ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಅಪ್ರಾಪ್ತ ದಲಿತ ಬಾಲಕನ ಮೇಲೆ ನಡೆದ ಆಪಾದಿತ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಪಳಯಂಕೊಟ್ಟೈ ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರನ್ನು ಮಂಗಳವಾರ ಬಂಧಿಸಿದ್ದು, ಏಳು ಮಂದಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ‘ದಿ ಸೌತ್ ಫಸ್ಟ್’ ವರದಿ ಮಾಡಿದೆ.
ದಾಳಿಯನ್ನು ಮಾಜಿ ಸಚಿವ ಹಾಗೂ ಎಐಎಡಿಎಂಕೆ ಮುಖಂಡ ಜಯಕುಮಾರ್ ಖಂಡಿಸಿದ್ದಾರೆ. ಅವರು ಡಿಎಂಕೆ ಸರ್ಕಾರವನ್ನು ಟೀಕಿಸಿದ್ದು, ಡಿಎಂಕೆಯು ಚುನಾವಣೆಗೆ ಮುಂಚಿತವಾಗಿ ಮಾತ್ರ ಅಂಚಿನಲ್ಲಿರುವ ಸಮುದಾಯಗಳ ಜನರ ಬಗ್ಗೆ ಕಾಳಜಿ ವಹಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ನವೆಂಬರ್ 4 ರಂದು, ಮೆಲಪಟ್ಟಂ ನಿವಾಸಿ ಮನೋಜ್ ಕುಮಾರ್ ಅವರು ಮೋಟಾರು ಬೈಕ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ತಿರುನೆಲ್ವೇಲಿಯ ಖಾಸಗಿ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿದ್ದ ಅವರು ಇದರಿಂದ ಗಾಬರಿಗೊಂಡು ಕಾರಿನಲ್ಲಿದ್ದವರ ಮೇಲೆ ಕೂಗಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಅವರು ಕಾರಿನಿಂದ ಇಳಿದು ಅಪ್ರಾಪ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಮಧ್ಯಪ್ರವೇಶಿಸಿದ ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೂ ಆರೋಪಿ ಅಷ್ಟಕ್ಕೇ ನಿಲ್ಲಲಿಲ್ಲ. ಅಪ್ರಾಪ್ತ ಬಾಲಕ ಮನೆಯಲ್ಲಿ ಒಬ್ಬನೇ ಇದ್ದಾನೆ ಎಂದು ತಿಳಿದ ವ್ಯಕ್ತಿಗಳು ಸಂಜೆಯ ನಂತರ ಮೆಲಪಟ್ಟಂ ಗ್ರಾಮಕ್ಕೆ ಕಾರು ಚಲಾಯಿಸಿ ಬಾಲಕನ ಮನೆಗೆ ಹಾನಿ ಮಾಡಿದ್ದಾರೆ.
ಹತ್ತು ಮಂದಿ ಆರೋಪಿಗಳು ವಿದ್ಯುತ್ ಫ್ಯಾನ್, ಅಡುಗೆ ಪಾತ್ರೆ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಒಡೆದಿದ್ದಾರೆ. ನಂತರ ಆರೋಪಿಗಳು ಮನೋಜ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಕುಡುಗೋಲುಗಳಿಂದ ಹೊಡೆದು ಬಿಯರ್ ಬಾಟಲಿಯಿಂದ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಬಾಲಕನನ್ನು ನಂತರ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಅವರ ನಿವಾಸಕ್ಕೆ ಆಗಮಿಸಿದ ಪಳಯಂಕೊಟ್ಟೈ ತಾಲೂಕು ಪೊಲೀಸರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹತ್ತು ಆರೋಪಿಗಳ ವಿರುದ್ಧ ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಬಾಲಾಪರಾಧಿ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭವಿಷ್ಯದ ದಾಳಿಗಳ ಬಗ್ಗೆ ಆತಂಕಗೊಂಡ ಬಾಲಕನ ಪೋಷಕರು ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ.
ದಲಿತ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ?
ದಾಳಿಯ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮನೋಜ್‌ನ ತಾಯಿ, ಆರೋಪಿಗಳು ಹುಡುಗನ ಜಾತಿಯ ಗುರುತನ್ನು ಉಲ್ಲೇಖಿಸಿದ್ದಾರೆ. ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಅವರನ್ನು ಯಾರು ಹೊಣೆಗಾರರನ್ನಾಗಿ ಮಾಡುತ್ತಾರೆ ಎಂದು ಕೇಳಿದರು.
“ನಮ್ಮ ಮನೆಯೊಳಗೆ ದಾಳಿ ಮಾಡಿದಾಗ ನಮಗೆ ಯಾವ ರೀತಿಯ ರಕ್ಷಣೆ ಇದೆ? ನನ್ನ ಮಗ ರಾಶ್ ಡ್ರೈವಿಂಗ್ ಬಗ್ಗೆ ಕೇಳಿದ್ದು ಬಿಟ್ಟರೆ ನಮ್ಮ ತಪ್ಪೇನು? ನಾವು ಆತ್ಮಹತ್ಯೆಯಿಂದ ಸಾಯಬೇಕೇ? ಎಂದು ಅಸಹಾಯಕತೆ ಹೊರಹಾಕಿದರು.
ದಲಿತರ ಮೇಲೆ ಇಂತಹ ಹೆಚ್ಚಿನ ಹಲ್ಲೆಗಳು ನಡೆಯದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಲ್ಲಿ ಮನವಿ ಮಾಡಿದರು.
ಮೂವರ ಬಂಧನ, ಉಳಿದವರಿಗಾಗಿ ಶೋಧ
ಹಿಂಸಾತ್ಮಕ ದಾಳಿಯಲ್ಲಿ ಭಾಗಿಯಾಗಿರುವ 10 ಜನರನ್ನು ಹುಡುಕಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡವು ನವೆಂಬರ್ 4 ರಂದು ತಡರಾತ್ರಿ ಸಮೀಪದ ತಿರುಮಲೈಕೊಲುಂತುಪುರಂ ಗ್ರಾಮದಲ್ಲಿ ಮೂವರನ್ನು ಬಂಧಿಸಿದ್ದಾರೆ. ಇದು ರಾಶ್ ಡ್ರೈವಿಂಗ್ ಗಲಾಟೆ ನಡೆದ ಗ್ರಾಮವಾಗಿದೆ.
ಬಂಧಿತರನ್ನು ಮುತ್ತುಮಲೈ, ಲಕ್ಷ್ಮಣನ್ ಮತ್ತು 17 ವರ್ಷದ ಬಾಲಕನನ್ನು ಪ್ರಸ್ತುತ ಸುರಕ್ಷಿತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ಏಳು ಆರೋಪಿಗಳ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ; ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಭುತ್ವಕ್ಕೆ ಅವಕಾಶವಿಲ್ಲ : ಸುಪ್ರೀಂಕೋರ್ಟ್


