ತಮಿಳುನಾಡಿನ ಚಿದಂಬರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಅಧ್ಯಕ್ಷ ತೋಳ್ ತಿರುಮಾವಳವನ್ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಮತ್ತು ಪ್ರಸಾರ ಮಾಡದಂತೆ ಬಿಜೆಪಿ ಪದಾಧಿಕಾರಿಗಳು, ಕೆಲವು ಪತ್ರಕರ್ತರು, ವಕೀಲರು ಮತ್ತು ಬರಹಗಾರರನ್ನು ಮದ್ರಾಸ್ ಹೈಕೋರ್ಟ್ ಗುರುವಾರ ನಿರ್ಬಂಧಿಸಿದೆ.
ತನ್ನ ಪ್ರತಿಷ್ಠೆಗೆ ಹಾನಿ ಮಾಡಿದ್ದಕ್ಕಾಗಿ 1 ಕೋಟಿ ರೂ ಮೊತ್ತದ ಮಾನ ನಷ್ಟ ಪರಿಹಾರ ನೀಡಬೇಕು ಎಂದು ಕೋರಿ ತಿರುಮಾವಳವನ್ ನೀಡಿದ್ದ ಸಿವಿಲ್ ಮೊಕದ್ದಮೆಗೆ ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರು ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಮಾನಹಾನಿಕರ ಹೇಳಿಕೆಗಳನ್ನು ನೀಡಿದ ಆರೋಪಕ್ಕೆ ಗುರಿಯಾಗಿರುವ ಪ್ರತಿವಾದಿಗಳು ಜನವರಿ 28 ರೊಳಗೆ ಸ್ಪಷ್ಟೀಕರಣ ನೀಡಬೇಕು ಎಂದು ನ್ಯಾಯಮೂರ್ತಿ ಆದೇಶಿಸಿದ್ದಾರೆ.
ಇದನ್ನೂ ಓದಿ:ನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್ ಕಿಶೋರ್ ವಾಗ್ದಾಳಿ
ತೋಲ್ ತಿರುಮಾವಳವನ್ ಮೂಲತಃ ವಕೀಲರಾಗಿದ್ದು, ಅವರು ವಿದ್ಯಾರ್ಥಿ ದಿನಗಳಿಂದಲೂ ದೀನದಲಿತರ ಪರವಾಗಿ ಹೋರಾಡುತ್ತಿದ್ದಾರೆ ಎಂದು ಹಿರಿಯ ವಕೀಲ ಇ.ಓಂಪ್ರಕಾಶ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕಳೆದ 32 ವರ್ಷಗಳಿಂದ ಸಕ್ರಿಯ ಸಾರ್ವಜನಿಕ ಸೇವೆಯಲ್ಲಿರುವ ತಿರುಮಾವಳವನ್ ಅವರ ರಾಜಕೀಯ ಪಕ್ಷವು ಈಗ ವಿಧಾನಸಭೆಯಲ್ಲಿ ನಾಲ್ಕು ಶಾಸಕರು ಮತ್ತು ಸಂಸತ್ತಿನಲ್ಲಿ ಇಬ್ಬರು ಸದಸ್ಯರನ್ನು ಹೊಂದಿದೆ. ಅಲ್ಲದೆ ಅವರು ಜಗತ್ತಿನಾದ್ಯಂತ ಹರಡಿರುವ ತಮಿಳರ ನಡುವೆ ಜನಪ್ರಿಯ ವ್ಯಕ್ತಿಯಾಗಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ.
ತಿರುಮಾವಳವನ್ ಅವರ ವಕೀಲರು ನ್ಯಾಯಾಲಯಕ್ಕೆ, “ಈ ಹಿಂದೆ ವಿಸಿಕೆಯೊಂದಿಗೆ ಇದ್ದ ಡಿ.ಪೆರಿಯಸಾಮಿ ಅಲಿಯಾಸ್ ‘ಥಡಾ’ ಪೆರಿಯಸಾಮಿ ಅವರು ಪಕ್ಷ ಬದಲಿಸಿ ಬಿಜೆಪಿಗೆ ಸೇರಿದ್ದಾರೆ. ಇವರಿಗೆ ವಿಧಾನಸಭೆ ಮತ್ತು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಅವಕಾಶ ನೀಡಿದ್ದಾರೆ. ಅವರು ಬಿಜೆಪಿ ಸೇರಿದ ನಂತರ ತನ್ನ ಫೇಸ್‌ಬುಕ್ ಪುಟ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅವಹೇಳನಕಾರಿ ವಿಷಯವನ್ನು ಪೋಸ್ಟ್ ಮಾಡುವ ಮೂಲಕ ಸಂಸದರ ವಿರುದ್ಧ ನಿಂದಿಸುವ ಮತ್ತು ದುರುದ್ದೇಶಪೂರಿತ ಪ್ರಚಾರವನ್ನು ಪ್ರಾರಂಭಿಸಿದ್ದರು. ಅದೇ ರೀತಿ, ವಕೀಲ ಪಿ. ರತ್ನಂ ಕೂಡ ಸಂಸದರ ವೈಯಕ್ತಿಕ ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ” ಎಂದು ದೂರಿದ್ದಾರೆ.
ಇದನ್ನೂ ಓದಿ:ದೆಹಲಿ ಮಾಲಿನ್ಯಕ್ಕೆ ಪಾಕ್ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ


