ತಮಿಳುನಾಡು ವಿಧಾನಸಭೆ ಇಂದು (ಜ.6) ಮತ್ತೊಮ್ಮೆ ಕೋಲಾಹಲಕ್ಕೆ ಸಾಕ್ಷಿಯಾಯಿತು. ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯಪಾಲ ಆರ್.ಎನ್ ರವಿ ಅವರು ಭಾಷಣ ಮಾಡದೆ ಸದನದಿಂದ ಹೊರ ನಡೆದರು.
ವಿಧಾನಸಭೆ ಕಲಾಪ ಆರಂಭಗೊಂಡಾಗ ತಮಿಳುನಾಡು ನಾಡಗೀತೆ ‘ತಮಿಳ್ ತಾಯಿ ವಝುತ್ತು’ ಮಾತ್ರ ನುಡಿಸಲಾಗಿದೆ. ರಾಷ್ಟ್ರಗೀತೆ ನುಡಿಸಿಲ್ಲ. ಈ ಮೂಲಕ ರಾಷ್ಟ್ರಗೀತೆ ಮತ್ತು ಸಂವಿಧಾನಕ್ಕೆ ಸರ್ಕಾರ ಅವಮಾನ ಮಾಡಿದೆ ಎಂದು ರಾಜ್ಯಪಾಲರ ಕಚೇರಿ ಆರೋಪಿಸಿದೆ.
ವರದಿಗಳ ಪ್ರಕಾರ, ಇಂದು ಬೆಳಿಗ್ಗೆ 9.29ಕ್ಕೆ ನಾಡಗೀತೆ ‘ತಮಿಳ್ ತಾಯಿ ವಝುತ್ತು’ ನುಡಿಸುವ ಮೂಲಕ ವಿಧಾನಸಭೆಯ ಕಲಾಪ ಆರಂಭಗೊಂಡಿತು. ಇದಾದ ತಕ್ಷಣ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ವಿಷಯವೊಂದರ ಸಂಬಂಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಎಐಎಡಿಎಂಕೆ ಶಾಸಕರು ಕೂಡ ಬಾವಿಗಿಳಿದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಈ ಗದ್ದಲದ ನಡುವೆಯೇ ರಾಜ್ಯಪಾಲರು ಅಲ್ಲಿದ್ದವರಿಗೆ ಕೇಳಿಸದಂತೆ ಮಾತುಗಳನ್ನು ಹೇಳಿ 9:32ಕ್ಕೆ ವಿಧಾನಸಭೆಯಿಂದ ನಿರ್ಗಮಿಸಿದರು.
ರಾಜ್ಯಪಾಲರ ನಿರ್ಗಮನದ ನಂತರ, ಸ್ಪೀಕರ್ ಎಂ. ಅಪ್ಪಾವು ಅವರು ರಾಜ್ಯ ಸರ್ಕಾರ ಸಾಂಪ್ರದಾಯಿಕವಾಗಿ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣದ ತಮಿಳು ಆವೃತ್ತಿಯನ್ನು ಓದಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ, ಎಐಎಡಿಎಂಕೆ ಶಾಸಕರು ಪ್ರತಿಭಟನೆ ವ್ಯಕ್ತಪಡಿಸುತ್ತ ಹೊರ ಹೋದರು. ಈ ವೇಳೆ ಬಿಜೆಪಿ, ಪಿಎಂಕೆ ಮತ್ತು ಡಿಎಂಕೆ ಮಿತ್ರಪಕ್ಷವಾದ ಕಾಂಗ್ರೆಸ್ ಸದಸ್ಯರು ಕೂಡ ಪ್ರತ್ಯೇಕ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ವ್ಯಕ್ತಪಡಿಸಿ ಸದನದಿಂದ ಹೊರ ನಡೆದರು.
#WATCH | Tamil Nadu Governor RN Ravi leaves from the Secretariat as he boycotts Governor annual address
The winter session of the Tamil Nadu Assembly began today. pic.twitter.com/Nm7HCd2dK0
— ANI (@ANI) January 6, 2025
ವಿಧಾನಸಭೆಯ ಕೋಲಾಹಲದ ಕುರಿತು ಎಕ್ಸ್ ಪೋಸ್ಟ್ ಮೂಲಕ ರಾಜಭವನ ಪ್ರತಿಕ್ರಿಯಿಸಿದ್ದು, “ಇಂದು ತಮಿಳುನಾಡು ವಿಧಾನಸಭೆಯಲ್ಲಿ ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಯನ್ನು ಮತ್ತೊಮ್ಮೆ ಅವಮಾನಿಸಲಾಗಿದೆ. ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೊದಲ ಮೂಲಭೂತ ಕರ್ತವ್ಯವಾಗಿದೆ. ರಾಜ್ಯಪಾಲರ ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಇದನ್ನು ನುಡಿಸಲಾಗುತ್ತದೆ” ಎಂದು ಬರೆದುಕೊಂಡಿದೆ.
ಮುಂದುವರಿದು, ವಿಧಾನಸಭೆಯಲ್ಲಿ ರಾಜ್ಯಪಾಲರ ಆಗಮನದ ನಂತರ ತಮಿಳು ನಾಡಗೀತೆ ಮಾತ್ರ ನುಡಿಸಲಾಗಿದೆ. ರಾಜ್ಯಗೀತೆಯ ಮೊದಲು ರಾಷ್ಟ್ರಗೀತೆಯನ್ನು ನುಡಿಸಬೇಕು ಎಂದು ರಾಜ್ಯಪಾಲರು ಪದೇ ಪದೇ ಒತ್ತಾಯಿಸಿದರು. ರಾಜ್ಯಪಾಲರು ಸದನದ ಸಾಂವಿಧಾನಿಕ ಕರ್ತವ್ಯವನ್ನು ಗೌರವಯುತವಾಗಿ ನೆನಪಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಸ್ಪೀಕರ್ ಎಂ. ಅಪ್ಪಾವು ಅವರಿಗೆ ರಾಷ್ಟ್ರಗೀತೆ ನುಡಿಸುವಂತೆ ಕೋರಿದ್ದಾರೆ. ಅವರ ನಿರಾಕರಣೆಯು ರಾಜ್ಯಪಾಲರ ಬೇಸರಕ್ಕೆ ಕಾರಣವಾಗಿದೆ. ಹಾಗಾಗಿ, ಅವರು ಸದನದಿಂದ ಹೊರನಡೆದರು” ಎಂದು ಹೇಳಿದೆ.
The Constitution of Bharat and the National Anthem were once again insulted in the Tamil Nadu Assembly today. Respecting the National Anthem is among the first Fundamental Duty as enshrined in our Constitution. It is sung in all the state legislatures at the beginning and the end…
— RAJ BHAVAN, TAMIL NADU (@rajbhavan_tn) January 6, 2025
ತಮಿಳುನಾಡು ವಿಧಾನಸಭೆಯ ಸ್ಥಾಪಿತ ನಿಯಮಗಳ ಪ್ರಕಾರ, ಕಲಾಪಗಳ ಪ್ರಾರಂಭದಲ್ಲಿ ತಮಿಳು ನಾಡಗೀತೆಯನ್ನು ನುಡಿಸಲಾಗುತ್ತದೆ. ಸ್ಪೀಕರ್ ಅವರು ರಾಜ್ಯಪಾಲರ ಭಾಷಣದ ತಮಿಳು ಆವೃತ್ತಿಯನ್ನು ಓದಿದ ನಂತರ ದಿನದ ವ್ಯವಹಾರದ ಮುಕ್ತಾಯದಲ್ಲಿ ಸಾಂಪ್ರದಾಯಿಕವಾಗಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.
ತಮ್ಮ ಅನುಮತಿ ಇಲ್ಲದೆ ವಿಧಾನಸಭೆಯೊಳಗೆ ನಡೆದ ಯಾವುದೇ ಬೆಳವಣಿಗೆಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಸ್ಪೀಕರ್ ಅಪ್ಪಾವು ಸೂಚಿಸಿದ್ದು, ಉಲ್ಲಂಘನೆಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ಸಾಧ್ಯತೆ


