Homeಅಂತರಾಷ್ಟ್ರೀಯತಾಲಿಬಾನ್ ಆಕ್ರಮಣ: ತಜಕಿಸ್ತಾನದಲ್ಲಿ ರಕ್ಷಣೆ ಪಡೆದ 1000 ಕ್ಕೂ ಹೆಚ್ಚು ಅಫ್ಘಾನ್ ಸೈನಿಕರು

ತಾಲಿಬಾನ್ ಆಕ್ರಮಣ: ತಜಕಿಸ್ತಾನದಲ್ಲಿ ರಕ್ಷಣೆ ಪಡೆದ 1000 ಕ್ಕೂ ಹೆಚ್ಚು ಅಫ್ಘಾನ್ ಸೈನಿಕರು

- Advertisement -
- Advertisement -

ಅಫ್ಘಾನಿಸ್ತಾನದಿಂದ ಅಮೆರಿಕ ಸೈನ್ಯವನ್ನು ಹಿಂತೆಗೆಯುತ್ತಿದ್ದಂತೆ ತಾಲಿಬಾನ್‌ ಮತ್ತು ಅಫ್ಘಾನ್ ಪಡೆಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯಗಳಲ್ಲಿ  ತಾಲಿಬಾನ್ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದು ಅಫ್ಘಾನ್ ಪಡೆಗಳ ಮೇಲೆ ದಾಳಿ ನಡೆಸುತ್ತಿದೆ. ಸೋಮವಾರ ತಾಲಿಬಾನ್‌ ದಾಳಿಯಿಂದ ತಪ್ಪಿಸಿಕೊಳ್ಳಲು ಅಫ್ಘಾನ್ ಪಡೆಗೆ ಸೇರಿದ 1000 ಕ್ಕೂ ಹೆಚ್ಚು ಸೈನಿಕರು ಪಕ್ಕದ ದೇಶ ತಜಕಿಸ್ತಾನದಲ್ಲಿ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ.

ಉತ್ತರ ಅಫ್ಘಾನಿಸ್ತಾನದ ಗ್ರಾಮೀಣ ಪ್ರಾಂತ್ಯಗಳಲ್ಲಿ ತಾಲಿಬಾನ್ ಪ್ರಾಬಲ್ಯವನ್ನು ಮುರಿಯಲು ಅಫ್ಘಾನಿಸ್ತಾನ ಮತ್ತು ಅಮೆರಿಕ ಪಡೆಗಳು ಇಷ್ಟು ವರ್ಷ ಹೋರಾಟ ನಡೆಸಿದ್ದವು. ಅಫ್ಘಾನ್ ನಲ್ಲಿನ ಅಮೆರಿಕಾ ಸೇನಾಪಡೆಯ ಕೇಂದ್ರ ಸ್ಥಾನವಾದ ಬಗ್ರಾಮ್ ವಾಯುನೆಲೆಯನ್ನು ಅಫ್ಘಾನ್ ಪಡೆಗಳಿಗೆ ಹಸ್ತಾಂತರಿಸಿರುವುದಾಗಿ ಅಮೆರಿಕ ಕಳೆದ ಶುಕ್ರವಾರ ಘೋಷಿಸಿತ್ತು. ಇದಾದ ಎರಡು ದಿನಗಳ ಬೆನ್ನಲ್ಲೇ ತಾಲಿಬಾನ್ ದಾಳಿ ತೀವ್ರಗೊಂಡಿದ್ದು ಅಫ್ಘಾನ್ ಸೇನಾಪಡೆಗಳು ಅನೇಕ ಕಡೆ ಹಿಮ್ಮೆಟ್ಟುತ್ತಿವೆ. ಪರಿಣಾಮವಾಗಿ ಸೋಮವಾರ 1,000ಕ್ಕೂ ಹೆಚ್ಚು ಅಫ್ಘಾನ್ ಸೈನಿಕರು ನೆರೆಯ ತಜಕಿಸ್ತಾನ ರಾಷ್ಟ್ರದಲ್ಲಿ ರಕ್ಷಣೆ ಪಡೆಯುವ ಸಂದರ್ಭ ಬಂದೊದಗಿದೆ.

1,037 ಅಫ್ಘಾನ್ ಸೈನಿಕರಿಗೆ ತಮ್ಮ ದೇಶದಲ್ಲಿ ರಕ್ಷಣೆಯನ್ನು ನೀಡಲಾಗಿದೆ. ತಾಲಿಬಾನ್ ಪಡೆಯಿಂದ ರಕ್ಷಣೆಯನ್ನು ಪಡೆಯಲು ಸೈನಿಕರು ತಜಕಿಸ್ತಾನ ಗಡಿ ದಾಟಿ ದೇಶದೊಳಗೆ ಪ್ರವೇಶಿಸಿದ್ದಾರೆ. ನೆರೆಹೊರೆಯ ರಾಷ್ಟ್ರಗಳಿಂದ ಉತ್ತಮ ಬಾಂಧವ್ಯವನ್ನು ಹೊಂದುವ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದೆ ಎಂದು  ತಜಕಿಸ್ತಾನ ಸರ್ಕಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.

ಉತ್ತರ ಪ್ರಾಂತ್ಯದ ಗಡಿ ವಲಯದಲ್ಲಿ ಅಫ್ಘಾನ್ ಪಡೆಗಳ ಮಿಲಿಟರಿ ಪೂರೈಕೆ ವ್ಯವಸ್ಥೆಗೆ ತೀವ್ರ ಹೊಡೆತ ಉಂಟಾಗಿದೆ. ತಾಲಿಬಾನ್ ದಾಳಿಗೆ ಅಫ್ಘಾನ್ ಪಡೆಗಳು ತತ್ತರಿಸುತ್ತಿವೆ. ಹಲವಾರು ಭಾಗಗಳಲ್ಲಿ ಸೈನಿಕರು ಒಂದೇ ಒಂದು ಗುಂಡನ್ನು ಸಿಡಿಸದೇ ಶರಣಾಗುತ್ತಿದ್ದಾರೆ. ಅಫ್ಘಾನ್ ಸೈನಿಕರ ನೈತಿಕರ ಸ್ಥೈರ್ಯ ತೀವ್ರವಾಗಿ ಕುಸಿದಿದೆ ಎಂದು ಮಿಲಿಟರಿ ತಜ್ಞರಾದ ಅತ್ತಾ ನೂರಿ ಕಾಬುಲ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 62ಕ್ಕೆ ಏರಿಕೆ, 100ಕ್ಕೂ ಹೆಚ್ಚು ಗಾಯಾಳುಗಳು

ತಾಲಿಬಾನ್‌ ಆಕ್ರಮಣದ ವೇಗ ಮತ್ತು ಹೆಚ್ಚು ಹೆಚ್ಚು ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಲುತ್ತಿರುವುದು ಅಫ್ಘಾನ್ ಪಡೆಗಳನ್ನು ಮಾನಸಿಕವಾಗಿ ಕುಗ್ಗಿಸಿದೆ. 1990 ರಿಂದಲೂ ಉತ್ತರ ಅಫ್ಘಾನ್ ಪ್ರಾಂತ್ಯ ತಾಲಿಬಾನ್ ವಿರೋಧಿ ಮೈತ್ರಿಪಡೆಗಳ ನಿಯಂತ್ರಣದಲ್ಲಿದ್ದು ಈಗ ಆ ಪ್ರದೇಶದಲ್ಲಿ ತಾಲಿಬಾನ್‌ ಕೈಮೇಲಾಗುತ್ತಿರುವುದು ಆತಂಕವನ್ನು ಸೃಷ್ಟಿಸಿದೆ.

ಅಫ್ಘಾನ್ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು ಸರ್ಕಾರ ಮತ್ತು ಅಂತರಾಷ್ಟ್ರೀಯ ಸಮುದಾಯ ಅಫ್ಘಾನಿಸ್ತಾನದ ಜೊತೆಗೆ ನಿಂತರೆ ಮಾತ್ರ ಹೆಚ್ಚುತ್ತಿರುವ ತಾಲಿಬಾನ್ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದು ಅತ್ತ ನೂರಿ ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಅಫ್ಘಾನಿಸ್ತಾನದಲ್ಲಷ್ಟೇ ಅಲ್ಲದೇ ದಕ್ಷಿಣ ಪ್ರಾವಿನೆನ್ಸ್‌ಗಳ ರಾಜಧಾನಿಗಳಾದ ಕಂದಹಾರ್ ಮತ್ತು ಹೆಲ್ಮಂಡ್‌ಗಳಲ್ಲೂ ತಾಲಿಬಾನ್ ಆಕ್ರಮಣ ಮುಂದುವರೆದಿದೆ.  ನಾವು ಯುದ್ಧದಿಂದ ಬಸವಳಿದಿದ್ದೇವೆ. ತಾಲಿಬಾನ್ ಮತ್ತು ಅಪಘಾನ್ ಪಡೆಗಳ ನಡುವಿನ ಸಮರದಲ್ಲಿ ಕುಟುಂಬಗಳನ್ನು ಕಳೆದುಕೊಂಡಿದ್ದೇವೆ. ಯಾರೊಬ್ಬರೂ ಗೆಲ್ಲುತ್ತಿಲ್ಲ. ಇಂದು ನಿರ್ಣಾಯಕ ಘಟನೆ ನಡೆದಿದೆ ಎಂದು ತಾಲಿಬಾನ್ ಆಕ್ರಮಿತ ಹೆಲ್ಮಂಡ್‌ ಪ್ರಾಂತ್ಯದ ನವಾ ಜಿಲ್ಲೆಯ ನಿವಾಸಿ ಮೊಹಮ್ಮದ್ ಬರೆಕ್‌ಜಾಯಿ ಯುದ್ಧ ಪೀಡಿತ ಪ್ರದೇಶದ ನೋವನ್ನು ಹಂಚಿಕೊಂಡಿದ್ದಾರೆ.

ಮೇ ತಿಂಗಳಿನಿಂದ ಅಮೆರಿಕ ಅಫ್ಘಾನಿಸ್ತಾನದಿಂದ ತನ್ನ ಸೇನಾಪಡೆಗಳನ್ನು ಹಿಂತೆಗತವನ್ನು ಆರಂಭಿಸಿದೆ. ಅಮೆರಿಕನ್ ಸೈನ್ಯ ಅಫ್ಘಾನ್ ದೇಶವನ್ನು ತೊರೆಯಲಾರಂಭಿಸುತ್ತಿದ್ದಂತೆ ತಾಲಿಬಾನ್‌ ಅಟ್ಟಹಾಸ ತೀವ್ರಗೊಂಡಿದೆ. ಅಮೆರಿಕ ನಿರ್ಗಮನದ ನಂತರ ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಫ್ಘಾನಿಸ್ತಾನ ಏಕಾಂಗಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದೆ ಸೋವಿಯತ್‌ ರಷ್ಯಾದ ವಿರುದ್ಧದ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ ತಾಲಿಬಾನ್‌ ಪಡೆಗಳಿಗೆ ಪರೋಕ್ಷ ಬೆಂಬಲವನ್ನು ನೀಡಿತ್ತೆಂಬ ಆರೋಪಗಳಿದ್ದು, ರಷ್ಯಾ ಅಫ್ಘಾನಿಸ್ತಾನದಿಂದ ಹಿಂದೆ ಸರಿದ ದಿನದಿಂದಲೂ ಅಮೆರಿಕ ತಾಲಿಬಾನ್‌ ವಿರುದ್ಧ ಹೋರಾಡುತ್ತಿದೆ. ಕಳೆದ 20 ವರ್ಷಗಳ ಅಮೆರಿಕನ್‌ ಕಾರ್ಯಾಚರಣೆಯ ನಂತರವೂ ತಾನೇ ಹುಟ್ಟುಹಾಕಿದ ಸಂಘಟನೆಯನ್ನು ಮಣಿಸಲು ಅಮೆರಿಕದ ಸೇನಾಪಡೆಗಳಿಗೆ ಸಾಧ್ಯವಾಗಿಲ್ಲ. ಈಗ ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಫ್ಘಾನಿಸ್ತಾನವನ್ನು ಏಕಾಂಗಿಯಾಗಿಸಿ ಅಮೆರಿಕ ಹಿಂದೆ ಸರಿಯುವ ಸಂದರ್ಭ ನಿರ್ಮಾಣವಾಗಿದೆ. ದೇಶದಲ್ಲಿ ಸ್ಥಿರತೆಯನ್ನು ಸ್ಥಾಪಿಸುವ ನಮ್ಮ ಕೊನೆಯ ಆಶಾವಾದ ಅಮೆರಿಕದ ನಿರ್ಧಾರದಿಂದ ಮಂಕಾಗುತ್ತಿದೆ ಎಂದು ಅಫ್ಘಾನ್ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಅಮೆರಿಕ ನಂತರ ಭಾರತ ಅಫ್ಘಾನಿಸ್ತಾನದ ಅತ್ಯಂತ ಆಪ್ತ ರಾಷ್ಟ್ರವಾಗಿದ್ದು, ಇಂದಿನ ಸಂದರ್ಭದಲ್ಲಿ ಭಾರತ ಸೇರಿ ಅಂತರಾಷ್ಟ್ರೀಯ ಸಮುದಾಯ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ ಅವರು ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನ ಸೈನಿಕರಿಗೆ ರಕ್ಷಣ ನೀಡಿದ ತಜಕಿಸ್ತಾನಕ್ಕೂ ಆಕ್ರಮಣ ಭೀತಿ ಎದುರಾಗಿದ್ದು ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ತಜಿಕ್ ಸರ್ಕಾರ ಮುಂದಾಗಿದೆ. ಅಫ್ಘಾನ್ ಗಡಿ ಭಾಗಕ್ಕೆ 20,000 ಸಾವಿರ ಸೈನಿಕರನ್ನು ಕಳುಹಿಸಿರುವ ತಜಕಿಸ್ತಾನ ಸರ್ಕಾರ, ನೆರೆ ಹೊರೆಯ ರಾಷ್ಟ್ರಗಳ ಜೊತೆ ಮಾತುಕತೆ ನಡೆಸುತ್ತಿದ್ದು ತಾಲಿಬಾನ್ ಆಕ್ರಮಣವನ್ನು ಗಂಭೀರವಾಗಿ ಪರಿಗಣಿಸುವಂತೆ ಅಂತರಾಷ್ಟ್ರೀಯ ಸಮುದಾಯದಲ್ಲಿ ಮನವಿ ಮಾಡಿದೆ. ತಜಿಕ್ ಅಧ್ಯಕ್ಷ ಎಮೊಮಾಲಿ ರಖಮಾನ್ ರಷ್ಯ ಅಧ್ಯಕ್ಷ ಪುಟಿನ್ ಅವರಿಗೆ ಕರೆ ಮಾಡಿ ತಜಕಿಸ್ತಾನದ ಭದ್ರತೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದು ಪುಟಿನ್ ತಜಕಿಸ್ತಾನಕ್ಕೆ ಅಗತ್ಯ ಸೇನಾ ನೆರವು ನೀಡುವುದಾಗಿ ಭರವಸೆ ನೀಡಿರುವುದಾಗಿ ರಾಯಿಟರ್ಸ್‌ ಜೂನ್‌ 5 ರಂದು ವರದಿ ಮಾಡಿದೆ.

ರಾಜೇಶ್ ಹೆಬ್ಬಾರ್‌


ಇದನ್ನೂ ಓದಿ: ಉದ್ದ ಕೂದಲು ಬಿಟ್ಟ ಕಾರಣಕ್ಕೆ ಪಾಕಿಸ್ತಾನದ ಕಲಾವಿದನನ್ನು ಬಂಧಿಸಿದ ಪೊಲೀಸರು! ತೀವ್ರ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...