ಕೇಂದ್ರದ ಕಾನೂನುಗಳಾದ ಸಿಎಎ ಸೇರಿದಂತೆ ಮೂರು ಕೃಷಿ ಕಾನೂನುಗಳನ್ನು ಸಂಸತ್ತಿನಲ್ಲಿ ಬೆಂಬಲಿಸಿದ್ದಕ್ಕಾಗಿ ಎಐಎಡಿಎಂಕೆ ಮತ್ತು ಪಿಎಂಕೆ ವಿರುದ್ದ ತೀವ್ರವಾಗಿ ದಾಳಿ ನಡೆಸಿರುವ ತಮಿಳುನಾಡು ವಿರೋಧ ಪಕ್ಷ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ತಮಿಳುನಾಡು ಅಸೆಂಬ್ಲಿಯ ಮೊದಲ ವ್ಯವಹಾರವೆ ಕೃಷಿ ಕಾನೂನುಗಳ ವಿರುದ್ಧದ ನಿರ್ಣಯವಾಗಲಿದೆ ಎಂದು ಭರವಸೆ ನೀಡಿದ್ದಾರೆ.
“ಕೃಷಿ ಕ್ಷೇತ್ರವನ್ನು ಸಾಂಸ್ಥಿಕಗೊಳಿಸಲು ಮತ್ತು ಬಡ ರೈತರ ಜೀವನೋಪಾಯವನ್ನು ಅಳಿಸಿಹಾಕಲು ಉದ್ದೇಶಿಸಿರುವ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಎಐಎಡಿಎಂಕೆ ಮತ್ತು ಪಿಎಂಕೆ ಈ ಕಾನೂನುಗಳನ್ನು ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಬೆಂಬಲಿಸಿದಂತೆ ಬೆಂಬಲಿಸಿದ್ದವು. ಈಗ ರಾಜ್ಯದಲ್ಲಿ ಚುನಾವಣೆ ಇರುವುದರಿಂದ ಮೂರು ಕೃಷಿ ಕಾನೂನುಗಳನ್ನು ಅನುಮತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ತಿರುಪಥೂರು ಜಿಲ್ಲೆಯ ಜೋಲಾರ್‌ಪೇಟ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ನೌಕರರ ಮುಷ್ಕರ ನೆಪವೊಡ್ಡಿ ಬಿಎಂಟಿಸಿ ಖಾಸಗೀಕರಣಗೊಳಿಸುವ ಹುನ್ನಾರ-ಆಪ್ ಆರೋಪ
ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ತಮ್ಮ ವಿಧಾನಸಭೆಗಳಲ್ಲಿ ಕೃಷಿ ಕಾನೂನುಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದರೂ, ಪಳನಿಸ್ವಾಮಿ ಅವರ ಸರ್ಕಾರ ಕಾನೂನಿನ ವಿರುದ್ದ ನಿರ್ಣಯವನ್ನು ತರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾವು ಮತ್ತೆ ಅಧಿಕಾರಕ್ಕೆ ಬಂದರೆ ಅಸೆಂಬ್ಲಿಯ ಮೊದಲ ವ್ಯವಹಾರವೆ ಈ ಮೂರು ಕೃಷಿ ಕಾನೂನುಗಳ ವಿರುದ್ಧ ನಿರ್ಣಯವಾಗಲಿದೆ” ಎಂದು ಸ್ಟಾಲಿನ್ ಘೋಷಿಸಿದ್ದಾರೆ.
ಸಿಎಎ ಜಾರಿಗೆ ಬೆಂಬಲ ನೀಡಿದ್ದಕ್ಕಾಗಿ ಎಐಎಡಿಎಂಕೆ ಮತ್ತು ಪಿಎಂಕೆ ಅವರನ್ನು ದೂಷಿಸಿದ ಸ್ಟಾಲಿನ್, “ಅವರು ಅಲ್ಪಸಂಖ್ಯಾತರ ರಕ್ಷಕರು ಎಂಬಂತೆ ನಟಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಡಿಎಂಕೆ ಸಂಸದರು ಸಂಸತ್ತಿನಲ್ಲಿ ಸಿಎಎ ವಿರುದ್ಧ ಮತ ಚಲಾಯಿಸಿದರು ಮತ್ತು ಹಲವು ಪ್ರತಿಭಟನೆಗಳನ್ನು ನಡೆಸಿದರು. ಮಾತ್ರವಲ್ಲದೆ ಸಾರ್ವಜನಿಕರಿಂದ ಎರಡು ಕೋಟಿ ಸಹಿಯನ್ನು ಸಂಗ್ರಹಿಸಿ ರಾಷ್ಟ್ರಪತಿಗೆ ಕಳುಹಿಸಿದರು ಎಂದು ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂ: ಜಾಹೀರಾತನ್ನು ಸುದ್ದಿಯ ರೂಪದಲ್ಲಿ ನೀಡಿದ ಬಿಜೆಪಿ; ಕಾಂಗ್ರೆಸ್‌ನಿಂದ ದೂರು ದಾಖಲು


