ಚೆನ್ನೈ: ಅಂತರಜಾತಿ ವಿವಾಹಗಳಿಗೆ ಕುಟುಂಬಗಳಿಂದ ವಿರೋಧ ಎದುರಾದಲ್ಲಿ ಅಂತಹ ವಿವಾಹಗಳನ್ನು ಸಿಪಿಐ(ಎಂ) ಪಕ್ಷದ ಕಚೇರಿಗಳಲ್ಲಿ ನೆರವೇರಿಸಲು ಅವಕಾಶ ನೀಡಲಾಗುತ್ತದೆ ಎಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‍ವಾದಿ) ಪಕ್ಷದ (ಸಿಪಿಎಂ) ತಮಿಳುನಾಡು ರಾಜ್ಯ ಘಟಕದ ಕಾರ್ಯದರ್ಶಿ ಪಿ.ಷಣ್ಮುಗಂ ಅವರು ಇತ್ತೀಚೆಗೆ ಪ್ರಕಟಿಸಿದ್ದಾರೆ.
ನಿನ್ನೆ ( ಆ.27) ವಿನಾಯಕ ಚತುರ್ಥಿಯ ದಿನದಂದು ತಿರುತ್ತುರೈಪೂಂಡಿಯ ಸಿಪಿಐ(ಎಂ) ಕಚೇರಿಯಲ್ಲಿ ಒಂದು ಅಂತರಜಾತಿ ವಿವಾಹ ನೆರವೇರಿಸುವ ಮೂಲಕ ಇದಕ್ಕೆ ಚಾಲನೆ ನೀಡಲಾಗಿದೆ.
ವಧು, ಅಮೃತಾ, ತಿರುವಾರೂರು ಜಿಲ್ಲೆಯ ವಾರಂಬಿಯಂ ಪ್ರದೇಶದವರು. ವರ ಸಂಜಯ್‌ಕುಮಾರ್ ಪುದುಕೊಟ್ಟೈ ಜಿಲ್ಲೆಯ ಮಾಥೂರಿನವರು. ಇಬ್ಬರೂ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಗಳೂ ಆರಂಭದಲ್ಲಿ ಮದುವೆಗೆ ಒಪ್ಪಿದ್ದವು. ತಿರುವಾರೂರು ಜಿಲ್ಲೆಯ ಒಂದು ಪ್ರಮುಖ ಹಿಂದೂ ದೇವಸ್ಥಾನದಲ್ಲಿ ಆಗಸ್ಟ್ 27ರಂದು ವಿವಾಹ ಸಮಾರಂಭ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ, ಸಂಜಯ್‌ಕುಮಾರ್ ಅವರ ಚಿಕ್ಕಪ್ಪ ಮದುವೆಗೆ ವಿರೋಧ ವ್ಯಕ್ತಪಡಿಸಿ, ಮದುವೆಯನ್ನು ನಿಲ್ಲಿಸುವ ಉದ್ದೇಶದಿಂದ ಸಂಜಯ್‌ಕುಮಾರ್ ಅವರನ್ನು ಅಪಹರಿಸಿದ್ದರು. ಈ ಸಂಬಂಧ ತಿರುತ್ತುರೈಪೂಂಡಿ ಪೊಲೀಸರಿಗೆ ದೂರು ನೀಡಲಾಗಿತ್ತು.
ವಿನಾಯಕ ಚತುರ್ಥಿಯ ದಿನ ಪೊಲೀಸರು ವರ ಸಂಜಯ್‌ಕುಮಾರ್ ಅವರನ್ನು ಪತ್ತೆಹಚ್ಚಿ ರಕ್ಷಿಸಿ ತಿರುತ್ತುರೈಪೂಂಡಿ ಪೊಲೀಸ್ ಠಾಣೆಗೆ ಕರೆತಂದರು. ಅಂದೇ ಸಂಜೆ, ತಿರುತ್ತುರೈಪೂಂಡಿಯಲ್ಲಿರುವ ಸಿಪಿಐ(ಎಂ) ಕಚೇರಿಯಲ್ಲಿ ವಿವಾಹ ನೆರವೇರಿಸಲಾಯಿತು. ಸಿಪಿಐ(ಎಂ)ನ ರಾಜ್ಯ ಸಮಿತಿ ಸದಸ್ಯ ಐ.ವಿ. ನಾಗರಾಜನ್ ಅವರು ತಿರುವಾರೂರು ಜಿಲ್ಲಾ ಕಾರ್ಯದರ್ಶಿ ಟಿ. ಮುರುಗೈಯನ್ ಅವರ ಸಮ್ಮುಖದಲ್ಲಿ ವಿವಾಹ ನೆರವೇರಿಸಿದರು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ನವ ದಂಪತಿಗೆ ರಕ್ಷಣೆ ನೀಡುವಂತೆ ಪಕ್ಷದಿಂದ ತಿರುತ್ತುರೈಪೂಂಡಿ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.
ಜಾತಿ ಹಿಂಸಾಚಾರಗಳ ವಿರುದ್ಧ ಹೋರಾಟಕ್ಕೆ ಕರೆ
ಚೆನ್ನೈನಲ್ಲಿ ನಡೆದ ಜಾತಿ ಹತ್ಯೆಗಳ ವಿರುದ್ಧದ ಸಭೆಯಲ್ಲಿ ಮಾತನಾಡಿದ ಪಿ. ಷಣ್ಮುಗಂ ಅವರು, ‘ನಾವು ತಿರುನೆಲ್ವೇಲಿಯಲ್ಲಿ ನಮ್ಮ ಕಚೇರಿಯಲ್ಲಿ ಮದುವೆ ನಡೆಸಿದಾಗ ವಧುವಿನ ಸಂಬಂಧಿಕರು ಕಚೇರಿಯನ್ನು ಹಾಳುಗೆಡವಿದರು. ಆದರೂ ನಾವು ಅಂತರಜಾತಿ ವಿವಾಹಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ. ಪ್ರಗತಿಪರ ಶಕ್ತಿಗಳು ಎಲ್ಲ ಸಮುದಾಯಗಳಲ್ಲಿಯೂ ಇವೆ, ನಾವು ಅವರನ್ನು ಗುರುತಿಸಿ ಸಂಘಟಿಸಬೇಕು. ಆಗ ಮಾತ್ರ ಜಾತಿವಾದಿ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟವನ್ನು ರೂಪಿಸಬಹುದು’ ಎಂದರು.
2015ರಲ್ಲಿ ಆಗಿನ ಸಿಪಿಐ(ಎಂ) ಶಾಸಕಾಂಗ ಪಕ್ಷದ ನಾಯಕ ಎ. ಸೌಂದರರಾಜನ್ ಅವರು ಜಾತಿ ಹತ್ಯೆಗಳನ್ನು ತಡೆಯಲು ವಿಶೇಷ ಕಾಯ್ದೆಯನ್ನು ಜಾರಿಗೊಳಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಆದರೆ, ಅದು ಸೋಲಪ್ಪಿತು ಎಂದು ನೆನಪಿಸಿಕೊಂಡರು.
‘ಮಧ್ಯಂತರ ಜಾತಿಗಳು ಮತ್ತು ಪರಿಶಿಷ್ಟ ಜಾತಿಗಳ ನಡುವೆ ತಪ್ಪು ತಿಳಿವಳಿಕೆ ಇದೆ. ಇದು ಅನೇಕ ಯುವ ದಂಪತಿಗಳ ಕೊಲೆಗೆ ಕಾರಣವಾಗಿದೆ. ಜಾತಿ ಗೌರವದ ಹೆಸರಿನಲ್ಲಿ ನಡೆಯುವ ಮರ್ಯಾದೆಗೇಡು ಹತ್ಯೆಗಳನ್ನು ತಡೆಯಲು ಕಾನೂನು ಜಾರಿಗೊಳಿಸಬೇಕು’ ಎಂದು ಷಣ್ಮುಗಂ ಒತ್ತಾಯಿಸಿದರು.
ಈ ಸಂಬಂಧ ತಾವು, ಸಿಪಿಐ ರಾಜ್ಯ ಕಾರ್ಯದರ್ಶಿ ಆರ್. ಮುತ್ತರಸನ್ ಮತ್ತು ವಿಸಿಕೆ ನಾಯಕ ಥೋಳ್. ತಿರುಮಾವಳವನ್ ಅವರೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿ ಅಂತಹ ಕಾನೂನನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದೇವೆ ಎಂದು ಹೇಳಿದರು.
‘ನಾವು 30 ನಿಮಿಷಗಳ ಕಾಲ ಮುಖ್ಯಮಂತ್ರಿಯವರಿಗೆ ಪರಿಸ್ಥಿತಿಯನ್ನು ವಿವರಿಸಿದ್ದೇವೆ. ಅವರು ನಮ್ಮ ಬೇಡಿಕೆಗೆ ಒಲವು ತೋರಿಸಿದ್ದಾರೆ ಎಂದು ನಮಗೆ ಅನಿಸಿತು. ಅವರು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾನೂನನ್ನು ಜಾರಿಗೊಳಿಸಬೇಕು’ ಎಂದರು.
ಕೇವಲ ತಿರುನೆಲ್ವೇಲಿ ಜಿಲ್ಲೆಯಲ್ಲಿಯೇ ಒಂದು ವರ್ಷದಲ್ಲಿ 240 ಮರ್ಯಾದೆಗೇಡು ಹತ್ಯೆಗಳು ದಾಖಲಾಗಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣ ಮೀರಿ ಹೋಗಿದೆ ಎಂದು ಷಣ್ಮುಗಂ ಅವರು ಹೇಳಿದರು.
‘ಈಗ ಕಾಯ್ದೆಗಾಗಿ ಸಾರ್ವಜನಿಕರ ಬೆಂಬಲ ಹೆಚ್ಚುತ್ತಿದೆ ಮತ್ತು ಸರ್ಕಾರ ಈ ಅವಕಾಶವನ್ನು ಬಳಸಿಕೊಳ್ಳಬೇಕು’ ಎಂದು ಅವರು ಹೇಳಿದರು.
ಕೇರಳ| ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೃಷ್ಣಕುಮಾರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ


