ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಲೋಕಾಯುಕ್ತಕ್ಕೆ ಪತ್ರ ಬರೆದಿರುವುದು ಮತ್ತೆ ರಾಜಕೀಯ ಸಮರದ ಕಿಡಿ ಹಚ್ಚಿಸಿದೆ. ಪರಸ್ಪರ ವಾಕ್ಸಮರ ಶುರುವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಇಡಿಯು ದುರುದ್ದೇಶದಿಂದ ಲೋಕಾಯುಕ್ತಕ್ಕೆ ಪತ್ರ ಬರೆದಿದೆ ಎಂದು ದೂರಿದರೆ, ಬಿಜೆಪಿ-ಜೆಡಿಎಸ್ ನಾಯಕರು ಇಡಿ ಪರ ನಿಂತಿದ್ದಾರೆ.
ಲೋಕಾಯುಕ್ತಕ್ಕೆ ಪತ್ರ ಬರೆದಿರುವ ಇಡಿ, “ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾ ಹಂಚಿಕೆ ಮಾಡಿರುವ ನಿವೇಶನಗಳೇ ಅಕ್ರಮವಾಗಿದ್ದು, ಈ ಸಂಬಂಧ ತಮ್ಮ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿವೆ ಎಂದಿದೆ. 50:50 ನಿಯಮದಡಿ ಮುಡಾ ನೀಡಿರುವ ಪರಿಹಾರ ನಿವೇಶನಗಳ ಹಂಚಿಕೆಯಲ್ಲಿ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಒಟ್ಟು 490 ಕೋಟಿ ರೂ. ಗೈಡ್‌ಲೈನ್ ದರ ಮತ್ತು ರೂ. 700 ಕೋಟಿಯಷ್ಟು ಮಾರುಕಟ್ಟೆ ದರವುಳ್ಳ 1,095 ನಿವೇಶನಗಳನ್ನು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಹಾಗೂ ಪ್ರಭಾವಿಗಳಿಗೆ ಅಕ್ರಮವಾಗಿ ಹಂಚಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು ಈ ಬಗ್ಗೆ ಕ್ರಮವಹಿಸಿ” ಎಂದು ಹೇಳಿದೆ.
ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಇಡಿ ಪತ್ರ -ಸಿಎಂ
ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, “ಹೈಕೋರ್ಟ್‌ನಲ್ಲಿ ನಮ್ಮ ಅರ್ಜಿ ವಿಚಾರಣೆಗೆ ಬರುವ ಹಿಂದಿನ ದಿನವೇ ಜಾರಿ ನಿರ್ದೇಶನಾಲಯದವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶ ಇದು” ಎಂದು ಆರೋಪಿಸಿದ್ದಾರೆ.
ಬುಧವಾರ (ಡಿ.4) ಮಂಡ್ಯದ ಕೆ.ಆರ್ ಪೇಟೆಯ ಕೋಡಿಮಾರನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಇಡಿ ಯವರಿಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ. ತನಿಖೆ ಬಳಿಕ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಅದನ್ನು ಬಿಟ್ಟು, ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶವಿದೆ” ಎಂದು ದೂರಿದ್ದಾರೆ.
ಇಡಿ ಹತಾಶೆಗೊಂಡಿದೆ-ಡಿ.ಕೆ ಶಿವಕುಮಾರ್
ಇಡಿ ಪತ್ರ ಬರೆದಿರುವ ಕುರಿತು ಕಿಡಿಕಾರಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, “ಯಾವುದೇ ತನಿಖೆ ನಡೆದರೂ, ಅದು ಗೌಪ್ಯವಾಗಿರಬೇಕು. ಏನಾದರು ಸಂತ್ಯಾಂಶವಿದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದರ ಬದಲು ಮಾಧ್ಯಮಗಳಿಗೆ ನೀಡುತ್ತಾರೆಂದರೆ ಇಡಿಯವರು ಎಷ್ಟು ಹತಾಶರಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ” ಎಂದಿದ್ದಾರೆ.
“ಮುಡಾ ಪ್ರಕರಣದಲ್ಲಿ ಹಣ ತೆಗೆದುಕೊಳ್ಳುವುದು, ಕೊಡುವುದು ಆಗಿಲ್ಲ. ಹೀಗಿರುವಾಗ ಅದು ಮನಿ ಲಾಂಡರಿಂಗ್ ಹೇಗಾಯಿತು? ತನಿಖಾ ಸಂಸ್ಥೆ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದರೆ ಹೇಗೆ? ಒಂದು ತನಿಖಾ ಸಂಸ್ಥೆ ಮತ್ತೊಂದಕ್ಕೆ ಹೀಗೆ ಮಾಡಿ ಎನ್ನುವುದು ನಾನು ಹೊಸದಾಗಿ ನೋಡುತ್ತಿರುವುದು. ಇದಕ್ಕೆಲ್ಲ ಜನರು ಉತ್ತರ ಕೊಡಲಿದ್ದಾರೆ, ನಾವು ಕೊಡುತ್ತೇವೆ” ಎಂದು ಹೇಳಿದ್ದಾರೆ.
ಇಡಿ ವಿರುದ್ದ ಕಾನೂನು, ರಾಜಕೀಯ ಹೋರಾಟ-ಡಾ.ಜಿ ಪರಮೇಶ್ವರ್
ಲೋಕಾಯುಕ್ತ ತನಿಖೆಗೆ ಅಡ್ಡಿ ಮಾಡಲು ಮತ್ತು ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಇಡಿ ಪ್ರಯತ್ನಿಸುತ್ತಿದೆ. ಇಡಿ ವಿರುದ್ದ ನಾವು ಕಾನೂನಾತ್ಮಕ ಮತ್ತು ರಾಜಕೀಯ ಹೋರಾಟ ನಡೆಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರೇಮೇಶ್ವರ್, ” ಒಂದು ವಿಷಯಕ್ಕೆ ಸಂಬಂಧಿಸಿದಂತೆ ಎರಡು ತನಿಖಾ ಸಂಸ್ಥೆಗಳು ತನಿಖೆ ಮಾಡಲು ಅವಕಾಶವಿಲ್ಲ. ಆದರೆ, ಕಾನೂನು ಗಾಳಿಗೆ ತೂರಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಇಡಿ ಮುಡಾ ಪ್ರಕರಣದಲ್ಲಿ ಮೂಗು ತೂರಿಸಿದೆ ಎಂದು ಕಿಡಿಕಾರಿದ್ದಾರೆ.
ಇಡಿಗೆ ಯಾವ ಅಧಿಕಾರವಿದೆ-ಡಾ. ಸುಧಾಕರ್
ಮುಡಾ ಪ್ರಕರಣದ ತನಿಖೆ ಮಾಡಲು ಇಡಿಗೆ ನ್ಯಾಯಾಲಯ ಅನುಮತಿ ಕೊಟ್ಟಿದೆಯಾ? ರಾಜ್ಯದ ತನಿಖಾ ಸಂಸ್ಥೆಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಲು ಇಡಿಗೆ ಯಾವ ಅಧಿಕಾರವಿದೆ? ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಪ್ರಶ್ನಿಸಿದ್ದಾರೆ.
ಇಡಿ ಸೀಳು ನಾಯಿ -ಕೃಷ್ಣ ಬೈರೇಗೌಡ
ಮುಡಾ ಪ್ರಕರಣದಲ್ಲಿ ಇಡಿ ಎನ್ನುವ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದ್ದಾರೆ. ಇದು ರಾಜಕೀಯ ದಾಳಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡಿ ಅಂದ್ರೆ ಜಾರಿ ನಿರ್ದೇಶನಾಲಯ ಅಲ್ಲ, ಅದು ರಾಜಕೀಯ ಏಜೆನ್ಸಿ. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಲು, ನಾಯಕರ ವಿರುದ್ಧ ದಾಳಿ ಮಾಡೋಕ್ಷೆ ಇರುವ ಜಾಬ್ ಎಂದು ದೂರಿದ್ದಾರೆ.
ಇಡಿ ಕೇಂದ್ರ ಸರ್ಕಾರದ ಕೈಗೊಂಬೆ- ಪ್ರಿಯಾಂಕ್ ಖರ್ಗೆ
ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು ಕೇಂದ್ರ ಸರ್ಕಾರ ಕೈಗೊಂಬೆಗಳಾಗಿವೆ. ಎಲ್ಲೆಲ್ಲಿ ಬಿಜೆಪಿಯ ರಾಜ್ಯ ಘಟಕಗಳು ದುರ್ಬಲವಾಗಿವೆಯೋ, ಅಂತಹ ಕಡೆ ಸಿಬಿಐ, ಇಡಿ, ಐಟಿಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಕೆ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಲಿಬಾಬಾ ಮತ್ತು 40 ಕಳ್ಳರು-ಹೆಚ್.ಡಿ ಕುಮಾರಸ್ವಾಮಿ
ಮುಡಾದಲ್ಲಿ ಏನೆಲ್ಲಾ ನಡೆದಿದೆ ಎಂಬುವುದು ಹಾದಿಬೀದಿಯಲ್ಲಿ ಚರ್ಚೆಯ ನಡೆಯುತ್ತಿದೆ. ಆದರೆ, ಸರ್ಕಾರ ಮತ್ತು ಸಚಿವರು ‘ಆಲಿಬಾಬಾ ಮತ್ತು 40 ಕಳ್ಳರ ರೀತಿ’ ಇದ್ದಾರೆ. ಪ್ರಕರಣದಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಭಯದಿಂದ ನಿವೇಶನ ವಾಪಸ್ -ಬಿ.ವೈ ವಿಜಯೇಂದ್ರ
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಭಯದಿಂದ 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಮುಡಾದಲ್ಲಿ ತಮ್ಮ ಪತ್ನಿಯ 14 ನಿವೇಶನಗಳನ್ನು ವಾಪಸ್ ಮಾಡಲು 65 ಕೋಟಿ ರೂಪಾಯಿ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಬಳಿಕ ಒಂದು ರೂಪಾಯಿ ಪಡೆಯದೆ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಅವರ ಪಾಪದ ಕೊಡ ತುಂಬಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಅಕ್ರಮದಲ್ಲಿ ಮರೀಗೌಡ, ದಿನೇಶ್ ಕುಮಾರ್ ಭಾಗಿ-ಆರೋಪ
ಭೂಮಾಲೀಕರಿಗೆ 50:50 ಅನುಪಾತದಲ್ಲಿ ಪರಿಹಾರ ನಿವೇಶನ ನೀಡುವ ನಿಯಮವನ್ನು ರದ್ದುಪಡಿಸಿದ ಹಲವು ತಿಂಗಳ ನಂತರವೂ ಮುಡಾ 252 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದೆ ಎಂದು ಇಡಿ ಆರೋಪಿಸಿದೆ. ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮತ್ತು ಆಯುಕ್ತರಾಗಿದ್ದ ಜಿ.ಟಿ ದಿನೇಶ್ ಕುಮಾರ್ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಹೇಳಿದೆ.
ಇಡಿ ಮುಂದೆ ಹಾಜರಾದ ಭೂ ಅಧಿಕಾರಿ ಮಂಜುನಾಥ್
ಇಡಿ ಪತ್ರದ ಕುರಿತು ವಾಕ್ಸಮರಗಳ ನಡುವೆ ಮುಡಾ ವಿಶೇಷ ಭೂ ಅಧಿಕಾರಿ ಮಂಜುನಾಥ್, ಬುಧವಾರ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಶಾಂತಿ ನಗರದಲ್ಲಿರುವ ಇಡಿ ಕಚೇರಿಗೆ ದಾಖಲೆಗಳ ಸಹಿತ ವಿಚಾರಣೆಗೆ ಹಾಜರಾದ ಮಂಜುನಾಥ್ ಅವರನ್ನು ಅಧಿಕಾರಿಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡರು.
ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ ಇಂದು
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಇಂದು (ಡಿ.5) ನಡೆಯಲಿದೆ. ಸಿದ್ದರಾಮಯ್ಯ ಹಾಗೂ ಜಮೀನು ಮಾಲೀಕ ದೇವರಾಜು ಮೇಲ್ಮನವಿಗಳ ವಿಚಾರಣೆಯನ್ನು ಮುಂದೂಡಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದಿಗೆ ವಿಚಾರಣೆ ನಿಗದಿ ಮಾಡಿದೆ.
ಇದನ್ನೂ ಓದಿ : ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ; ಅನ್ನದಾತರಿಂದ ಸರ್ಕಾರಕ್ಕೆ ಅಂತಿಮ ಗಡುವು


