ಪ್ರಧಾನಿ ನರೇಂದ್ರ ಮೋದಿ ಕೇವಲ ಹಿಂದೂ-ಮುಸ್ಲಿಂ, ಮಂದಿರ-ಮಸೀದಿ, ಸನಾತನ-ಇಸ್ಲಾಂ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಲೆ ಏರಿಕೆ, ನಿರುದ್ಯೋಗ ಮತ್ತು ಬಡತನದಂತಹ ದೇಶದ ದೊಡ್ಡ ಸಮಸ್ಯೆಗಳ ಬಗ್ಗೆ ಮೌನವಾಗಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಜಾರ್ಖಂಡ್‌ನ ಛಾತ್ರಾದಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, ಬೆಲೆ ಏರಿಕೆ ವಿಚಾರವಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಯುಪಿಎ ಆಡಳಿತದಲ್ಲಿ ಕೇಸರಿ ಪಕ್ಷಕ್ಕೆ ಒಂದು ಕಾಲದಲ್ಲಿ ಪ್ರಮುಖ ಕಾಳಜಿಯಾಗಿದ್ದ ಹಣದುಬ್ಬರವು ಈಗ ಅವರಿಗೆ ಆರಾಮದಾಯಕವಾಗಿದೆ. ಅಡುಗೆ ಅನಿಲ ದರವು ಯುಪಿಎ ಆಡಳಿತಾವಧಿಯಲ್ಲಿ 400ರೂ. ಇದ್ದಾಗ, ಬಿಜೆಪಿಯು ಬೆಲೆಯೇರಿಕೆಯನ್ನು ರಾಕ್ಷಸ ಎಂದು ಕರೆದಿತ್ತು. ಆದರೆ, ಅದರ ದರವು ರೂ. 1,200ನ್ನು ಮೀರಿರುವಾಗ ಬೆಲೆಯೇರಿಕೆಯು ಪ್ರೇಮಿಯಾಗಿ ಬದಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಪಕ್ಷವು ದ್ವೇಷದ ರಾಜಕಾರಣ ಮಾಡುತ್ತಿದೆ ಮತ್ತು ಹಿಂದೂ-ಮುಸ್ಲಿಂ ಹೆಸರಿನಲ್ಲಿ ತಾರತಮ್ಯವನ್ನು ಹರಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೇವಲ ಹಿಂದೂ-ಮುಸ್ಲಿಂ, ಮಂದಿರ-ಮಸೀದಿ, ಸನಾತನ-ಇಸ್ಲಾಂ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಲೆ ಏರಿಕೆ, ನಿರುದ್ಯೋಗ ಮತ್ತು ಬಡತನದಂತಹ ದೇಶದ ದೊಡ್ಡ ಸಮಸ್ಯೆಗಳ ಬಗ್ಗೆ ಮೌನವಾಗಿದ್ದಾರೆ. ಪ್ರಧಾನಮಂತ್ರಿಯವರು ಇತ್ತೀಚೆಗೆ ಜಾರ್ಖಂಡ್‌ನ ಛತ್ರಕ್ಕೆ ಭೇಟಿ ನೀಡಿದ್ದರು, ಆದರೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಒಂದೇ ಒಂದು ಪದವನ್ನು ಹೇಳಲಿಲ್ಲ ಅಥವಾ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಮಾರ್ಗಸೂಚಿಯನ್ನು ನೀಡಲಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಬಿಜೆಪಿಯು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಸಂಚು ರೂಪಿಸಿ ಕಂಬಿ ಹಿಂದೆ ಕಳುಹಿಸಲಾಗಿದೆ. ಬಿಜೆಪಿಗರು ನಮ್ಮ ಕುಟುಂಬದ ವಿರುದ್ಧ ಇಡಿ, ಸಿಬಿಐನ್ನು ಬಳಸಿದ್ದಾರೆ, ಆದರೆ ನಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ ಒಂದು ಕೋಟಿ ಯುವಕರಿಗೆ ಉದ್ಯೋಗ, ಎಲ್‌ಪಿಜಿ ಸಿಲಿಂಡರ್ ದರವನ್ನು 500ರೂ.ಗೆ ಇಳಿಸಲಾಗುವುದು ಮತ್ತು 200ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆ ಬಹಳ ಮಹತ್ವದ್ದಾಗಿದೆ ಏಕೆಂದರೆ ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯಕ್ಕೆ ಸಿಲುಕಲಿದೆ, ಕೇಂದ್ರದಿಂದ ಮೋದಿ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ದೊಡ್ಡ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಮೋದಿ ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸುವ ಬದಲು ರೈಲ್ವೆ, ವಿಮಾನ ನಿಲ್ದಾಣಗಳು, ಬ್ಯಾಂಕ್‌ಗಳು ಮತ್ತು ಸಾರ್ವಜನಿಕ ವಲಯದ ಘಟಕಗಳನ್ನು ಮಾರಾಟ ಮಾಡುವಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧೆಗಿಳಿದಿದ್ದ ಹಾಸ್ಯನಟ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕಾರ


