ವ್ಯಕ್ತಿಯ ಕಾರಿನ ಮೇಲೆ ಬಿದ್ದಿದ್ದ ಧೂಳಿನ ಮೇಲೆ ಗೀಚಿದ್ದಕ್ಕಾಗಿ ಒಂಬತ್ತು ವರ್ಷದ ದಲಿತ ಬಾಲಕನನ್ನು ಗೌಂಡರ್ ಸಮುದಾಯಕ್ಕೆ ಸೇರಿದ 26 ವರ್ಷದ ವ್ಯಕ್ತಿಯೊಬ್ಬರು ಶನಿವಾರದಂದು ಕಟ್ಟಿಹಾಕಿ ಥಳಿಸಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಅವಿನಾಶಿಯಲ್ಲಿ ನಡೆದಿದೆ ಎಂದು ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.
ತಮಿಳುನಾಡಿನಲ್ಲಿ ಹಿಂದುಳಿದ ವರ್ಗ (ಬಿಸಿ) ಎಂದು ವರ್ಗೀಕರಿಸಲಾದ ಪ್ರಬಲ ಜಾತಿಯ ವ್ಯಕ್ತಿ, ಹಲ್ಲೆಯನ್ನು ಪ್ರಶ್ನಿಸಿದ ಹುಡುಗನ ಸಂಬಂಧಿಕರಿಬ್ಬರಿಗೂ ಇರಿದಿದ್ದಾನೆ. ಮೋಹನ್ ಎಂದು ಗುರುತಿಸಲಾಗಿರುವ ಆರೋಪಿಯನ್ನು ಚೇಯೂರು ಪೊಲೀಸರು ಶನಿವಾರ ಬಂಧಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಧೂಳಿನ ಮೇಲೆ 9 ವರ್ಷದ ಬಾಲಕ ಗೀಚುತ್ತಿದ್ದುದನ್ನು ಮೋಹನ್ ನೋಡಿದ್ದಾನೆ ಎಂದು ವರದಿಯಾಗಿದೆ. ಬಾಲಕನನ್ನು ತನ್ನ ಮನೆಗೆ ಎಳೆದೊಯ್ದು, ಕಟ್ಟಿಹಾಕಿ ಒಂದು ಗಂಟೆಗೂ ಹೆಚ್ಚು ಕಾಲ ಆತನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಸಹಾಯಕ್ಕಾಗಿ ಬಾಲಕ ಕೂಗಿಕೊಂಡಿದ್ದು, ಆತನನ್ನು ಹುಡುಕುತ್ತಿದ್ದ ಸಂಬಂಧಿಕರು ಮೋಹನನ ಮನೆಗೆ ಪ್ರವೇಶಿಸಿದರು. ಅವರು ಹಲ್ಲೆಯನ್ನು ಪ್ರಶ್ನಿಸಿದ್ದು, ಮೋಹನ್ ಬಾಲಕನ ಸಂಬಂಧಿಕರಾದ ಕರುಪಾಠಲ್ (55) ಮತ್ತು ಸೆಲ್ವರಾಜ್ (47) ಎಂಬ ಇಬ್ಬರಿಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ತಿರುಪ್ಪೂರ್ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇಯೂರು ಪೊಲೀಸರು ಶನಿವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ಮೋಹನ್ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ;


