ತಮಿಳುನಾಡಿನ ತಿರುಪ್ಪೂರಿನಲ್ಲಿ ಮಲಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ದಲಿತ ಯುವಕರು ಸಾವಿಗೀಡಾಗಿದ್ದು, ಒಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 19, ಸೋಮವಾರ ದುರಂತ ನಡೆದಿದೆ. ಮಲಗುಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ನಾಲ್ವರು ಯುವಕರು ಆಸ್ವಸ್ಥಗೊಂಡಿದ್ದರು. ಈ ಪೈಕಿ ಸರವಣನ್ ಮತ್ತು ವೇಣುಗೋಪಾಲ್ ಎಂಬ ಇಬ್ಬರು ಅದೇ ದಿನ ಸಾವೀಗೀಡಾಗಿದ್ದರು.
ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹರಿ ಕೃಷ್ಣನ್ ಎಂಬ ಮತ್ತೊಬ್ಬ ಯುವಕ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಮೂರಕ್ಕೇರಿದೆ. ನಾಲ್ಕನೇ ವ್ಯಕ್ತಿ ಚಿನ್ನಸ್ವಾಮಿ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿರುಪ್ಪೂರು ಪೊಲೀಸರ ಪ್ರಕಾರ, ಜಿಲ್ಲೆಯ ಕರೈಪುದೂರ್‌ನಲ್ಲಿರುವ ಬಟ್ಟೆಗಳಿಗೆ ಬಣ್ಣ ಬಳಿಯುವ ಖಾಸಗಿ ಕಾರ್ಖಾನೆಯ ಏಳು ಅಡಿ ಆಳದ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಐವರು ದಲಿತ ಯುವಕರು ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದೆ ಇಳಿದಿದ್ದರು. ಈ ವೇಳೆ ಇಕ್ಕಟ್ಟಾದ ಜಾಗದಲ್ಲಿ ವಿಷಕಾರಿ ಮೀಥೇನ್ ಅನಿಲ ಸೇವಿಸಿ ಅವರು ಅಸ್ವಸ್ಥಗೊಂಡಿದ್ದರು.
ತಕ್ಷಣ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗ ಮಧ್ಯೆ ಸರವಣನ್ ಮತ್ತು ವೇಣುಗೋಪಾಲ್ ಕೊನೆಯುಸಿರೆಳೆದಿದ್ದರು. ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ಸಂಬಂಧ ಕಾರ್ಖಾನೆ ಮಾಲೀಕ ನವೀನ್, ವ್ಯವಸ್ಥಾಪಕ ಧನಬಾಲ್, ಮೇಲ್ವಿಚಾರಕ ಬಾಲಸುಬ್ರಮಣಿಯಂ ಮತ್ತು ವಾಹನ ಮಾಲೀಕ ಚಿನ್ನಸಾಮಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125ಎ (ಜೀವಕ್ಕೆ ಅಪಾಯ ಉಂಟು ಮಾಡುವುದು) ಮತ್ತು 106(1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) (ಗಂಭೀರ ಅಪರಾಧಗಳು) ಮತ್ತು 2013ರ ಮಲ ಹೊರುವ ಪದ್ದತಿ ನಿಷೇಧ ಮತ್ತು ಕಾರ್ಮಿಕರ ಪುನರ್ವಸತಿ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಎಸ್‌ಸಿ-ಎಸ್‌ಟಿ ಕಾಯ್ದೆ’ಯನ್ನು ತಮಿಳುನಾಡು ಸರ್ಕಾರ ದುರ್ಬಲಗೊಳಿಸುತ್ತಿದೆ: ದಲಿತ ಸಂಘಟನೆಗಳಿಂದ ಆರೋಪ


