ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲಾಗಿದ್ದ ಸ್ಮಶಾನ ಭೂಮಿಯ ಸಣ್ಣಗುಡ್ಡದ ಮೇಲೆ ನಿಲ್ಲಿಸಲಾಗಿದ್ದ ಏಸು ಪ್ರತಿಮೆ ಮತ್ತು 14 ಶಿಲುಬೆಗಳನ್ನು ತಹಶೀಲ್ದಾರ್ ನೇತೃತ್ವದಲ್ಲಿ ಜೆಸಿಬಿಯಿಂದ ಏಕಾಏಕಿ ಧ್ವಂಸಗೊಳಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಯಾವುದೇ ನೋಟಿಸ್ ನೀಡದೆ, ಸಮಯವನ್ನು ಕೊಡದೆ ಏಸು ಪ್ರತಿಮೆ ಮತ್ತು ಶಿಲುಬೆಗಳನ್ನು ಧ್ವಂಸಗೊಳಿಸಿರುವ ತಾಲೂಕು ಆಡಳಿತದ ಬಗ್ಗೆ ಕ್ರಿಶ್ಚಿಯನ್ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರತಿಯೊಂದು ಸ್ಮಶಾನಗಳಲ್ಲೂ ಏಸು ಮತ್ತು ಶಿಲುಬೆಗಳು ಇರುವುದು ಸಾಮಾನ್ಯ. ಇಲ್ಲಿಯೂ ಹಾಗೆಯೇ ನಿಲ್ಲಿಸಲಾಗಿತ್ತು. ಯಾರೋ ದೂರಿದದರೆಂಬ ಕಾರಣಕ್ಕೆ ಏಕಾಏಕಿ ದಾಳಿ ನಡೆಸಿರುವುದು ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿಯ ಸೇಂಟ್ ಜೋಸೆಫ್ ಚರ್ಚ್ ಸಮೀಪವೇ ಇರುವ 120 ಎಕರೆ ಸರ್ಕಾರಿ ಭೂಮಿಯಲ್ಲಿ ಸಣ್ಣ ಭಾಗವನ್ನು ಸ್ಮಶಾನಕ್ಕೆ ಜಾಗ ನೀಡುವಂತೆ ಕ್ರಿಶ್ಚಿಯನ್ ಸಮುದಾಯದ ಮುಖಂಡರು 2012ರಲ್ಲಿ ದೇವನಹಳ್ಳಿಯ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಹೊತ್ತುಹಾಕಿದರು. ಕೆಲಸ ಮಾತ್ರ ಆಗಿರಲಿಲ್ಲ. ಹೀಗಾಗಿ 2018ರಲ್ಲಿ ಮತ್ತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಆಗ ಮತ್ತೆ ತಹಶೀಲ್ದಾರ್ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಕಳುಹಿಸಿದರು.
ಕ್ರಿಶ್ಚಿಯನ್ ಸಮುದಾಯವರು ನೀಡಿದ ಪತ್ರವನ್ನು ಪರಿಶೀಲಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ಮಶಾನಕ್ಕೆ ಭೂಮಿ ನೀಡಬಹುದೆಂದು ಸೂಚಿಸಿದರು. ತಹಶೀಲ್ದಾರ್ ಸ್ಥಳೀಯ ಗ್ರಾಮ ಪಂಚಾಯಿತಿಯ ಪಿಡಿಓಗೆ ಪತ್ರ ಬರೆದು ಸ್ಮಶಾನ ಜಾಗಕ್ಕೆ ಭೂಮಿ ನೀಡಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ 2019ರ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯಿತಿಯು ಎಲ್ಲರಿಗೂ ಸ್ಮಶಾನ ಭೂಮಿ ಇದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಇಲ್ಲ. ಹಾಗಾಗಿ 120 ಎಕರೆಯಲ್ಲಿ 4.2 ಎಕರೆ ಭೂಮಿಯನ್ನು ಸ್ಮಶಾನಕ್ಕೆ ನೀಡಿತ್ತು. ಇದಕ್ಕೆ ದೊಡ್ಡಸಾಗರಹಳ್ಳಿ ಗ್ರಾಮಸ್ಥರೂ ಸಂಪೂರ್ಣ ಒಪ್ಪಿಗೆ ನೀಡಿದ್ದರು.
ಕ್ರಿಶ್ಚಿಯನ್ನರ ಸ್ನಶಾನಕ್ಕೆ ನೀಡಿರುವ 4.2 ಎಕರೆ ಜಾಗದಲ್ಲಿ ಸಣ್ಣದೊಂದು ಗುಡ್ಡವಿದೆ. ಆ ಗುಡ್ಡದ ಮೇಲೆ ಏಸುಕ್ರಿಸ್ತನ ಪ್ರತಿಮೆ ಮತ್ತು ಶಿಲುಬೆಗಳನ್ನು ಇಟ್ಟಿದ್ದೆವು. ‘ಮೌಂಟ್ ಕಲ್ವರಿ’ ಕ್ರಿಶ್ಚಿಯನ್ ಸಮುದಾಯಕ್ಕೆ ಪವಿತ್ರ ವಾದುದು. ಈಸ್ಟರ್ ಸಂದರ್ಭದಲ್ಲಿ ನಾವು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ. ಅಂತಹ ಪವಿತ್ರ ಸ್ಥಳವನ್ನು ಧ್ವಂಸ ಮಾಡಲಾಗಿದೆ. ಕ್ರೈಸ್ತ ಸಮುದಾಯದ ಸ್ಮಶಾನ ಜಾಗದಲ್ಲಿ ಶಿಲುಬೆ ಮತ್ತು ಏಸುಕ್ರಿಸ್ತನ ಪ್ರತಿಮೆ ಇರುವುದು ಸಾಮಾನ್ಯ. ಇಲ್ಲಿ ನಾವು ಯಾವುದೇ ವಾಣಿಜ್ಯ ಸಂಕೀರ್ಣ ನಿರ್ಮಿಸಿರಲಿಲ್ಲ. ಆದರೂ ತಹಶೀಲ್ದಾರ್ ಜೆಸಿಬಿಯೊಂದಿಗೆ ಬಂದು ಶಿಲುಬೆಗಳು ಮತ್ತು ಏಸು ಪ್ರತಿಮೆಯನ್ನು ಧ್ವಂಸಗೊಳಿಸಿದರು. ಇದರಿಂದ ನಮಗೆ ನೋವಾಗಿದೆ. ಭಾವನೆಗಳಿಗೆ ಧಕ್ಕೆಯಾಗಿದೆ. ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ನಮ್ಮ ಬಳಿ ಎಲ್ಲಾ ದಾಖಲೆಗಳು ಇವೆ. ಹೋರಾಟ ಮುಂದುವರಿಯಲಿದೆ ಎಂದು ಬೆಂಗಳೂರಿನ ಬಿಶಪ್ ಚರ್ಚ್ ಸಾರ್ವಜನಿಕ ಸಂಪರ್ಕಾಧಿಕಾರಿ ಕಾಂತರಾಜು ನಾನುಗೌರಿ.ಕಾಮ್ ಗೆ ದೂರವಾಣಿಯಲ್ಲಿ ತಿಳಿಸಿದರು.

ಮುಖ್ಯವಾದ ವಿಷಯವೆಂದರೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತ ಗ್ರಾಮ ಪಂಚಾಯಿತಿ ಸ್ಮಶಾನಕ್ಕೆ ಜಾಗ ನೀಡಿರುವುದು ಸ್ಪಷ್ಟ. ಎಲ್ಲಾ ದಾಖಲೆಗಳು ಕೂಡ ಇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ದಿಢೀರನೇ ಈ ರೀತಿ ಪ್ರತಿಮೆ ಮತ್ತು ಶಿಲುಬೆಗಳನ್ನು ಧ್ವಂಸಗೊಳಿಸಿರುವುದು ಸರಿಯಾದ ಕ್ರಮವಲ್ಲ. ಅಲ್ಲಿನ ಶ್ಮಶಾನದ ಪ್ರತಿಮೆಗೆ ಗ್ರಾಮಸ್ಥರ ಒಪ್ಪಿಗೆ ಮತ್ತು ಸಹಕಾರವೂ ಇದೆ. ಗ್ರಾಮಸ್ಥರ ಸಭೆ ಕರೆದಿದ್ದ ಸಂದರ್ಭದಲ್ಲೂ ಯಾರೊಬ್ಬರೂ ತಕರಾರು ಮಾಡಿಲ್ಲ. ಆದರೆ ಬಲಪಂಥೀಯ ಸಂಘಟನೆಗಳಾದ ಹಿಂದೂ ರಕ್ಷಣಾ ವೇದಿಕೆ ಮತ್ತು ಭಜರಂಗದಳದ ಮುಖಂಡರು ಪ್ರತಿಭಟನೆ ಮಾಡಿದ ಮೇಲೆ ಇಂತಹ ಕ್ರಮಕ್ಕೆ ಮುಂದಾಗಿರುವುದು ನ್ಯಾಯ ಸಮ್ಮತವಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ಮತಾಂತರದ ಆರೋಪ ಮಾಡುವುದು ಸರಿಯಲ್ಲ ಎನ್ನುತ್ತಾರೆ ಕ್ರಿಶ್ಚಿಯನ್ ಸಮುದಾಯದ ಮುಖಂಡರು.
ಈ ಕುರಿತು ದೇವನಹಳ್ಳಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಲಾಯಿತು. ಆದರೆ ಸಾಧ್ಯವಾಗಲಿಲ್ಲ. ಇಲ್ಲಿ ಭಜರಂಗದಳ ಮತ್ತು ಹಿಂದೂ ರಕ್ಷಣ ವೇದಿಕೆಯ ಒತ್ತಡಕ್ಕೆ ತಹಶೀಲ್ದಾರ್ ಮಣಿದಿರುವುದು ಸ್ಪಷ್ಟವಾಗಿದೆ. ನೋಟೀಸ್ ನೀಡದೆ ಯಾವುದೇ ಮಾಹಿತಿಯನ್ನು ನೀಡದೆ ಪ್ರತಿಮೆಗಳ ಧ್ವಂಸ ಮಾಡಿರುವುದು ಆಡಳಿತ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪುಂಡುಪೋಕರಿಗಳ ಒತ್ತಡಕ್ಕೆ ತಾಲೂಕು ಆಡಳಿತ ಮಣಿಯುವಂತಾಗಿರುವುದು ದುರಂತವೇ ಸರಿ.


