ಜಾತಿ ತಾರತಮ್ಯ ಆರೋಪದ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಹತ್ತು ದಿನಗಳ ನಂತರ, ತಮಿಳುನಾಡಿನ ವಿಲ್ಲುಪುರಂನ ವಿಕ್ರವಂಡಿಯ 18 ವರ್ಷದ ದಲಿತ ಯುವಕ ಮಂಗಳವಾರ ಸಾವನ್ನಪ್ಪಿದ್ದಾನೆ. ಮೃತ ವಡಕುಚಿಪಾಳಯಂನ ಎಸ್. ಗಜಿನಿ ಸರ್ಕಾರಿ ಅರಿಗ್ನಾರ್ ಅಣ್ಣಾ ಕಲಾ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಇತಿಹಾಸ ವಿದ್ಯಾರ್ಥಿಯಾಗಿದ್ದ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಮೂಲಗಳ ಪ್ರಕಾರ, ನವೆಂಬರ್ 6 ರಂದು ಹೋಟೆಲ್‌ನಿಂದ ಮನೆಗೆ ಹಿಂತಿರುಗುತ್ತಿದ್ದಾಗ, ವನ್ನಿಯಾರ್ ಸಮುದಾಯದ ಮೂವರು ವ್ಯಕ್ತಿಗಳು ಕುಡಿದ ಮತ್ತಿನಲ್ಲಿ ಬೈಕ್‌ನಲ್ಲಿ ತ್ರಿವಳಿ ಸವಾರಿ ಮಾಡಿ, ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದರು. ಗಲಾಟೆ ಭುಗಿಲೆದ್ದಿತು ಮತ್ತು ಗಜಿನಿ ದಲಿತ ಪ್ರದೇಶದವರು ಎಂದು ತಿಳಿದಾಗ, ಮೂವರು ವ್ಯಕ್ತಿಗಳು ಜಾತಿ ನಿಂದನೆ ಮಾಡಿ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹುಡುಗನ ತಂದೆ ಮಧ್ಯಪ್ರವೇಶಿಸಿದಾಗ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂರು ದಿನಗಳ ನಂತರ, ಗಜಿನಿ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರು. ಕುಟುಂಬವು ಆತನನ್ನು ರಕ್ಷಿಸಿ ಮುಂಡಿಯಂಬಕ್ಕಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿತು. ಅಲ್ಲಿ ಆತ 10 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದು, ಮಂಗಳವಾರ ಮುಂಜಾನೆ ಸಾವನ್ನಪ್ಪಿದರು.
ದೂರಿನ ಆಧಾರದ ಮೇಲೆ, ವಿಲ್ಲುಪುರಂ ತಾಲ್ಲೂಕು ಪೊಲೀಸರು ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಾಲಕನಿಗೆ ಹಲ್ಲೆಕೋರರ ಗುರುತುಗಳನ್ನು ದೃಢೀಕರಿಸಲು ಸಾಧ್ಯವಾಗದ ಕಾರಣ ಶಂಕಿತರನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಆದರೆ ಕುಟುಂಬವು ಹಲ್ಲೆಕೋರರಲ್ಲಿ ಕನಿಷ್ಠ ಒಬ್ಬರನ್ನು ಗುರುತಿಸಿದೆ ಎಂದು ಹೇಳಿದೆ.
“ಘಟನೆಯ ಸ್ಥಳದಲ್ಲಿ ಮೊಬೈಲ್ ಟವರ್ ಸಿಗ್ನಲ್‌ಗಳನ್ನು ಟ್ರ್ಯಾಕ್ ಮಾಡುವುದು ಎಷ್ಟು ಕಷ್ಟ? ನನ್ನ ಮಗ ಈಗಾಗಲೇ ಮೃತಪಟ್ಟಿರುವುದರಿಂದ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ನಮಗೆ ನ್ಯಾಯ ಬೇಕು; ಬಸ್ ನಿಲ್ದಾಣ ತಲುಪಲು ದಲಿತ ನಿವಾಸಿಗಳಿಗೆ ರಕ್ಷಣೆ ನೀಡಬೇಕು” ಅವರು ಗಜಿನಿಯ ತಂದೆ ಪಿ ಸೆಮ್ಮನೇರಿ ತಿಳಿಸಿದರು ಎಂದು ‘ಟಿಎನ್‌ಐಇ’ ತಿಳಿಸಿದರು.
ಈ ಮಧ್ಯೆ, ಜಿಲ್ಲಾ ಆದಿ ದ್ರಾವಿಡರ್ ಕಲ್ಯಾಣ ಇಲಾಖೆಯು ಮೃತ ಕುಟುಂಬಕ್ಕೆ ₹6 ಲಕ್ಷ ಪರಿಹಾರ ಮಂಜೂರು ಮಾಡಿದೆ.


