Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆಕರ್ನಾಟಕ ಚುನಾವಣಾ ರಾಜಕೀಯ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಯಲ್ಲಾಪುರ ರಣಕಣ: ಮಂತ್ರಿ ಹೆಬ್ಬಾರ್‌ಗೆ ಸೆಡ್ಡು ಹೊಡೆಯಲು...

ಕರ್ನಾಟಕ ಚುನಾವಣಾ ರಾಜಕೀಯ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಯಲ್ಲಾಪುರ ರಣಕಣ: ಮಂತ್ರಿ ಹೆಬ್ಬಾರ್‌ಗೆ ಸೆಡ್ಡು ಹೊಡೆಯಲು ಸಿದ್ಧವಾಗಿದ್ದಾರೆಯೇ ಪ್ರಶಾಂತ ದೇಶಪಾಂಡೆ?

- Advertisement -
- Advertisement -

ಉತ್ತರ ಕನ್ನಡದ ಯಲ್ಲಾಪುರ-ಮುಂಡಗೋಡಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಷ್ಠೆಯ ಜಿದ್ದಾಜಿದ್ದಿ ಏರ್‍ಪಡುವ ಸಕಲ ಲಕ್ಷಣಗಳು ಕಳೆದ ಕೆಲವು ತಿಂಗಳಿಂದ ಗೋಚರಿಸಲಾರಂಭಿಸಿದೆ. ಕಾರ್ಮಿಕ ಮಂತ್ರಿ ಅರಬೈಲ್ ಶಿವರಾಮ ಹೆಬ್ಬಾರ್‌ರನ್ನು ಮಣಿಸುವ ಹಠದಿಂದ ಕಾಂಗ್ರೆಸ್‌ನ ಹಿರಿಯ ಮುಂದಾಳು ಆರ್.ವಿ.ದೇಶಪಾಂಡೆ ಪುತ್ರ ಪ್ರಶಾಂತ ದೇಶಪಾಂಡೆ ಕ್ಷೇತ್ರ ಹದಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿದ್ದರೆ ದೇಶಪಾಂಡೆ ಹೊಸಕಿಹಾಕುತ್ತಾರೆಂದು ಗೊಣಗುತ್ತ ಬಿಜೆಪಿ ಸೇರಿದ್ದವರು ಹೆಬ್ಬಾರ್. ಹೆಬ್ಬಾರ್‌ಗೆ ಪಾಠ ಕಲಿಸುವ ಅಶ್ವಮೇಧ ಯಾಗ ಶುರು ಹಚ್ಚಿಕೊಂಡಿರುವ ದೇಶಪಾಂಡೆ ತನ್ನ ಮಗನನ್ನೆ ಯಾಗದ ಕುದುರೆಯಾಗಿ ಮುಂಡಗೋಡ ಮತ್ತು ಯಲ್ಲಾಪುರ ಕ್ಷೇತ್ರದಲ್ಲಿ ಬಿಟ್ಟಿದ್ದಾರೆ.

ಭೌಗೋಳಿಕ, ಸಾಮಾಜಿಕ ಸ್ಥಿತಿ ಮತ್ತು ಗತಿ!

ಮಲೆನಾಡು ಮತ್ತು ಅರೆ ಬಯಲುಸೀಮೆಯ ಪ್ರಾಕೃತಿಕ ಸೊಬಗಿನ ಯಲ್ಲಾಪುರ-ಮುಂಡಗೋಡು ಕ್ಷೇತ್ರ 2008ರ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ರೂಪುಗೊಂಡಿದೆ. ಅದುವರೆಗೆ ಮುಂಡಗೋಡು ದೇಶಪಾಂಡೆಯ ಹಳಿಯಾಳ ಕ್ಷೇತ್ರದ ಭಾಗವಾಗಿತ್ತು. ಯಲ್ಲಾಪುರ ಅಂಕೋಲಾ ಕ್ಷೇತ್ರದಲ್ಲಿತ್ತು. ಯಲ್ಲಾಪುರ, ಮುಂಡಗೋಡ ತಾಲೂಕುಗಳ ಜತೆ ಶಿರಸಿಯ ಬನವಾಸಿ ಭಾಗ ಸೇರಿಸಿ ಈ ಕ್ಷೇತ್ರ ರಚಿಸಲಾಗಿದೆ. ಸತತ ಆರು ಬಾರಿ ಮುಂಡಗೋಡದ ಶಾಸಕರಾಗಿದ್ದ ದೇಶಪಾಂಡೆ ಇವತ್ತಿಗೂ ಇಲ್ಲಿ ಪ್ರಭಾವ ಉಳಿಸಿಕೊಂಡದ್ದಾರೆ. ಈ ಧೈರ್ಯದಿಂದಲೆ ಅವರು ಮಗನನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಲು ಮುಂದಾಗಿದ್ದಾರೆನ್ನಲಾಗಿದೆ.

ಹವ್ಯಕ ಬ್ರಾಹ್ಮಣ ಪ್ರಾಬಲ್ಯದ ಯಲ್ಲಾಪುರ ಕ್ಷೇತ್ರದಲ್ಲಿ ಮುಸ್ಲಿಮರು ನಿರ್ಣಾಯಕರು. ಲಿಂಗಾಯತರು ಮತ್ತು ದೀವರು (ಈಡಿಗರು) ಹೆಚ್ಚುಕಮ್ಮಿ ಸಮನಾಗಿದ್ದಾರೆ. ಕ್ರಿಶ್ಚಿಯನ್ನರು ಯಲ್ಲಾಪುರ ಭಾಗದಲ್ಲಿ ಗಣನೀಯವಾಗಿದ್ದರೆ, ದಲಿತರು ಮುಂಡಗೋಡಲ್ಲಿ ಹೆಚ್ಚಿದ್ದಾರೆ. ಗೌಳಿ, ಸಿದ್ದಿ, ಮರಾಠಿಗಳಂತಹ ಬುಡಕಟ್ಟು ಸಮುದಾಯಗಳಿವೆ. ಈ ಗುಡ್ಡಗಾಡು ಜನಾಂಗದ ನೆನಪು ರಾಜಕಾರಣಿಗಳಿಗೆ ಚುನಾವಣೆ ಹೊತ್ತಲ್ಲಷ್ಟೆ ಬರುತ್ತದೆಂಬುದು ಸಾಮಾನ್ಯ ಅಭಿಪ್ರಾಯ. ಒಟ್ಟು 1,70,510 ಮತದಾರರಿರುವ ಯಲ್ಲಾಪುರ ಕ್ಷೇತ್ರದಲ್ಲಿ ಸಾಕ್ಷರತಾ ಪ್ರಮಾಣ ಶೇ.81ರಷ್ಟಿದೆ. ಬುಡಕಟ್ಟು ಮಂದಿ ಅರಣ್ಯವನ್ನು ಅವಲಂಬಿಸಿ ತಲತಲಾಂತರದಿಂದ ಬದುಕುತ್ತಿದ್ದರೂ, ಆಳುವವರ ಇಚ್ಛಾಶಕ್ತಿಯ ಕೊರತೆಯಿಂದ ಅವರಿಗೆ ನೆಲದ ಒಡೆತನ ಸಿಗುತ್ತಿಲ್ಲ.

ಯಲ್ಲಾಪುರ ಪರಿಸರ ಹೋರಾಟದ ನೆಲ. ಹವ್ಯಕರ ಧಾರ್ಮಿಕ ಮತ್ತು ರಾಜಕೀಯ ಶಕ್ತಿ ಕೇಂದ್ರವಾದ ಸ್ವರ್ಣವಲ್ಲಿ ಮಠ ಇಲ್ಲಿದೆ. ಮಠದ ಪೀಠಾಧಿಪತಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಬೇಡ್ತಿ ನದಿಗೆ ಒಡ್ಡು ಕಟ್ಟುವ ಯಾವ ಯೋಜನೆ ಬಂದರೂ ಬೀದಿಗಿಳಿದು, ಮೂರು ದಶಕದಿಂದ ಪ್ರತಿಭಟನೆಯ ಮುಂದಾಳತ್ವ ವಹಿಸುತ್ತ ಬಂದಿದ್ದಾರೆ. ಬೇಡ್ತಿ ನದಿ ನೀರಿಂದ ಜಲ ವಿದ್ಯುತ್ ತಯಾರಿಗೆ, ನದಿ ಜೋಡಣೆ ಮಾಡಿ ಗದಗ ಅಥವಾ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾಪಗಳು ಆಗಾಗ್ಗೆ ತಲೆಎತ್ತುತ್ತಲೇ ಇವೆ. ಈ ಆಣೆಕಟ್ಟು ಯೋಜನೆ ಬಂದರೆ ಅಡಿಕೆ ತೋಟಗಳು ಮುಳುಗಿ ಸಂಕಷ್ಟ ಅನುಭವಿಸುವಂತಾಗುತ್ತದೆ. ಜೀವ ವೈವಿಧ್ಯ ಪರಿಸರ ಧ್ವಂಸವಾಗುತ್ತದೆ. ಕರಾವಳಿ ತನಕದ ಸಾವಿರಾರು ಕುಟುಂಬಗಳ ನೆಲೆ ತಪ್ಪುತ್ತದೆ.

ಈ ಭಾಗದ ಪ್ರಮುಖ ಜೀವನಾಧಾರ ಬೆಳೆ ಅಡಿಕೆ. ಬಹುತೇಕ ಬ್ರಾಹ್ಮಣರು ಅಡಿಕೆ ತೋಟಿಗರು. ಮುಂಡಗೋಡ ಕಡೆಯಲ್ಲಿ ಭತ್ತ, ಹತ್ತಿ ಮತ್ತು ಕಬ್ಬು ಬೆಳಯಲಾಗತ್ತಿದೆ. ಮುಂಡಗೋಡ ಅರೆ ಬರದ ನಾಡು. ಅನಾವೃಷ್ಟಿ, ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆ ಕೈಗೆ ಪಡೆಯಲು ಪಡಬಾರದ ಪಾಡುಪಡಬೇಕಾಗಿದೆ. ಮಲೆನಾಡಿನ ಸೆರಗಿನ ಯಲ್ಲಾಪುರ ಸೀಮೆಯ ಅಡಿಕೆ ಬೆಳೆಗೆ ಈ ಸಲ ಬಂಪರ್ ಬೆಲೆ ಬಂದಿದ್ದು, ತೋಟಿಗರು ಕೊಂಚ ನೆಮ್ಮದಿಯಾಗಿದ್ದಾರೆ. ಆದರೆ ಈ ಬೆಲೆ ಸ್ಥಿರತೆಗೆ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ನಡೆಸಲೆಂದು ತೋಟಿಗರು ಬಯಸಿದ್ದಾರೆ. ಅಡಿಕೆ ಕ್ಯಾನ್ಸರ್‌ಕಾರಕವೆಂದು ಕೇಂದ್ರ ಸರಕಾರ ಹೇಳುತ್ತಿರುವುದು ತೋಟಿಗರ ನಿದ್ದೆಗೆಡಿಸಿದೆ. ಇದಕ್ಕೆ ತಾರ್ಕಿಕ ಅಂತ್ಯ ಹಾಡಲು ಎಂಪಿ, ಎಮ್ಮೆಲ್ಲೆಗಳು ಆಸಕ್ತಿ ವಹಿಸುತ್ತಿಲ್ಲ ಎಂಬ ಆಕ್ಷೇಪವಿದೆ

ವಿ.ಎಸ್.ಪಾಟೀಲ

ಮುಂಡಗೋಡಿಗೆ ನೀರಾವರಿ ಯೋಜನೆಯ ಅವಶ್ಯಕತೆಯಿದ್ದು, ಬರಿ ರಸ್ತೆ, ಚರಂಡಿ, ಸಮುದಾಯ ಭವನವೇ ಅಭಿವೃದ್ಧಿಯಲ್ಲವೆನ್ನುತ್ತಾರೆ ಈ ಪ್ರದೇಶದ ಜನರು. ಈ ಬಾರಿಯ ವಿಪರೀತ ಮಳೆಯಿಂದ ನಲುಗಿದ ಯಲ್ಲಾಪುರ-ಮುಂಡಗೋಡಿನ ಮಂದಿಯ ಬದುಕಿನ್ನೂ ಸುಧಾರಿಸಿಲ್ಲ. ಪ್ರತಿ ಮಳೆಗಾಲದಲ್ಲಿ ನಾಗರಿಕ ಪ್ರಪಂಚದ ಸಂಪರ್ಕವನ್ನೇ ಕಳೆದುಕೊಳ್ಳುವ ಯಲ್ಲಾಪುರದ ಕಳಚೆಯಂಥ ಊರಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಗಿದೆ. ದುಡಿವ ಕೈಗೆ ಕೆಲಸ ಕೊಡುವ ನೀರಾವರಿ, ಪ್ರವಾಸೋದ್ಯಮ, ಕೈಗಾರಿಕೆ ಮುಂದೆ ಇಲ್ಲಿ ಶಾಸಕನಾಗಿ ಗೆದ್ದು ಬರುವವನಾದರೂ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಯಲ್ಲಾಪುರ ಮತ್ತು ಮುಂಡಗೋಡದ ಮಂದಿ. ಪರಿಸರಕ್ಕೆ ಮಾರಕವಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ವಿಪುಲ ಅವಕಾಶ ಕ್ರೇತ್ರದಲ್ಲಿದೆ.

ರಾಜಕೀಯದ ರಂಗಸಾಲೆಯಲ್ಲಿ…

ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಯಲ್ಲಾಪುರ-ಮುಂಡಗೋಡಲ್ಲಿ ಮೂರು ಸಾರ್ವತ್ರಿಕ ಮತ್ತು ಒಂದು ಉಪ ಚುನಾವಣೆ ಜರುಗಿದೆ. ಕ್ಷೇತ್ರ ಪುನರ್ ವಿಂಗಡಣೆ ಮೊದಲು ಯಲ್ಲಾಪುರ, ಸ್ಪೀಕರ್ ಕಾಗೇರಿ ಮೂರು ಬಾರಿ ಪ್ರತಿನಿಧಿಸಿದ್ದ ಅಂಕೋಲಾ ಕ್ಷೇತ್ರದಲ್ಲಿತ್ತು. ಮುಂಡಗೋಡ ದೇಶಪಾಂಡೆಯ ಹಳಿಯಾಳದಲ್ಲಿತ್ತು. 2008ರಲ್ಲಾದ ಚುನಾವಣೆಯಲ್ಲಿ ಈಗಿನ ಮಂತ್ರಿ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿಯ ವಿ.ಎಸ್.ಪಾಟೀಲ್ (ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಉಪಾಧ್ಯಕ್ಷ) ಎದುರು ಸೋತಿದ್ದರು. ಆಗ ಹೆಬ್ಬಾರ್‌ಗೆ ಕ್ಷೇತ್ರದ ಸ್ವಜಾತಿ ಹವ್ಯಕರ ಅಖಂಡ ಬೆಂಬಲ ಪಡೆಯಲಾಗಿರಲಿಲ್ಲ ಎನ್ನಲಾಗುತ್ತದೆ. 2013ರ ಚುನಾವಣೆಯಲ್ಲಿ ಹೆಬ್ಬಾರ್ ಇದೇ ವಿ.ಎಸ್.ಪಾಟೀಲರನ್ನು 24,492 ಮತದ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಜಿಲ್ಲಾ ಕಾಂಗ್ರೆಸ್‌ನ ಬಣ ಬಡಿದಾಟದಲ್ಲಿ ಹೆಬ್ಬಾರ್ ಮಾರ್ಗರೇಟ್ ಆಳ್ವರಿಗೆ ನಿಷ್ಠೆಯಿಂದಿದ್ದರು.

ಆ ಅವಧಿಯಲ್ಲಿ ಸಿದ್ದರಾಮಯ್ಯರ ಸರಕಾರದಲ್ಲಿ ಪ್ರಬಲ ಮಂತ್ರಿಯಾಗಿದ್ದ ದೇಶಪಾಂಡೆ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಸತೀಶ್ ಸೈಲ್, ಮಂಕಾಳ ವೈದ್ಯ ಮತ್ತು ಎಸ್.ಎಲ್ ಘೋಟನೇಕರ್ ಅವರುಗಳನ್ನು ಸೇರಿಸಿಕೊಂಡು, “ಸಿಂಡಿಕೇಟ್ ಕಟ್ಟಿಕೊಂಡು ಹೆಬ್ಬಾರ್ ಸೆಡ್ಡು ಹೊಡೆದಿದ್ದರು. ಹೆಬ್ಬಾರ್ ಮತ್ತು ದೇಶಪಾಂಡೆ ನಡುವೆ ಮುಸುಕಿನ ಗುದ್ದಾಟ ಬಿರುಸಾಗಿಯೇ ನಡೆದಿತ್ತು. ಈ ಸಮಯದಲ್ಲಿ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ನಡೆಸುತ್ತಿದ್ದ ಅದಿರು ಉದ್ಯಮದ ಮೇಲೆ ಸಿಬಿಐ ದಾಳಿ ನಡೆಯಿತು. ವಿವೇಕ್ ಹೆಬ್ಬಾರ್‌ರನ್ನು ಸಿಬಿಐ ಬಂಧಿಸಿ ಜೈಲಿನಲ್ಲಿಟ್ಟಿತ್ತು. ಒಂದೆಡೆ ಆ ಕೇಸ್‌ನಿಂದ ಹೆಬ್ಬಾರ್‌ಗೆ ಹೋರಬೇಕಿತ್ತು. ಇತ್ತ ರಾಜಕೀಯವಾಗಿ ದೇಶಪಾಂಡೆ ನಾಯಕತ್ವದಿಂದ ಬಿಡುಗಡೆ ಪಡೆಯಬೇಕಿತ್ತು. ಹೆಬ್ಬಾರ್ 2018ರ ಅಸೆಂಬ್ಲಿ ಚುನಾವಣೆ ವೇಳೆಗೇ ತಮ್ಮ ಮೂಲ ಪಕ್ಷವಾದ ಬಿಜೆಪಿಗೆ ಹೋಗಲು ಪ್ರಯತ್ನಿಸಿದ್ದರೆನ್ನಲಾಗಿತ್ತು.

ಅನಂತಕುಮಾರ್ ಹೆಗಡೆ

ಸಂಸದ ಅನಂತಕುಮಾರ್ ಹೆಗಡೆ ಜತೆಗಿನ ವೈಮನಸ್ಸಿನಿಂದ ಕಾಂಗ್ರೆಸ್ ಸೇರಿದ್ದ ಹೆಬ್ಬಾರ್‌ಗೆ ಇದೆ ಕಾರಣಕ್ಕೆ ಮತ್ತೆ ಬಿಜೆಪಿ ಸೇರಲು ಅವಕಾಶ ಕೊಡಲಿಲ್ಲ ಎಂಬ ಅಭಿಪ್ರಾಯ ಈಗಲೂ ರಾಜಕೀಯ ವಲಯದಲ್ಲಿದೆ. 2018ರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಕಾಲದಲ್ಲಿ ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಯತ್ನ ನಡೆಸಿದ್ದ ಸಂದರ್ಭದಲ್ಲಿ, ಹೆಬ್ಬಾರ್ ತಮ್ಮ ಹೆಂಡತಿಯೊಂದಿಗೆ ಮಾತಾಡಿದ್ದಾರೆಂದು ಹೇಳಲಾದ ಆಡಿಯೋವೊಂದು ವೈರಲ್ ಆಗಿತ್ತು. ಅಂದಿನ ಪರಿಸ್ಥಿತಿಯಲ್ಲಿ (ಅದಿರು ಹಗರಣ) ಹೆಬ್ಬಾರ್‌ಗೆ ಬಿಜೆಪಿ ಸೇರುವುದು ಅಸ್ತಿತ್ವದ ದೃಷ್ಟಿಯಿಂದ ಅನಿವಾರ್ಯವಾಗಿತ್ತೆಂದು ವಿಶ್ಲೇಷಿಸಲಾಗುತ್ತಿದೆ. ಅಂತೂ ಹೆಬ್ಬಾರ್ ಮುಂಬೈ ಟೀಮು ಸೇರಿ ಬಿಜೆಪಿ ಪ್ರವೇಶಿಸಿದರು. ಕಾಂಗ್ರೆಸ್ ಪಾರ್ಟಿಯ ಶಾಸಕತ್ವಕ್ಕೆ ರಾಜಿನಾಮೆ ನೀಡಿ ಮಂತ್ರಿಯಾಗಿದ್ದರಿಂದ 2019ರಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಯಿತು. ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ ಮತ್ತು ಬಿಜೆಪಿ ಹೆಬ್ಬಾರ್ ಮಧ್ಯೆ ಹಣಾಹಣಿ ನಡೆಯಿತು. ಖುದ್ದು ದೇಶಪಾಂಡೆ ಕ್ಷೇತ್ರದಲ್ಲಿ ಕುಳಿತು ಉಸ್ತವಾರಿ ನಿಭಾಯಿಸಿದರು. ಹೆಬ್ಬಾರ್ ದೊಡ್ಡ ಅಂತರದಲ್ಲಿ ಗೆದ್ದರು.

ದೇಶಪಾಂಡೆ ಮಗನ ರಂಗ ಪ್ರವೇಶ!

ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರಲ್ಲಿ ಒಬ್ಬರಾದ ದೇಶಪಾಂಡೆಯವರ ದ್ವಿತೀಯ ಪುತ್ರ – ಕೇಂದ್ರದ ಮಾಜಿ ಸಚಿವ-ಎನ್‌ಪಿಸಿ ಮುಖಂಡ ಪ್ರಪುಲ್ ಪಟೇಲ್ ಅಳಿಯ ಪ್ರಶಾಂತ ದೇಶಪಾಂಡೆ 2014ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಜಕಾರಣದಿಂದ ಹೆಚ್ಚುಕಮ್ಮಿ ಅದೃಶ್ಯವಾಗಿದ್ದರು. ಆದರೆ ಜಿಲ್ಲೆಯಿಂದ ಕೆಪಿಸಿಸಿ ಸದಸ್ಯರಾಗಿದ್ದ ಪ್ರಶಾಂತ್ ರಾಜಕೀಯ ಬಿಡದೆ ಅನುಕೂಲಕರ ಸಂದರ್ಭಕ್ಕಾಗಿ ಕಾಯುತ್ತಿದ್ದರು. ಅವರ ಮೊದಲ ಆದ್ಯತೆ ಲೋಕಸಭಾ ಸದಸ್ಯನಾಗುವುದಾಗಿತ್ತಾದರೂ ಅದ್ಯಾಕೋ ದಿಢಿರ್ ಟ್ರ್ಯಾಕ್ ಬದಲಿಸಿ ವಿಧಾನಸಭೆಗೆ ಹೋಗುವ ರಿಸ್ಕಿ ಪ್ರಯತ್ನಕ್ಕೆ ಅಣಿಯಾಗಿದ್ದಾರೆ. ಅಪ್ಪ ಪ್ರತಿನಿಧಿಸುತ್ತಿರುವ ಹಳಿಯಾಳದ ಪಕ್ಕದಲ್ಲಿರುವ ಯಲ್ಲಾಪುರದ ಶಾಸಕನಾಗುವ ಪ್ಲಾನ್ ಹಾಕಿಕೊಂಡು ಕಳೆದ ಐದಾರು ತಿಂಗಳಿಂದ ಓಡಾಟ ಆರಂಭಿಸಿದ್ದಾರೆ.

ಮುಂಬೈನಲ್ಲಿ ವಕೀಲಿ ವೃತ್ತಿ ಮಾಡುವ ಪ್ರಶಾಂತ್ ವಾರಕ್ಕೆ 2-3 ದಿನ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬನವಾಸಿ, ಮುಂಡಗೋಡ, ಯಲ್ಲಾಪುರಕ್ಕೆ ಭೇಟಿಕೊಡುತ್ತ ಸಂಘಟನೆ ಮಾಡುತ್ತಿದ್ದಾರೆ. ಪ್ರಶಾಂತ್ ಬಿರುಸಿಗೆ ಮಂತ್ರಿ ಶಿವರಾಮ ಹೆಬ್ಬಾರ್ ಸ್ವಲ್ಪ ’ಡಿಸ್ಟರ್ಬ್’ ಆಗಿದ್ದಾರೆಂದು ಕ್ಷೇತ್ರದಲ್ಲಿ ಮಾತಾಡಿಕೊಳ್ಳಲಾಗುತ್ತಿದೆ. ಭೂಮಿ ಪೂಜೆ, ಶಂಕುಸ್ಥಾಪನೆ, ಉದ್ಘಾಟನೆ ಎಂದೆಲ್ಲ ಕಾರ್ಯಕ್ರಮ ಹಾಕಿಕೊಂಡು ಅಪ್ಪ-ಮಗನನ್ನು (ದೇಶಪಾಂಡೆ-ಪ್ರಶಾಂತ್) ಹೆಬ್ಬಾರ್ ಪರೋಕ್ಷವಾಗಿ ಟೀಕಿಸುತ್ತಿದ್ದಾರೆ. ಪ್ರಶಾಂತ್ ಬಿಜೆಪಿಯಲ್ಲಿರುವವರನ್ನು ಸೆಳೆಯಲು ನೋಡಿದರೆ, ಹೆಬ್ಬಾರ್ ಮತ್ತವರ ಮಗ ವಿವೇಕ್ ಕಾಂಗ್ರೆಸ್ ಬುಟ್ಟಿಗೆ ಕೈಹಾಕುತ್ತಿದ್ದಾರೆ. ವಿವೇಕ್ ಕ್ಷೇತ್ರದಲ್ಲಿ ಸಭೆ-ತಂತ್ರಗಾರಿಕೆ ಮಾಡುತ್ತಿರುವುದು ಅವರು ಅಪ್ಪನ ಉತ್ತರಾಧಿಕಾರಿ ಆಗುವ ತಯಾರಿ ನಡೆಸಿದ್ದಾರೆಂಬ ವಿಶ್ಲೇಷಣೆಗೆ ಗ್ರಾಸವಾಗಿದೆ. ಪ್ರಶಾಂತ್ ರಂಗಪ್ರವೇಶವಾದ ನಂತರ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವವರು ಹೆಚ್ಚಾಗಿದ್ದಾರೆ.

ಪ್ರಶಾಂತ್ ದೇಶಪಾಂಡೆ

ಯುವಕರಾದ ಪ್ರಶಾಂತ್‌ಗೆ ಕಡಿವಾಣ ಹಾಕಲು ಹೆಬ್ಬಾರ್ ತರುಣ ಮಗನನ್ನು ಅಖಾಡಕ್ಕೆ ಇಳಿಸಿದ್ದಾರೆ. ಈಚೆಗೆ ಪ್ರಶಾಂತ್ ಮುಂಡಗೋಡ ಮತ್ತು ಯಲ್ಲಾಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಿಸಿ ತನಗೆ ನಿಷ್ಟರಾದವರನ್ನು ನೇಮಿಸಿದ್ದು ಕಾಂಗ್ರೆಸ್‌ನಲ್ಲಿ ಅಸಮಾಧಾನ ಮೂಡಿಸಿದೆ. ಇದರ ಲಾಭ ಪಡೆಯಲು ವಿವೇಕ್ ಕಸರತ್ತು ನಡೆಸಿದ್ದಾರೆ. ಹೆಬ್ಬಾರ್ ಬಿಜೆಪಿ ಸೇರುವಾಗ ಕಾರ್ಯಕರ್ತರ ದೊಡ್ಡ ಪಡೆಯನ್ನೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಪ್ರಶಾಂತ್ ಕಳೆದ ಆರು ತಿಂಗಳಲ್ಲಿ ಅಳಿದುಳಿದ ಕಾಂಗ್ರೆಸ್ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ ಬೇರೆ ಪಕ್ಷದವರನ್ನು ಆಕರ್ಷಿಸುತ್ತಿದ್ದಾರೆ. ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ವಿ.ಎಸ್.ಪಾಟೀಲ್ ಬಿಜೆಪಿಯಲ್ಲಿ ಅಸಮಧಾನಗೊಂಡಿದ್ದು ಅವರು ಕಾಂಗ್ರೆಸ್ ಸೇರಲಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯ ಅಬ್ಬರದ ನಡುವೆಯೂ 50,000 ಮತ ಪಡೆದಿರುವುದು ದೇಶಪಾಂಡೆ ಮತ್ತು ಪ್ರಶಾಂತ್ ಹುಮ್ಮಸ್ಸಿಗೆ ಕಾರಣವೆನ್ನಲಾಗಿದೆ.

ಹೆಬ್ಬಾರ್‌ಗೆ ಬಿಜೆಪಿ ಟಿಕೆಟ್ ಸಿಗುತ್ತದೆಯೆ?

ಇಂಥದೊಂದು ಅನುಮಾನ ರಾಜಕೀಯ ವಲಯದಲ್ಲಿ ಚರ್ಚೆಯ ಸಂಗತಿಯಾಗಿದೆ. ಮೂಲ ಬಿಜೆಪಿಗರಿಗೆ ಹೆಬ್ಬಾರ್ ಬಗ್ಗೆ ಸಮಾಧಾನವಿಲ್ಲ. ಸಂಸದ ಹೆಗಡೆ ಮತ್ತು ಸಚಿವ ಹೆಬ್ಬಾರ್ ಸಂಬಂಧ ಅಷ್ಟಕ್ಕಷ್ಟೆ. ಆಪರೇಷನ್ ಕಮಲದಿಂದ ಬಿಜೆಪಿಗೆ ಬಂದಿರುವವರಿಗೆ ಟಿಕೆಟ್ ಕೊಡಲು ಸಂಘಪರಿವಾರಕ್ಕೆ ಮನಸ್ಸಿಲ್ಲ ಎನ್ನಲಾಗುತ್ತಿದೆ. ಹಾಗೇನಾದರು ಆದರೆ ಹೆಬ್ಬಾರ್ ರಾಜಕೀಯ ಮುಗಿದಂತೆಯೆ. ಅವರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಲು ದೇಶಪಾಂಡೆ ಬಿಡಲಾರರೆಂದು ದೇಶಪಾಂಡೆ ಹತ್ತಿದವರು ಹೇಳುತ್ತಾರೆ. ಸಂಘ ನಿಷ್ಟರಾದ ಒಂದಿಬ್ಬರು ಟಿಕೆಟ್ ತರಲು ದೊಡ್ಡ ಮಟ್ಟದ ಪ್ರಯತ್ನ ಮಾಡುತ್ತಿದ್ದಾರೆನ್ನಲಾಗಿದೆ. ಇತ್ತ ಕಾಂಗ್ರೆಸ್‌ನಲ್ಲಿ ಪ್ರಶಾಂತ್ ಬಿಟ್ಟರೆ ಮತ್ತ್ಯಾರು ಟಿಕೆಟ್ ಕೇಳುವ ತಾಕತ್ತಿನವರಿಲ್ಲ.

ದುರಂತವೆಂದರೆ, ಶಾಸಕನಾಗುವ ಹವಣಿಕೆಯಲ್ಲಿರುವವರು ಜಾತಿ, ಧರ್ಮದ ಆಧಾರದಲ್ಲಿ ಮತ ಪಡೆಯುವ ಯೋಚನೆಯಲ್ಲಿದ್ದಾರೆಯೆ ವಿನಃ ಕ್ಷೇತ್ರದ ಅಭಿವೃದ್ಧಿಯ ಯೋಜನೆ ಹಾಕಿಕೊಂಡಂತೆ ಕಾಣಿಸುತ್ತಿಲ್ಲ. ಅಡಿಕೆ, ಭತ್ತ, ಹತ್ತಿ, ಕಬ್ಬು ಬೆಳೆಗಾರರ ಸಮಸ್ಯೆ ಅರ್ಥವಾಗುತ್ತಿಲ್ಲ. ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಸಾವಿರಾರು ಕುಟುಂಬಗಳು ಹೋರಾಡುತ್ತಿವೆ. ಯಾರು ಯಲ್ಲಾಪುರ-ಮುಂಡಗೋಡದ ಅಭಿವೃದ್ಧಿಗೆ ಪ್ರತ್ಯೇಕ ನೀಲ ನಕ್ಷೆ, ಪ್ರಣಾಳಿಕೆ ಹಾಕಿಕೊಂಡು ಬದ್ಧತೆಯಿಂದ ಕೆಲಸ ಮಾಡುತ್ತಾರೋ ಅವರಿಗೆ ಮಾತ್ರ ಮತ ಎಂದು ಕ್ಷೇತ್ರದ ಜನರು ತೀರ್ಮಾನಿಸುವುದು ಅನಿವಾರ್ಯ ಎಂಬುದು ಕ್ಷೇತ್ರದಲ್ಲಿ ಒಂದು ಸುತ್ತು ಹೊಡೆದರೆ ಅನ್ನಿಸದೆ ಇರದು!


ಇದನ್ನೂ ಓದಿ: ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...