೆಗೊಳಗಾಗುತ್ತಿರುವ ನಗರದ ಗೌಳಿಗಳ ಗೋಳಂತು ಹೇಳತೀರದಾಗಿದೆ. ಸಂಘ ಪರಿವಾರದ ವನವಾಸಿ ಕಲ್ಯಾಣ ಸಮಿತಿ ಕಾಡಿನ ಬುಡಕಟ್ಟು ಸಮುದಾಯದ ನಡುವೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಸಿದ್ಧಿ ಜನಾಂಗದಲ್ಲಿರುವ ಹಿಂದು-ಮುಸ್ಲಿಮ್-ಕ್ರಿಶ್ಚಿಯನ್ ಪ್ರಭೇದಗಳನ್ನು ತನ್ನ ಅವಕಾಶಕ್ಕೆ ಬಳಸಿಕೊಳ್ಳುತ್ತಿದೆ. ಉತ್ತರ ಕನ್ನಡದ ಎಂಪಿಯಾಗಿದ್ದ ಮಾರ್ಗರೆಟ್ ಆಳ್ವರ ಪ್ರಯತ್ನದಿಂದ ಸಿದ್ಧಿ ಜನಾಂಗಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಸಿಕ್ಕಿದೆ. ಈ ಮೀಸಲಾತಿ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಿದ್ಧಿಗಳಿಗೆ ಕೊಡಬಾರದೆಂದು ಸಂಘ ಪರಿವಾರದ ಸಂಘಟನೆಗಳು ಹೇಳುತ್ತಿವೆ. ವನವಾಸಿ ಕಲ್ಯಾಣ ಸಂಘದಲ್ಲಿ ಸಕ್ರಿಯವಾಗಿದ್ದ ಶಾಂತಾರಾಮ ಸಿದ್ಧಿಯವರನ್ನು ಬಿಜೆಪಿ ಎಮ್ಮೆಲ್ಸಿ ಮಾಡಿದೆ. ಇದರಿಂದ ತಮಗೇನೂ ಪ್ರಯೋಜನ ಆಗುತ್ತಿಲ್ಲವೆಂದು ಸಿದ್ದಿ ಜನಾಂಗದವರು ಹೇಳುತ್ತಾರೆ. ತಲತಲಾಂತರದಿಂದ ಉಳುಮೆ ಮಾಡುತ್ತಿರುವ ಹಾಗೂ ತಾವು ಸೂರು ಕಟ್ಟಿಕೊಂಡು ಜೀವಿಸುತ್ತಿರುವ ಅರಣ್ಯ ಭೂಮಿಯ ಒಡೆತನವನ್ನು ಬುಡಕಟ್ಟು ಮಂದಿ ಕೇಳುತ್ತಿದ್ದಾರೆ. ಆದರೆ ಈ ಅಮಾಯಕರ ಮೇಲೆ ಅರಣ್ಯ ಇಲಾಖೆ ನಿರ್ದಯವಾಗಿ ದಂಡ ಪ್ರಯೋಗಿಸುತ್ತಿದೆಯೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಮುಂದಾಳು ರವೀಂದ್ರ ನಾಯ್ಕ್ ಆಕ್ರೋಶ ವ್ಯಕ್ತಪಡಿಸುತ್ತಾರೆ

ರಾಜಕೀಯ ಇತಿಹಾಸ

ಮೊದಲು ಹಳಿಯಾಳದ ಜತೆ ಮುಂಡಗೋಡವನ್ನು ಸೇರಿಸಲಾಗಿತ್ತು. 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಮುಂಡಗೋಡನ್ನು ತೆಗೆದು ಜೋಯಿಡಾದೊಂದಿಗೆ ಹಳಿಯಾಳ ಕ್ಷೇತ್ರ ರಚಿಸಲಾಗಿದೆ. ಹಳಿಯಾಳ ತಾಲೂಕಿನಲ್ಲಿ 75,000ದಷ್ಟು ಮರಾಠರಿರುವುದರಿಂದ ಹಳಿಯಾಳ ವಿಧಾನಸಭಾ ಕ್ಷೇತ್ರ ಯಾವಾಗಲೂ ಮರಾಠ ಪ್ರಾಬಲ್ಯದ ಕ್ಷೇತ್ರ. ಮುಸ್ಲಿಮರು 35,000 ಇದ್ದರೆ, ಕ್ರಿಶ್ಚಿಯನ್ನರು 10,000 ಇದ್ದಾರೆ. ಉಳಿದಂತೆ 10,000 ಲಿಂಗಾಯತರು, 10,000 ಒಟ್ಟಾಗಿ ಸಿದ್ದಿ, ಗೌಳಿ, ಕುಣಬಿಗಳಿದ್ದಾರೆ. ದಲಿತರು, ಕಮ್ಮಾರ ಮುಂತಾದ ಹಿಂದುಳಿದ ಸಮುದಾಯ ಗಣನೀಯ ಸಂಖ್ಯೆಯಲ್ಲಿದ್ದಾರೆ. ಸೋಜಿಗದ ಸಂಗತಿಯೆಂದರೆ ಮರಾಠರು ನಿರ್ಣಾಯಕರಾಗಿದ್ದರು ಇಲ್ಲಿಂದ ಮರಾಠೇತರರೆ ಹೆಚ್ಚು ಬಾರಿ ಶಾಸಕರಾಗಿದ್ದಾರೆ.

ಸೂಕ್ಷ್ಮದರ್ಶಕ ಹಿಡಿದು ಹುಡಕಬೇಕಿರುವ ಬ್ರಾಹ್ಮಣ ಮತ್ತು ಕೊಂಕಣಿ ಸಮುದಾಯದವರು ಇಲ್ಲಿಂದ ಸಾಕಷ್ಟು ಬಾರಿ ಎಂಎಲ್‌ಎ ಆಗಿರುವುದಕ್ಕೆ, ಕ್ಷೇತ್ರದಲ್ಲಿನ ರಾಜಕೀಯ ಪ್ರಜ್ಞೆಯ ಕೊರತೆ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದು ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಶಿರಸಿ ಮೀಸಲು ಕ್ಷೇತ್ರವಾಗಿ ಬದಲಾದಾಗ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಹಳಿಯಾಳದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. ಕೊಂಕಣಿ ಜಾತಿಯ ಆರ್.ಜಿ ಕಾಮತ್ ಒಮ್ಮೆ ಶಾಸಕರಾಗಿದ್ದರು. 1972 ಮತ್ತು 1978ರಲ್ಲಿ ಮರಾಠ ಜನಾಂಗದ ವಿ.ಎಂ ಘಾಡಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಘಾಡಿ ಮರಾಠ ನಾಯಕತ್ವ ಬೆಳೆಸಲಿಲ್ಲ; ತಾನು ಮರಾಠರ ನಂಬಿಗಸ್ಥ ಮುಂದಾಳಾಗಿ ರೂಪುಗೊಳ್ಳಲಿಲ್ಲವೆಂದು ಮರಾಠ ಸಮುದಾಯದವರು ಹೇಳುತ್ತಾರೆ.

ಹಳಿಯಾಳ ಜೊಯಿಡಾದ ಕ್ಷೇತ್ರ ಸಮೀಕ್ಷೆಯ ವಿಡಿಯೋ ನೋಡಿ

ಆಲದಮರದಂತೆ ಹಬ್ಬಿರುವ ದೇಶಪಾಂಡೆ

1983ರಲ್ಲಿ ರಾಜ್ಯಾದ್ಯಂತ ಬೀಸಿದ್ದ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಆರ್.ವಿ ದೇಶಪಾಂಡೆ ಗೆದ್ದರು. ಅಂದಿನಿಂದ 2004ರ ತನಕ ದೇಶಪಾಂಡೆ ಹಿಂದಿರುಗಿ ನೋಡಲೇ ಇಲ್ಲ. ಈ ಎರಡು ದಶಕದ ಅವಧಿಯಲ್ಲಿ ಎರಡು ಬಾರಿ ಜನತಾ ಪಕ್ಷ, ಎರಡು ಸಲ ಜನತಾ ದಳ ಮತ್ತು ಎರಡು ಅವಧಿಗೆ ಕಾಂಗ್ರೆಸ್‌ನಿಂದ ಶಾಸಕರಾಗಿದ್ದಾರೆ. ಮೊದಲ ಬಾರಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ದೇಶಪಾಂಡೆ ಅಂದು ಶಾಸಕರಾಗಿದ್ದ ಘಾಡಿ ಮಾಸ್ತರ್‌ರನ್ನು ಸುಲಭವಾಗಿ ಸೋಲಿಸಿದ್ದರು. 1985ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾಷಾ ಸಾಹೇಬ್ ಪ್ರಬಲ ಸ್ಪರ್ಧೆ ಒಡ್ಡಿದ್ದರು. 1989ರಲ್ಲಿ ಜನತಾದಳದ ಹುರಿಯಾಳಾಗಿದ್ದ ದೇಶಪಾಂಡೆ ಕಾಂಗ್ರೆಸ್‌ನಿಂದ ಎದುರಾಳಿಯಾಗಿದ್ದ ಮರಾಠ ಸಮುದಾಯದ ಎಸ್.ಕೆ ಗೌಡ ಎದುರು ತಿಣುಕಾಡಿ ಕೇವಲ 290 ಮತಗಳ ಅಂತರದಿಂದ ಬಚಾವಾಗಿದ್ದರು! ಆಗ ಮತ ಎಣಿಕೆಯಲ್ಲಿ ಅಕ್ರಮವಾಗಿದೆಯೆಂಬ ಆರೋಪ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ಪ್ರಭಾವಿ ನಾಯಕರಾಗಿದ್ದ ರಾಮಕೃಷ್ಣ ಹೆಗಡೆಯವರ ಪಟ್ಟ ಶಿಷ್ಯನೆಂಬ ಅಭಿದಾನ ಪಡೆದಿದ್ದ ದೇಶಪಾಂಡೆ ಪ್ರತಿಷ್ಠಿತ ಇಲಾಖೆಗಳ ಮಂತ್ರಿಯಾಗಿ ಮತ್ತು ಜಿಲ್ಲಾ ಉಸ್ತವಾರಿ ಸಚಿವರಾಗಿ ವರ್ಚಸ್ವಿ ರಾಜಕಾರಣಿಯಾಗಿ ಬೆಳದರು. ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದರು.

ವೀರಪ್ಪ ಮೊಯ್ಲಿ

1994ರಲ್ಲಿ ಮತ್ತೆ ದೇಶಪಾಂಡೆ-ಎಸ್.ಕೆ ಗೌಡ ಮುಖಾಮುಖಿಯಾಗಿದ್ದರು. ಆ ಚುನಾವಣೆಯಲ್ಲಿ ದೇಶಪಾಂಡೆ ದೊಡ್ಡ ಅಂತರದ (32,769) ಗೆಲುವು ಸಾಧಿಸಿದರು. ದೇವೇಗೌಡರ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಮಂತ್ರಿಯಾದರು. ದೇಶ-ವಿದೇಶದ ಉದ್ಯಮಿಗಳ ಸಂಪರ್ಕದಿಂದ ತಮ್ಮ ಚರಿಷ್ಮಾವನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿಕೊಂಡರೆನ್ನಲಾಗಿದೆ. ದೇವೇಗೌಡರು ಪ್ರಧಾನಿಯಾಗಿ ದಿಲ್ಲಿಗೆ ಹೋದಾಗ ಸಿಎಂ ಆಗಿದ್ದ ಜೆ.ಎಚ್ ಪಟೇಲ್ ಸರಕಾರದಲ್ಲೂ ದೇಶಪಾಂಡೆ ಮಹತ್ವದ ಬೃಹತ್ ಕೈಗಾರಿಕಾ ಮಂತ್ರಿಯಾಗಲು ಸಫಲರಾದರು. ಆದರೆ ರಾಮಕೃಷ್ಣ ಹೆಗಡೆಯವರನ್ನು ಜನತಾದಳದಿಂದ ಹೊರಹಾಕಿದಾಗ ದೇಶಪಾಂಡೆ ಅನಿವಾರ್ಯವಾಗಿ ಗುರುವಿನ ಜತೆ ಹೋಗಬೇಕಾಗಿ ಬಂತು. ಹೆಗಡೆಯಿಂದ ಅಂತರ ಕಾಯ್ದುಕೊಂಡಿದ್ದ ಶಿರಸಿಯ ಶಾಸಕ ಪಿ.ಎಸ್ ಜೈವಂತ್ ಅವರಿಗೆ ಮಂತ್ರಿಗಿರಿ ಒಲಿಯಿತು.

ಗುರು-ಶಿಷ್ಯರಲ್ಲಿ ವೈಮನಸ್ಸು!

ರಾಮಕೃಷ್ಣ ಹೆಗಡೆ ’ನವ ನಿರ್ಮಾಣ ವೇದಿಕೆ’ ಮತ್ತು ’ಲೋಕ ಶಕ್ತಿ’ ಸ್ಥಾಪಿಸಿದಾಗ ಉತ್ತರ ಕನ್ನಡದ ರಾಜಕಾರಣದಲ್ಲಾದ ಸ್ಥಿತ್ಯಂತರದಲ್ಲಿ ದೇಶಪಾಂಡೆ ಅಸ್ತಿತ್ವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ’ದೇಶಪಾಂಡೆ ನಿಮ್ಮನ್ನು ನಿರಂತರವಾಗಿ ಹೊಸಕಿ ಹಾಕುತ್ತಾ ಬಂದಿದ್ದಾರೆ; ಅವರಿಗೆ ಲೋಕಶಕ್ತಿ ಉಸ್ತುವಾರಿ ಕೊಡಕೂಡದು’ ಎಂದು ಜಿಲ್ಲೆಯಲ್ಲಿ ಹೆಗಡೆಯವರ ನಿಷ್ಠಾವಂತ ಸ್ವಜಾತಿ ಅನುಯಾಯಿಗಳು ದೂರುಕೊಟ್ಟಿದ್ದರು. ಜತೆಗೆ ಇನ್ನಿತರ ಹಲವು ಕಾರಣಗಳಿಂದ ಹೆಗಡೆಗೂ ದೇಶಪಾಂಡೆ ಮೇಲೆ ನಂಬಿಕೆ ಇಲ್ಲದಾಗಿತ್ತು. ಗುರು-ಶಿಷ್ಯರ ಸಂಬಂಧ ಹಳಸಿತು. ಅಂದು ಜಿಲ್ಲಾ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ್ದಮಾರ್ಗರೆಟ್ ಆಳ್ವ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ ಕೃಷ್ಣರ ಮೂಲಕ ದೇಶಪಾಂಡೆ ಕಾಂಗ್ರೆಸ್
ಸೇರಿದರು.

1999ರ ವಿಧಾನಸಭಾ ಚುನಾವಣೆಯಲ್ಲಿ ದೇಶಪಾಂಡೆ ಕಾಂಗ್ರೆಸ್ ಉಮೇದುದಾರರಾದರೆ, ಅವರ ಪರಂಪರಾಗತ ಎದುರಾಳಿ ಎಸ್.ಕೆ ಗೌಡ ಹೆಗಡೆ ಬೆಂಬಲಿತ ಜೆಡಿಯು ಅಭ್ಯರ್ಥಿಯಾಗಿದ್ದರು. ಕ್ಷೇತ್ರದಲ್ಲಿ ಬೇರುಬಿಟ್ಟಿದ್ದ ದೇಶಪಾಂಡೆ 13,824 ಮತಗಳ ಅಂತರದಿಂದ ಆಯ್ಕೆಯಾದರು. ಎಸ್.ಎಂ ಕೃಷ್ಣರ ಸಂಪುಟದಲ್ಲಿ ತಮ್ಮ ಇಷ್ಟದ ಬೃಹತ್ ಕೈಗಾರಿಕಾ ಖಾತೆಯನ್ನೇ ಪಡೆದುಕೊಂಡು ಸಚಿವರಾದರು. 2004ರಲ್ಲಿ ಬಿಜೆಪಿಯ ವಿ.ಎಸ್ ಪಾಟೀಲ್‌ರನ್ನು ಸೋಲಿಸಿದ ದೇಶಪಾಂಡೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಸಹಕಾರ ಸಚಿವಗಿರಿ ಪಡೆದುಕೊಂಡಿದ್ದರು.

ಸೋಲುಂಡ ದೇಶಪಾಂಡೆ!

ಸತತ ಆರು ಬಾರಿ ಶಾಸಕರಾಗಿದ್ದ ದೇಶಪಾಂಡೆಗೆ 2004ರಿಂದ 2008ರ ಅವಧಿಯಲ್ಲಿ ಸ್ಥಳೀಯವಾಗಿ ಪ್ರಬಲ ಪ್ರತಿರೋಧ ಎದುರಾಗತೊಡಗಿತ್ತು. ತಮ್ಮ ಪರಮಾಪ್ತ ಸ್ವಜಾತಿ ಮಿತ್ರನಾಗಿದ್ದ ವಿ.ಡಿ ಹೆಗಡೆ ಮತ್ತವರ ಮಗ ಸುನಿಲ್ ಹೆಗಡೆ ತಿರುಗಿಬಿದ್ದಿದ್ದರು. ವಿ.ಡಿ ಹೆಗಡೆಯವರನ್ನು ಸ್ಥಳೀಯಾಡಳಿತ ಸಂಸ್ಥೆಗಳಿಂದ ಎಮ್ಮೆಲ್ಸಿ ಮಾಡಿದ್ದ ದೇಶಪಾಂಡೆ ಎರಡನೆ ಬಾರಿ ಅವಕಾಶ ಕೊಡಲಿಲ್ಲ. ವಿ.ಡಿ ಈ ಸಿಟ್ಟಿನಲ್ಲಿ ದೇಶಪಾಂಡೆ ವಿರುದ್ಧ ಸ್ಪರ್ಧಿಸಲು ಮಗನನ್ನೆ ಅಣಿಗೊಳಿಸಿದರು. ದೇಶಪಾಂಡೆಯವರ ರಾಜಕಾರಣದ ಅಂಗಳದಲ್ಲೆ ಆಡೋಡಿ ಬೆಳೆದ ಸುನಿಲ್ 2008ರ ಚುನಾವಣಾ ಅಖಾಡದಲ್ಲಿ ಜೆಡಿಎಸ್ ಹುರಿಯಾಳಾಗಿ ಗುರುವಿನ ಎದುರು ನಿಂತು ತೊಡೆತಟ್ಟಿದರು. ಆ ವೇಳೆ ಕ್ಷೇತ್ರ ಪುನರ್ ವಿಂಗಡಣೆಯಾಗಿ ದೇಶಪಾಂಡೆ ಪ್ರಬಲ ಹಿಡಿತ ಹೊಂದಿದ್ದ ಮುಂಡಗೋಡ ಹಳಿಯಾಳದಿಂದ ಕಳಚಿಕೊಂಡಿತ್ತು. ಕಾರವಾರ ಕ್ಷೇತ್ರದೊಂದಿಗಿದ್ದ ದುರ್ಗಮ ಕಾಡು-ಕಣಿವೆಗಳ ಜೋಯಿಡಾ ಸೇರಿಸಲ್ಪಟ್ಟಿತ್ತು.

ಇದನ್ನೂ ಓದಿ: ಕರ್ನಾಟಕ ಚುನಾವಣಾ ರಾಜಕೀಯ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಯಲ್ಲಾಪುರ ರಣಕಣ: ಮಂತ್ರಿ ಹೆಬ್ಬಾರ್‌ಗೆ ಸೆಡ್ಡು ಹೊಡೆಯಲು ಸಿದ್ಧವಾಗಿದ್ದಾರೆಯೇ ಪ್ರಶಾಂತ…

ದೇಶಪಾಂಡೆ ಮತ್ತು ಸುನಿಲ್ ನಡುವೆ ಜಿದ್ದಾಜಿದ್ದಿನ ಕದನವೆ ನಡೆದುಹೋಯಿತು. ಸತತ ಆರು ಬಾರಿ ಗೆದ್ದಿದ್ದ ಹಳೆ ಹುಲಿ ದೇಶಪಾಂಡೆಯವರನ್ನು, ಅವರೆ ರಾಜಕೀಯವಾಗಿ ಸಾಕಿ ಬೆಳೆಸಿದ ಹುಡುಗ ಸುನಿಲ್ ಸೋಲಿಸಬಹುದೆಂದು ಯಾರೂ ಊಹಿಸಿರಲಿಲ್ಲ. ಸುನಿಲ್ ಹೆಗಡೆ 5,425 ಮತದಂತರದಿಂದ ಗುರುವನ್ನು ಮಣಿಸಿ ವಿಧಾನಸಭೆ ಪ್ರವೇಶಿದರು. ಇತ್ತ ಕಾಂಗ್ರೆಸ್ ಹೈಕಮಾಂಡ್ ಜತೆ ನಿಕಟ ಸಂಬಂಧವಿದ್ದ ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿ ಮತ್ತಷ್ಟು ಪ್ರಬಲರಾದರು.

ಸುನಿಲ್ ಹೆಗಡೆ

ಹಳಿಯಾಲದಲ್ಲಿ ಸೋತರೂ ದೇಶಪಾಂಡೆ ಕ್ಷೇತ್ರಕ್ಕೆ ಬೆನ್ನುಹಾಕಿ ಕೂರಲಿಲ್ಲ. ನಿಯಮಿತವಾಗಿ ಹಳಿಯಾಳ-ಜೋಯಿಡದಲ್ಲಿ ಓಡಾಡುತ್ತ ಜನರ ಸಂಪರ್ಕದಲ್ಲುಳಿದರು.

ಹೀಗಾಗಿ 2013ರಲ್ಲಿ ಸುನಿಲ್ ಹೆಗಡೆಯನ್ನು ಸೋಲಿಸಲು ದೇಶಪಾಂಡೆಗೆ ಸಾಧ್ಯವಾಯಿತು. ಸಿದ್ದು ಸರಕಾರದಲ್ಲೂ ದೇಶಪಾಂಡೆ ತಮ್ಮ ಅಚ್ಚುಮೆಚ್ಚಿನ ಬೃಹತ್ ಕೈಗಾರಿಕಾ ಖಾತೆಯನ್ನೇ ಪಡೆದರು. 2018ರಲ್ಲಿ ಸುನಿಲ್ ಹೆಗಡೆ ಬಿಜೆಪಿಯಿಂದ ಸ್ಪರ್ಧಿಸಿದರು. ಹಿಂದುತ್ವದ ಗಾಳಿಯಲ್ಲಿ ಸುನಿಲ್ ಗೆಲ್ಲುತ್ತಾರೆಂದು ಭಾವಿಸಲಾಗಿತ್ತು. ಆದರೆ ದೇಶಪಾಂಡೆ ದಿಗ್ವಿಜಯ ಸಾಧಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮಂತ್ರಿಯಾದರು. ದೇಶಪಾಂಡೆಯಷ್ಟು ಸುದೀರ್ಘ ಕಾಲ ಮಂತ್ರಿಯಾಗಿ ಅಧಿಕಾರ ಚಲಾಯಿಸಿದ ರಾಜಕಾರಣಿ ಉತ್ತರ ಕನ್ನಡದಲ್ಲಿ ಇನ್ಯಾರೂ ಇಲ್ಲ. ಆದರೆ ಅವರಿಗೆ ಜಿಲ್ಲೆಯ ಸಮರ್ಥ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲವೆಂಬ ಅಭಿಪ್ರಾಯವಿದೆ.

ದೇಶಪಾಂಡೆ ಸಾಧನೆ ಏನು?

1983ರಿಂದ 2008ರ ತನಕದ ಎರಡೂವರೆ ದಶಕದ ರಾಜಕಾರಣದಲ್ಲಿ ದೇಶಪಾಂಡೆ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕನಂತಹ ಸ್ಥಾನಮಾನ ಪಡೆದು ರಾಜ್ಯದಲ್ಲಿ ಪ್ರಬಲ ರಾಜಕಾರಣಿಯಾಗಿ ಗುರುತಿಸಿಕೊಂಡರೇನೊ ನಿಜ; ಆದರೆ ಕ್ಷೇತ್ರದ ಜನರ ಬೇಕುಬೇಡ, ಅಭಿವೃದ್ಧಿ, ಪ್ರಗತಿಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲವೆಂಬುದು ಸಾಮಾನ್ಯ ಅಭಿಪ್ರಾಯ. ಕೃಷಿ ಕಾಯಕದವರೆ ಪ್ರಧಾನವಾಗಿರುವ ಕ್ಷೇತ್ರದಲ್ಲಿ ರೈತರಿಗೆ ತಮ್ಮ ಹೊಲ ಹಸನು ಮಾಡುವ ಕುಮ್ಕಾನಟ್ಟಿ ನೀರಾವರಿ ಯೋಜನೆ, ಕಾಳಿ ನೀರಾವರಿ ಯೋಜನೆ, ಸಹಕಾರಿ ರಂಗದ ಸಕ್ಕರೆ ಕಾರ್ಖಾನೆ ಬೇಕಾಗಿತ್ತು. ದಾಂಡೇಲಿ ಭಾಗದ ಕೈಗಾರಿಕೆಗಳಿಗೆ ಉತ್ತೇಜನ, ಕುಡಿಯುವ ನೀರು-ರಸ್ತೆ-ಶಿಕ್ಷಣ-ಆರೋಗ್ಯದಂತ ಮೂಲ ಸೌಕರ್ಯಗಳಿಗಾಗಿ ಒತ್ತಾಯವಿತ್ತು. ದೇಶಪಾಂಡೆ ರಾಜ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುತ್ತಿದ್ದರಿಂದ ಇತ್ತ ಗಮನ ಹರಿಸಲಿಲ್ಲವೆನ್ನಲಾಗಿದೆ. ಒಂದಿಷ್ಟು ಮಾಮೂಲಿ ಬಜೆಟ್ ಕಾಮಗಾರಿಗಳನ್ನು ಬಿಟ್ಟರೆ ಜನರಿಗೆ ಅವಶ್ಯವಾದ ಯೋಜನೆಗಳು ಬರಲಿಲ್ಲ ಎಂದು ದೇಶಪಾಂಡೆ ಸಮಕಾಲೀನರು ಹೇಳುತ್ತಾರೆ.

ಕ್ಷೇತ್ರ ಕಡೆಗಣಿಸಿದ್ದರಿಂದ 2008ರಲ್ಲಿ ಸೋತ ದೇಶಪಾಂಡೆ 2013ರಲ್ಲಿ ಗೆದ್ದ ಬಳಿಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಂಭೀರವಾಗಿ ಯೋಚಿಸಲು ಆರಂಭಿಸಿದರೆನ್ನಲಾಗಿದೆ. 2013ರ ನಂತರ ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಕರೆಗಳು ಮತ್ತು ಬಾಂದಾರಗಳಿಗೆ ಕಾಳಿ ನೀರು ತುಂಬುವ ಯೋಜನೆ, ಮಲ್ಟಿ ವಿಲೇಜ್ ಕುಡಿಯುವ ನೀರು ಪ್ರಾಜೆಕ್ಟ್, ಪ್ರವಾಸೋದ್ಯಮದಲ್ಲಿ ಯಾತ್ರಿ ನಿವಾಸಗಳ ಸ್ಥಾಪನೆ, ಕೆರೆಗಳ ಮರುಪೂರಣ, ಹಳಿಯಾಳದಲ್ಲಿ ಖೇಲೋ ಇಂಡಿಯಾ ಯೋಜನೆಯಲ್ಲಿ ಒಳಾಂಗಣ ಕ್ರಿಡಾಂಗಣ ನಿರ್ಮಾಣ, ಖಾಸಗಿ ವಲಯದ ಸಕ್ಕರೆ ಕಾರ್ಖಾನೆ, ಬಸ್ ಸ್ಟ್ಯಾಂಡ್, ಬಸ್ ಡಿಪೊ, ಡಿಪ್ಲೊಮಾ ಕಾಲೇಜು ಕಟ್ಟಡ ಎರಡೂ ತಾಲೂಕುಗಳ ಹಳ್ಳಿಗಾಡಿನಲ್ಲಿ ರಸ್ತೆಗಳು, ದಾಂಡೇಲಿ ತಾಲೂಕು ರಚನೆಯಂಥ ಕೆಲಸ-ಕಾಮಗಾರಿ ಆಗಿದೆ.

ಈ ಅಭಿವೃದ್ಧಿ ಕೆಲಸಗಳು ದೇಶಪಾಂಡೆ ಮೇಲಿನ ಅಸಮಾಧಾನ ಕಡಿಮೆ ಮಾಡಿವೆ. ಆದರೆ ಪೂರ್ಣ ಪ್ರಮಾಣದ ಕಾಳಿ ನೀರಾವರಿ ಯೋಜನೆ ಆಗಬೇಕಾಗಿದೆ ಎಂದು ರೈತರು ಹೇಳುತ್ತಾರೆ. ಯುವಕರ ವಲಸೆ ತಪ್ಪಿಸುವಂಥ ಕೈಗಾರಿಕೆಗಳು ಬರಬೇಕು ಎಂಬ ಕೂಗಿದೆ. ಸಕ್ಕರೆ ಕಾರ್ಖಾನೆಗಳ ಮೋಸ-ಶೋಷಣೆ ನಿಲ್ಲಬೇಕು ಎಂದು ಕಬ್ಬು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ. ಕೆಎಲ್‌ಎಸ್ ಇಂಜಿನಿಯರಿಂಗ್ ಕಾಲೇಜಿನಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಿಲ್ಲ ಎಂಬ ಬೇಸರ ಹಳಿಯಾಳದಲ್ಲಿದೆ. ಜೋಯಿಡಾ ತಾಲೂಕಿನಲ್ಲಿ ವಿದ್ಯುತ್ ಇಲ್ಲದ, ಮಳೆಗಾಲದಲ್ಲಿ ನಾಗರಿಕ ಪ್ರಪಂಚದ ಸಂಪರ್ಕ ಕಳೆದುಕೊಳ್ಳುವ ಹಲವು ದುರ್ಗಮ ಹಳ್ಳಿಗಳಿವೆ. ಗೌಳಿ, ಕುಣಬಿಗಳ ಮೀಸಲಾತಿ ಬೇಡಿಕೆಗೆ ಆಳುವವರು ಸ್ಪಂದಿಸಬೇಕಿದೆ. ಅರಣ್ಯ ಅವಲಂಬಿಸಿ ಬದುಕು ಕಟ್ಟಿಕೊಂಡವರಿಗೆ ಅರಣ್ಯ ಇಲಾಖೆಯ ಹಿಂಸೆ ತಪ್ಪಬೇಕಿದೆ. ಜೋಯಿಡಾದ ಹಳ್ಳಿಗರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕಿದೆ. ಅಲ್ಲಿ ಕನ್ನಡ ಬಳಕೆ-ಬೆಳವಣಿಗೆಗೆ ಪ್ರಾಮುಖ್ಯತೆ ಸಿಗಬೇಕಾಗಿದೆ.

ಬಿಜೆಪಿ ತಂತ್ರಗಾರಿಕೆ

ಉತ್ತರ ಕನ್ನಡದ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಹಳಿಯಾಳದಲ್ಲಿ ಮಾತ್ರ ಈವರೆಗೆ ಬಿಜೆಪಿಗೆ ಗೆಲ್ಲಲಾಗಿಲ್ಲ; ಆರ್‌ಎಸ್‌ಎಸ್‌ನಲ್ಲಿ ಹಳಿಯಾಳ ಮೂಲದ ಘಟಾನುಘಟಿಗಳು ಇದ್ದಾರಾದರೂ ಬಿಜೆಪಿಗೆ ನೆಲೆ ಕಂಡುಕೊಳ್ಳಲಾಗಿಲ್ಲ. ಸಾಂಕೇತಿಕವಾಗಿ ಸ್ಪರ್ಧಿಸುತ್ತಿದ್ದ ಬಿಜೆಪಿಗೆ, ಜೆಡಿಎಸ್‌ನಿಂದ ಒಮ್ಮೆ ಶಾಸಕನಾಗಿದ್ದ ಸುನಿಲ್ ಹೆಗಡೆ ಸೇರಿದ ನಂತರ ಬಲ ಬಂದಿದೆ. ಮೊದಲ ಪ್ರಯತ್ನದಲ್ಲೆ ಗುರು ದೇಶಪಾಂಡೆಯನ್ನು ಸೋಲಿಸಿದ ದಾಖಲೆಯುಳ್ಳ ಸುನಿಲ್ ಹಿಂದಿನ ಎರಡು ಚುನಾವಣೆಗಳಲ್ಲಿ ಸಣ್ಣ ಅಂತರದಲ್ಲಿ ಎಡವಿದ್ದಾರೆ. 2018ರಲ್ಲಿ ಸೋತ ಮರುಕ್ಷಣದಿಂದಲೆ ಕ್ಷೇತ್ರ ಹದಮಾಡಿಕೊಳ್ಳಲು ಆರಂಭಿಸಿದ ಸುನಿಲ್, ಈಗಿತ್ತಲಾಗಿ ಮರಾಠ ಪ್ರಾಬಲ್ಯದ ಹಳ್ಳಿಗಳಲ್ಲಿ ಕೇಸರಿ ಪತಾಕೆ ಹಾರತೊಡಗಿರುವುದು ಹುರುಪು ಮೂಡಿಸಿದೆ. ಆದರೆ ದೇಶಪಾಂಡೆ ಜತೆ ನಿಕಟ ನಂಟಿರುವ ಬಿಜೆಪಿ-ಆರ್‌ಎಸ್‌ಎಸ್‌ನ ಸೂತ್ರಧಾರರಲ್ಲಿ ಕೆಲವರು ಸುನಿಲ್‌ಗೆ ಮುಳುವಾಗಲಿದ್ದಾರೆಂಬ ಮಾತು ಕೇಳಿಬರುತ್ತಿದೆ.

ಶಿವರಾಮ ಹೆಬ್ಬಾರ್

ಜೋಯಿಡಾ ಭಾಗದಲ್ಲಿ ದುರ್ಬಲವಾಗಿರುವ ಸುನಿಲ್‌ಗೆ ಹಳಿಯಾಳದಲ್ಲಿ ಮೂಲ ಬಿಜೆಪಿಗರಿಂದ ಸಹಕಾರ ಸಿಗುತ್ತಿಲ್ಲ ಎನ್ನಲಾಗಿದೆ. ಎಪ್ಪತ್ತೈದು ವರ್ಷದ ದೇಶಪಾಂಡೆ ತಮ್ಮ ವಯಸ್ಸನ್ನು ಲೆಕ್ಕಿಸದೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಮಗ ಪ್ರಶಾಂತನನ್ನು ಉತ್ತರಾಧಿಕಾರಿ ಮಾಡುವ ಯೋಚನೆಯಲ್ಲಿದ್ದದೇಶಪಾಂಡೆಯವರಿಗೆ, ತಮ್ಮ ಯೋಜನೆಗೆ ಪೂರಕ ಸ್ಪಂದನೆ ಸಿಗದಿದ್ದಾಗ ತಾವೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ತಮ್ಮ ಗರಡಿಯಲ್ಲಿ ಪಳಗಿದ ಮಾಜಿ ಎಮ್ಮೆಲ್ಸಿ ಎಸ್.ಎಲ್ ಘೋಟನೇಕರ್ ತಿರುಗಿಬಿದ್ದಿರುವುದು ಒಂಚೂರು ಡಿಸ್ಟರ್ಬ್ ಮಾಡಿದಂತಿದೆ. ದೇಶಪಾಂಡೆ ಎರಡು ಬಾರಿ ಮುತುವರ್ಜಿ ವಹಿಸಿ ಸ್ಥಳೀಯಾಡಳಿತ ಸಂಸ್ಥೆ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಕಳಿಸಿದ ಅವರ ಪರಮಾಪ್ತ ಘೋಟನೇಕರ್ ಈ ಬಾರಿ ತನಗೆ ಅಸೆಂಬ್ಲಿ ಟಿಕೆಟ್ ಬೇಕೆನ್ನುತ್ತಿರುವುದು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ.

ಸಚಿವ ಶಿವರಾಮ ಹೆಬ್ಬಾರ್ ಹಾಗು ಘೋಟನೇಕರ್ ಪರಮಾಪ್ತ ಮಿತ್ರರು. ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದಾಗ ಘೋಟನೇಕರ್, ಅಂದು ಶಾಸಕರಾಗಿದ್ದ ಸತೀಶ್ ಸೈಲ್ ಮತ್ತು ಮಂಕಾಳ ವೈದ್ಯರನ್ನು ಸೇರಿಸಿಕೊಂಡು ದೇಶಪಾಂಡೆ ವಿರುದ್ಧ ’ಸಿಂಡಿಕೇಟ್’ ಕಟ್ಟಿದ್ದರು. ಹೆಬ್ಬಾರ್‌ರ ಮೂಲಕ ಘೋಟನೇಕರ್ ಬಿಜೆಪಿ ಸೇರಿ ಕ್ಯಾಂಡಿಡೇಟ್ ಆಗುವ ಪ್ರಯತ್ನ ನಡೆಸಿದ್ದಾರೆಂಬ ಊಹಾಪೋಹ ಹಬ್ಬಿದೆ. ಬಹುಸಂಖ್ಯಾತ ಮರಾಠ ಸಮುದಾಯದ ಘೋಟನೇಕರ್‌ಗೆ ಗೆಲ್ಲುವ ಅವಕಾಶ ಸುನಿಲ್ ಹೆಗಡೆಗಿಂತ ಹೆಚ್ಚಿದೆ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆಯುತ್ತಿದೆನ್ನಲಾಗಿದೆ. ಹಾಗೇನಾದರು ಆದರೆ ಮತ್ತೆ ಸುನಿಲ್-ದೇಶಪಾಂಡೆ ಒಂದಾಗುವ ಸಮೀಕರಣ ಹಳಿಯಾಲದಲ್ಲಿ ಅನಿವಾರ್ಯವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ದೇಶಪಾಂಡೆಗಿಂತ ಘೋಟನೇಕರ್ ಮೇಲೆ ಸುನಿಲ್‌ಗೆ ಸಿಟ್ಟು ಹೆಚ್ಚಿದೆ.

ಘೋಟನೇಕರ್ ಬಾಯಲ್ಲಿ ಬಂಡಾಯದ ಮಾತು ಬರುತ್ತಿರುವುದು ನುರಿತ ರಾಜಕೀಯ ಪಟು ದೇಶಪಾಂಡೆಯವರ ಇಲೆಕ್ಷನ್ ಸ್ಟ್ರಾಟರ್ಜಿ ಎನ್ನಲಾಗುತ್ತಿದೆ. ಸುನಿಲ್‌ಗೆ ಹೋಗುವ ಮರಾಠ ಮತ ಕಟ್ ಮಾಡಲು ಘೋಟನೇಕರ್‌ರನ್ನು ಚುನಾವಣೆಗೆ ಇಳಿಸಲು ದೇಶಪಾಂಡೆ ಪ್ಲಾನ್ ಹಾಕಿದ್ದಾರೆಂಬ ಚರ್ಚೆ ನಡೆಯುತ್ತಿದೆ. ಮುಂದಿನ ಬಾರಿ ಘೋಟನೇಕರ್ ಅಥವಾ ಅವರ ಮಗನಿಗೆ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದಕ್ಕೆ ದೇಶಪಾಂಡೆ ಊಗುಟ್ಟಿದ್ದಾರೆನ್ನಲಾಗಿದೆ. ಕಡು ಶತ್ರು ಸುನಿಲ್ ಶಾಸಕನಾದರೆ ಸಮಸ್ಯೆಯಾಗುತ್ತದೆಂಬ ಲೆಕ್ಕಾಚಾರ ಘೋಟನೇಕರ್‌ದು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಳಿಯಾಳ-ಜೋಯಿಡಾದಲ್ಲಿ ಕುತೂಹಲಕರ ಸೂತ್ರ-ಸಮೀಕರಣ
ಹೆಣೆದುಕೊಳ್ಳುತ್ತಿದೆ.


ಇದನ್ನೂ ಓದಿ: ಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಶಿರಸಿ-ಸಿದ್ಧಾಪುರ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೋಟೆ ಅಭೇದ್ಯವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...