Homeಮುಖಪುಟತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ರಾಷ್ಟ್ರೀಯ ಅಪರಾಧ ತನಿಖಾ ದಳವೇ ನೀಡುವ ಅಂಕಿಅಂಶಗಳ ಪ್ರಕಾರ 2019ರಲ್ಲಿ ದೇಶದಾದ್ಯಂತ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವರ ಸಂಖ್ಯೆ 1700. ಪೊಲೀಸರ ಕ್ರೌರ್ಯದ ಪೈಕಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡಿಗೆ ಎರಡನೇ ಸ್ಥಾನ.

- Advertisement -
- Advertisement -

ಪೊಲೀಸರ ದೌರ್ಜನ್ಯಕ್ಕೆ ಬಲಿಯಾದ ಅಮೆರಿಕದ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯ ಸಾವಿಗೆ ಇಡೀ ವಿಶ್ವ ಮರುಗಿತ್ತು. ವರ್ಣಭೇದ ನೀತಿಯನ್ನು ಖಂಡಿಸಿ ಪ್ರತಿಭಟಿಸಿತ್ತು. ಅಷ್ಟೇ ಏಕೆ ಭಾರತದಲ್ಲಿ ಬಾಲಿವುಡ್‌ನ ಅನೇಕ ಜನಪ್ರಿಯ ನಟ-ನಟಿಯರು ಇದರ ವಿರುದ್ಧ ದ್ವನಿ ಎತ್ತಿದ್ದರು. ಆದರೆ, ವಿಪರ್ಯಾಸ ನೋಡಿ ಜಾರ್ಜ್ ಫ್ಲಾಯ್ಡ್ ಸಾವಿಗೆ ಮರುಗಿದ ನಾವು ಇಲ್ಲೇ ನೆರೆ ರಾಜ್ಯವಾದ ತಮಿಳುನಾಡಿನ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದ ತಂದೆ-ಮಗನ ಸಾವಿನ ಕುರಿತು ಮಾತನಾಡಲೇ ಇಲ್ಲ. ಇನ್ನೂ ಬಾಲಿವುಡ್-ಸ್ಯಾಂಡಲ್‌ವುಡ್ ಹಾಗೂ ಸುದ್ದಿ ಮಾಧ್ಯಮಗಳು ದ್ವನಿ ಎತ್ತುವುದಿರಲಿ, ಕನಿಷ್ಟ ಅವರ ಪ್ರಜ್ಞೆಗೆ ಈ ವಿಚಾರ ತಲುಪಿತೇ ಎಂಬುದೇ ಸಂಶಯ.

ಭಾರತದಲ್ಲಿ ಪೊಲೀಸರ ದೌರ್ಜನ್ಯ ಹಾಗೂ ಲಾಕಪ್‌ಡೆತ್ ಹೊಸದೇನಲ್ಲ. ಪೊಲೀಸರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಅನೇಕರು ಮೃತಪಟ್ಟಿರುವ ಘಟನೆಗಳನ್ನು ನಾವು ಆಗಿಂದಾಗ್ಗೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಈಗ ತಮಿಳುನಾಡಿನ ಜಯರಾಜ್ (59) ಹಾಗೂ ಬೆೆನಿಕ್ಸ್ (31) ಸಾವು ನಿಜಕ್ಕೂ ಇಡೀ ದೇಶವನ್ನು ತಲ್ಲಣಕ್ಕೆ ದೂಡಿದೆ. ಅಲ್ಲದೆ, ಪೊಲೀಸ್ ದೌರ್ಜನ್ಯದ ವಿರುದ್ಧ ತಮಿಳುನಾಡಿನಲ್ಲೊಂದು ದೊಡ್ಡ ಮಟ್ಟದ ಜನ ಹೋರಾಟಕ್ಕೂ ಕಾರಣವಾಗಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆಯ ದೃಶ್ಯ

ಅಸಲಿಗೆ ಇಬ್ಬರು ವ್ಯಕ್ತಿಗಳ ಲಾಕಪ್‌ಡೆತ್ ಎಂಬ ಸುದ್ದಿ ಹೊರಬರುತ್ತಲೇ ಸತ್ತವರು ಯಾರೋ ದೊಡ್ಡ ಕ್ರಿಮಿನಲ್‌ಗಳೋ, ಉಗ್ರಗಾಮಿಗಳೋ ಅಥವಾ ಕೊಲೆ ಪಾತಕಿಗಳೇ ಇರಬೇಕು ಎಂದು ಇಡೀ ತಮಿಳುನಾಡಿನ ಜನ ಭಾವಿಸಿದ್ದರೇನೋ? (ಎಲ್ಲರಿಗೂ ಕಾನೂನುರೀತಿಯ ಶಿಕ್ಷೆ ಆಗಬೇಕು, ಕಾನೂನುಬಾಹಿರ ಸಾವು ಯಾವ ವ್ಯಕ್ತಿಗಾದರೂ ಅದು ತಪ್ಪೇ). ಆದರೆ, ಪ್ರಕರಣದ ಒಳಹೊಕ್ಕು ನೋಡಿದರೆ, ನಿಜಕ್ಕೂ ಪೊಲೀಸರು ಅಷ್ಟು ನಿರ್ದಯಿಗಳಾಗಿ ಥಳಿಸಿ ಕೊಂದ ಇಬ್ಬರೂ ಕೊಲೆ ಪಾತಕಿಗಳಲ್ಲ. ಬದಲಿಗೆ ಈ ಸಮಾಜದ ದ್ವನಿ ಇಲ್ಲದ ಎಲ್ಲರಂತಹ ಸಾಮಾನ್ಯ ಮಧ್ಯಮ ವರ್ಗದ ತಂದೆ ಮತ್ತು ಮಗ. ಇಷ್ಟಕ್ಕೂ ಇವರು ಮಾಡಿದ ಅಪರಾಧವಾದರೂ ಏನು ಗೊತ್ತಾ? 8 ಗಂಟೆಗೆ ಮುಚ್ಚಬೇಕಿದ್ದ ಅಂಗಡಿ ಬಾಗಿಲನ್ನು 8.10ಕ್ಕೆ ಮುಚ್ಚಿದ್ದು.

ಪ್ರಕರಣ ಹಿನ್ನೆಲೆ

ತೂತುಕುಡಿ ತಮಿಳುನಾಡಿನ ಬಂದರು ನಗರ. ಇದೇ ತೂತುಕುಡಿಯ ಸಾತಾನ್ಕುಳಂ ಎಂಬಲ್ಲಿ ಜಯರಾಜ್ ಮರದ ಅಂಗಡಿ ಹಾಕಿಕೊಂಡಿದ್ದರೆ, ಅದರ ಪಕ್ಕದಲ್ಲೇ ಅವರ ಮಗ ಬೆನಿಕ್ಸ್ ಮೊಬೈಲ್ ಅಂಗಡಿ ಹಾಕಿಕೊಂಡಿದ್ದಾರೆ. ಬೆನಿಕ್ಸ್ ಗೆ ಇನ್ನು ಎರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು.

ಕೊರೋನಾ ಲಾಕ್‌ಡೌನ್ ಕಾರಣದಿಂದಾಗಿ ತಮಿಳುನಾಡಿನಲ್ಲಿ ರಾತ್ರಿ 8 ಗಂಟೆಗೆ ಅಂಗಡಿ ಬಾಗಿಲನ್ನು ಮುಚ್ಚಬೇಕು ಎಂದು ನಿಯಮ ಮಾಡಲಾಗಿದೆ. ಏಪ್ರಿಲ್ 19 ರಂದು 8 ಗಂಟೆಗೆ ಮುಚ್ಚಬೇಕಾದ ಅಂಗಡಿ ಬಾಗಿಲನ್ನು ಜಯರಾಜ್ ಮತ್ತು ಆತನ ಮಗ ಬೆನಿಕ್ಸ್ 8.10ಕ್ಕೆ ಮುಚ್ಚಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಇಷ್ಟಕ್ಕೆ ಕ್ಯಾತೆ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಜಯರಾಜ್ ಮತ್ತು ಬೆನಿಕ್ಸ್ನನ್ನು ಅಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಪೊಲೀಸರು ಕೊನೆಗೆ ವಿಚಾರಣೆಗಾಗಿ ಜಯರಾಜ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ತಂದೆಯನ್ನು ಹೇಗಾದರೂ ಮಾಡಿ ಬಿಡಿಸಿಕೊಂಡು ಬರಬೇಕು ಎಂದು ಬೆನಿಕ್ಸ್ ಓರ್ವ ಅಡ್ವೊಕೇಟ್ ಜೊತೆಗೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಈ ವೇಳೆ ಜಯರಾಜ್‌ನನ್ನು ಪೊಲೀಸರು ಮತ್ತೆ ಥಳಿಸುತ್ತಿರುವುದನ್ನು ನೋಡಿದ ಬೆನಿಕ್ಸ್ ತಡೆಯಲು ಹೋಗಿದ್ದಾರೆ. ಆದರೆ, ಈ ವೇಳೆ “ಪೊಲೀಸರ ಮೇಲೆ ಕೈ ಮಾಡುವಷ್ಟು ಪೊಗರೆ” ಎಂದು ಅಬ್ಬರಿಸಿರುವ ಪೊಲೀಸರು ಅಡ್ವೊಕೇಟ್‌ರನ್ನು ಹೊರಗೆ ಕಳಿಸಿ ಠಾಣೆಯ ಬಾಗಿಲು ಹಾಕಿದ್ದಾರೆ.

ಅಲ್ಲದೆ, ಜಯರಾಜ್ ಮತ್ತು ಬೆನಿಕ್ಸ್ ಇಬ್ಬರನ್ನೂ ಒಂದೇ ಲಾಕಪ್‌ನಲ್ಲಿ ನಗ್ನರನ್ನಾಗಿಸಿ ಅವರ ಹಿಂಬದಿಯ ಗುದದ್ವಾರದಲ್ಲಿ ಲಾಠಿಯನ್ನು ದೇಹದ ಒಳಗೆ ಪ್ರಯೋಗಿಸಿದ್ದಾರೆ. ರಕ್ತ ಸೋರಿದರೂ ಬಿಡದ ಪೊಲೀಸರು ರಾತ್ರಿ ಇಡೀ ಥಳಿಸಿದ್ದಾರೆ. ಅವರ ಕಿರುಚಾಟಕ್ಕೆ ಇಡೀ ಏರಿಯಾದ ಜನ ಬೆಚ್ಚಿಬಿದ್ದಿದ್ದಾರೆ. ಆದರೂ ಪೊಲೀಸರಿಗೆ ಮಾತ್ರ ಮನ ಕರಗಿಲ್ಲ.

ಎಸ್ಐಗಳಾದ ಬಾಲಕೃಷ್ಣನ್, ಜೇಸುರಾಜ್ ಹಾಗೂ ಶ್ರೀಧರ್, ಇಬ್ಬರನ್ನೂ ರಾತ್ರಿ 8.30 ರಿಂದ 11 ರ ವರೆಗೆ ಥಳಿಸಿದ್ದರೆ, ನೈಟ್ ಡ್ಯೂಟಿಗೆ ಆಗಿನ್ನೂ ಹಾಜರಾಗಿದ್ದ ರಘು ಎಂಬ ಅಧಿಕಾರಿಯೂ ಪ್ರಕರಣ ಹಿನ್ನೆಲೆ ತಿಳಿಯದೆ ಮತ್ತೆ 1.30ರ ವರೆಗೆ ಇಬ್ಬರನ್ನೂ ನಗ್ನರನ್ನಾಗಿಸಿ ಥಳಿಸಿದ್ದಾರೆ ಎಂದರೆ ಪೊಲೀಸರ ಮನೋಕ್ರೌರ್ಯ ಎಂತಾದ್ದು ಎಂದು ತಿಳಿಯಬಹುದು.

ಮರುದಿನ ಇಬ್ಬರನ್ನೂ ನೋಡಲು ಅವರ ಗೆಳೆಯರು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಅವರ ವಾಹನದಲ್ಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಇಬ್ಬರೂ ದೈಹಿಕವಾಗಿ ಸುಸ್ಥಿತಿಯಲ್ಲಿದ್ದಾರೆ ಎಂದು ವರದಿ ಪಡೆಯಲಾಗಿದೆ. ಇವರ ವಿರುದ್ಧ ಪೊಲೀಸರ ಮೇಲೆ ಹಲ್ಲೆ ಮಾಡಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಮ್ಯಾಜಿಸ್ಟ್ರೇಟ್ ಎದುರು ಹಾಜರು ಪಡಿಸಲಾಗಿದೆ. ಅಲ್ಲದೆ, ತಮ್ಮ ಮೇಲಾದ ದೈಹಿಕ ಹಲ್ಲೆಯ ಬಗ್ಗೆ ಬಾಯಿ ಬಿಟ್ಟರೆ ಕೊಂದೇ ಬಿಡುವುದಾಗಿ ಹೆದರಿಸಲಾಗಿದೆ.

ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ ನಂತರ ಇವರನ್ನು ಜೂನ್.20ರಂದು ಪಕ್ಕದ ಕೋವಿಲ್ಪಟ್ಟಿ ಕಾರಾಗೃಹದಲ್ಲಿ ಬಂಧಿಸಲಾಗಿದೆ. ಆದರೆ, ಮ್ಯಾಜಿಸ್ಟ್ರೇಟ್ ಎದುರು ಹಾಜರಾದಾಗಿಂದ ಬಂಧಿಖಾನೆಗೆ ರವಾನಿಸುವವರೆಗೆ ಇಬ್ಬರಿಗೂ ಹಿಂದಿನಿಂದ ನಿರಂತರವಾಗಿ ರಕ್ತ ಸೋರಿಕೆಯಾಗಿದೆ. ಅಷ್ಟರಲ್ಲಾಗಲೇ ಇಬ್ಬರೂ ರಕ್ತದಿಂದ ತೋಯ್ದು ಹೋಗಿದ್ದಾರೆ. ಮೂರು ಬಾರಿ ಲುಂಗಿ ಬದಲಿಸಿದ್ದಾರೆ. ಆದರೆ, ಮ್ಯಾಜಿಸ್ಟ್ರೇಟ್ ಹಾಗೂ ಬಂಧಿಖಾನೆಯ ಅಧಿಕಾರಿ ಇದನ್ನು ಹೇಗೆ ಗಮನಿಸದೇ ಹೋದರು ಎಂಬುದು ಈವರೆಗೂ ಯಕ್ಷಪ್ರಶ್ನೆಯಾಗಿದೆ.

ಹೀಗೆ ಬಂಧಿಖಾನೆಗೆ ದಾಖಲಾದ ಅದೇ ದಿನ ರಾತ್ರಿ ಬೆನಿಕ್ಸ್ ಹೃದಯಾಘಾತಕ್ಕೆ ಬಲಿಯಾದರೆ, ಜಯರಾಜ್ ಮರುದಿನ ಬೆಳಗ್ಗೆ ತೀವ್ರ ಜ್ವರದಿಂದಾಗಿ ಬಳಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ತಂದೆ ಮಗನ ಮೃತದೇಹವನ್ನು ನೋಡಿದ ಇಡೀ ಕುಟುಂಬ ಅಕ್ಷರಶಃ ಕಂಗಾಲಾಗಿದೆ. ಸೆಲ್ವರಾಣಿ ಎಂಬ ಮಹಿಳೆ ತನ್ನ ಗಂಡ ಹಾಗೂ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.

ತಾಯಿ ಸೆಲ್ವರಾಣಿ ಹೇಳುವ ಪ್ರಕಾರ ಮಗ ಬೆನಿಕ್ಸ್‌ಗೆ ಎದೆ ತುಂಬಾ ಕೂದಲು ಇತ್ತು. ಆದರೆ, ಈಗ ಅವನ ದೇಹದ ಮೇಲೆ ಪೊಲೀಸರು ಒಂದೊಂದೆ ಕೂದಲನ್ನು ಕಿತ್ತು ತೆಗೆದಿರುವ ಗುರುತುಗಳು ಮಾತ್ರ ಇವೆ ಎಂದಿರುವುದು ಪೊಲೀಸರ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಇನ್ನು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಸಹ ಪೊಲೀಸರ ಅಮಾನವೀಯತೆಯನ್ನು ಕಂಡು ಕಂಗಾಲಾಗಿದ್ದಾರೆ.

ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ

ಪ್ರಕರಣ ಬಯಲಾಗುತ್ತಿದ್ದಂತೆ ತಮಿಳುನಾಡಿನಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಪೊಲೀಸರ ದೌರ್ಜನ್ಯದ ವಿರುದ್ಧ ಜನಸಾಮಾನ್ಯರು ಕೊರೊನಾ ನಡುವೆಯೂ ಬೀದಿಗಿಳಿದು ಹೋರಾಟ ಮಾಡುವಂತಾಗಿದೆ. ಪರಿಣಾಮ ತಮಿಳುನಾಡು ಸರ್ಕಾರ ಆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ಪೊಲೀಸರನ್ನು ಬೇರೆಡೆಗೆ ವರ್ಗಾಯಿಸಿದೆ. ಪ್ರಮುಖ ಆರೋಪಿಗಳಾದ ಬಾಲಕೃಷ್ಣನ್, ಜೇಸುರಾಜ್, ರಘು ಹಾಗೂ ಶ್ರೀಧರ್ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದೆ.

ತಮಿಳುನಾಡಿನಲ್ಲಿ ಪ್ರತಿಭಟನೆ

ಜೂನ್.30 ರಂದು ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್, ಅಮಾಯಕರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಎಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 302ರ ಅನ್ವಯ ಕೊಲೆ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದೆ.

ಇಡೀ ತಮಿಳುನಾಡು ಜಯರಾಜ್ ಮತ್ತು ಆತನ ಮಗನ ಸಾವಿಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಕರಣವಾಗಿ ಕೇವಲ 7 ದಿನಕ್ಕೆ ತಮಿಳುನಾಡಿನ ತೆಂಗಾಸಿ ಪಟ್ಟಣಂ ಎಂಬಲ್ಲಿ ಕುಮರೇಸನ್ ಎಂಬ ಮತ್ತೋರ್ವ ಆಟೋ ಡ್ರೈವರ್ ಪೊಲೀಸರ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಆದರೆ, ತಮಿಳುನಾಡಿನ ಪೊಲೀಸರ ದೌರ್ಜನ್ಯ ಎಂಬುದು ಇತ್ತೀಚೆಗೆ ಊಹೆಗೂ ನಿಲುಕದ, ಕೊನೆ ಮೊದಲಿಲ್ಲದ ಕ್ರೌರ್ಯದಂತಾಗಿದೆ.

ತಮಿಳುನಾಡು ಪೊಲೀಸರೇಕೆ ಹೀಗೆ?

ಭಾರತದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಂದು ದಿನಕ್ಕೆ ಕನಿಷ್ಟ 5 ಸಾವನ್ನಪ್ಪುತ್ತಿದ್ದಾರೆ ಎನ್ನಲಾಗುತ್ತಿದೆ. ರಾಷ್ಟ್ರೀಯ ಅಪರಾಧ ತನಿಖಾ ದಳವೇ ನೀಡುವ ಅಂಕಿಅಂಶಗಳ ಪ್ರಕಾರ 2019ರಲ್ಲಿ ದೇಶದಾದ್ಯಂತ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವರ ಸಂಖ್ಯೆ 1700. ಪೊಲೀಸರ ಕ್ರೌರ್ಯದ ಪೈಕಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡಿಗೆ ಎರಡನೇ ಸ್ಥಾನ.

ಮೃತ ಜಯರಾಜ್ – ಬೆನಿಕ್ಸ್ ಪ್ರಕರಣ ತಮಿಳುನಾಡಿನಲ್ಲಿ ಮೊದಲ ಲಾಕಪ್‌ಡೆತ್ ಅಲ್ಲ. ಭಾಗಶಃ ಕೊನೆಯದೂ ಅಲ್ಲ. ಏಕೆಂದರೆ ಈ ಹಿಂದೆ ಕೂಡಂಗುಳಂನಲ್ಲಿ ಅಣು ವಿದ್ಯುತ್ ಸ್ಥಾವರದ ವಿರುದ್ಧ ಪೊಲೀಸರು ಹಿಗ್ಗಾಮುಗ್ಗ ಲಾಠಿಚಾರ್ಜ್ ನಡೆಸಿದ್ದರು. ಇದೇ ತೂತುಕುಡಿಯಲ್ಲಿರುವ ಸ್ಟೆರ್ಲೈಟ್ ಕಂಪೆನಿಯ ವಿರುದ್ಧ ಸಾಮಾನ್ಯ ಜನ ಹೋರಾಟ ನಡೆಸಿದ್ದಾಗ ಪೊಲೀಸರು ಹೋರಾಟಗಾರರ ಗುಂಡಿಗೆಗೆ ಗುಂಡು ಹಾರಿಸಿದ್ದರ ಪರಿಣಾಮ ಮೃತಪಟ್ಟವರ ಸಂಖ್ಯೆ 13.

ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಸ್ಟೆರ್ಲೈಟ್ ವಿರೋಧಿಸಿ ಹೋರಾಟ ನಡೆಸಿದವರೆಲ್ಲರೂ ವಿದ್ಯಾರ್ಥಿಗಳೇ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿ ಕೊಲ್ಲುತ್ತಾರೆ ಎಂದರೆ ಏನು ಹೇಳಬೇಕು?

ಇನ್ನೂ ಮರಿನಾ ಕಡಲ ಕಿನಾರೆಯಲ್ಲಿ ಜಲ್ಲಿಕಟ್ಟು ಪರವಾಗಿ ಹೋರಾಟ ರೂಪಿಸಿದವರೂ ಸಹ ವಿದ್ಯಾರ್ಥಿಗಳೇ. ಆದರೆ, ಈ ಹೋರಾಟವನ್ನು ಹತ್ತಿಕ್ಕಲು ಸ್ವತಃ ಪೊಲೀಸರೇ ಗಲಭೆಯನ್ನು ಹುಟ್ಟುಹಾಕಿದ್ದರು. ಹೋರಾಟವನ್ನು ಹತ್ತಿಕ್ಕುವಲ್ಲೂ ಯಶಸ್ವಿಯಾಗಿದ್ದರು. ಆದರೆ, ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಪೊಲೀಸರೇ ಬೆಂಕಿ ಹಚ್ಚಿದ್ದ ವಿಡಿಯೋ ನಂತರದ ದಿನಗಳಲ್ಲಿ ಭಾರೀ ವೈರಲ್ ಆಗಿತ್ತು. ಹೀಗೆ ಗೂಂಡಾಗಳು ಮಾಡುವ ಎಲ್ಲಾ ಕೆಲಸಗಳನ್ನೂ ತಮಿಳುನಾಡು ಪೊಲೀಸರು ಮಾಡುತ್ತಾರೆ ಎಂದಾದರೆ ಅಲ್ಲಿನ ಪೊಲೀಸರ ಮನಸ್ಥಿತಿಯನ್ನು ನೀವು ಊಹಿಸಬಹುದು.

ತಿದ್ದುಪಡಿಯಾಗದ Police ACT

ಬ್ರಿಟಿಷರು ತಮ್ಮ ಕಾಲದಲ್ಲಿ ಜನರನ್ನು ಹದ್ದುಬಸ್ತಿನಲ್ಲಿರುವ ಸಲುವಾಗಿ 1861ರಲ್ಲಿ ಪೊಲೀಸ್ ಆಕ್ಟ್ ಅನ್ನು ಜಾರಿ ಮಾಡಿದ್ದರು. ಆದರೆ, ಸ್ವಾತಂತ್ಯ್ರ ಭಾರತದಲ್ಲೂ ಈವರೆಗೆ ಇದೇ ಪೊಲೀಸ್ ಆಕ್ಟ್ ಅನ್ನು ಪಾಲಿಸಲಾಗುತ್ತಿದೆ. ಈ ಪೊಲೀಸ್ ಆಕ್ಟ್, ಪೊಲೀಸರು ಆರೋಪಿಯನ್ನು ಥಳಿಸುವ ಹಕ್ಕನ್ನು ನೀಡಿದೆ. ಆದರೆ, ಪೊಲೀಸರಿಂದ ಮಾರಣಾಂತಿಕ ಹಲ್ಲೆಯಾದರೆ, ಅವರ ವಿರುದ್ಧ ಕ್ರಮ ಜರುಗಿಸುವ ಯಾವುದೇ ನಿಖರ ಕಾನೂನು ಪ್ರಸ್ತಾವನೆ ನಮ್ಮ ದಂಡ ಸಂಹಿತೆಯಲ್ಲಿ ಇಲ್ಲ.

Anti torture act ಅಂತೂ ಭಾರತದಲ್ಲಿ ಇಲ್ಲವೇ ಇಲ್ಲ. 2017ರಲ್ಲಿ ಈ ಆಕ್ಟ್ ಅನ್ನು ಜಾರಿಗೆ ತರುವ ಸಲುವಾಗಿ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಚರ್ಚಿಸಿತ್ತೇ ವಿನಃ ಈವರೆಗೆ ಇದು ಜಾರಿಯಾಗಿಲ್ಲ. ಇದೇ ಕಾರಣಕ್ಕೆ ಪೊಲೀಸರ ದೌರ್ಜನ್ಯಕ್ಕೆ ಮಿತಿ ಇಲ್ಲದಂತಾಗಿದೆ. ಪೊಲೀಸರು ಆರೋಪಿಯನ್ನು ಥಳಿಸುವಂತಿಲ್ಲ ಎಂದು ಕೋರ್ಟ್ ಹೇಳಿದರೂ, ಸಹ ನ್ಯಾಯಾಂಗವೂ ಇಂತಹ ವಿಚಾರವನ್ನು ಕಂಡೂ ಕಾಣದಂತೆ ಸುಮ್ಮನೆ ಉಳಿಯುವುದು ತಿಳಿಯದ ವಿಚಾರವೇನಲ್ಲ.

ಭಾರತದಲ್ಲಿ ಪೊಲೀಸರ ದೌರ್ಜನ್ಯಕ್ಕೆ ವರ್ಷಕ್ಕೆ ಕನಿಷ್ಟ ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ. ಆದರೆ, ಈ ವಿಚಾರ ಸುದ್ದಿಯಾದರೆ ಮಾತ್ರ ಅಂತಹ ಪೊಲೀಸ್ ಅಧಿಕಾರಿಯನ್ನು ಕೆಲಕಾಲ ಕೆಲಸದಿಂದ ಅಮಾನತುಗೊಳಿಸಲಾಗುತ್ತದೆ. ಆದರೆ, ಯಾವುದೇ ಕಠಿಣ ಕಾನೂನು ಕ್ರಮ ಜರುಗಿಸಿರುವ, ಶಿಕ್ಷೆ ನೀಡಿರುವ ಉದಾಹರಣೆಯೇ ಇಲ್ಲ. ಇದೇ ಕಾರಣಕ್ಕೆ ಲಾಕಪ್‌ಡೆತ್ ನಲ್ಲಿ ಶಾಮೀಲಾದ ಎಷ್ಟೋ ಜನ ಅಧಿಕಾರಿಗಳು ಮತ್ತೆ ಇಲಾಖೆಗೆ ಸೇರ್ಪಡೆಯಾಗಿ ಉನ್ನತ ಹುದ್ದೆ ಪಡೆದ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ ಎಂದರೆ ಇಲ್ಲಿನ ವ್ಯವಸ್ಥೆಯ ಬಗ್ಗೆ ನೀವೆ ಊಹಿಸಿಕೊಳ್ಳಿ.

ಅಸಲಿಗೆ ಭಾರತದಲ್ಲಿ ಲಾಕಪ್‌ಡೆತ್ ಜಯರಾಜ್ – ಬೆನಿಕ್ಸ್ ಸಾವಿನೊಂದಿಗೆ ಖಂಡಿತ ಅಂತ್ಯವಾಗುವ ವಿಚಾರವಲ್ಲ. ಆದರೆ, ತರ್ಕ ಇರುವುದು ಇಲ್ಲಲ್ಲ. ಬದಲಾಗಿ ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿಗೆ ಇಡೀ ಭಾರತ ಮರುಗಿದ ರೀತಿ ಅಚ್ಚರಿ ಮೂಡಿಸುತ್ತದೆ. ಈ ಕೊಲೆ ಇತ್ತೀಚೆಗೆ ಇಡೀ ವಿಶ್ವದಾದ್ಯಂತ ಅತಿ ಹೆಚ್ಚು ಚರ್ಚೆಯಾದ ಸಂಗತಿಯಾಗಿತ್ತು. ಪೊಲೀಸರ ಕ್ರೌರ್ಯ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದ ಜನಾಂಗೀಯ ಧೋರಣೆಯ ಬಗ್ಗೆ ಭಾರತ ಸೇರಿದಂತೆ ಇಡೀ ವಿಶ್ವ ಒಕ್ಕೊರಲಿನಿಂದ ಪ್ರಶ್ನೆ ಎತ್ತಿತ್ತು.

ಸ್ವತಃ ಅಮೆರಿಕದಲ್ಲಿ ದೊಡ್ಡ ಮಟ್ಟದ ಜನಾಂದೋಲನ ಭುಗಿಲೆದ್ದು, ಇದರ ಪರಿಣಾಮವಾಗಿ ಅಲ್ಲಿನ ಪೊಲೀಸರು ಸಾಮಾನ್ಯ ಜನರ ಎದುರು ಮಂಡಿಯೂರಿ ಕ್ಷಮೆ ಕೇಳಿದ್ದರು. ಇದು ನಿಜಕ್ಕೂ ಅಪರೂಪದಲ್ಲಿ ಅಪರೂಪದ ಘಟನೆ. ಆದರೆ, ಭಾರತದಲ್ಲಿ ಲಾಕಪ್‌ಡೆತ್ ವಿರೋಧಿಸಿ ಇಂತಹ ಪ್ರತಿಭಟನೆಯನ್ನು ನಿರೀಕ್ಷಿಸುವುದು ಸಾಧ್ಯವೆ? ಪೊಲೀಸರು ಜನರ ಎದುರು ಮಂಡಿಯೂರಿ ಕ್ಷಮೆ ಕೇಳುವ ಪ್ರಸಂಗವನ್ನು ಭಾರತದ ಮಟ್ಟಿಗೆ ಊಹಿಸುವುದಕ್ಕಾದರೂ ಸಾಧ್ಯವೆ? ಜಯರಾಜ್, ಬೆನಿಕ್ಸ್ ಸಾವಿನೊಂದಿಗೆ ಈ ಲಾಕಪ್‌ಡೆತ್ ಸರಣಿ ಮುಗಿಯಲು ಇಡೀ ದೇಶದಾದ್ಯಂತ ಕಠಿಣ ಕಾನೂನು ಇನ್ನಾದರೂ ಜಾರಿಯಾಗುತ್ತಾ ಎಂಬುದು ಪ್ರಶ್ನೆ.

“ನಿಜ ಹೇಳಬೇಕು ಎಂದರೆ ಎಲ್ಲಾ ಪೊಲೀಸ್ ಠಾಣೆಗಳೂ ರಿಯಲ್ ಎಸ್ಟೇಟ್ ಆಫೀಸುಗಳೆ. ಇಲ್ಲಿ ಜನರ ಸಮಸ್ಯೆಗಿಂತ ಪೊಲೀಸ್ ಅಧಿಕಾರಿಗಳೇ ಮುಂದೆ ನಿಂತು ಬ್ರೋಕರಿಂಗ್ ಮಾಡುವುದು ಕಾಮನ್. ಇದು ತಮಿಳುನಾಡಿಗೆ ಮಾತ್ರ ಸೀಮಿತವಲ್ಲ, ಎಲ್ಲಾ ರಾಜ್ಯದ ಪರಿಸ್ಥಿತಿಯೂ ಹೀಗೆಯೇ ಇದೆ. ಸರ್ಕಾರ ನಡೆಸುವವರು ಪೊಲೀಸರ ಹಿಂದೆ ನಿಂತು ಇಂತ ಕೆಲಸ ಮಾಡಿಸುತ್ತಾರೆ. ಇಂತವರಿಂದ ಕರುಣೆ ಮಾನವೀಯತೆಯಂತಹ ಮಹೋನ್ನತ ವಿಚಾರಗಳನ್ನು ನಿರೀಕ್ಷಿಸುವುದು ನಮ್ಮ ತಪ್ಪಾಗುತ್ತದೆ.“ ಎನ್ನುತ್ತಾರೆ ತಮಿಳುನಾಡಿನ ಖ್ಯಾತ ವಕೀಲರು ಮತ್ತು ಹೋರಾಟಗಾರರಾದ ಬಾಲನ್‌ರವರು…


ಮತ್ತಷ್ಟು ಸುದ್ದಿಗಳು

ತಮಿಳುನಾಡು ಲಾಕಪ್ ಡೆತ್ ಪ್ರಕರಣ: ಪೊಲೀಸರ ವಿರುದ್ಧ ಕೊಲೆ ಪ್ರಕರಣಕ್ಕೆ ಹೈಕೋರ್ಟ್ ಶಿಫಾರಸ್ಸು

ತಮಿಳುನಾಡಿನ ಪೊಲೀಸ್‌ ದೌರ್ಜನ್ಯಕ್ಕೆ ಮತ್ತೊಬ್ಬ ಆಟೋ ಡ್ರೈವರ್ ಬಲಿ: ಪ್ರತಿಭಟನೆ

ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...