ತಮಿಳುನಾಡಿನ ಶಿವಗಂಗೆ ಜಿಲ್ಲೆಯಲ್ಲಿ ನಡೆದ ದೇವಾಲಯದ ಭದ್ರತಾ ಸಿಬ್ಬಂದಿಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಜೂನ್.30) ತಡರಾತ್ರಿ ಐವರು ಪೊಲೀಸರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ ಬೆನ್ನಲ್ಲೇ ಪೊಲೀಸರ ಬಂಧನವಾಗಿದೆ.
ಬಿ. ಅಜಿತ್ ಕುಮಾರ್ (27) ಸಾವಿಗೀಡಾದ ಯುವಕ. ಜೂನ್ 27ರಂದು ತಿರುಪುವನಂ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ತಮ್ಮ ಕಾರಿನಿಂದ 10 ಗ್ರಾಂ. ಚಿನ್ನ ಕಾಣೆಯಾಗಿದೆ ಎಂದು ತಾಯಿ-ಮಗಳು ದೂರು ನೀಡಿದ್ದರು. ಪ್ರಕರಣದ ತನಿಖೆಗೆ ರಚಿಸಿದ್ದ ವಿಶೇಷ ತಂಡದ 6 ಮಂದಿ ಪೊಲೀಸರು, ಪ್ರಕರಣದಲ್ಲಿ ಭದ್ರತಾ ಸಿಬ್ಬಂದಿ ಅಜಿತ್ ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸಲು ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಾಯಿ-ಮಗಳು ತಮ್ಮ ಕಾರು ನಿಲ್ಲಿಸಲು ಭದ್ರತಾ ಸಿಬ್ಬಂದಿ ಅಜಿತ್ ಅವರ ಸಹಾಯ ಕೋರಿದ್ದರು. ಆ ಬಳಿಕ ಅವರ ಕಾರಿನಲ್ಲಿದ್ದ ಚಿನ್ನ ಕಾಣೆಯಾಗಿದೆ ಎಂದು ಹೇಳಲಾಗ್ತಿದೆ. ಚಿನ್ನ ಕಳವಾಗಿರಬಹುದು ಎಂದು ಅಜಿತ್ ಮೇಲೆ ಸಂಶಯ ವ್ಯಕ್ತಪಡಿಸಿ ತಾಯಿ, ಮಗಳು ದೂರು ಕೊಟ್ಟಿದ್ದರು. ಪೊಲೀಸರು ಅಂದೇ ಅಜಿತ್, ಅವರ ಸಹೋದರ ನವೀನ್ ಮತ್ತು ಇತರ ಮೂವರನ್ನು ಬಂಧಿಸಿದ್ದರು. ಆದರೆ, ಜೂನ್ 27 ರಂದು ಸಂಜೆಯ ವೇಳೆಗೆ ಎಲ್ಲರನ್ನು ಬಿಡುಗಡೆ ಮಾಡಿದ್ದರು.
ನಂತರ, ಮತ್ತೊಮ್ಮೆ ಅಜಿತ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಬೇರೆ ಬೇರೆ ಕಡೆಗಳಿಗೆ ಕರೆದೊಯ್ದು ಥಳಿಸಿ ಅಜಿತ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಜಿತ್ ದೇಹದಲ್ಲಿ ಬಾಹ್ಯವಾಗಿ 15ಕ್ಕೂ ಹೆಚ್ಚು ಗಾಯದ ಗುರುತುಗಳು ಮತ್ತು ಆಂತರಿಕವಾಗಿ ಗಂಭೀರವಾದ ಗಾಯಗಳು ಪತ್ತೆಯಾಗಿವೆ ಎಂದು ಕೆಲ ಮಾಧ್ಯಮ ವರದಿಗಳು ಹೇಳಿವೆ. ಇನ್ನೂ ಕೆಲ ವರದಿಗಳು 30-40 ಗಾಯದ ಗುರುತುಗಳ ಬಗ್ಗೆ ವರದಿ ಮಾಡಿವೆ.
ವಿಶೇಷ ಪೊಲೀಸ್ ತಂಡ ಬಂಧಿಸಿ ಕರೆದೊಯ್ದು ನನ್ನ ಮುಂದೆಯೇ ನನ್ನ ಸಹೋದರನಿಗೆ ಕ್ರೂರವಾಗಿ ಥಳಿಸಿದ್ದಾರೆ. ಬಳಿಕ ಜೂನ್ 29ರಂದು ಖಾಸಗಿ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ ಎಂದು ಅಜಿತ್ ಅವರ ಸಹೋದರ ನವೀನ್ ಕುಮಾರ್ ಹೇಳಿದ್ದಾರೆ.
ಕಸ್ಟಡಿ ಚಿತ್ರಹಿಂಸೆ ಮತ್ತು ಸಾವಿನ ಬಗ್ಗೆ ಸಬ್-ಮ್ಯಾಜಿಸ್ಟ್ರೇಟ್ ವೆಂಕಟೇಶ್ ಪ್ರಸಾದ್ ಅವರು ವಿಚಾರಣೆ ನಡೆಸುತ್ತಿದ್ದು, ನವೀನ್ ಕುಮಾರ್ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿ ಪೊಲೀಸರ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ.
ಶಿವಗಂಗೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಭು, ಶಂಕರ ಮಣಿಕಂದನ್, ರಾಜ, ಆನಂದ್, ಕಣ್ಣನ್ ಮತ್ತು ರಾಮಚಂದ್ರನ್ ಎಂಬ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಆದರೆ, ಇದು ಕಣ್ಣೊರೆಸುವ ತಂತ್ರ ಎಂದು ನವೀನ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮಗೆ ಯಾವುದೇ ಹಣದ ಅಗತ್ಯವಿಲ್ಲ. ನನ್ನ ಸಹೋದರನಿಗೆ ನ್ಯಾಯ ಬೇಕು. ಅವನು ಯಾವುದೇ ತಪ್ಪು ಮಾಡಿಲ್ಲ, ಆದರೆ ಇಬ್ಬರು ಮಹಿಳೆಯರ ಮೌಖಿಕ ದೂರಿನ ಆಧಾರದ ಮೇಲೆ ಪೊಲೀಸರು ಅವನನ್ನು ಕೊಂದರು” ಎಂದು ನವೀನ್ ಕುಮಾರ್ ಸೋಮವಾರ ಕಣ್ಣೀರು ಹಾಕಿದ್ದಾರೆ.
ಅಜಿತ್ ಅವರ ಲಾಕಪ್ ಡೆತ್ ತಮಿಳುನಾಡಿನಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಮಾತ್ರವಲ್ಲದೆ, ಸ್ವಪಕ್ಷ ಡಿಎಂಕೆ ನಾಯಕರು ಕೂಡ ಘಟನೆಯನ್ನು ಖಂಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಎಂಕೆ ಪ್ರತಿಪಕ್ಷದಲ್ಲಿ ಇದ್ದಾಗ ಜನರ ಬಗ್ಗೆ ಅತಿ ಕಾಳಜಿ ಹೊಂದಿದ್ದ ಸಿಎಂ ಎಂ.ಕೆ ಸ್ಟಾಲಿನ್, ಈಗ ಏಕೆ ಮೌನವಾಗಿದ್ದಾರೆ? ಎಂದು ಪ್ರತಿಪಕ್ಷಗಳಾದ ಎಐಎಡಿಎಂಕೆ ಮತ್ತು ಬಿಜೆಪಿ ಪ್ರಶ್ನಿಸಿದೆ.
2020ರ ಜೂನ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲ್ಪಟ್ಟ ಸಾತಂಕುಲಂನ ತಂದೆ-ಮಗ ಪಿ ಜಯರಾಜ್ ಮತ್ತು ಎಮ್ಯಾನುಯೆಲ್ ಬೆನ್ನಿಕ್ಸ್ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಡಿಎಂಕೆ ತೋರಿದ ಉತ್ಸಾಹದ ಬಗ್ಗೆ ಪ್ರತಿಪಕ್ಷಗಳು ಉಲ್ಲೇಖಿಸಿವೆ.
ಬಿಜೆಪಿಯ ಪ್ರಕಾರ, ಡಿಎಂಕೆ ಸರ್ಕಾರ ಅಧಿಕಾರ ವಹಿಸಿಕೊಂಡ ಮೇ 2021 ರಿಂದ ಅಜಿತ್ ಕುಮಾರ್ ಅವರದ್ದು ಸಾವು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ 24ನೇ ಪ್ರಕರಣವಾಗಿದೆ.
ಮೃತನ ಸಹೋದರ ಪೊಲೀಸ್ ಚಿತ್ರಹಿಂಸೆಗೆ ಪ್ರತ್ಯಕ್ಷದರ್ಶಿ ಎಂದು ಆರೋಪಿಸಿರುವುದರಿಂದ, ಮದ್ರಾಸ್ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ವಿವರವಾದ ತನಿಖೆ ನಡೆಯಬೇಕು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಒತ್ತಾಯಿಸಿದ್ದಾರೆ.
ಯುಪಿ: ಬಿಎಸ್‌ಎಫ್ ಯೋಧನ ಪತ್ನಿ ಮೇಲೆ ಮೈದುನರಿಂದಲೇ ಸರಣಿ ಅತ್ಯಾಚಾರ, ವಿಡಿಯೋ ಬ್ಲಾಕ್‌ಮೇಲ್


