Homeಮುಖಪುಟಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

- Advertisement -

ಉತ್ತರ ಕನ್ನಡ ರಾಜಕೀಯದ ಹಳೆ ಹುಲಿ ರಘುನಾಥ್ ವಿಶ್ವನಾಥರಾವ್ ದೇಶಪಾಂಡೆಯ ಉತ್ತರಾಧಿಕಾರಿ ಎಂದೆ ಬಿಂಬಿತವಾಗಿರುವ ಅವರ ಪುತ್ರ ಪ್ರಶಾಂತ ದೇಶಪಾಂಡೆ ತಾನು ಯಲ್ಲಾಪುರದಿಂದ ಅಸೆಂಬ್ಲಿಗೆ ಸ್ಪರ್ಧಿಸಲು ಸಿದ್ಧನೆಂದು ಹೇಳಿದ್ದಾರೆ. ಈ ಮೂಲಕ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ಸಮೀಕರಣದ ಸಾಧ್ಯತೆಯ ಚರ್ಚೆ ಶುರುವಾಗಿಬಿಟ್ಟಿದೆ.

ಪ್ರಶಾಂತ್ ದೇಶಪಾಂಡೆ ಕಳೆದೊಂದು ವರ್ಷದಿಂದ ತುಂಬ ಆಸಕ್ತಿಯಿಂದ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ಧಾರೆ. ತಾನು ಕಾಂಗ್ರೆಸ್‌ನಲ್ಲಿದ್ದರೆ ದೇಶಪಾಂಡೆ ತನಗೆ ಮಂತ್ರಿಯಾಗಲು ಬಿಡುವುದಿಲ್ಲ… ತನ್ನ ಏಳ್ಗೆಗೆ ದೇಶಪಾಂಡೆ ಅಡ್ಡಗಾಲು ಹಾಕುತ್ತಾರೆಂಬ ಅರ್ಥದ ಮಾತಾಡಿ ಬಿಜೆಪಿ ಸೇರಿ ಸಚಿವರಾದ ಶಿವರಾಮ್ ಹೆಬ್ಬಾರ್ ರವರ ತವರು ಕ್ಷೇತ್ರ ಯಲ್ಲಾಪುರ. ಅಪ್ಪ ನಾಲ್ಕು ದಶಕದಿಂದ ಪ್ರತಿನಿಧಿಸುತ್ತಿರುವ ಹಳಿಯಾಳ ಬಿಟ್ಟು ಮಂತ್ರಿ ಹೆಬ್ಬಾರರ ಸ್ವಜಾತಿ ಹವ್ಯಕ ಬ್ರಾಹ್ಮಣರೆ ಹೆಚ್ಚಿರುವ ಯಲ್ಲಾಪುರದಲ್ಲೇಕೆ ಪ್ರಶಾಂತ ಆಟ ಆರಂಭಿಸಿದ್ದಾರೆಂಬ ಒಗಟು ಒಡೆಯಲಾಗದೆ ರಾಜಕೀಯ ತಂತ್ರಜ್ಞರು ತಲೆ ಕೆರೆದುಕೊಳ್ಳುವಂತಾಗಿತ್ತು!

ದೇಶಪಾಂಡೆ

ಮಗನನ್ನು ಲೋಕಸಭಾ ಸದಸ್ಯ ಮಾಡಬೇಕೆಂಬ ದೊಡ್ಡ ಕನಸು ದೇಶಪಾಂಡೆಯವರದು. 2014ರ ಪಾರ್ಲಿಮೆಂಟ್ ಎಲೆಕ್ಷನ್‌ಗೆ ಮಗನನ್ನು ಆಖಾಡಕ್ಕಿಳಿಸಿದ್ದರು. ಆದರೆ ನಂಬಿದವರೆ ಕೈಕೊಟ್ಟು ಸೋಲಿಸಿದ್ದರು. ಹತಾಶನಾದ ಪ್ರಶಾಂತ್ ಮುಂಬೈನ ವಕೀಲಿ ವೃತ್ತಿಯಲ್ಲಿ ತೊಡಗಿಕೊಂಡು ಐದಾರು ವರ್ಷ ಜಿಲ್ಲೆಯತ್ತ ತಿರುಗಿಯೂ ನೋಡಲಿಲ್ಲ. 2019ರ ಚುನಾವಣೆ ಹುಸಾಬರಿಗೂ ಹೋಗಲಿಲ್ಲ. ಯಾವಾಗ ಹೆಬ್ಬಾರ್ ಬಿಜೆಪಿಯಿಂದ ಉಪಚುನಾವಣೆಗೆ ಸ್ಪರ್ಧಿಸಿದರೋ ಆಗ ಚುರುಕಾದ ಪ್ರಶಾಂತ್ ಹೆಚ್ಚೆಚ್ಚು ಯಲ್ಲಾಪುರ-ಮುಂಡಗೋಡಲ್ಲಿ ಕಾಣಿಸಿ ಕೊಳ್ಳತೊಡಗಿದರು. ಕೋವಿಡ್ ಸಂತ್ರಸ್ತರಿಗೆ ತನ್ನಜ್ಜನ ಹೆಸರಿನ ಟ್ರಸ್ಟ್ ವತಿಯಿಂದ ನೆರವಾಗುವ ನೆಪದಲ್ಲಿ ಹಳ್ಳಿ-ಹಳ್ಳಿ ಹೊಕ್ಕು ಹೊರಬರತೊಡಗಿದರು. ಯಲ್ಲಾಪುರದಿಂದ ಶಾಸಕನಾಗುವ ಇರಾದೆಯಿಂದಲೇ ನಿಧಾನವಾಗಿ ಕ್ಷೇತ್ರ ಹದಗೊಳಿಸಿಕೊಳ್ಳ ಹತ್ತಿದ್ದರು. ಕೇತ್ರ ಪುನರ್ ವಿಂಗಡಣೆಗೂ ಮೊದಲು ಈಗ ಯಲ್ಲಾಪುರದ ಜತೆಗಿರುವ ಮುಂಡಗೋಡು ಹಳಿಯಾಳ ಕ್ಷೇತ್ರದಲ್ಲಿತ್ತು. ಇಲ್ಲಿಂದ ದೇಶಪಾಂಡೆ ನಾಲ್ಕು ಸಲ ಆಯ್ಕೆಯಾಗಿದ್ದರು. ಹೀಗಾಗಿ ಮಂಡಗೋಡಿನಲ್ಲಿರುವ ತಂದೆಯ ಪ್ರಭಾವ ತನಗೆ ಅನುಕೂಲಕರವೆಂದು ಪ್ರಶಾಂತ ಲೆಕ್ಕಹಾಕಿದ್ದಾರೆ.

ಅಪ್ಪ-ಮಗ ತಮ್ಮ ಶತ್ರು ಹೆಬ್ಬಾರ್‌ಗೆ ಪಾಠ ಕಲಿಸಲು ಪ್ಲಾನ್ ಹಾಕಿದ್ದಾರೆಂಬ ಭಾವನೆ ಸಹಜವಾಗೆ ಮೂಡಿತ್ತು. ಮಂತ್ರಿ ಹೆಬ್ಬಾರ್‌ಗೂ ಕಿರಿಕಿರಿಯಾದರೂ ದೇಶಪಾಂಡೆ ಆ ರಿಸ್ಕ್ ತೆಗೆದುಕೊಳ್ಳಲಿಕ್ಕಿಲ್ಲವೆಂಬ ಸಮಾಧಾನದಲ್ಲಿದ್ದರು. ಆದರೆ ಸ್ವಕ್ಷೆತ್ರ ಹಳಿಯಾಳದಲ್ಲಾಗತ್ತಿರುವ ರಾಜಕೀಯ ಬದಲಾವಣೆಗಳು ಮತ್ತು ಹೆಬ್ಬಾರ್ ಕಾಂಗ್ರೆಸಲ್ಲಿದ್ದಾಗ ಭಟ್ಕಳ ಶಾಸಕನಾಗಿದ್ದ ಮಂಕಾಳ್ ವೈದ್ಯ, ಕಾರವಾರದ ಸತೀಶ್ ಸೈಲ್‌ರ ಜತೆ ಸೇರಿ ಕೆಡಿಸಿಸಿ ಸಿಂಡಿಕೇಟ್ [ಇವರೆಲ್ಲ ಅಂದು ಜಿಲ್ಲಾ ಮದ್ಯವರ್ತಿ ಬ್ಯಾಂಕ್-ಕೆಡಿಸಿಸಿ ನಿರ್ದೇಶಕರಾಗಿದ್ದರು] ಕಟ್ಟಿ ಕಾಡಿದ ಸೇಡು ತೀರಿಸಿಕೊಳ್ಳುವ ಹಠದಿಂದ ದೇಶಪಾಂಡೆಗೆ ಮಗನನ್ನು ಯಲ್ಲಾಪುರದಲ್ಲಿ ಅಶ್ವಮೇಧದ ಕುದುರೆಯಾಗಿ ಬಿಡಬೇಕಾಗಿ ಬಂತು! ಬಿಜೆಪಿ ಮಂತ್ರಿಯಾಗಿದ್ದರೂ ಈಗಲೂ ಸಹ ಹೆಬ್ಬಾರ್ ಕಾಂಗ್ರೆಸ್ ರಾಜಕಾರಣದಲ್ಲಿ ಕೈಯ್ಯಾಡಿಸುತ್ತ ತನ್ನ ವಿರುದ್ದ ಸಂಚು ಮಾಡುತ್ತಿದ್ದಾರರೆಂಬ ಸಂಶಯ ಕಾಡುತ್ತಿದೆಯಂದು ಹೆಬ್ಬಾರ್ ಹಳೆ ’ಸಿಂಡಿಕೇಟ್’ ಹಿಡಿದುಕೊಂಡು ಹೊಸ ಡಿಸಿಸಿ ಅಧ್ಯಕ್ಷ ದೇಶಪಾಂಡೆ ನಿಷ್ಟನಾಗದಂತೆ ನೋಡಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.

ಮಗನಿಗಾಗಿ ದೆಶಪಾಂಡೆ ಮೊದಲ ಆಯ್ಕೆ ಹಳಿಯಾಳವೇ ಆಗಿತ್ತು. ಆದರೆ ಅಲ್ಲಿ ಮಗನನ್ನು ಉತ್ತರಾಧಿಕಾರಿಯಾಗಿ ಪ್ರತಿಷ್ಟಾಪಿಸಲು ಈಗ ವೈರಿಯಾಗಿ ಬದಲಾಗಿರುವ ಹಲವು ವರ್ಷದ ನಿಷ್ಟಾವಂತ ಶಿಷ್ಯ ಎಮ್‌ಎಲ್‌ಸಿ ಶ್ರೀಕಾಂತ ಘೋಟನೇಕರ್ ಬಿಡುತ್ತಿಲ್ಲ. ಮರಾಠರು ಪ್ರಥಮ ಬಹು ಸಂಖ್ಯಾತರಾಗಿರುವ ಹಳಿಯಾಳದಲ್ಲಿ ದೇಶಪಾಂಡೆಯ ಕೊಂಕಣಿ [ಜಿಎಸ್‌ಬಿ] ಸಮುದಾಯ ಸೂಕ್ಮದರ್ಶಕದಲ್ಲಿ ನೋಡಬೇಕಾದಷ್ಟು ಸಣ್ಣದು! ದೇಶಪಾಂಡೆಗೆ ವಯಸ್ಸಾಗಿರುವುದರಿಂದ ತನಗೆ ಕ್ಷೇತ್ರ ಬಿಟ್ಟುಕೊಡುವಂತೆ ಮರಾಠ ಜಾತಿಯ ಘೋಟನೇಕರ್ ಕೇಳುತ್ತಿದ್ದಾರೆ. ಸಂದರ್ಭ ಸಿಕ್ಕಾಗೆಲ್ಲ ದೇಶಪಾಂಡೆಯನ್ನು ಬಹಿರಂಗವಾಗೆ ಜರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಡಿಕೆಶಿ ಹುಬ್ಬಳ್ಳಿಯಲ್ಲಿ ಉತ್ತರ ಕನ್ನಡದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದಾಗ ದೇಶಪಾಂಡೆ ಎದುರೇ ಘೋಟನೇಕರ್ ಟಿಕೆಟ್ ಕ್ಲೇಮ್ ಮಾಡಿದ್ದರು.

ಶಿವರಾಮ್ ಹೆಬ್ಬಾರ್

ಸ್ಥಳೀಯ ಸಂಸ್ಥೆಯಿಂದ ಎಮ್‌ಎಲ್‌ಸಿಯಾಗಿರುವ ಘೋಟನೇಕರ್ ಈ ಬಾರಿ ಅಸೆಂಬ್ಲಿ ಸ್ಪರ್ಧೆಗೆ ಹಠದಿಂದ ಅವಕಾಶ ಕೇಳುತ್ತಿರುವುದಕ್ಕೆ ಎರಡು ಕಾರಣವಿದೆ. ಒಂದು ದೇಶಪಾಂಡೆ ಮತ್ತೆ ಪರಿಷತ್ ಸ್ಪರ್ದೆಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುವುದಿಲ್ಲವೆಂಬುದು. ಇನ್ನೊಂದು ಸ್ಥಳೀಯ ಸಂಸ್ಥೆ ಸದಸ್ಯ ಮತದಾರರು ಕಾಂಗ್ರೆಸ್‌ಗಿಂತ ಬಿಜೆಪಿಯಲ್ಲಿ ತುಸು ಹೆಚ್ಚೇ ಇರುವುದರಿಂದ ಗೆಲ್ಲುವುದು ಕಷ್ಟವೆಂಬುದು ಅವರ ಲೆಕ್ಕಾಚಾರ. ಪರಿಷತ್ ಚುನಾವಣೆ ಬೆನ್ನಿಗೆ ವಿಧಾನಸಭೆ ಎಲೆಕ್ಷನ್ ಬರುವುದರಿಂದ ಘೋಟನೇಕರ್ ಪ್ರತಿ ಬಾರಿಯೂ ಇಂಥದೇ ಒತ್ತಡ ತಂತ್ರಗಾರಿಕೆ ನಡೆಸುತ್ತಾರೆಂದು ದೇಶಪಾಂಡೆ, ಘೋಟನೇಕರ್ “ಜಗಳ್”ಬಂದಿ ಬಲ್ಲವರು ಹೇಳುತ್ತಾರೆ. ಒಂದಂತೂ ಖರೆ ಹೈಕಮಾಂಡ್ ಮಟ್ಟದಲ್ಲಿ ಬೆಳೆದಿರುವ ದೇಶಪಾಂಡೆಗೆ ಟಿಕೆಟ್ ತಪ್ಪಿಸುವ ತಾಕತ್ತು ಘೋಟನೇಕರ್‌ಗೆ ಇಲ್ಲ. ಬಂಡಾಯವೆದ್ದು ಸ್ಪರ್ಧಿಸಿ ದೇಶಪಾಂಡೆಗೆ ನಡುಕ ಮೂಡಿಸಬಹುದಷ್ಟೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗ ಬಿಜೆಪಿಯಲ್ಲಿರುವ ಮಾಜಿ ಶಾಸಕ ಸುನೀಲ್ ಹೆಗ್ಡೆ ಕಾಂಗ್ರೆಸ್‌ನಿಂದ ಹೊರಬೀಳುವಾಗ ಇಂಥದೆ ಪರಿಸ್ಥಿತಿ ಉದ್ಭವವಾಗಿತ್ತು. ಸುನೀಲ್ ತಂದೆ ವಿ.ಡಿ.ಹೆಗ್ಡೆ ಒತ್ತಡ ಹಾಕಿಯೇ ಎಮ್‌ಎಲ್‌ಸಿ ಆಗಿದ್ದರು. ಎರಡನೇ ಬಾರಿ ವಿ.ಡಿ ಹೆಗ್ಡೆಗೆ ದೇಶಪಾಂಡೆ ಅವಕಾಶ ಕೊಡಲಿಲ್ಲ. ಕೆರಳಿದ ವಿ.ಡಿ ಹೆಗ್ಡೆ ಮಗ ಸುನೀಲ್ ಸಮೇತ ಜೆಡಿಎಸ್ ಸೇರಿದ್ದರು. ದೇಶಪಾಂಡೆ ಯಾವ ಪಕ್ಷದಲ್ಲೆ ಇರಲಿ ಎಮ್‌ಎಲ್‌ಸಿಯಾಗಲು ಯಾರಿಗೂ ಎರಡನೇ ಅವಕಾಶ ಕೊಟ್ಟಿದ್ದೆ ಇಲ್ಲ. ಆದರೆ ಘೋಟನೇಕರ್ ಮಾತ್ರ ಗುರುವನ್ನು ಬಗ್ಗಿಸಿ ಎರಡನೇ ಛಾನ್ಸ್ ಗಿಟ್ಟಿಸಿದ್ದರು. ದೇಶಪಾಂಡೆ ಕ್ಷೇತ್ರದಲ್ಲಿ ದುರ್ಬಲಗೊಂಡಿದ್ದೆ ಇದಕ್ಕೆ ಕಾರಣವಾಗಿತ್ತು. ಈಗ ದೇಶಪಾಂಡೆಗೆ ಹಳೆ ಸಂದಿಗ್ಧ ಎದುರಾಗಿದೆ. ದೇಶಪಾಂಡೆ ಮಣಿಯುವರಾ? ಘೋಟನೇಕರ್ ತಿರುಗಿ ಬೀಳುವರಾ? ದೇಶಪಾಂಡೆ, ಘೋಟನೇಕರ್, ಸುನೀಲ್ ಹೆಗ್ಡೆ ಮಧ್ಯೆ ತ್ರಿಕೋನ ಕಾಳಗವಾದರೆ ಯಾರು ಬೇಕಾದರೂ ಗೆಲ್ಲಬಹುದೆಂಬ ಚರ್ಚೆ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಶುರುಹತ್ತಿಕೊಂಡಿದೆ.


ಇದನ್ನೂ ಓದಿ: ನೆಹರು ಕುರಿತು ಸಿ.ಟಿ ರವಿ ಅವಹೇಳನಕಾರಿ ಹೇಳಿಕೆಗೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪರೋಕ್ಷ ಖಂಡನೆ

ಶುದ್ದೋಧನ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗೂಡಾಚರ್ಯೆಯ ಪೆಗಾಸಸ್‌‌ ಸ್ಪೈವೇರ್‌‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್‌ ವರದಿ

0
ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರಗಳಿಗಾಗಿ ಮಾಡಿಕೊಂಡ 2-ಬಿಲಿಯನ್ ಡಾಲರ್‌‌ ಪ್ಯಾಕೇಜ್‌ನ ಭಾಗವಾಗಿ 2017ರಲ್ಲಿ ಭಾರತ ಸರ್ಕಾರ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನೂ ಖರೀದಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ವರದಿ ಮಾಡಿದೆ. ಫೆಡರಲ್ ಬ್ಯೂರೋ...
Wordpress Social Share Plugin powered by Ultimatelysocial