ದೇಶದಾದ್ಯಂತ ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಕುಟುಂಬದ ಸದಸ್ಯರು ಜಾತಿ ಕಾರಣಕ್ಕಾಗಿ ಹತ್ಯೆ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮಿಳುನಾಡಿನ ವಿಧಾನಸಭೆಯ ಕಲಾಪದ ವೇಳೆ ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳ ವಿರುದ್ದ ಪ್ರಭಲವಾದ ಕಾಯ್ದೆಯನ್ನು ರೂಪಿಸಲು ತಮ್ಮ ಸರ್ಕಾರ ಮುಂದಾಗಿದೆ ಎಂದು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ “ಈಗಿರುವ ಪ್ರಸ್ತುತ ಕಾನೂನಿನಲ್ಲೇ ಇದನ್ನು ತಡೆಗಟ್ಟಬಹುದು, ಪ್ರತ್ಯೇಕ ಕಾಯ್ದೆ ಅಗತ್ಯವಿಲ್ಲ” ಎಂದಿದ್ದರು. ಡಿಎಂಕೆಯ ಮಿತ್ರ ಪಕ್ಷಗಳಾದ ಮಿತ್ರಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಗಳ ಒತ್ತಡಕ್ಕೆ ಮಣಿದು ಅಂತಿಮವಾಗಿ ಜಾತಿ ಆಧಾರಿತ ದ್ವೇಷ ಅಪರಾಧಗಳು ಮತ್ತು ಮರ್ಯಾದೆಗೇಡು ಹತ್ಯೆಗಳು ತಡೆಗಟ್ಟುವ ಗುರಿಯನ್ನು ಹೊಂದಿರುವ ಕಾನೂನನ್ನು ರೂಪಿಸಲಾಗವುದು ಎಂದು ತಿಳಿಸಿದ್ದಾರೆ.
ಕಠಿಣ ಕಾನೂನು ಮತ್ತು ತೀರ್ಪುಗಳತ್ತ ಕರ್ನಾಟಕದ ನಿರಂತರ ಪ್ರಯತ್ನಗಳು
ಮಹಿಳಾ ಮತ್ತು ಸಮಾಜದ ವಿರುದ್ಧ ನಡೆಯುತ್ತಿರುವ ಗಂಭೀರ ಅಪರಾಧಗಳನ್ನು ನಿಗ್ರಹಿಸಲು ಕರ್ನಾಟಕ ಸರ್ಕಾವೂ ಮುಂದಾಗಿದೆ. ಈ ಹಿಂದೆ ಸೆಪ್ಟೆಂಬರ್ 2023ರಲ್ಲಿ ಮಾಧ್ಯಮ ವರದಿಗಳ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತಿಯ (ಐಪಿಸಿ) ನಿಯಮಗಳು ಇಂತಹ ಅಪರಾಧಗಳಿಗೆ ಸಾಕಷ್ಟು ಕಠಿಣವಲ್ಲವೆಂದು ಅಭಿಪ್ರಾಯಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಹೊಸ, ಕಠಿಣ ರಾಜ್ಯ ಕಾನೂನನ್ನು ರೂಪಿಸುವ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದರು. ಮಹಿಳಾ ಸಂಘಟನೆಗಳು, ಕಾನೂನು ತಜ್ಞರು ಮತ್ತು ಇತರ ಸಾಮಾಜಿಕ ಪಾಲುದಾರರೊಂದಿಗೆ ವಿಚಾರಣಾ ಸಭೆಗಳನ್ನು ನಡೆಸುವ ಯೋಜನೆಯನ್ನು ಹೊಂದಿದ್ದೇವೆ, ಹೊಸ ಕಾನೂನು ಗಂಭೀರ ಅಪರಾಧಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರೂಪಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದರು.
ಇತ್ತ, ರಾಜ್ಯದ ನ್ಯಾಯಾಂಗವೂ ಇಂತಹ ಪ್ರಕರಣಗಳಲ್ಲಿ ಕಠಿಣ ತೀರ್ಪುಗಳನ್ನು ನೀಡುತ್ತಿದೆ ಎಂಬುದರ ಉದಾಹರಣೆಯಾಗಿ ಇತ್ತೀಚಿನ ಎರಡು ಪ್ರಮುಖ ತೀರ್ಪುಗಳು ಗಮನ ಸೆಳೆಯುತ್ತಿವೆ:
- ಫೆಬ್ರವರಿ 2025: ಗದಗ ಜಿಲ್ಲೆಯ ಜಿಲ್ಲಾ ನ್ಯಾಯಾಲಯವು 2019ರ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ನಡೆದ “ಮರ್ಯಾದಾ ಹತ್ಯೆ” ಪ್ರಕರಣದಲ್ಲಿ ನಾಲ್ಕು ಸಂಬಂಧಿಕರಿಗೆ ಮರಣದಂಡನೆ ವಿಧಿಸಿತು.
- ಏಪ್ರಿಲ್ 2025: ಕರ್ನಾಟಕದ ಮತ್ತೊಂದು ನ್ಯಾಯಾಲಯವು ಇಂತಹದೇ ಮತ್ತೊಂದು “ಮರ್ಯಾದಾ ಹತ್ಯೆ” ಪ್ರಕರಣದಲ್ಲಿ ಮೂವರಿಗೆ ಮರಣದಂಡನೆ ಹಾಗೂ ಒಂಬತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸುತ್ತಿರುವುದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


