ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಮತ್ತು ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಅಧ್ಯಕ್ಷ ಹಾಗೂ ಸಂಸದ ಥೋಲ್ ತಿರುಮಾವಲವನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಸೋಮವಾರ (ನ.24) ಲೈವ್ ಲಾ ವರದಿ ಮಾಡಿದೆ.
ತಮಿಳುನಾಡು ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನವೆಂಬರ್ 4ರಂದು ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತವಾದ ಮನೆ ಮನೆ ಎಣಿಕೆ ಪ್ರಾರಂಭಿಸಿದೆ.
ಡಿಸೆಂಬರ್ 9ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಡಿಸೆಂಬರ್ 9ರಿಂದ ಜನವರಿ 8 ರವರೆಗೆ ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಜನವರಿ 31ರವರೆಗೆ ವಿಚಾರಣೆಗಳು ನಡೆಯಲಿವೆ. ಫೆಬ್ರವರಿ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಟಿವಿಕೆ ತನ್ನ ಅರ್ಜಿಯಲ್ಲಿ, ಎಸ್‌ಐಆರ್ ಕಾನೂನಿನ ಮುಂದೆ ಸಮಾನತೆ ಮತ್ತು ಬದುಕುವ ಹಕ್ಕಿನ ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಗೆ ವಿರುದ್ಧವಾಗಿದೆ ಎಂದು ವಾದಿಸಿದೆ.
ಈ ಪ್ರಕ್ರಿಯೆ ಯಾವುದೇ ದಾಖಲಿತ ಕಾರಣಗಳು ಅಥವಾ ಸಮರ್ಥನೆಗಳಿಲ್ಲದೆ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುವುದಕ್ಕೆ ಸಮನಾಗಿರುತ್ತದೆ ಎಂದು ಟಿವಿಕೆ ಹೇಳಿದೆ.
ಎಸ್‌ಐಆರ್ ಪ್ರಕ್ರಿಯೆಯು ಸೂಚನೆ ಅಥವಾ ವಿಚಾರಣೆಯಿಲ್ಲದೆ ಹೆಸರುಗಳನ್ನು ಅಳಿಸಲು ಅನುಮತಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನಿರಂತರತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನಗಳು ಮತ್ತು ಮತದಾರರ ನೋಂದಣಿ ನಿಯಮಗಳು, 1960 ರ ಅಡಿಯಲ್ಲಿ ಶಾಸನಬದ್ಧ ಸುರಕ್ಷತೆಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದೆ.
ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಉಂಟಾಗಬಹುದಾದ ಕಾರ್ಯವಿಧಾನದ ತೊಂದರೆಗಳನ್ನು ಕೂಡ ಟಿವಿಕೆ ಉಲ್ಲೇಖಿಸಿದೆ.
ಎಸ್‌ಐಆರ್ ಪ್ರಕ್ರಿಯೆಯನ್ನು ಮಳೆಗಾಲಕ್ಕೆ ಇಟ್ಟಿದ್ದಾರೆ. ಆ ಸಮಯದಲ್ಲಿ ಪ್ರವಾಹ ಬಂದರೆ ಸರ್ಕಾರಿ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಸಿಬ್ಬಂದಿಯನ್ನು ಎಲ್ಲಾ ಪ್ರವಾಹ ಪರಿಹಾರ ಕೆಲಸಕ್ಕೆ ಕಳುಹಿಸಬೇಕಾಗುತ್ತದೆ. ಆಗ ಮತದಾರರ ಪಟ್ಟಿ ಸರಿಪಡಿಸುವ ಕೆಲಸಕ್ಕೆ ಯಾರೂ ಇರುವುದಿಲ್ಲ ಎಂದು ಹೇಳಿದೆ.
ತಮಿಳುನಾಡಿನಲ್ಲಿ ಎಸ್‌ಐಆರ್ ನಡೆಸುವ ಚುನಾವಣಾ ಆಯೋಗದ ಅಕ್ಟೋಬರ್ 27ರ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ತಿರುಮಾವಲವನ್ ಅವರು ಆರ್ಟಿಕಲ್ 32ರ ಅಡಿಯಲ್ಲಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯಲ್ಲಿ ಕೋರಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಎಸ್‌ಐಆರ್ ಅನಿಯಂತ್ರಿತ, ಅಪಾರದರ್ಶಕ ಮತ್ತು ಅಸಂವಿಧಾನಿಕ ಎಂದು ಅವರು ಬಣ್ಣಿಸಿದ್ದು, ಇದು ಸಮಾನತೆ, ಘನತೆ ಮತ್ತು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಇರುವಾಗ ತೀವ್ರವಾದ ಪರಿಷ್ಕರಣೆಯನ್ನು ಪ್ರಾರಂಭಿಸುವುದರಿಂದ, ವಿಶೇಷವಾಗಿ ಅಂಚಿನಲ್ಲಿರುವ ಗುಂಪುಗಳಲ್ಲಿ ದೊಡ್ಡ ಪ್ರಮಾಣದ ಅಳಿಸುವಿಕೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಎಸ್‌ಐಆರ್ ಪ್ರಕ್ರಿಯೆಯ ವಿನ್ಯಾಸ ಮತ್ತು ಸಮಯವು ದಲಿತರು, ಆದಿವಾಸಿಗಳು, ವಲಸೆ ಕಾರ್ಮಿಕರು, ಮದುವೆಯ ನಂತರ ಸ್ಥಳಾಂತರಗೊಳ್ಳುವ ಮಹಿಳೆಯರು, ಕಾರ್ಮಿಕ ವರ್ಗ, ಅಂಗವಿಕಲರು ಮತ್ತು ಸ್ಥಿರ ದಾಖಲೆಗಳು ಅಥವಾ ಡಿಜಿಟಲ್ ಪ್ರವೇಶವಿಲ್ಲದವರ ಮೇಲೆ ಅಸಮಾನವಾಗಿ ಹೊರೆಯಾಗುತ್ತದೆ ಎಂದು ತಿರುಮಾವಲವನ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ತಮಿಳುನಾಡು 2024ರ ಅಕ್ಟೋಬರ್ ಮತ್ತು ಜನವರಿ ನಡುವೆ ವಿಶೇಷ ಸಾರಾಂಶ ಪರಿಷ್ಕರಣೆಯನ್ನು ಪೂರ್ಣಗೊಳಿಸಿದೆ, ಜನವರಿ 6 ರಂದು ನವೀಕರಿಸಿದ ಪಟ್ಟಿಗಳನ್ನು ಪ್ರಕಟಿಸಲಾಗಿದೆ. ಅಂದಿನಿಂದ ನಿರಂತರವಾಗಿ ನಿರ್ವಹಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯಾದ್ಯಂತ ಹೊಸದಾಗಿ ತೀವ್ರ ಪರಿಷ್ಕರಣೆಯನ್ನು ಪ್ರಾರಂಭಿಸಲು ಚುನಾವಣಾ ಆಯೋಗವು ಯಾವುದೇ ಸಮರ್ಥನೆಯನ್ನು ನೀಡಿಲ್ಲ ಎಂದು ತಿರುಮಾವಲವನ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದನ್ನು ‘ಸಾಂವಿಧಾನಿಕ ಅತಿಕ್ರಮಣ’ ಎಂದು ಹೇಳಿದೆ.
ಎಸ್‌ಐಆರ್‌ನಿಂದ ಮತದಾರರು ದೊಡ್ಡ ಪ್ರಮಾಣದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು ಎಂದು ಡಿಎಂಕೆ ಅರ್ಜಿಯಲ್ಲಿ ತಿಳಿಸಿದೆ.


