ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡ 10 ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಯ ಕಾರಣ ಹೇಳಿ ಸುದೀರ್ಘ ಸಮಯ ತಡೆಹಿಡಿದು ಇರಿಸಿಕೊಂಡಿದ್ದ ರಾಜ್ಯಪಾಲ ಆರ್. ಎನ್. ರವಿ ನಡೆ ‘ಅಸಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಏ.8) ಮಹತ್ವದ ತೀರ್ಪು ನೀಡಿದೆ.
ತೀರ್ಪು ಪ್ರಕಟಿಸುವ ವೇಳೆ, ರಾಜ್ಯ ಶಾಸಕಾಂಗ ಕಳುಹಿಸುವ ಮಸೂದೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಂವಿಧಾನದ 200ನೇ ವಿಧಿಯಡಿ ಹೇಳಲಾದ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ರಾಜ್ಯಪಾಲರು ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ದುರ್ಬಲಗೊಳಿಸಬಾರದು ಎಂದಿದೆ. ಮಸೂದೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ತಡೆಯಲು ಕೆಲವು ನಿರ್ದೇಶನಗಳನ್ನು ನೀಡಿದೆ. ರಾಜ್ಯಪಾಲರು ತಮಗೆ ಕಳುಹಿಸಲಾದ ಮಸೂದೆಗಳ ಮೇಲೆ ಕ್ರಮ ಕೈಗೊಳ್ಳಲು ನಿರ್ದಿಷ್ಟ ಸಮಯ ನಿಗದಿಪಡಿಸಿದೆ.
ವಿಧಿ 200ರ ಅಡಿಯಲ್ಲಿ ರಾಜ್ಯಪಾಲರ ಪಾತ್ರ
ಭಾರತೀಯ ಸಂವಿಧಾನದ 200ನೇ ವಿಧಿಯು ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಯ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯಪಾಲರು ಅನುಸರಿಸಬೇಕಾದ ಕಾರ್ಯವಿಧಾನವನ್ನು ವಿವರಿಸುತ್ತದೆ. ಶಾಸಕಾಂಗ ಅಂಗೀಕರಿಸಿದ ಮಸೂದೆಯನ್ನು ಸಹಿಗಾಗಿ ಕಳುಹಿಸಿದರೆ, ರಾಜ್ಯಪಾಲರ ಮುಂದೆ ಮೂರು ಆಯ್ಕೆಗಳಿರುತ್ತವೆ: 1. ಮಸೂದೆಗೆ ಒಪ್ಪಿಗೆ ನೀಡುವುದು, 2. ಮಸೂದೆಯನ್ನು ಸರ್ಕಾರಕ್ಕೆ ಹಿಂದಿರುಗಿಸುವುದು ಮತ್ತು 3. ಮಸೂದೆಯನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸುವುದು.
ರಾಜ್ಯಪಾಲರು ಸಹಿ ಹಾಕದೆ ವಾಪಸ್ ಕಳುಹಿಸಿದ ಮಸೂದೆಯನ್ನು, ರಾಜ್ಯಪಾಲರ ಸಲಹೆಗಳ ಆಧಾರದ ಮೇಲೆ ಶಾಸಕಾಂಗ ಮರುಪರಿಶೀಲಿಸಿ, ಮರು-ಅಂಗೀಕಾರ ಮಾಡದ ಹೊರತು ಮಸೂದೆಯು ರದ್ದಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯಾವುದೇ ಮಸೂದೆಗೆ ಸಹಿ ಹಾಕದೆ ವಾಪಸ್ ಕಳುಹಿಸುವಾಗ ರಾಜ್ಯಪಾಲರು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಬೇಕು. ಅನಗತ್ಯ ವಿಳಂಬ ಮಾಡಬಾರದು. ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮಸೂದೆಯನ್ನು ತಡೆಹಿಡಿಯುವುದು ಆಯ್ಕೆಯಲ್ಲ. ವಿಧಿ 200ರ ಅಡಿಯಲ್ಲಿರುವ ಮೂರು ಆಯ್ಕೆಗಳಲ್ಲಿ ಯಾವುದಾದರು ಒಂದನ್ನು ರಾಜ್ಯಪಾಲರು ಅನುಸರಿಸಲೇಬೇಕು ಎಂದಿದೆ.
ರಾಜ್ಯಪಾಲರಿಗೆ ವಿಟೋ ಅಧಿಕಾರವಿಲ್ಲ
ರಾಜ್ಯಪಾಲರು ‘ವೀಟೋ’ ಅಧಿಕಾರ ಹೊಂದಿಲ್ಲ, ಅಂದರೆ ಅವರು ಶಾಸಕಾಂಗ ಅಂಗೀಕರಿಸಿದ ಮಸೂದೆಗಳ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನೆ ತಡೆ ಹಿಡಿದು ಇರಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ವಿಧಿ 200 ಮೊದಲ ನಿಬಂಧನೆಯ ‘ಸಾಧ್ಯವಾದಷ್ಟು ಬೇಗ’ ಎಂಬ ಪದವು ರಾಜ್ಯಪಾಲರು ಮಸೂದೆಯ ಕುರಿತು ತುರ್ತು ನಿರ್ಧಾರ ತೆಗೆದುಕೊಳ್ಳಬೇಕು ಎಂಬುವುದನ್ನು ಹೇಳುತ್ತದೆ ಎಂದಿದೆ.
ಮಾನ್ಯವಾದ ಸಾಂವಿಧಾನಿಕ ಕಾರಣಗಳಿಲ್ಲದೆ ಮಸೂದೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುವ ಅಥವಾ ಮಸೂದೆಯನ್ನು ಸುಖಾ ಸುಮ್ಮನೆ ತಡೆಹಿಡಿಯುವ ‘ಪಾಕೆಟ್ ವೀಟೋ’ ಅಧಿಕಾರ ಚಲಾಯಿಸಲು ರಾಜ್ಯಪಾಲರಿಗೆ ಅವಕಾಶ ಇಲ್ಲ. ಒಂದಾ ಮಸೂದೆಗೆ ಸಹಿ ಹಾಕಬೇಕು ಅಥವಾ ಹಿಂದಿರುಗಿಸಬೇಕು, ಇಲ್ಲದಿದ್ದರೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯಪಾಲರು ಹಿಂದಿರುಗಿಸಿದ ಮಸೂದೆಯನ್ನು ಶಾಸಕಾಂಗ ಪರಿಶೀಲನೆ ನಡೆಸಿ ಮತ್ತೆ ಕಳುಹಿಸಿದರೆ ರಾಜ್ಯಪಾಲರು ಅದಕ್ಕೆ ಸಹಿ ಹಾಕಬೇಕು, ಮತ್ತೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸಲು ಸಾಧ್ಯವಿಲ್ಲ ಎಂದಿದೆ.
ಶಾಸಕಾಂಗ ಮರು ಪರಿಶೀಲನೆ ಮಾಡಿ ಕಳುಹಿಸಿದ ಬಳಿಕವೂ 10 ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಶೀಲನೆಗೆಂದು ತಡೆ ಹಿಡಿದು ಇರಿಸಿಕೊಂಡಿದ್ದ ತಮಿಳುನಾಡು ರಾಜ್ಯಪಾಲರ ನಡೆ ‘ಅಸಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದು ‘ಅಧಿಕಾರದ ದುರ್ಬಳಕೆ’ ಎಂದಿದೆ.
ಆ ಮಸೂದೆಗಳ ಕುರಿತು ರಾಷ್ಟ್ರಪತಿಗಳು ತೆಗೆದುಕೊಂಡ ಯಾವುದೇ ನಂತರದ ಕ್ರಮವು ನಿಲ್ಲುವುದಿಲ್ಲ ಎಂದು ಆದೇಶಿಸಿದೆ. ಶಾಸಕಾಂಗವು ಮಸೂದೆಗಳನ್ನು ಮರುಪರಿಶೀಲಿಸಿದ ದಿನಾಂಕದಂದು ರಾಜ್ಯಪಾಲರು ಈ ಮಸೂದೆಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಪರಿಗಣಿಸಲಾಗಿದೆ. ಈ ನಿರ್ಧಾರವನ್ನು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯದ ಅಂತರ್ಗತ ಅಧಿಕಾರವನ್ನು ಬಳಸಿಕೊಂಡು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ರಾಜ್ಯಪಾಲರಿಗೆ ಕಾಲಮಿತಿ
ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ಮಸೂದೆಗಳ ಕುರಿತು ಇಂತಿಷ್ಟೇ ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಸ್ಪಷ್ಟವಾಗಿ ಇಲ್ಲ. ಆದರೂ, ‘ಸಾಧ್ಯವಾದಷ್ಟು ಬೇಗ’ ಎಂಬ ಪದವು ತುರ್ತು ನಿರ್ಧಾರ ತೆಗೆದುಕೊಳ್ಳಬೇಕು ಎಂಬುವುದನ್ನು ಸೂಚಿಸುತ್ತದೆ. ಹಾಗಾಗಿ, ಅನಗತ್ಯ ವಿಳಂಬ ಮಾಡಬಾರದು ಎಂದಿರುವ ಸುಪ್ರೀಂ ಕೋರ್ಟ್, ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅನಗತ್ಯ ವಿಳಂಬ ಮಾಡುವುದನ್ನು ತಡೆಯಲು ರಾಜ್ಯಪಾಲರಿಗೆ ಕಾಲಮಿತಿಗಳನ್ನು ನಿಗದಿಪಡಿಸಿದೆ.
ರಾಜ್ಯಪಾಲರು ಮಸೂದೆಯನ್ನು ಹಿಂದಿರುಗಿಸಿದರೆ ಅಥವಾ ರಾಷ್ಟ್ರಪತಿಗಳಿಗೆ ಮಸೂದೆಯನ್ನು ಕಾಯ್ದಿರಿಸಿದರೆ, ರಾಜ್ಯ ಸಚಿವ ಸಂಪುಟದ ಸಲಹೆಯ ಆಧಾರದ ಮೇಲೆ ಗರಿಷ್ಠ ಒಂದು ತಿಂಗಳೊಳಗೆ ಈ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು.
ರಾಜ್ಯ ಸಚಿವ ಸಂಪುಟದ ಸಲಹೆಗೆ ವಿರುದ್ಧವಾಗಿ ರಾಜ್ಯಪಾಲರು ಮಸೂದೆಯನ್ನು ತಡೆ ಹಿಡಿದರೆ, ಮೂರು ತಿಂಗಳೊಳಗೆ ಮಸೂದೆಯನ್ನು ಸಂದೇಶದೊಂದಿಗೆ ಹಿಂದಿರುಗಿಸಬೇಕು.
ರಾಜ್ಯ ಸಚಿವ ಸಂಪುಟದ ಸಲಹೆಯ ವಿರುದ್ಧ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಮಸೂದೆಯನ್ನು ಕಾಯ್ದಿರಿಸಿದರೆ, ಮೂರು ತಿಂಗಳೊಳಗೆ ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಬೇಕು.
ಶಾಸಕಾಂಗವು ಮರುಪರಿಶೀಲನೆಯ ನಂತರ ಮಸೂದೆಯನ್ನು ರಾಜ್ಯಪಾಲರಿಗೆ ಮತ್ತೆ ಕಳುಹಿಸಿದರೆ, ಅವರು ಗರಿಷ್ಠ ಒಂದು ತಿಂಗಳೊಳಗೆ ಅದಕ್ಕೆ ಒಪ್ಪಿಗೆ ನೀಡಬೇಕು.
ಈ ಸಮಯ ಮಿತಿಗಳನ್ನು ಪಾಲಿಸಲು ವಿಫಲವಾದರೆ ರಾಜ್ಯಪಾಲರ ನಿಷ್ಕ್ರಿಯತೆಯನ್ನು ನ್ಯಾಯಾಂಗದ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ಮೂಲಕ ಅನಗತ್ಯ ವಿಳಂಬಗಳಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಅಡ್ಡಿಯಾಗುವುದನ್ನು ತಪ್ಪಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯಪಾಲರ ವಿವೇಚನೆ ಮತ್ತು ನ್ಯಾಯಾಂಗ ಪರಿಶೀಲನೆ
ಸಂವಿಧಾನದಲ್ಲಿ ವಿವರಿಸಿರುವ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ರಾಜ್ಯಪಾಲರು ಸಾಮಾನ್ಯವಾಗಿ ರಾಜ್ಯ ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಾಷ್ಟ್ರಪತಿಗಳ ಪರಿಶೀಲನೆಗೆ ಮಸೂದೆಯನ್ನು ಕಾಯ್ದಿರಿಸುವಂತಹ ಸಂವಿಧಾನದಿಂದ ನಿರ್ದಿಷ್ಟವಾಗಿ ಅಗತ್ಯವಿರುವ ಸಂದರ್ಭಗಳಲ್ಲಿ ಮಾತ್ರ ರಾಜ್ಯಪಾಲರು ವಿವೇಚನೆಯನ್ನು ಚಲಾಯಿಸಬಹುದು. ಈ ವಿಧಾನವು ಔಪಚಾರಿಕ ರಾಜ್ಯದ ಮುಖ್ಯಸ್ಥರಾಗಿ ರಾಜ್ಯಪಾಲರು ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶಾಲ ತತ್ವಕ್ಕೆ ಅನುಗುಣವಾಗಿದೆ. ವಿವೇಚನೆಯು ಸ್ಪಷ್ಟವಾಗಿ ಕಡ್ಡಾಯವಾಗಿರುವ ಸ್ಥಳಗಳನ್ನು ಹೊರತುಪಡಿಸಿ ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.
ತೀರ್ಪು ಪ್ರಕಟಿಸುವ ವೇಳೆ ಬಿ.ಕೆ ಪವಿತ್ರಾ ಪ್ರಕರಣದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಮಸೂದೆಗಳನ್ನು ಕಾಯ್ದಿರಿಸುವ ಬಗ್ಗೆ ವಿವೇಚನೆ ಹೊಂದಿರುತ್ತಾರೆ ಎಂದು ಹೇಳಿದ್ದ ಹಿಂದಿನ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ತೀರ್ಪು ಇದಕ್ಕೂ ಮುನ್ನ ನೀಡಿದ ತೀರ್ಪುಗಳಿಗೆ, ವಿಶೇಷವಾಗಿ ಶಂಶೇರ್ ಸಿಂಗ್ ಪ್ರಕರಣದ ತೀರ್ಪಿಗೆ ಹೊಂದಾಣಿಕೆಯಾಗುವುದಿಲ್ಲ. ಶಂಶೇರ್ ಸಿಂಗ್ ಪ್ರಕರಣದ ತೀರ್ಪು ರಾಜ್ಯಪಾಲರ ಅಧಿಕಾರ ರಾಜ್ಯ ಸಚಿವ ಸಂಪುಟದ ಸಲಹೆಯೊಂದಿಗೆ ಹೊಂದಿಕೆಯಾಗಬೇಕು ಎಂದು ಹೇಳಿದೆ.
ನ್ಯಾಯಾಂಗದ ಪರಿಶೀಲನೆಯು ಲಿಖಿತ ಸಂವಿಧಾನದ ಮೂಲಭೂತ ಲಕ್ಷಣವಾಗಿದೆ ಎಂಬ ತತ್ವವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಸಂವಿಧಾನದ 200ನೇ ವಿಧಿಯಡಿ ಹೇಳಲಾದ ನಿಯಮಗಳ ಅನುಸಾರ ರಾಜ್ಯಪಾಲರ ಕಾರ್ಯ ವಿಧಾನಗಳು ಇಲ್ಲದಿದ್ದರೆ, ಅದು ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಅರ್ಜಿ: ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಕೆ


