ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿ ಲೇಖನ ಬರೆದಿರುವ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವವರ ವಿರುದ್ಧ ಸೈಬರ್ ಕ್ರೈಮ್ ಅಡಿಯಲ್ಲಿ ಕಾನೂನು ಪ್ರಕಾರ ಸರ್ಕಾರವು ಕ್ರಮ ಜರುಗಿಸಲಿದೆ ಎಂದು ನಂಬಿದ್ದೇನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ಗೇಲಿ ಮಾಡಿ, ವಿಕೃತಗೊಳಿಸಿ, ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಅವರ ಹಳೆಯ ಪೋಸ್ಟ್ ವೈರಲ್ ಆಗಿದೆ. ಲಕ್ಷ್ಮಣ ಆಕಾಶೆ ಕಾರ್ಕಳ ಎಂಬಾತ ಕುವೆಂಪು ಅವರ ಬಗ್ಗೆ ಬರೆದಿರುವ ಬರಹ ಅವಹೇಳನಕಾರಿಯಾಗಿದೆ ಎಂದು ಕನ್ನಡಿಗರು ಸಿಟ್ಟಿಗೆದ್ದಿದ್ದು, ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಗೆ ರೋಹಿತ್ ಚಕ್ರತೀರ್ಥ ಅಧ್ಯಕ್ಷರಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕುವೆಂಪು ಅವರು ತಮ್ಮ ಯೌವನದ ಕಾಲದಲ್ಲಿ ಬರೆದ ‘ಜೈ ಭಾರತ ಜನನಿಯ ತನುಜಾತೆ’ ಕವಿತೆಯು ಕಳೆದ ತೊಂಬತ್ತು ವರ್ಷಗಳಿಂದ ಕನ್ನಡಿಗರ ಹೃದಯದಲ್ಲಿ ನೆಲೆನಿಂತು, ದೇಶಭಕ್ತಿ ಮತ್ತು ನಾಡಪ್ರೇಮವನ್ನು ಉದ್ದೀಪಿಸಿದೆ. ಇದನ್ನು ಮನಗಂಡು ಕರ್ನಾಟಕ ಸರ್ಕಾರವು ‘ಜೈ ಭಾರತ ಜನನಿಯ ತನುಜಾತೆ’ ಗೀತೆಯನ್ನು ನಾಡಗೀತೆಯಾಗಿ ಘೋಷಿಸಿತು. ಅದನ್ನು ನಾಡಗೀತೆಯಾಗಿ ಘೋಷಣೆ ಮಾಡಬೇಕು ಎಂದು ಯಾರೂ ಕೇಳಿರಲಿಲ್ಲ. ಅದು ಸರ್ಕಾರವೇ ತೆಗೆದುಕೊಂಡ ತೀರ್ಮಾನವಾಗಿತ್ತು. ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯಾಗಿರುವ ಅಧಿಕೃತ ನಾಡಗೀತೆಯನ್ನು ಹಾಡಿ ಕೋಟಿ ಕೋಟಿ ಕನ್ನಡಿಗರು ಸಂಭ್ರಮಿಸಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಆದರೆ ಈಚೆಗೆ ಕೆಲವರು ನಾಡಗೀತೆಯನ್ನು ತಿರುಚಿ ಬರೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರ್ಕಾರದ ತೀರ್ಮಾನವನ್ನು ಗೇಲಿ ಮಾಡುತ್ತಿರುವಂತಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ನಾಡಗೀತೆಯನ್ನು ತಿರುಚಿರುವುದಷ್ಟೇ ಅಲ್ಲ, ಮಹಾಕವಿಗಳೂ ರಾಷ್ಟ್ರಕವಿಗಳೂ ಆಗಿರುವ ಕುವೆಂಪು ಅವರ ಬಗ್ಗೆ ಅತ್ಯಂತ ಕೀಳುಭಾಷೆಯಲ್ಲಿ ಅವಹೇಳನಕಾರಿ ಲೇಖನಗಳನ್ನು ಬರೆದಿದ್ದಾರೆ. ನಾಡಗೀತೆಯನ್ನು ಅವಮಾನಿಸುವುದೆಂದರೆ ರಾಷ್ಟ್ರಗೀತೆಯನ್ನು ಅವಮಾನಿಸಿದಂತೆ; ಹಾಗೂ ನೆಲದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಯುಕ್ತ, ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿ ಲೇಖನ ಬರೆದಿರುವ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವವರ ವಿರುದ್ಧ ಸೈಬರ್ ಕ್ರೈಮ್ ಅಡಿಯಲ್ಲಿ ಕಾನೂನು ಪ್ರಕಾರ ಸರ್ಕಾರವು ಕ್ರಮ ಜರುಗಿಸುತ್ತದೆಂದು ಭಾವಿಸುತ್ತೇವೆ. ಹಾಗೂ ಈ ಮೂಲಕ ಸರ್ಕಾರವು ಕಾನೂನು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ಕ್ಷಮಿಸುವುದಿಲ್ಲ ಎಂಬ ಸಂದೇಶ ರವಾನಿಸುತ್ತದೆ ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿರಿ: ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು
ನಮ್ಮ ನಾಡು ಕಂಡ ಅಪ್ರತಿಮ ಕವಿ, ದಾರ್ಶನಿಕ, ಸರ್ವೋದಯ ತತ್ವ ಪ್ರತಿಪಾದಕರಾದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯದ ಮೇರು ಕವಿಗಳು; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಅವರ ಸಾಹಿತ್ಯ ಸರ್ವರನ್ನೂ ಒಳಗೊಳ್ಳುವ, ಸರ್ವರಹಿತ ಬಯಸುವ ಕ್ರಾಂತದೃಷ್ಟಿಯನ್ನು ಹೊಂದಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ನಾಡು “ಸರ್ವಜನಾಂಗದ ಶಾಂತಿಯ ತೋಟ”ವಾಗಬೇಕು ಎಂಬ ಕನಸು ಕಂಡವರು ಅವರು. ಅವರ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಗಳು, ‘ಶೂದ್ರ ತಪಸ್ವಿ’, ‘ಜಲಗಾರ’, ‘ಬೆರಳ್ಗೆ ಕೊರಳ್’ ಮುಂತಾದ ಶ್ರೇಷ್ಠ ನಾಟಕಗಳು, ‘ರಾಮಾಯಣ ದರ್ಶನಂ’ ಮಹಾಕಾವ್ಯ ಹಾಗೂ ಸಾವಿರಾರು ಪದ್ಯಗಳು, ಲೇಖನಗಳ ಮೂಲಕ ಕನ್ನಡ ಸಾಹಿತ್ಯದ ಕ್ಷಿತಿಜವನ್ನು ವಿಸ್ತರಿಸಿದ ಮಹಾಕವಿ ಕುವೆಂಪು ಎಂದು ಸ್ವಾಮೀಜಿ ಬಣ್ಣಿಸಿದ್ದಾರೆ.
ಚಕ್ರತೀರ್ಥ ವಜಾಗೊಳಿಸಲು ಒಕ್ಕಲಿಗರ ಸಂಘ ಆಗ್ರಹ: ನಾಡಗೀತೆಗೆ ಅವಹೇಳನ ಮಾಡಿರುವ ಆರೋಪ ಹೊತ್ತಿರುವ ರೋಹಿತ್ ಚಕ್ರತೀರ್ಥನನ್ನು ಈ ಕೂಡಲೇ ಪಠ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅವರು, “ಈ ಸಂಬಂಧ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಜೊತೆ ಚರ್ಚಿಸಲಾಗುವುದು. ನಾಡಿನ ಆರೂವರೆ ಕೋಟಿ ಕನ್ನಡಿಗರು ಸ್ವೀಕರಿಸಿರುವ ನಾಡಗೀತೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರಿಯಲ್ಲ. ಸರ್ಕಾರ ಕ್ರಮ ಜರುಗಿಸುವಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ದೂರು ದಾಖಲು: ರೋಹಿತ್ ಚಕ್ರತೀರ್ಥ ಮತ್ತು ಲಕ್ಷಣ ಆಕಾಶೆ ಕಾರ್ಕಳ ಎಂಬುವವರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈಗಾಗಲೇ ದೂರು ನೀಡಲಾಗಿದೆ. ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ಪಿ ರಂಗನಾಥ್, ವಕೀಲರಾದ ಕೆ.ಎನ್ ಜಗದೀಶ್ ಕುಮಾರ್, ಹರಿರಾಮ್ ಮತ್ತು ಸೂರ್ಯ ಮುಕುಂದರಾಜ್‌ರವರು ಇತ್ತೀಚೆಗೆ ಬೆಂಗಳೂರು ಪೊಲೀಸ್ ಆಯುಕ್ತರಾದ ಪ್ರತಾಪ ರೆಡ್ಡಿಯವರಿಗೆ ದೂರು ಸಲ್ಲಿಸಿದ್ದಾರೆ.



ಸಿದ್ಧರಾಮಯ್ಯ ಗೆ ಉಗುಳೋದು ಬಿಟ್ಟು
ಇವರಿಗೆ ಪಾಠ ಮಾಡುತ್ತಾರೆ ಅಂದರೆ
ವಿಪರ್ಯಾಸ ಹಾಗೂ ಆಶ್ಚರ್ಯ.