ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ 49 ವರ್ಷದ ಸ್ಕೂಲ್ ವ್ಯಾನ್ ಚಾಲಕನೊಬ್ಬ ವಾಹನವನ್ನು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸುವ ಮೂಲಕ, ಸುಮಾರು 20 ವಿದ್ಯಾರ್ಥಿಗಳ ಪ್ರಾಣ ಉಳಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಚಾಲಕ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಗೆ ಅವರು ಬರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಚಾಲಕ ಸೆಮಲಯ್ಯಪ್ಪನ್ ಶಾಲಾ ಮಕ್ಕಳೊಂದಿಗೆ ಚಾಲಕನ ಸೀಟಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಳಿತಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಚಾಲಕನ ಕೆಚ್ಚೆದೆಯ ಕೃತ್ಯಕ್ಕೆ ಸೆಲ್ಯೂಟ್ ಮಾಡಿದ್ದಾರೆ.
ಜುಲೈ 24ರ ಬುಧವಾರದಂದು ಈ ಘಟನೆ ನಡೆದಿದ್ದು, ವೆಲ್ಲಕೋಯಿಲ್‌ನ ಎಎನ್‌ವಿ ಮೆಟ್ರಿಕ್ ಶಾಲೆಯಿಂದ ವಿದ್ಯಾರ್ಥಿಗಳನ್ನು ಅವರ ಮನೆಗೆ ಬಿಡಲು ಸೆಮಲಯ್ಯಪ್ಪನ್ ಕರೆದುಕೊಂಡು ಹೋಗಿದ್ದರು. ಎದೆನೋವು ಕಾಣಿಸಿಕೊಂಡಿದ್ದು, ಕಷ್ಟಪಟ್ಟು ಸುರಕ್ಷಿತವಾಗಿ ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದ್ದಾರೆ.
ವಿಶೇಷವೆಂದರೆ, ಅವರ ಪತ್ನಿ ಕೂಡ ಅದೇ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಅವರು ಕುಸಿದು ಬಿದ್ದಾಗ ವ್ಯಾನ್‌ನಲ್ಲಿದ್ದರು. ಸಾವಿನ ಅಂಚಿನಲ್ಲಿರುವ ಮಕ್ಕಳ ಪ್ರಾಣ ಉಳಿಸಿದ ಚಾಲಕನ ಸಾಹಸಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಅವರ ಜೀವಕ್ಕೆ ಅಪಾಯವಿದ್ದರೂ ಶಾಲೆಯ ವಿದ್ಯಾರ್ಥಿಗಳ ಅಮೂಲ್ಯ ಜೀವವನ್ನು ಉಳಿಸಿದರು. ಅವರ ಕರ್ತವ್ಯ ಪ್ರಜ್ಞೆ ಮತ್ತು ಸ್ವಯಂ ತ್ಯಾಗಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ. ಅವರು ತಮ್ಮ ಮಾನವೀಯ ಕಾರ್ಯದ ಮೂಲಕ ಬದುಕುವುದನ್ನು ಮುಂದುವರಿಸುತ್ತಾರೆ” ಎಂದು ಸ್ಟಾಲಿನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೇಮಲಯ್ಯಪ್ಪನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಸ್ಟಾಲಿನ್ ಘೋಷಿಸಿದ್ದಾರೆ. ಡಿಎಂಕೆ ಸಚಿವ ಎಂಪಿ ಸಾಮಿನಾಥನ್ ಮೃತ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು. ಶುಕ್ರವಾರ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವ್ಯಾನ್ ಚಾಲಕನಿಗೆ ಗೌರವ ಸಲ್ಲಿಸಿದರು. ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ; ಕೇರಳ: ಮೆದುಳು ತಿನ್ನುವ ಅಮೀಬಾ ಕಾಯಿಲೆಯಿಂದ ಚೇತರಿಸಿಕೊಂಡ ಬಾಲಕ


