ಬಾಲ್ಯ ವಿವಾಹಕ್ಕಾಗಿ ವಯಸ್ಸು ಹೆಚ್ಚಿಸುವುದು ಮತ್ತು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕಿಯರ ಕುಟುಂಬಗಳು ಆಧಾರ್ ಕಾರ್ಡ್ ವಿವರಗಳನ್ನು ತಿರುಚಿರುವ ಕನಿಷ್ಠ ಆರು ಪ್ರಕರಣಗಳನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿಹಲವು ಪ್ರಕರಣಗಳು ಕೆಲಮಂಗಲಂ ಬ್ಲಾಕ್‌ನಿಂದ ವರದಿಯಾಗಿವೆ.
ಗರ್ಭಿಣಿಯರನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಆರೋಗ್ಯ ಇಲಾಖೆಯು ಬಳಸುವ ಡಿಜಿಟಲ್ ಟ್ರ್ಯಾಕಿಂಗ್ ವೇದಿಕೆಯಾದ ಪ್ರೆಗ್ನೆನ್ಸಿ ಮತ್ತು ಇನ್‌ಫೆಂಟ್ ಕೋಹಾರ್ಟ್ ಮಾನಿಟರಿಂಗ್ ಮತ್ತು ಮೌಲ್ಯಮಾಪನ (PICME) ವ್ಯವಸ್ಥೆಯ ಮೂಲಕ ಪೋಷಕರು ಎಸಗಿರುವ ವಂಚನೆ ಬೆಳಕಿಗೆ ಬಂದಿದೆ.
ಆರೋಗ್ಯ ಇಲಾಖೆ ಸಿಬ್ಬಂದಿಗಳು ದಿನನಿತ್ಯದ ಮಾಃಇತಿ ನಮೂದು ಮಾಡುವ ಸಮಯದಲ್ಲಿ, ಹುಡುಗಿಯರ ಆಧಾರ್-ಲಿಂಕ್ಡ್ ದಾಖಲೆಗಳು ಮತ್ತು ಅವರು ಹೊಂದಿರುವ ಭೌತಿಕ ಆಧಾರ್ ಕಾರ್ಡ್‌ಗಳ ನಡುವಿನ ವ್ಯತ್ಯಾಸಗಳನ್ನು ಕಂಡುಕೊಂಡಿದ್ದಾರೆ.
ಒಂದು ಪ್ರಕರಣದಲ್ಲಿ, 29 ವರ್ಷದ ವ್ಯಕ್ತಿಯನ್ನು ಮದುವೆಯಾದ 14 ವರ್ಷದ ಬಾಲಕಿಯೊಬ್ಬಳು ಮೇ ಅಂತ್ಯದಲ್ಲಿ ತನ್ನ ಗರ್ಭಧಾರಣೆಯನ್ನು ನೋಂದಾಯಿಸಲು ನಾಗಮಂಗಲಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದಳು. ಆಕೆಯ ಆಧಾರ್ ಕಾರ್ಡ್‌ನಲ್ಲಿ ಆಕೆಯ ವಯಸ್ಸು 20 ಎಂದು ನಮೂದಿಸಲಾಗಿದ್ದರೂ, ಪಿಐಸಿಎಂಇ ದಾಖಲೆಗಳ ಪ್ರಕಾರ ಆಕೆಯ ನಿಜವಾದ ವಯಸ್ಸು 14 ಎಂದು ತೋರಿಸಿದೆ. ತನಿಖೆಯ ನಂತರ, ಬಾಲಕಿ ಮತ್ತು ಆಕೆಯ ಪತಿ ಬಾಲ್ಯವಿವಾಹ ಕಾನೂನುಗಳ ಅಡಿ ಕ್ರಮದಿಂದ ತಪ್ಪಿಸಿಕೊಳ್ಳಲು ಡೆಂಕಣಿಕೋಟೆಯಲ್ಲಿರುವ ಸ್ಥಳೀಯ ಬ್ರೌಸಿಂಗ್ ಕೇಂದ್ರದಲ್ಲಿ ಆಧಾರ್ ಜನ್ಮ ದಿನಾಂಕವನ್ನು 200 ರೂ ಕೊಟ್ಟು ಬದಲಾಯಿಸಿದ್ದರು ಎಂದು ಒಪ್ಪಿಕೊಂಡರು.
ಕೂಡಲೇ ಅಧಿಕಾರಿಗಳು ಬಾಲಕಿಯನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ಅಪಘಾತ ನೋಂದಣಿ (ಎಆರ್) ನಮೂದು ಮಾಡಿಸಿದ್ದಾರೆ. ಈ ಸಮಸ್ಯೆಯನ್ನು ಡೆಂಕಣಿಕೋಟೆ ಮಹಿಳಾ ಪೊಲೀಸ್ ಠಾಣೆಗೆ ವರದಿ ಮಾಡಲಾಯಿತು. ಹೆಚ್ಚಿನ ವಿಚಾರಣೆ ಬಳಿಕ, ರಾಯಕೊಟ್ಟೈ ಮತ್ತು ಡೆಂಕಣಿಕೋಟೆಯಲ್ಲಿರುವ ವಿವಿಧ ಬ್ರೌಸಿಂಗ್ ಕೇಂದ್ರಗಳು, ಫೋಟೋ ಸ್ಟುಡಿಯೋಗಳಲ್ಲಿ 500 ರೂ.ಗೆ ನಕಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಆಘಾತಕಾರಿಯಾಗಿ, ಕೆಲವು ಆರೋಗ್ಯ ಇಲಾಖೆಯ ಸಿಬ್ಬಂದಿ ವಂಚನೆಗೆ ಸಹಕರಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆಲಮಂಗಲಂ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಸಿ. ರಾಜೇಶ್ ಕುಮಾರ್ ಮಾತನಾಡಿ, ಮಾಹಿತಿ ತಿರುಚುತ್ತಿವೆ ಎಂದು ಗುರುತಿಸಲಾದ ಬ್ರೌಸಿಂಗ್ ಕೇಂದ್ರಗಳು ಮತ್ತು ಸ್ಟುಡಿಯೋಗಳನ್ನು ನಮ್ಮ ತಂಡವು ಪರಿಶೀಲಿಸುತ್ತದೆ. ಗ್ರಾಮ ಆರೋಗ್ಯ ದಾದಿಯರು ಅಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗೆ ಸಹಾಯ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.
ಆಧಾರ್ ತಿರುಚುವಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಬೆಟ್ಟಮುಗಿಲಲಂ ಪಂಚಾಯತ್‌ನ ಆರೋಗ್ಯ ಕಾರ್ಯಕರ್ತರನ್ನು ಈಗಾಗಲೇ ವಜಾಗೊಳಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜಿ. ರಮೇಶ್ ಕುಮಾರ್ ಮಾತನಾಡಿ, “ಇಂತಹ ಪ್ರಕರಣಗಳನ್ನು ವರದಿ ಮಾಡಲು ಎಲ್ಲ ಸಿಬ್ಬಂದಿಗೆ ಜಾಗೃತಿ ಮೂಡಿಸಲಾಗುವುದು. ಯಾವುದೇ ರೂಪದಲ್ಲಿ ಬಾಲ್ಯವಿವಾಹವನ್ನು ಬೆಂಬಲಿಸುವುದನ್ನು ಸಹಿಸಲಾಗುವುದಿಲ್ಲ” ಎಂದು ಹೇಳಿದರು.
ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗೆ, ಕೃಷ್ಣಗಿರಿ ಜಿಲ್ಲೆಯಲ್ಲಿ ಒಟ್ಟು 545 ಹದಿಹರೆಯದ ಗರ್ಭಧಾರಣೆಯ ವರದಿಯಾಗಿದೆ. ಶೂಲಗಿರಿ (81), ಕೃಷ್ಣಗಿರಿ ಗ್ರಾಮೀಣ (72) ಮತ್ತು ಕೆಲಮಂಗಲಂ (66) ನಲ್ಲಿ ಅತಿ ಹೆಚ್ಚು ಸಂಖ್ಯೆಗಳು ದಾಖಲಾಗಿವೆ.
ಆಧಾರ್ ತಿರುಚುವಿಕೆ ಮತ್ತು ಬಾಲ್ಯವಿವಾಹದಲ್ಲಿ ಭಾಗಿಯಾಗಿರುವವರ ವಿರುದ್ಧ ತನಿಖೆ ನಡೆಸಲು ಮತ್ತು ಕ್ರಮ ಕೈಗೊಳ್ಳಲು ವಿಶೇಷ ತಂಡವನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ. ದಿನೇಶ್ ಹೇಳಿದರು.


