ತಮಿಳುನಾಡಿನ ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರ ಮಗ ಸೂರ್ಯ ರಾಜ ಬಾಲು ಅವರು, 51ನೇ ರಾಜ್ಯ ಶೂಟಿಂಗ್ ಕ್ರೀಡಾಕೂಟದಲ್ಲಿ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ ಕುತ್ತಿಗೆಗೆ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ್ದು, ಪದಕವನ್ನು ಕೈಯಲ್ಲಿ ಸ್ವೀಕರಿಸಿದ್ದಾರೆ.
ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಣ್ಣಾಮಲೈ ವಿಜೇತರ ಕತ್ತಿಗೆ ಪದಕ ಹಾಕುತ್ತಿದ್ದರು. ಆದರೆ, ಸೂರ್ಯ ಅವರು ಕತ್ತಿಗೆ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಎರಡು ವಾರಗಳ ಹಿಂದೆ ಇದೇ ರೀತಿಯ ಘಟನೆ ತಿರುನಲ್ವೇಲಿಯಲ್ಲಿ ನಡೆದಿತ್ತು. ಅಲ್ಲಿನ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ ಜೀನ್ ಜೋಸೆಫ್ ಅವರು ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪ್ರಮಾಣಪತ್ರ ಸ್ವೀಕರಿಸಲು ನಿರಾಕರಿಸಿದ್ದರು. ಬದಲಾಗಿ ವಿವಿಯ ಉಪಕುಲಪತಿಯಿಂದ ಪ್ರಮಾಣಪತ್ರ ಪಡೆದಿದ್ದರು.
ಈ ಘಟನೆ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಡಿಎಂಕೆ ನಡುವೆ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿತ್ತು.
ಜೀನ್ ಜೋಸೆಫ್ ಅವರು ಡಿಎಂಕೆಯ ನಾಗರಕೋಯಿಲ್ ವಿಭಾಗದ ಉಪ ಕಾರ್ಯದರ್ಶಿ ಎಂ. ರಾಜನ್ ಅವರ ಪತ್ನಿಯಾಗಿದ್ದು, ರಾಜ್ಯಪಾಲ ತಮಿಳು ವಿರೋಧಿಯಾದ ಕಾರಣ ಪದವಿ ಸ್ವೀಕರಿಸಲು ನಿರಾಕರಿಸಿದೆ ಎಂದಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ್ದ ಜೀನ್ ಜೋಸೆಫ್, “ನನ್ನ ಪದವಿ ಯಾರಿಂದ ಪಡೆದುಕೊಳ್ಳಬೇಕು ಎನ್ನುವುದು ನನ್ನ ಆಯ್ಕೆ. ರಾಜ್ಯಪಾಲರು ತಮಿಳುನಾಡು ಮತ್ತು ತಮಿಳರ ವಿರೋಧಿಯಾಗಿರುವುದರಿಂದ ನಾನು ಅವರಿಂದ ಪದವಿ ಸ್ವೀಕರಿಸಲು ನಿರಾಕರಿಸಿದೆ. ನಾನು ದ್ರಾವಿಡ ಮಾದರಿ ಅನುಸರಿಸುತ್ತೇನೆ. ಇಲ್ಲಿ ಹಲವರಿಗೆ ನನ್ನಂತೆ ಅಭಿಪ್ರಾಯ ಇರಬಹುದು. ಇವರಿಂದ ಪದವಿ ಪಡೆಯುವುದು ಬೇಡ ಎಂದು ಹಲವರು ಅಂದುಕೊಂಡಿರಬಹುದು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಕ್ಕಿಲ್ಲ” ಎಂದಿದ್ದರು.
ಮುಂದುವರಿದು, “ನಮ್ಮ ತಮಿಳುನಾಡಿನಲ್ಲಿ ಬೇರೆ ಯಾರಾದರು ಪದವಿ ಕೊಡಬಹುದಲ್ವಾ? ಅದಕ್ಕೆ ಅರ್ಹರಾದ ಅನೇಕ ಜನರಿದ್ದಾರೆ. ಮುಖ್ಯಮಂತ್ರಿ, ಶಿಕ್ಷಣ ಸಚಿವರು ಸೇರಿದಂತೆ ಹಲವರು ನಮ್ಮ ನಾಡಿನಲ್ಲಿ ಇದ್ದಾರೆ. ಅವರು ಕೊಡಬಹುದಲ್ವಾ? ಎಂದು ಪ್ರಶ್ನಿಸಿದ್ದರು.
ತಮಿಳರ ವಿರೋಧಿ ಆರೋಪ: ರಾಜ್ಯಪಾಲರ ಕೈಯಿಂದ ಪದವಿ ಸ್ವೀಕರಿಸಲು ನಿರಾಕರಿಸಿದ ಪಿಎಚ್‌ಡಿ ವಿದ್ಯಾರ್ಥಿನಿ!


